ಜೀವಾಮೃತ...ಜೀವಾಮೃತ... (ರೈತರೇ ಬದುಕಲು ಕಲಿಯಿರಿ-೧೧)

ಜೀವಾಮೃತ...ಜೀವಾಮೃತ... (ರೈತರೇ ಬದುಕಲು ಕಲಿಯಿರಿ-೧೧)

ಬರಹ

ರೈತ ಬಾಂಧವರೇ,

ನಿಮ್ಮನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಗೆ ಈ ಅಧ್ಯಾಯದಲ್ಲಿ ಪೂರ್ತಿ ಪರಿಹಾರವಿದೆ. 

ಸುಮಾರು ಐದು ಸಾವಿರ ವರ್ಷಗಳಿಂದ ನಮ್ಮ ದೇಶದಲ್ಲಿ ನಡೆಸಿಕೊಂಡು ಬಂದಿದ್ದ ಹಾಗೂ ಕಳೆದ ಐವತ್ತು ವರ್ಷಗಳಲ್ಲಿ ಮರೆತಿರುವ ಅಪರೂಪದ ಕೃಷಿ ಜ್ಞಾನ ಸಂಪತ್ತನ್ನು ಸುಭಾಷ ಪಾಳೇಕರ ಅವರು ವೈಜ್ಞಾನಿಕ ಹಿನ್ನೆಲೆಯಲ್ಲಿ ಮತ್ತೆ ನಮ್ಮ ಮುಂದೆ ತಂದಿದ್ದಾರೆ. ಇದನ್ನು ಸರಿಯಾಗಿ ಆಚರಿಸಿದಲ್ಲಿ ನಮ್ಮ ಭೂಮಿ ಮತ್ತೆ ಸಮೃದ್ಧವಾಗುತ್ತದೆ. ನಮ್ಮ ಬದುಕಿನಲ್ಲಿ ಮತ್ತೆ ಆನಂದ ತುಂಬುತ್ತದೆ.

ಸಗಣಿಯಿಂದ ಸಮೃದ್ಧಿ

ಸುಭಾಷ ಪಾಳೇಕರ ಪ್ರಕಾರ ನಿಸರ್ಗ ಕೃಷಿಯನ್ನು ರಥಕ್ಕೆ ಹೋಲಿಸಿದರೆ ಅದರ ನಾಲ್ಕು ಮುಖ್ಯ ಚಕ್ರಗಳೆಂದರೆ ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ಆರ್ದ್ರತೆ (ತೇವ). ಇವುಗಳ ಪೈಕಿ ಹೊದಿಕೆ ಮತ್ತು ಆರ್ದ್ರತೆಯ ಬಗ್ಗೆ ಹಿಂದಿನ ಅಧ್ಯಾಯಗಳಲ್ಲಿ ಓದಿರುವಿರಿ. ಈಗ ಬಹುಮುಖ್ಯ ಅಂಶವಾದ ಜೀವಾಮೃತದ ಬಗ್ಗೆ ಇಲ್ಲಿ ವಿಸ್ತಾರವಾದ ಮಾಹಿತಿಯಿದೆ.

ನಮ್ಮ ನಾಡ ತಳಿಯ ಹಸುಗಳಾದ ಕಿಲಾರಿ, ಗೀರ್, ದೇವಣಿ, ಅಮೃತ ಮಹಲ್, ಮಲೆನಾಡ ಗಿಡ್ಡ, ಕೃಷ್ಣಾ, ಥಾಪರ್, ಡಾಂಗಿ, ಗೌರವ್, ನಿಮ್ಮಾಡಿ, ಸಿಂಧಿ, ಇಂದೂರ್, ಸಾಹಿವಾಲ್, ಲಾಲ್ ಕಂದಾರ್ ಮುಂತಾದ ತಳಿಗಳ ಸಗಣಿ ಮತ್ತು ಗಂಜಲದಲ್ಲಿ ಅಪೂರ್ವ ಜೀವಾಣುಗಳಿವೆ. ನಾಡ (ಜವಾರಿ) ಹಸುವಿನ ಒಂದು ಗ್ರಾಂ ಸಗಣಿಯಲ್ಲಿ ೩೦೦ರಿಂದ ೫೦೦ ಕೋಟಿ ಜೀವಾಣುಗಳಿರುತ್ತವೆ. ಇವು ಜೀವ ವೈವಿಧ್ಯತೆಯ ಮುಖ್ಯ ಕೊಂಡಿಗಳು. ನಮ್ಮ ಮಣ್ಣಿನಲ್ಲಿರುವ ಸತ್ವವನ್ನು ವಿಭಜಿಸಿ, ಸಸ್ಯಗಳ ಬೇರುಗಳು ಅವನ್ನು ಸುಲಭವಾಗಿ ಹೀರಿಕೊಳ್ಳುವಂತೆ ಮಾಡುವ ಈ ಜೀವಾಣುಗಳಿಂದಾಗಿ ಸಾವಿರಾರು ವರ್ಷಗಳವರೆಗೆ ನಮ್ಮ ರೈತರು ಅತ್ಯುತ್ತಮ ಬೇಸಾಯ ಮಾಡುತ್ತ ಬಂದಿದ್ದರು.

