ಜುಟ್ಟಿನ ಬಿಜ್ಜು ಎಂಬ ಹಕ್ಕಿಯ ಕಥೆ ಗೊತ್ತೇ?

ಜುಟ್ಟಿನ ಬಿಜ್ಜು ಎಂಬ ಹಕ್ಕಿಯ ಕಥೆ ಗೊತ್ತೇ?

ಮೊನ್ನೆ ಭಾನುವಾರ ಮನೆಗೆ ಬಂದು ಕಾರು ನಿಲ್ಲಿಸಿ ನೋಡ್ತೇನೆ ಕಾರಿನ ಒಂದು ಟಯರ್ ಪಂಚರ್ ಆದಂತಿತ್ತು. ಬರುವಾಗ ಸ್ವಲ್ಪ ಹೊತ್ತಿನ ಮೊದಲಷ್ಟೇ ಪೆಟ್ರೋಲ್ ಬಂಕ್ ನಲ್ಲಿ ಟಯರ್ ಗೆ ಗಾಳಿ ಹಾಕಿಸಿಕೊಂಡು ಬಂದಿದ್ದೆನಲ್ಲಾ ಎಂದು ಆಶ್ಚರ್ಯ ಆಯ್ತು. ಯಾವುದಕ್ಕೂ ಇರಲಿ ಎಂದು ನನ್ನ ಮನೆಯಲ್ಲಿರುವ ಸೈಕಲ್ ಪಂಪ್ ತಂದು ಗಾಳಿ ಹಾಕಿ ನೋಡೋಣ ಎಂದು ತೀರ್ಮಾನಿಸಿದೆ. ಹಾಗೇ ಟಯರ್ ಗೆ ಗಾಳಿ ಹಾಕುತ್ತಿರುವಾಗ ಅಲ್ಲೇ ಪಕ್ಕದಲ್ಲಿದ್ದ ಮರಗಳ ಮೇಲೆ ಹಕ್ಕಿಗಳ ಗಲಾಟೆ ಕೇಳಿಸಿತು. 

ಪಿಕಳಾರ ಹಕ್ಕಿಗಳು ಅಲ್ಲೇ ಇದ್ದ ಕುಂಟಲ ಮರದ ಕಾಯಿಗಳನ್ನು ತಿನ್ನುತ್ತಿದ್ದವು. ಸುಮಾರು ಎಂಟರಿಂದ ಹತ್ತು ಹಕ್ಕಿಗಳು ಇದ್ದವು. ಅವುಗಳ ಜೊತೆಗೆ ಎರಡು ಮಡಿವಾಳ ಹಕ್ಕಿಗಳೂ ಇದ್ದವು. ಇನ್ನೆರಡು ಅರಶಿನ ಬುರುಡೆ ಹಕ್ಕಿಗಳೂ ಕಾಯಿ ತಿನ್ನುತ್ತಿದ್ದವು. ಅವುಗಳು ಮರದ ಮೇಲೆ ಕುಪ್ಪಳಿಸುತ್ತಾ ಹಣ್ಣು ಹುಡುಕುತ್ತಾ ಅದನ್ನು ತಿನ್ನುವ ಆಟ ನೋಡುತ್ತಾ ಅಲ್ಲೇ ನಿಂತುಬಿಟ್ಟೆ. ಅಷ್ಟರಲ್ಲಿ ಎಲ್ಲ ಹಕ್ಕಿಗಳ ಕೂಗುವ ಧ್ವನಿ ಬದಲಾಯಿತು. ಎಲ್ಲ ಹಕ್ಕಿಗಳೂ ಗಲಿಬಿಲಿ ಗೊಂಡಂತೆ ಕಾಣುತ್ತಿದ್ದವು. ಹಣ್ಣುಗಳನ್ನು ತಿನ್ನುತ್ತಿದ್ದರೂ ಅವುಗಳ ಧ್ವನಿ ಮತ್ತು ಗಮನ ಬೇರೆಲ್ಲೋ ಇರುವಂತೆ ಭಾಸವಾಗುತ್ತಿತ್ತು. ಕೆಲವು ಹಕ್ಕಿಗಳು ಸ್ವಲ್ಪ ದೂರಕ್ಕೆ ಹಾರಿ ಮತ್ತೆ ಹಿಂದೆ ಬರುತ್ತಿದ್ದವು. ಯಾವುದೋ ಅಪಾಯದ ಸೂಚನೆ ಅವುಗಳಿಗೆ ಸಿಕ್ಕಿದಂತೆ ಕಾಣುತ್ತಿತ್ತು. 

ಅಷ್ಟರಲ್ಲಿ ಹದ್ದಿನ ಜಾತಿಯ ಹಕ್ಕಿಯೊಂದು ಅಲ್ಲೇ ಪಕ್ಕದ ಮರದಲ್ಲಿ ಬಂದು ಕುಳಿತದ್ದು ಕಾಣಿಸಿತು. ಸಣ್ಣ ಹಕ್ಕಿಗಳ ಗಲಿಬಿಲಿ ನಡೆದೇ ಇತ್ತು. ಕೆಲವು ಹಕ್ಕಿಗಳು ಆ ಹದ್ದಿನ ಮೇಲೆ ಧಾಳಿ ಮಾಡಿ ಅದನ್ನು ದೂರ ಓಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದವು. ಹದ್ದುಮಾತ್ರ ಅಲ್ಲಿಂದ ಕದಲದೇ ಸುತ್ತಲೂ ನೋಡುತ್ತಿತ್ತು. ಅಷ್ಟು ಹಕ್ಕಿಗಳ ಕಿರುಚಾಟದ ನಡುವೆ ಸ್ವಲ್ಪವೂ ವಿಚಲಿತವಾಗದೇ ಅಲ್ಲೇ ಪಕ್ಕದ ಇನ್ನೊಂದು ಕೊಂಬೆಗೆ ಬಂದು ಕೂತಿತು.

