ಜುಟ್ಟಕ್ಕಿ

ಜುಟ್ಟಕ್ಕಿ

ಪುಸ್ತಕದ ಲೇಖಕ/ಕವಿಯ ಹೆಸರು
ಹ.ಸ.ಬ್ಯಾಕೋಡ
ಪ್ರಕಾಶಕರು
ಶ್ರೀ ಅಮ್ಮ ಪ್ರಕಾಶನ, ಬಾಗರಬಾವಿ, ಬೆಂಗಳೂರು -೫೬೦೦೭೨
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೧

ಮಕ್ಕಳಿಗಾಗಿ ಕಾದಂಬರಿ ಬರೆಯುವವರು ಅಪರೂಪದಲ್ಲಿ ಅಪರೂಪ. ಏಕೆಂದರೆ ಮಕ್ಕಳಿಗೆ ಸುದೀರ್ಘ ಓದು ಹಿಡಿಸುವುದಿಲ್ಲ. ಅಷ್ಟೊಂದು ತನ್ಮಯತೆಯಿಂದ ಓದಲು ಅವರಿಗೆ ಕಷ್ಟವಾಗುತ್ತದೆ. ಓದುತ್ತಾ ಓದುತ್ತಾ ಹಿಂದಿನ ಕಥೆ ಮರೆತುಹೋಗುತ್ತದೆ ಎಂಬೆಲ್ಲಾ ಆಪಾದನೆಗಳ ನಡುವೆ ಲೇಖಕರಾದ ಹ ಸ ಬ್ಯಾಕೋಡ ಅವರು “ಜುಟ್ಟಕ್ಕಿ" ಎನ್ನುವ ಸ್ವಾರಸ್ಯಕರವಾದ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಗೆ ಅವರು ಬರೆದ ಲೇಖಕರ ಮಾತಿನಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ...

“ಅಕ್ಷರ ಕಲಿಕೆಗೂ ಮುನ್ನ ಮುಗ್ಧ ಮಕ್ಕಳಲ್ಲಿ ಸರಿ, ತಪ್ಪುಗಳು ಬಗ್ಗೆ ಅರಿವು ಇರುವುದಿಲ್ಲ. ಸದಾ ಬೆರಗುಗಣ್ಣಿನಿಂದ ಸುತ್ತಮುತ್ತಲಿನ ಪರಿಸರವನ್ನು ನೋಡುತ್ತವೆ. ಇಂಪಾಗಿ ಹಾಡುವ ಕೋಗಿಲೆಯ ಧ್ವನಿಯನ್ನು ಕೇಳಿ ಕಣ್ಣರಳಿಸಿ ಆ ಧ್ವನಿಯತ್ತ ಹುಡುಕಾಟ ನಡೆಸುವುದು ಎಷ್ಟು ಸಹಜವೊ, ಕಾಗೆ ಕೂಡ ಕರ್ಕಶವಾಗಿ ಕೂಗಿದಾಗ ಕೂಡ ಅದೇ ಮಕ್ಕಳ ಕಣ್ಣುಗಳು ಕಾಗೆಯನ್ನು ಹುಡುಕಾಡುತ್ತವೆ. ಒಟ್ಟಾರೆ ಕಣ್ಣಿಗೆ ಬೀಳುವ ಪ್ರತಿಯೊಂದನ್ನು ಬೆರಗುಗಣ್ಣಿನಿಂದ ನೋಡುವ ಮಕ್ಕಳಿಗೆ ಹಿರಿಯರು ಧನಾತ್ಮಕ ಅಂಶಗಳನ್ನು ತುಂಬುವಂತಾಗಬೇಕು. ಇನ್ನೂ ಮಕ್ಕಳು ಅಕ್ಷರಭ್ಯಾಸವನ್ನು ಆರಂಭಿಸುತ್ತಿದ್ದಂತೆ ಮತ್ತೊಂದು ಹೊಸ ಪ್ರಪಂಚವನ್ನು ನೋಡುತ್ತಾರೆ. ಆಗವರ ಮನಸ್ಸು ಬಹಳ ಸೂಕ್ಷ್ಮವಾಗುತ್ತದೆ. ಅದಕ್ಕೆ ಇಂದಿನ ತಂತ್ರಜ್ಞಾನ ಯುಗದ ಪರಿಸರವೂ ಕಾರಣ ಎನ್ನಬಹುದು.

