ಜೀವರತಿ

ಜೀವರತಿ

ಪುಸ್ತಕದ ಲೇಖಕ/ಕವಿಯ ಹೆಸರು
ಜ. ನಾ. ತೇಜಶ್ರೀ
ಪ್ರಕಾಶಕರು
ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು - ೫೬೦೦೪೦
ಪುಸ್ತಕದ ಬೆಲೆ
ರೂ. ೪೫೦.೦೦, ಮುದ್ರಣ: ೨೦೨೫

‘ಜೀವರತಿ’ ಎನ್ನುವ ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ ಜ ನಾ ತೇಜಶ್ರೀ. ಇವರು ತಾವು ಬರೆದ ಕಾದಂಬರಿಯ ಬಗ್ಗೆ, ಅದನ್ನು ಬರೆಯಲು ಸಿಕ್ಕ ಪ್ರೇರಣೆಯ ಬಗ್ಗೆ ತಮ್ಮ ಮಾಹಿತಿನಲ್ಲಿ ಬರೆದಿರುವುದು ಹೀಗೆ…

“ಇದೆಲ್ಲ ಎಲ್ಲಿಂದ ಶುರುವಾಯಿತು ಹೇಳುವುದು ಕಷ್ಟ. ಹಿಂತಿರುಗಿ ನೋಡಿದರೆ ಇದೊಂದು ಅನಂತಯಾನದ ಹಾಗೆ ಭಾಸವಾಗುತ್ತದೆ. ಹಳೆಯ ಕಸ ತೆಗೆಯುತ್ತಿದ್ದಾಗ ನನ್ನ ದಿನಚರಿಯೊಂದರಲ್ಲಿ ೧೯೯೬ನೇ ಇಸವಿಯಲ್ಲಿ ಬರೆದ ಮೂರು-ನಾಲ್ಕು ಪುಟಗಳ ಬರಹ ಸಿಕ್ಕಿತು. ಅದರಲ್ಲೇನೋ ಕತೆ ಇರುವಂತೆ ಅನ್ನಿಸುತ್ತಿತ್ತಾದರೂ ತನ್ನಷ್ಟಕ್ಕೆ ತಾನು ಪೂರ್ಣವಾಗಿರಲಿಲ್ಲ ಅನ್ನಿಸುತ್ತಿತ್ತಾದರೂ ಏನೋ ಬರೆಯಲು ಯತ್ನಿಸಿದ್ದೆನಲ್ಲ ಅಂದುಕೊಂಡು ಆ ಪುಸ್ತಕವನ್ನು ಸುಮ್ಮನೆ ಇಟ್ಟೆ. ಇದಾದ ಎರಡು-ಮೂರು ವರ್ಷಗಳ ನಂತರ ಇದ್ದಕ್ಕಿದ್ದಂತೆ ಒಂದು ಚಿತ್ರ ಮನಸ್ಸಿಗೆ ಬಂದು ಅದನ್ನು ಬರೆಯುತ್ತ ಹೋದಂತೆ ಒಂದಕ್ಕೆ ಇನ್ನೊಂದು, ಇನ್ನೊಂದಕ್ಕೆ ಮತ್ತೊಂದು ಚಿತ್ರಗಳು ಸೇರುತ್ತ ಅದು ಮುಗಿಯುವ ಮಾತೇ ಆಡದಿದ್ದಾಗ ನಾನು ಯಾವುದೋ ಮಹಾಸುಳಿಯಲ್ಲಿ ಸಿಕ್ಕಿಕೊಂಡೆ ಅನ್ನಿಸಿತು. ಇದಾದದ್ದು ರಲ್ಲಿ. ಅಲ್ಲಿಂದ ನನ್ನ ಪಾಡು ಅಶ್ವಮೇಧದ ಕುದುರೆಯ ಹಿಂದೆ ಹೋದವಳಂತಾಯಿತು: ಕಾದಂಬರಿಯೆಂದರೆ ಇದೇ ಇರಬೇಕು. 1996ರಲ್ಲಿ ಬರೆದ ಆ ಮುರ‍್ನಾಲ್ಕು ಪುಟಗಳು ಯಥಾವತ್ತು ಇಲ್ಲಿಗೆ ಬಂದು ಸೇರಿಕೊಂಡ ವಿಚಿತ್ರವಂತೂ ನನಗೆ ಈಗಲೂ ಅರ್ಥವಾಗಿಲ್ಲ. ಜೀವದ ಭಾರಕ್ಕೆ ನೇತು ಹಾಕಿದ ಬಳಪವು ತನ್ನಷ್ಟಕ್ಕೆ ತಾನು ಮಾಡಿಕೊಂಡ ಹಾದಿಯ ತೆರದಿ ಈ ಬರಹ ಸಾಗುತ್ತ ಹೋಯಿತು, ನಾನು ಅದರ ಹಿಂದೆ ಹೋದೆ...