ಮೂಲತಃ ಸಗಣಿ ಗೊಬ್ಬರವಲ್ಲ. ಅದು ಬೆಳೆಗಳಿಗೆ ಯಾವುದೇ ಪೋಷಕಾಂಶವನ್ನು ಕೊಡುವುದಿಲ್ಲ. ಆದರೆ ಸಗಣಿಯಲ್ಲಿ ಕೋಟಿ ಕೋಟಿ ಜೀವಾಣುಗಳಿರುತ್ತವೆ. ನಾಡ ಹಸುವಿನ ಸಗಣಿಯಲ್ಲಿ ೬೭ಕ್ಕೂ ಹೆಚ್ಚು ಉಪಕಾರಿ ಜೀವಾಣುಗಳಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಜೀವಾಣುಗಳು ಜವಾರಿ ಹಸುಗಳ ಕರುಳಿನಲ್ಲಿ ಸಮೃದ್ಧಿಯಾಗಿ ಉತ್ಪತ್ತಿಯಾಗುತ್ತವೆ. ಮಣ್ಣಿನಲ್ಲಿರುವ ಪೋಷಕಾಂಶಗಳು ಮತ್ತು ಗಿಡದ ನಡುವೆ ಸಂಪರ್ಕ ಕೊಂಡಿಯಾಗಿ ಈ ಜೀವಾಣುಗಳು ಕೆಲಸ ಮಾಡುವುದರಿಂದ ನೈಸರ್ಗಿಕ ಕೃಷಿಯಲ್ಲಿ ಸಗಣಿ ಮುಖ್ಯ ಪಾತ್ರ ವಹಿಸುತ್ತದೆ.

ಆದ್ದರಿಂದ ಭೂಮಿಗೆ ಹೊರಗಡೆಯಿಂದ ಗೊಬ್ಬರ ತಂದು ಸುರಿಯುವುದೇ ಮೂರ್ಖತನ ಎನ್ನುತ್ತಾರೆ ಸುಭಾಷ ಪಾಳೇಕರ್. ಆದರೆ ನಮ್ಮ ಕೃಷಿ ವಿಜ್ಞಾನಿಗಳು ಹೇಳುವುದೇ ಬೇರೆ. ಒಂದು ಎಕರೆಗೆ ೨೫ ಗಾಡಿ (ಚಕ್ಕಡಿ) ಕೊಟ್ಟಿಗೆ ಗೊಬ್ಬರ, ಕೆರೆ ಮಣ್ಣು, ಜತೆಗೆ ೧೭೫ ಕೆಜಿಯಷ್ಟು ಎನ್.ಪಿ.ಕೆ. (ಯೂರಿಯಾ, ಪೊಟ್ಯಾಷ್ ಮತ್ತು ಫಾಸ್ಫೇಟ್) ಕೊಡಬೇಕೆಂದು ಸಲಹೆ ಕೊಡುತ್ತಾರೆ. ಇದೆಲ್ಲ ಏಕೆ? ಒಂದು ವೇಳೆ ಇಷ್ಟು ಗೊಬ್ಬರ ಸುರಿದರೂ, ಆ ಅಂಶವನ್ನು ಗಿಡದ ಬೇರುಗಳು ನೇರವಾಗಿ ಹೀರಿಕೊಳ್ಳಲಾರವು. ಅವನ್ನು ಬೇರುಗಳಿಗೆ ತಲುಪಿಸುವ ಜೀವಾಣುಗಳ ಸಹಾಯ ಬೇಕೇ ಬೇಕು.

ಆದರೆ, ರಾಸಾಯನಿಕ ವಾತಾವರಣದಲ್ಲಿ ಉಪಕಾರಿ ಜೀವಾಣುಗಳು ಬದುಕುವುದಿಲ್ಲವಾದ್ದರಿಂದ ಆಧುನಿಕ ಕೃಷಿ ವಿಫಲವಾಗುತ್ತ ಹೋಗುತ್ತಿದೆ. ಪೋಷಕಾಂಶಗಳು ಗಿಡಗಳನ್ನು ತಲುಪದೇ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ನಿರೋಧಕ ಶಕ್ತಿ ಕುಗ್ಗುವುದರಿಂದ ನಾನಾ ತರದ ಕೀಟಗಳು ದಾಳಿ ಇಡುತ್ತವೆ. ಒಂದನ್ನು ಹತೋಟಿ ಮಾಡಲು ಹೋಗಿ ಇನ್ನೊಂದು ಸಮಸ್ಯೆಯನ್ನು ಹುಟ್ಟುಹಾಕಿದಂತಾಗುತ್ತದೆ.