ಸರಿ, ತಪ್ಪಿನ ಅರಿವು ಬಂದ ಬಳಿಕವೂ ಮಕ್ಕಳು ಬಹಳ ಸೂಕ್ಷ್ಮ ಮನಸ್ಸಿನವರಾಗುತ್ತಾರೆ. ಸೂಕ್ಷ್ಮ ಅಂದರೆ ಆಂಗ್ಲ ಭಾಷೆಯಲ್ಲಿ ಹೇಳುವ ಹಾಗೆ sensitive ಅಂತಲ್ಲ. ಸೂಕ್ಷ್ಮ ಅಂದರೆ ಋಣಾತ್ಮಕ ಸಂಗತಿಗಳನ್ನಾಗಲಿ, ಧನಾತ್ಮಕ ಸಂಗತಿಗಳನ್ನಾಗಿ ಕೂಡಲೇ ಗ್ರಹಿಸುವಂತಹ ಸೂಕ್ಷ್ಮ ಮನಸ್ಸು. ಅಂತಹ ಮನಸ್ಸಿರುವ ಮಕ್ಕಳ ಕಣ್ಣಿಗೆ ಧನಾತ್ಮಕ ಸಂಗತಿಗಳ ದರ್ಶನವಾಗಬೇಕು ಹಾಗೂ ಅವರ ಕೈಗೆ ಧನಾತ್ಮಕ ಸಂಗತಿಗಳುಳ್ಳ ಪುಸ್ತಕಗಳನ್ನು ಕೊಡಬೇಕು. ಆಗ ಮಕ್ಕಳು ಜೀವನದಲ್ಲಿ ಸನ್ಮಾನರ್ಗದಲ್ಲಿ ಸಾಗುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸಿ ಗುರಿ ಸೇರುತ್ತಾರೆ.

ನಿಜ ಹೇಳಬೇಕೆಂದರೆ ಮಕ್ಕಳು ಹೂವಿನ ಗಿಡಗಳಲ್ಲಿನ ಮೊಗ್ಗುಗಳ ಹಾಗೆ, ಮೊಗ್ಗುಗಳು ಒಂದು ದಿನ ಅರಳಿ ಗಮನ ಸೆಳೆಯುವಂತೆ ಮಕ್ಕಳು ಸಹ ಬೆಳೆದು ದೊಡ್ಡವರಾಗುತ್ತಿದ್ದಂತೆ ಪ್ರತಿಭಾವಂತರಾಗಿ ಗಮನ ಸೆಳೆಯಬೇಕು. ಹಾಗಾಗಲು ಸೂಕ್ತ ಮಾರ್ಗದರ್ಶನ, ಸರಿ-ತಪ್ಪುಗಳ ಬಗ್ಗೆ ಅರಿವು ಮೂಡಿಸಿ, ಪ್ರೀತಿಯಿಂದ ಮುನ್ನಡೆಸಬೇಕು. ಒಟ್ಟಾರೆ ಹೇಳುವುದಾದರೆ 'ಅರಳುವ ಮನಸ್ಸುಗಳಿಗೆ ಅರಿವಿನ ಅಪ್ಪುಗೆ ಇರಲಿ'.