...ಹೋಗುತ್ತಿದ್ದಾಗ, ನಡುನಡುವೆ ಕವಿತೆ, ಕತೆ, ಲೇಖನಗಳು, ಭಾಷಣ, ಅನುವಾದ... ಜೊತೆಗೆ ಸಂಸಾರ, ಬದುಕಿನ ಕೋಟಲೆಗಳ ನಿತ್ಯಪ್ರಜ್ಞೆಯಲ್ಲಿ ಈ ಕಾದಂಬರಿಯ ಬರಹವೂ ಜೊತೆಗಿತ್ತು, ಆತ್ಮಸಂಗಾತಿಯಾಗಿ.. ಕೆಲವು ಭಾಗಗಳು ಆಗೀಗ ಉತ್ಕಟತೆಯಲ್ಲಿ ಬರುತ್ತಿದ್ದವು. ಹಾಗಾಗಿ ಇದನ್ನು ನಾನು ಶುರುವಿನಿಂದ ಕೊನೆವರೆಗೆ (ಹೀಗೇನೋ ಇದೆ ಅನ್ನುವುದಾದರೆ) ನಿಗದಿತವಾಗಿ, ನಿಯಮಿತವಾಗಿ ಬರೆದು ಎಂದು ಹೇಳಲಾರೆ. ಕೆಲವೊಮ್ಮೆ ಯಾವುದೋ ಪಾತ್ರ ಧುತ್ತೆಂದು ಪ್ರತ್ಯಕ್ಷವಾಗಿ ಏನೋ ಮಾತೆಸೆದು ಮರೆಯಾಗುತ್ತಿತ್ತು. ಆ ಮಾತಿನಿಂದ ಮುಂದಿನ ಮಾತು, ಕತೆ-ಕಥನ ಇತ್ಯಾದಿಗಳು ಬೆಳೆದು ನನ್ನನ್ನೂ ಬೆಳೆಸುತ್ತ ಸಾಗಿದವು. ಇದೆಲ್ಲ ಏನು, ಹೇಗೆ, ಏಕೆ ಎಂದು ಎಷ್ಟೋ ಬಾರಿ ಗೊಂದಲಕ್ಕೊಳಗಾಗಿದ್ದೇನೆ. ಬಹಳಷ್ಟು ಸಾರ್ತಿ ನಡೆಯಲಾರದೆ ಸುಮ್ಮನೆ ಕೂತಿದ್ದೇನೆ, ನನ್ನಿಂದ ಆಗುವ ಹೋಗುವ ಮಾತಲ್ಲ ಎನ್ನಿಸಿ ನನ್ನ ಪಾಡಿಗೆ ನಾನಿರುತ್ತಿದ್ದಾಗ, ಮತ್ತೆ ಹೆಕ್ಕತ್ತ ಮೇ¯ ಕುಳಿತು ಬರೆಯಿಸಿಕೊಂಡ ಪಾತ್ರಗಳು, ಭಾಗಗಳು ಜೀವ ಪಡೆದಿದ್ದಕ್ಕೆ ಸುಮ್ಮನೆ ಸಾಕ್ಷಿಯಾಗಿದ್ದೇನೆ. ಇನ್ನಾಗದು ಅಂತ ಕೈಚೆಲ್ಲಿದಾಗ ‘ಅದೇನಾಗುತ್ತೋ ಆಗಲಿ ಬಂದಿದ್ದನ್ನ ಸುಮ್ನೆ ಬರಿ, ಭಾಷೆಗೇನು ಬುದ್ಧಿ ಇಲ್ಲ ಅಂದ್ಕೊಂಡಿದಿಯ? ಅದು ತನ್ನ ಪಾಡಿಗೆ ತನ್ನನ್ನು ಮಾಡ್ಕೊಳುತ್ತೆ’ ಅಂದ, ಕಡೆತನಕ ಅನ್ನುತ್ತಲೇ ಇದ್ದ ಕವಿಜೀವ ರಾಮು ಅವರ ಪರಿಶುದ್ಧ ಪ್ರೀತಿ ನನ್ನನ್ನೂ, ಈ ಬರಹವನ್ನೂ ಕಾಪಾಡಿದೆ.

