ಜ್ಞಾನಕಾಶಿಗಳಿಗೆ ಶಿಕ್ಷೆ ಬೇಡ

ಜ್ಞಾನಕಾಶಿಗಳಿಗೆ ಶಿಕ್ಷೆ ಬೇಡ

ವಿಶ್ವವಿದ್ಯಾನಿಲಯಗಳು ಎಂದರೆ ವಿಶ್ವದ ಸಕಲ ವಿದ್ಯೆಗಳು ಒಂದೇ ಕಡೆ ಲಭಿಸುವಂಥ ಶಿಕ್ಷಣ ಕೇಂದ್ರಗಳು. ಅಲ್ಲಿ ಕಲಿಸಿಕೊಡದ ಶೈಕ್ಷಣಿಕ ಕಲಿಕೆಗಳೇ ಇಲ್ಲ ಎನ್ನುವ ಮಾತೂ ಇವುಗಳ ಶ್ರೇಷ್ಟತೆ ಹಾಗೂ ಔನ್ನತ್ಯಕ್ಕೆ ಹಿಡಿದಂತಹ ಕನ್ನಡಿ. ಈಗಲೂ ಹಲವಾರು ತಮ್ಮ ವಿವಿ ಹಂತದ ಕಲಿಕಾ ಘಟ್ಟವನ್ನು ಅಭಿಮಾನದಿಂದಲೇ ನೆನಪಿಸಿಕೊಳ್ಳುತ್ತಾರೆ. “ಆಗ ಎಂತೆಂಥ ಪ್ರಾಧ್ಯಾಪಕರಿದ್ದರು ಗೊತ್ತೇ? ಅವರ ಪಾಠ ಕೇಳುವುದೇ ಒಂದು ಹಿತ" ಎಂಬ ಅವರ ಅಭಿಮಾನದಲ್ಲಿ ಮೊದಲ ಸ್ಥಾನ ಅಲಂಕರಿಸುವವರೇ ಅಧ್ಯಾಪಕರು. ಜ್ಞಾನವಂತರು, ಪಂಡಿತರು ಎನಿಸಿಕೊಂಡವರ ಪಾಠ-ಪ್ರವಚನಕ್ಕೆ ವಿವಿಗಳು ಮೊದಲಿನಿಂದಲೂ ಹೆಸರುವಾಸಿ. ಕೆಲವು ಕಾಲೇಜುಗಳಂತೂ ಪ್ರಾಧ್ಯಾಪಕರ ಮೂಲಕವೇ ಗುರುತಿಸಿಕೊಂಡದ್ದೂ ಇದೆ. ಆದರೆ, ಪ್ರಸ್ತುತ ನಾಡಿನ ವಿಶ್ವವಿದ್ಯಾನಿಲಯಗಳು ಪ್ರಾಧ್ಯಾಪಕರ ಕೊರತೆಯಿಂದ ಸೊರಗುತ್ತಿರುವುದು ತಲೆ ತಗ್ಗಿಸುವಂಥ ವಿಚಾರ.

ರಾಜ್ಯದಲ್ಲಿ ೪೧ ಸರಕಾರಿ ವಿವಿಗಳು, ೧೧ ಡೀಮ್ಡ್ ವಿವಿ, ೨೪ ಖಾಸಗಿ ವಿವಿಗಳಿವೆ. ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಇಲ್ಲಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ಇವರ ಉನ್ನತ ಶಿಕ್ಷಣ ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗಿಸಲು ಆಡಳಿತ ವ್ಯವಸ್ಥೆ ಹುನ್ನಾರ ರೂಪಿಸಿದೆಯೇ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ, ರಾಜ್ಯದ ಬಹುತೇಕ ವಿವಿಗಳಲ್ಲಿ ಕಾಯಂ ಬೋಧಕ ಸಿಬ್ಬಂದಿಯೇ ಇಲ್ಲ. ಕೆಲವು ವಿವಿಗಳಲ್ಲಿ ಶೇ ೬೦ರಷ್ಟು ಪ್ರಾಧ್ಯಾಪಕರ ಕೊರತೆಯಿದ್ದು ಅತಿಥಿ ಉಪನ್ಯಾಸಕರ ಸೇವೆ ಪಡೆದು ಮುನ್ನಡೆಯುತ್ತಿರುವುದು ವಿಪರ್ಯಾಸ.