ಇಂದಿನ ಮಕ್ಕಳು ಕಂಪ್ಯೂಟರ್ ಆಸಕ್ತರಾಗಿರುವುದರಿಂದ ಸಾಹಿತ್ಯದ ಪುಸ್ತಕಗಳನ್ನು ಓದುವುದಿಲ್ಲ ಎನ್ನುವ ಮಾತಿದೆ. ಆದರೆ ನಾನು ಕಂಡಂತೆ ಹಾಗನಿಸಿಲ್ಲ. ನಾನು ಬರೆದಂತಹ ಕಥೆ, ಕಾದಂಬರಿ ಪುಸ್ತಕಗಳು ಪ್ರಕಟಣೆಗೊಂಡ ವರ್ಷದಲ್ಲಿ ಬಹುತೇಕ ಮಾರಾಟಗೊಂಡು ಖಾಲಿಯಾಗಿವೆ, ಮಕ್ಕಳಿಗೆ ಇಷ್ಟವಾಗುವ ವಸ್ತು ವಿಷಯಗಳುಳ್ಳ ಹಾಗೂ ಆಕರ್ಷಕವಾಗಿರುವ ಚಿತ್ರಗಳುಳ್ಳ ಗಮನ ಸೆಳೆಯುವ ಪುಸ್ತಕಗಳನ್ನು ಹೊರ ತಂದರೆ ಮಕ್ಕಳು ಓದಿಯೇ ಓದುತ್ತಾರೆ. ಮತ್ತೆ ಅಂತಹ ಪುಸ್ತಕಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಅಂತಹ ಅಭಿರುಚಿಯನ್ನು ಬೆಳೆಸುವ ತಂತ್ರವನ್ನು ಮಕ್ಕಳ ಸಾಹಿತಿಗಳಾದ ನಾವುಗಳು ಮೈಗೂಡಿಸಿಕೊಳ್ಳಬೇಕು. ಅಂತಹ ತಂತ್ರವನ್ನು ಮೈಗೂಡಿಸಿಕೊಂಡಿರುವ ಕಾರಣದಿಂದಾಗಿ ಅನೇಕ ಮಕ್ಕಳು ನನ್ನ ಸಂಪರ್ಕಿಸಿ ಹೊಸ ಕಥಾಸಂಕಲನ, ಕಾದಂಬರಿಗಳನ್ನು ಕೊಡುವಂತೆ ಒತ್ತಾಯಿಸುತ್ತಾರೆ. ಅಂತಹ ಮಕ್ಕಳ ಒತ್ತಾಸೆಯಿಂದಾಗಿ ಈ ಹೊಸ ಮಕ್ಕಳ ಕಾದಂಬರಿ 'ಜುಟ್ಟಕ್ಕೆ ಸಿದ್ಧಗೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಗಂಭೀರವಾಗಿ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆಯುವವರನ್ನು ಕಂಡಿಲ್ಲ. ಆದರೆ ನೀವು ತುಂಬಾ ಅಧ್ಯಯನ ಮಾಡಿ ಮಕ್ಕಳಿಗಾಗಿ ಕಾದಂಬರಿಯನ್ನು ಬರೆಯುವುದು ಗಮನಕ್ಕೆ ಬಂತು. ವಿಶೇಷವಾಗಿ ಪರಿಸರದ ಕುರಿತು ಮಕ್ಕಳಿಗೆ ಇಷ್ಟವಾಗುವ ಹಾಗೆ ಬರೆಯುವುದನ್ನು ಸಿದ್ಧಿಸಿಕೊಂಡಿದ್ದೀರಿ. ನಿಜಾ ಹೇಳಬೇಕೆಂದರೆ ನೀವು 'ಮಕ್ಕಳ ತೇಜಸ್ವಿ', ದೊಡ್ಡವರಿಗಾಗಿ ಪೂರ್ಣಚಂದ್ರ ತೇಜಸ್ವಿ ಅವರು ಪರಿಸರದ ಕುರಿತು ಬರೆದಂತೆ ನೀವು ಮಕ್ಕಳಿಗಾಗಿ ರಂಜನೀಯ, ಆಸಕ್ತಿ, ಕುತೂಹಲ ಹುಟ್ಟಿಸುವಂತಹ ಪರಿಸರದ ಬರವಣಿಗೆಯನ್ನು ಮಾಡುತ್ತಿದ್ದೀರಿ. ಅದಕ್ಕೆ ನಿಮ್ಮನ್ನು ನಾನು ಮಕ್ಕಳ ತೇಜಸ್ವಿ ಎಂದು ಹೇಳತೀನಿ ಅಂತಹ ಕವಿ ಸಿದ್ದಲಿಂಗಯ್ಯನವರು ತಮ್ಮ ಅಭಿಪ್ರಾಯವನ್ನು ಓದಿ ಹೇಳಿದಾಗ ನನ್ನ ಜೊತೆಗಿದ್ದ ಮಗಳು ಯಮುನೇಶ್ವರಿಯ ಮುಖದಲ್ಲಿ ಖುಷಿ ಉಕ್ಕುತ್ತಿತ್ತು. ನಾನಂತೂ ಎರಡೂ ಕೈಗಳಿಂದ ನಮಸ್ಕರಿಸಿದೆ.