ಆದ್ದರಿಂದ ಭೂಮಿಗೆ ಯಾವುದೇ ರೀತಿಯ ರಾಸಾಯನಿಕವನ್ನು ಹಾಕಬೇಡಿ ಎನ್ನುತ್ತಾರೆ ಪಾಳೇಕರ್. ಅವರ ಪ್ರಕಾರ, ಪ್ರತಿ ತಿಂಗಳು ಒಂದು ನಾಡ (ಜವಾರಿ) ಆಕಳುವಿನ ೧೦ ಕೆಜಿ ಸಗಣಿಯನ್ನು ಜೀವಾಮೃತವಾಗಿ ಪರಿವರ್ತಿಸಿದರೆ ಭೂಮಿಗೆ ಬೇರೆ ಯಾವ ಗೊಬ್ಬರವೂ ಬೇಡ. ಎಲ್ಲವನ್ನೂ ಸಗಣಿಯಲ್ಲಿರುವ ಜೀವಾಣುಗಳೇ ನೋಡಿಕೊಳ್ಳುತ್ತವೆ.

ಅದು ಹೇಗೆ?

ಸಗಣಿಯಲ್ಲಿ ಬೆಳೆಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲು ನೆರವಾಗುವ ಪಿ.ಎಸ್.ಬಿ. (ಫಾಸ್ಫೇಟ್ ಸಲ್ಯೂಬಲ್ ಬ್ಯಾಕ್ಟೀರಿಯಾ), ಬ್ಯಾಸಿಲಸ್ ಸಿಲಿಕಸ್, ಥಿಯೋ ಆಕ್ಸಿಡೆಂಟ್ಸ್, ಮೈಕೋರೈಜಾ ಸೇರಿದಂತೆ ೬೭ಕ್ಕೂ ಹೆಚ್ಚು ಉಪಕಾರಿ ಜೀವಾಣುಗಳಿವೆ. ಒಂದು ಜವಾರಿ ಆಕಳು ದಿನಕ್ಕೆ ೧೪ರಿಂದ ೧೫ ಕೆಜಿ ಸಗಣಿ ಹಾಗೂ ೧೩ರಿಂದ ೧೫ ಲೀಟರ್ ಮೂತ್ರ (ಗಂಜಲ) ನೀಡುತ್ತದೆ. ಇಷ್ಟು ಪ್ರಮಾಣದ ಸಗಣಿ ಹಾಗೂ ಗಂಜಲದಿಂದ ೩೦ ಎಕರೆ ಭೂಮಿಯಲ್ಲಿ ಅದ್ಭುತವಾಗಿ ಬೇಸಾಯ ಮಾಡಬಹುದು.

ಅದು ಹೇಗೆ?

ಸುಭಾಷ ಪಾಳೇಕರ ಅವರ ಕೃಷಿ ಸಿದ್ಧಾಂತದ ಮುಖ್ಯ ಅಂಗವೇ ಇದು.

ಸಗಣಿಯಲ್ಲಿರುವ ಈ ಜೀವಾಣುಗಳನ್ನು ಕೃತಕವಾಗಿ ಬೆಳೆಸಿ ಅವನ್ನು ಭೂಮಿಗೆ ಹಾಕುವುದರಿಂದ ನಮ್ಮೆಲ್ಲ ಸಮಸ್ಯೆಗಳು ಖರ್ಚಿಲ್ಲದೇ ಮುಗಿಯುತ್ತವೆ. ನಮ್ಮ ಭೂಮಿ ಸಮೃದ್ಧವಾಗುತ್ತದೆ. ರೈತರ ಮೇಲೆ ಆರ್ಥಿಕ ಹೊರೆಯೂ ಬೀಳುವುದಿಲ್ಲ. ಎಲ್ಲಕ್ಕಿಂತ ಮುಖ್ಯ ನಮ್ಮ ಭೂಮಿ ರಾಸಾಯನಿಕಗಳ ಸೋಂಕಿಲ್ಲದೇ ಶುದ್ಧವಾಗುತ್ತದೆ. ಉತ್ತಮ ಬೆಳೆ ಬರಲು ಸಹಾಯವಾಗುತ್ತದೆ.

(ಮುಂದುವರಿಯುವುದು)

- ಚಾಮರಾಜ ಸವಡಿ