ಈಗ ಹಕ್ಕಿ ನನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಕಾಗೆಗಿಂತ ಸ್ವಲ್ಪ ದೊಡ್ಡ ಗಾತ್ರದ ಹಕ್ಕಿ. ಆದರೆ ಗಿಡುಗನಷ್ಟು ದೊಡ್ಡದಲ್ಲ. ಬೆನ್ನು, ರೆಕ್ಕೆಗಳೆಲ್ಲ ಒಣಗಿದ ಎಲೆಯಂತಹ ಕಂದು ಬಣ್ಣ. ಬಾಲದಲ್ಲೂ ಬೂದು ಮತ್ತು ಕಂದು ಪಟ್ಟಿಗಳು. ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಬಿಳಿ ಬಣ್ಣದ ಮೇಲೆ ಕಂದು ಬಣ್ಣದ ಚುಕ್ಕೆಗಳು ಮತ್ತು ಪಟ್ಟಿಗಳಂತಹ ರಚನೆ. ತಲೆಯ ಹಿಂದೆ ಜುಟ್ಟಿನಂತಹ ರಚನೆ, ಹಳದಿ ಕಣ್ಣಿನ ನಡುವೆ ಕಪ್ಪು ಚುಕ್ಕೆ. ನೋಡುವಾಗಲೇ ಗಾಂಭೀರ್ಯ ಎದ್ದು ಕಾಣುತ್ತಿತ್ತು. ಅಲ್ಲಿಂದ ಏನನ್ನೋ ಗಮನಿಸಿ ಹಾರಿತು. ಕೆಲವೇ ಕ್ಷಣದಲ್ಲಿ ಯಾವುದೋ ಹಕ್ಕಿಯನ್ನು ತನ್ನ ಬಲವಾದ ಪಂಜದಲ್ಲಿ ಹಿಡಿದು ತಂದು ಅದನ್ನು ತನ್ನ ಕೊಕ್ಕಿನಿಂದ ಸುಲಿದು ತಿನ್ನಲಾರಂಭಿಸಿತು. ಉಳಿದ ಹಕ್ಕಿಗಳು ಈ ಧಾಳಿಗೆ ಬೆದರಿ ಅಲ್ಲಿಂದ ಜಾಗ ಖಾಲಿ ಮಾಡಿದ್ದವು. ಸತ್ತ ಪುಟಾಣಿ ಹಕ್ಕಿಯ ಬಗ್ಗೆ ಅಯ್ಯೋ ಅನಿಸಿದರೂ ಹದ್ದು ಬದುಕಬೇಕಾದರೆ ಅದಕ್ಕೆ ಈ ಬೇಟೆ ಬೇಕೇ ಬೇಕು. ಸಣ್ಣ ಪುಟ್ಟ ಅಳಿಲಿನಂತಹ ಪ್ರಾಣಿಗಳು ಮತ್ತು ಇತರೆ ಹಕ್ಕಿಗಳೇ ಇದರ ಮುಖ್ಯ ಆಹಾರ. ಮಾರ್ಚ್ ನಿಂದ ಮೇ ತಿಂಗಳ ನಡುವೆ ಇದರ ಸಂತಾನೋತ್ಪತ್ತಿ ಕಾಲ. ಮರದ ಮೇಲೆ ಅಟ್ಟಳಿಗೆಯಂತಹ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಹಳ್ಳಿ ಮನೆಗಳಲ್ಲಿ ಸಾಕಿದ ಕೋಳಿಮರಿಗಳನ್ನು ಹಿಡಿಯಲು ಒಮ್ಮೊಮ್ಮೆ ಬರುವ ಇದನ್ನು ಪಕ್ಕಿಸಾಲೆ ಎಂದೂ ತುಳು ಭಾಷೆಯಲ್ಲಿ ಕರೆಯುತ್ತಾರೆ. ಸ್ವಲ್ಪ ಕಾಡು ಚೆನ್ನಾಗಿರುವ ಪ್ರದೇಶದಲ್ಲಿ ಈ ಹಕ್ಕಿಯ ವಾಸ. ನಿಮ್ಮ ಆಸುಪಾಸಿನಲ್ಲೂ ಕಾಡು ಚೆನ್ನಾಗಿದ್ದರೆ ಈ ಹಕ್ಕಿ ಇರಬಹುದು.. 

ಕನ್ನಡ ಹೆಸರು: ಜುಟ್ಟಿನ ಬಿಜ್ಜು

ಇಂಗ್ಲೀಷ್ ಹೆಸರು: Crested Goshawk

ವೈಜ್ಞಾನಿಕ ಹೆಸರು: Accipiter trivirgatus

ಚಿತ್ರ, ಬರಹ : ಅರವಿಂದ ಕುಡ್ಲ, ಬಂಟ್ವಾಳ