ಆಗ ಕವಿ ಸಿದ್ದಲಿಂಗಯ್ಯನವರು, “ಇರಲಿ ಬ್ಯಾಕೋಡ, ನೀವೀಗ ನನಗಾಗಿ ಯಾವುದಾದರೊಂದು ಹಕ್ಕಿಯ ಬಗ್ಗೆ ಒಳ್ಳೆಯ ಮಕ್ಕಳ ಕಾದಂಬರಿಯನ್ನು ಬರೆದುಕೊಡಿ ನಾನು ಓದಬೇಕು. ಏಕೆಂದರೆ ಯಾರೋ ಸ್ನೇಹಿತರೊಬ್ಬರು ನನಗೆ ತಿಳಿಸಿದರು, ನೀವು ಹಕ್ಕಿಗಳ ಬಗ್ಗೆ ಅಧ್ಯಯನ ಮಾಡುತ್ತೀರಿ, ಫೋಟೊ ತೆಗಿತೀರಿ ಎಂದು. ಅದಕ್ಕೆ ನೀವು ಏಕೆ ಹಕ್ಕಿಯೊಂದರ ಬಗ್ಗೆ ಮಕ್ಕಳ ಕಾದಂಬರಿ ಬರೆಯಬಾರದು. ಆದಷ್ಟು ಬೇಗ ಬರೀರಿ ನೋಡೋಣ. ನಾನು ಓದಬೇಕು' ಎಂದು ತಿಳಿಸಿದರು.

ಆಗಲೇ ಹುಟ್ಟಿಕೊಂಡಿತು ಈ 'ಜುಟ್ಟಕ್ಕಿ'. ಕೇವಲ ಒಂಬತ್ತು ದಿನಗಳ ಕಾಲ ನಿರಂತರವಾಗಿ ಬರೆದೆ, ಕಾದಂಬರಿಯ ಮೊದಲ ಪ್ರತಿಯನ್ನು ತೆಗೆದುಕೊಂಡು ಕವಿ ಸಿದ್ದಲಿಂಗಯ್ಯನವರಿಗೆ ತಲುಪಿಸಿದೆ. ಎರಡು ದಿನಗಳ ಬಳಿಕ ಕರೆ ಮಾಡಿದ ಕವಿಗಳು, ಬ್ಯಾಕೋಡ ಬಿಡುವಾಗಿದ್ದರೆ ಸಂಜೆ ಮನೆಯ ಕಡೆಗೆ ಬನ್ನಿ' ಎಂದು ಕರೆದರು. ಹೋದೆ, ಆಗಲೂ ಒಂದಿಷ್ಟು ಟಿಪ್ಪಣಿ ಬರೆದಿಟ್ಟುಕೊಂಡಿದ್ದರು. ಒಂದೊಂದಾಗಿ ಓದಿ ಹೇಳಿದರು. ಕೇವಲ ಒಂಬತ್ತು ದಿನಗಳಲ್ಲಿ ಇಷ್ಟೊಂದು ಸೊಗಸಾಗಿ ಮಕ್ಕಳ ಕಾದಂಬರಿಯನ್ನು ಬರೆದಿದ್ದೀರಿ. ನಿಜವಾಗಿಯೂ ಬಹಳ ಖಷಿಯಾಯಿತು. ನನಗಾಗಿ ಹಠ ಹಿಡಿದು ಕುಳಿತು ಬರೆದಿದ್ದೀರಿ. ಅಭಿನಂದನೆಗಳು. ಬ್ಯಾಕೋಡ ಎಂದು ಪ್ರೋತ್ಸಾಹದ ನುಡಿಗಳನ್ನು ಹೇಳಿದರು.