ಈ ನಡುವೆ ನನ್ನ ಹತ್ತಿರದ ಹಲವರು ಐದಾರು ತಿಂಗಳಲ್ಲಿ ಪುಟಗಟ್ಟಲೆ ಕಾದಂಬರಿ ಬರೆದು ಪ್ರಕಟ ಮಾಡಿಯೂ ಬಿಟ್ಟರು. ಆಗಂತೂ ‘ನಾನೇಕೆ ಹೀಗೆ?’ ಅಂತ ನನ್ನ ಮೇಲೆ ನನಗೆ ಸಿಟ್ಟು, ಬೇಸರ ಬರುತ್ತಿತ್ತು. ಅಶ್ವಮೇಧಕ್ಕೆ ಕುದುರೆ ಬಿಟ್ಟ ಮೇಲೆ ಅದನ್ನು ಹಿಡಿದು ಕಟ್ಟುವ ಕಾಲ ಬರುವಗಂಟ ಯಾರ ಸಿಟ್ಟು, ಬೇಸರಕ್ಕೆ ಕಿಮ್ಮತ್ತೆಲ್ಲಿಯದು? ಅನ್ನುವುದನ್ನೂ ಈ ಬರವಣಿಗೆ ಕಲಿಸಿದೆ. ಇಂತಹ ಅಸಹಾಯಕ, ಧೈರ್ಯಗೆಟ್ಟ ಹೊತ್ತಿನಲ್ಲಿ ನನಗೆ ಒತ್ತಾಸೆಯಾಗಿ ನಿಂತ ಸ್ನೇಹವಲಯವು ನನ್ನನ್ನು ತನ್ನ ಪ್ರೀತಿಯಲ್ಲಿ ಬದುಕಿಸಿಕೊಂಡಿತು.

ಹಲವು ವರ್ಷಗಳ ಕಾಲ ಇಲ್ಲಿನ ಅನುಭವ ಲೋಕವು ನನ್ನೊಳಗೆ ಆಡುತ್ತ, ಬೆಳೆಯುತ್ತ, ನನ್ನನ್ನು ಬೆಳೆಸಿದೆ. ಇಲ್ಲಿನ ಬಹುಪಾಲು ವೃತ್ತಾಂತಗಳು ನಾನು ಕೇಳಿದ್ದು, ಮತ್ತೊಂದಿಷ್ಟು ನೋಡಿದ್ದು, ಇನ್ನೂ ಇಷ್ಟು ಅನುಭವಿಸಿದ್ದು, ಸ್ವಲ್ಪ ಭಾಗ ಕಲ್ಪಿಸಿದ್ದು- ಭಾಷೆ ಇವೆಲ್ಲವನ್ನೂ ಒಟ್ಟಾಗಿಸಿ ಹೆಣೆದಿದೆ. ಒಂದು ಮರ, ಹಕ್ಕಿ, ತೋಡು, ಕೆರೆ, ಮಳೆ, ಮನೆ.. ಪ್ರತಿಯೊಂದೂ ನಿಗೂಢ. ಗಮನಿಸಿದರಷ್ಟೇ ತೆರೆದುಕೊಳ್ಳುವ ವಿಸ್ಮಯಕ್ಕೆ ಈ ಬದುಕು ಸಾಕ್ಷಿಯಾಯಿತು ಎನ್ನುವುದಷ್ಟೇ ನನ್ನ ಪಾಲಿನ ಸುಖ. ಪ್ರತಿಕ್ಷಣ ವಿಕಾಸವಾಗುತ್ತಲೇ ಹೋಗುವ ಸೃಷ್ಟಿ ಮತ್ತು ಮನುಷ್ಯ ಬದುಕು ಆಗೊಮ್ಮೆ ಈಗೊಮ್ಮೆ ಕಣ್ಸನ್ನೆಯಿಂದ ಏನನ್ನೋ ಹೊಳೆಸಿ ಮಾಯವಾಗುತ್ತ ನನ್ನನ್ನು ಪೊರೆದಿದೆ. ಇಲ್ಲಿ ಎಲ್ಲವಕ್ಕೂ ಅವುಗಳದ್ದೇ ಹುಡುಕಾಟ ಇದೆ. ಇವುಗಳ ಒಳಗೆ ಮನುಷ್ಯನೂ ಇದ್ದಾನೆ, ಅಷ್ಟೆ.. ತಾನೇ ಮುಖ್ಯವೆಂಬಂತೆ ಗದ್ದಲವೆಬ್ಬಿಸದೆ ಮೌನ ಅಸ್ತಿತ್ವದಲ್ಲಿ ಕರಗಿರುವ ಸೃಷ್ಟಿಯ ಒಂದೊಂದು ಸಂಗತಿಯೂ ಆಧ್ಯಾತ್ಮಿಯೆ ಅನ್ನಿಸಿದೆ. ಮತ್ತು, ನಮ್ಮೊಳಗಿನ ಮೌನಕ್ಕೆ ಹಿಂತಿರುಗಿ ಹೋಗುವುದೇ ಎಲ್ಲ ಸೃಜನಶೀಲತೆಯ ತಿಳಿವು ಎನ್ನುವ ನನ್ನ ನಂಬಿಕೆಯನ್ನು ಈ ಬರಹ ಗಾಢಗೊಳಿಸಿದೆ.