ವಿವಿಗಳಲ್ಲಿ ಕೋರ್ಸ್ ಗಳಿಗೆ ಪ್ರವೇಶ ಪಡೆದುಕೊಳ್ಳುವಾಗ, ‘ಸಬ್ಜೆಕ್ಟ್ ಯಾರು ತೆಗೆದುಕೊಳ್ಳುತ್ತಾರೆ?’ ಎಂದು ಪರಾಮರ್ಶೆ ಮಾಡುವ ಕಾಲಘಟ್ಟ ಇದು. ಆದರೆ, ಆ ಕೋರ್ಸ್ ಗೆ ಯಾರೂ ಬೋಧಕರೇ ಇಲ್ಲ ಎಂಬ ನಿರಾಶಾದಾಯಕ ಉತ್ತರ ಬಂದಾಗ ಸಹಜವಾಗಿಯೇ ವಿದ್ಯಾರ್ಥಿಗಳು ಅಂಥ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಹಿಂಜರಿಯುತ್ತಾರೆ. 'ಆ ಕೋರ್ಸ್ ಗಳಿಗೆ ಡಿಮ್ಯಾಂಡೇ ಇಲ್ಲ' ಎಂದು ಅಪವಾದ ಹೊತ್ತ ಕೋರ್ಸ್ ಗಳ ಸಂಖ್ಯೆಯೇ ಬಹಳಷ್ಟಿದೆ. ಆದರೆ, ಇದಕ್ಕೆ ಕೋರ್ಸ್ ಗಳು ಕಾರಣವಲ್ಲ. ಪ್ರಾಧ್ಯಾಪಕರ ಕೊರತೆಯೇ ಬಹುಮುಖ್ಯ ಕಾರಣ.

ಪ್ರತಿ ವರ್ಷ ನೊಬೆಲ್ ಗೌರವ ಪ್ರಕಟಗೊಂಡಾಗ ಅಮೇರಿಕಾ, ಯುರೋಪಿಯನ್ ವಿವಿಗಳ ಪ್ರಾಧ್ಯಾಪಕರ ಹೆಸರುಗಳೇ ಮುಂಚೂಣಿಯಲ್ಲಿರುತ್ತವೆ. ಸಂಶೋಧನೆ, ಆವಿಷ್ಕಾರಗಳಿಗೆ ಅಲ್ಲಿನ ವಿವಿಗಳು ಕೊಡುವ ಪ್ರಾಧಾನ್ಯತೆಯು ಒಂದಂಶವನ್ನೂ ನಮ್ಮ ವಿವಿಗಳು ಕೊಡದೆ ಇರುವುದಕ್ಕೂ ನಿಗದಿತ ಸಂಖ್ಯೆಯ ಪ್ರಾಧ್ಯಾಪಕರಿಲ್ಲದಿರುವುದೇ ಕಾರಣ ಎಂಬುದು ಕಟುವಾಸ್ತವ.

ಶೈಕ್ಷಣಿಕ ರಂಗವನ್ನು ವರ್ಷದಿಂದ ವರ್ಷಕ್ಕೆ ಉನ್ನತೀಕರಿಸಬೇಕು, ಬಲಪಡಿಸಬೇಕು ಎಂಬುದು ನಮ್ಮ ಸರಕಾರಿ ವ್ಯವಸ್ಥೆಗೂ ಆದ್ಯತೆಯ ವಿಚಾರವಾಗಿಲ್ಲ ಎಂಬುದು ದುರಂತ. ಒಬ್ಬ ಜನಪ್ರತಿನಿಧಿ ಸ್ಥಾನ ತೆರವಾದರೆ, ೬ ತಿಂಗಳಿನೊಳಗೆ ಆ ಜಾಗಕ್ಕೆ ಮತ್ತೊಬ್ಬನನ್ನು ಆರಿಸುವ ಅವಕಾಶ ನಮ್ಮ ಸಂವಿಧಾನ ಕಲ್ಪಿಸುತ್ತದೆ. ಆದರೆ, ಅದೇ ಸಂವಿಧಾನದ ಮೇಲೆ ನಂಬಿಕೆಯಿಟ್ಟು ಅಧಿಕಾರಕ್ಕೇರಿದವರು, ದಶಕಗಳಿಂದ ಖಾಲಿ ಉಳಿದ ಬೋಧಕ ಹುದ್ದೆಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸುವುದಿಲ್ಲ. ಸರಕಾರದ ಈ ನಿರ್ಲಕ್ಷ್ಯ ಅಂತ್ಯಗೊಳ್ಳಲಿ. ಗ್ಯಾರಂಟಿಗಳ ಪಟ್ಟಿಯಲ್ಲಿ ಉನ್ನತ ಶಿಕ್ಷಣಕ್ಕೂ ಜಾಗ ಸಿಕ್ಕಿ ಪ್ರಾಧ್ಯಾಪಕ ಹುದ್ದೆಗಳು ಭರ್ತಿಯಾಗುವಂತಾಗಲಿ. ವಿದ್ಯಾರ್ಥಿಗಳೇ ಈ ದೇಶದ ಭವಿಷ್ಯ ಎಂಬ ಪ್ರಾಥಮಿಕ ಅರಿವು ಸರಕಾರಕ್ಕೆ ಮೂಡಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೫-೦೭-೨೦೨೩ 

ಚಿತ್ರ ಕೃಪೆ: ಇಂಟರ್ನೆಟ್ ತಾಣ