'ಕನ್ನಡ ಮಕ್ಕಳ ಸಾಹಿತ್ಯದ ಇತಿಹಾಸದಲ್ಲಿ ಇಷ್ಟೊಂದು ಸೊಗಸಾಗಿ ಪರಿಸರದ ಕುರಿತು ಅಚ್ಚುಕಟ್ಟಾಗಿ ಮಕ್ಕಳಿಗೆ ಇಷ್ಟವಾಗುವ ಹಾಗೆ ಬರೆದ ಕಾದಂಬರಿ ನನ್ನ ಕಣ್ಣಿಗೆ ಬಿದ್ದಿಲ್ಲ. ಈಗಿನ ಮಕ್ಕಳಿಗೆ ಪರಿಸರದ ಕುರಿತಾದ ಪುಸ್ತಕಗಳು ಬರಬೇಕು. ಆ ಕೆಲಸ ನಿಮ್ಮಿಂದ ಸಾಧ್ಯ ಇದೆ. ಮಾಡಿ. ಈ ಕಾದಂಬರಿಯಲ್ಲಿ ಬುಲ್‌ಬುಲ್ ಹಕ್ಕಿ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಮಕ್ಕಳಿಗೆ ಕಾದಂಬರಿ ಮೂಲಕ ಹೇಳಿಕೊಂಡು ಹೋಗಿರುವ ರೀತಿ ಬಹಳ ಅದ್ಭುತವಾಗಿದೆ. ಇಡೀ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ನನಗೆ ಅನಿಸಿದ್ದು, ಇಂತಹ ಕಾದಂಬರಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದರೆ ನೀವು ನಿಜವಾಗಿಯೂ ರಸೀನ್ ಬಾಂಡ್‌ರಂತೆ ಫೇಮಸ್ ಆಗುತ್ತಿದ್ದೀರಿ ಬ್ಯಾಕೋಡ' ಎಂದರು. ಕವಿಗಳ ಆ ಮಾತನ್ನು ಕೇಳಿದ ನನಗೆ ಮತ್ತೊಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ

ಲಭಿಸಿದಷ್ಟು ಖುಷಿಯಾಯಿತು. ಎರಡು ಮೂರು ತಿಂಗಳುಗಳ ಕಾಲ ಈ ಕಾದಂಬರಿಯನು. ಆಗಾಗ ತಿದ್ದುಪಡಿ ಮಾಡಿದೆ. ಆದಷ್ಟು ಬೇಗ ಪುಸ್ತಕವನ್ನು ಮುದ್ರಿಸಿ ತನ್ನಿ ಬ್ಯಾಕೋಡ ಎಂದ ಕವಿಗಳು ಕೆಲವೇ ತಿಂಗಳುಗಳ ಬಳಿಕ ನಮ್ಮಿಂದ ಅಗಲಿದ್ದು ನೋವಿನ ಸಂಗತಿ. ಆದರೆ ಆವತ್ತು ಇಳಿಸಂಜೆ ಹೊತ್ತಿನಲ್ಲಿ ಅವರು ಹೇಳಿದ ಪ್ರೋತ್ಸಾಹದ ಮಾತುಗಳು ಮನದಾಳದಲ್ಲಿ ಹಸಿರಾಗಿವೆ.”