ಬದುಕಿನ ನೂರೆಂಟು ಕ್ಲೇಶಗಳು, ಕ್ರೌರ್ಯದ ನಡುವೆ ಮನುಷ್ಯ ಮನಸ್ಸಿಗೆ ಒಳ್ಳೆಯತನದ ಸಾಧ್ಯತೆಗಳು ಎಷ್ಟೊಂದಿವೆ ಎಂದು ನೋಡಿದಾಗ ಹುಟ್ಟಿದ ಕಥನ ಸಾಧ್ಯತೆಗಳಿವು. ಇದನ್ನು ಬರೆವ ಹೊತ್ತಿನಲ್ಲಿ ಜೀವಂತವಿಲ್ಲದ ಸಂಗತಿಗಳಿಗೂ ಭಾಷೆಯು ಹೇಗೆ ಜೀವ ಬರಿಸುತ್ತದೆ ಎಂದು ಆಶ್ಚರ್ಯಗೊಂಡಿದ್ದೇನೆ. ಮನುಷ್ಯೇತರದಲ್ಲಿ ಕಾಣುವ ಮನುಷ್ಯತ್ವದ ಸ್ವರೂಪಗಳು ನಾನು ಮನುಷ್ಯಳಾಗಿರುವಂತೆ ಒತ್ತಾಯಿಸಿವೆ. ಭಾಷೆಯು ಲೇಖಕರಿಗೆ ನೀಡುವ ಸ್ವಾತಂತ್ಯ್ರ, ಅದರ ಸಾಧ್ಯತೆಗಳು ನನಗೆ ಯಾವತ್ತೂ ಕುತೂಹಲ. ಈ ಕಾದಂಬರಿಯ ಒರತೆ ಇದೇ...

ನಾನು ಬದುಕಿರುವಷ್ಟರಲ್ಲಿ ಈ ಪುಸ್ತಕ ಪ್ರಕಟ ಆಗಬೇಕು ಎಂದು ರಾಮು ಹಂಬಲಿಸಿದ್ದರು. ಈ ಬರಹವು ಅವರ ಮಾತನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದಲೋ ಏನೋ ‘ತನ್ನ ಪಾಡಿಗೆ ತನ್ನನ್ನು’ ಮಾಡಿಕೊಳ್ಳಲು ಕೊಂಚ ಹೆಚ್ಚೇ ಅನ್ನುವಷ್ಟು ಸಮಯವನ್ನು ತೆಗೆದುಕೊಂಡಿತು. ಬರೆದು ಓದಿದ್ದನ್ನು ಕೇಳಿಸಿಕೊಂಡು, ನಿಷ್ಠುರವಾಗಿ, ಪ್ರಾಮಾಣಿಕವಾಗಿ ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ತಿದ್ದಿದ ರಾಮು ಅವರಿಗೆ ಪುಸ್ತಕವನ್ನು ಅರ್ಪಿಸಿದ್ದೇನೆ. ಈ ಬರಹದ ಬಹುಪಾಲು ಭಾಗಗಳನ್ನು ಅವರು ಕೇಳಿಸಿಕೊಂಡರು, ಮೆಚ್ಚಿದರು ಅನ್ನುವುದೇ ಇದರ ಪ್ರಕಟಣೆಗೆ ಒತ್ತಾಸೆ. ಈ ಒತ್ತಾಸೆಯನ್ನು ನೆನಪಿಸುವ ಮೂಲಕ, ಪ್ರಕಟಣೆಯ ಕುರಿತಾಗಿ ಗಳಿಗೆಗೊಮ್ಮೆ ಮಾಯವಾಗುತ್ತಿದ್ದ ನನ್ನ ಆತ್ಮವಿಶ್ವಾಸವನ್ನು ಕೃಪಾಕರ-ಸೇನಾನಿ ಅವರ ಪ್ರೀತಿಯು ಆತುಕೊಂಡಿದೆ.”