ಜ್ಞಾನದ ಬದುಕು ಅವಶ್ಯ

ಜ್ಞಾನದ ಬದುಕು ಅವಶ್ಯ

ಜ್ಞಾನಕ್ಕೆ ಅರಿವು ತಿಳುವಳಿಕೆ ಎಂಬ ಪರ್ಯಾಯ ಪದಗಳನ್ನೂ ಬಳಸಬಹುದು. ನಮ್ಮನ್ನು ನಾವರಿತರೆ ಅದು ಜ್ಞಾನ. ನಮ್ಮೊಳಗೆ ನಮ್ಮನ್ನೇ ಹೊಕ್ಕಿಸುವುದು ಧ್ಯಾನ. ನಮ್ಮೊಳಗೆ ನಾವಾಗಿಯೇ ಉಳಿಯುವುದು ಮೌನ. ಜ್ಞಾನ, ಧ್ಯಾನ ಮತ್ತು ಮೌನ ಇವು ಮೂರೂ ಪಂಡಿತರ ಲಕ್ಷಣಗಳು. ಇವುಗಳಲ್ಲಿ ಎರಡು ಲಕ್ಷಣಗಳಿದ್ದರೂ ಸರ್ವೋತ್ತಮನಾಗಲು ಅಡ್ಡಿಯಿಲ್ಲ. ಇವು ಮೂರೂ ದಕ್ಕದವರು ಪಾಮರರು.

ಜ್ಞಾನದ ವ್ಯಾಪ್ತಿಯೋ ಬಹಳ ದೊಡ್ಡದು. ಜ್ಞಾನಕ್ಕೆ ಅಂತಿಮ ಶೃಂಗವಿಲ್ಲ. ಜ್ಞಾನ ವ್ಯಾಪಕ. ಆಬಾಲ ವೃದ್ಧರಾದಿಯಾಗಿ ಎಲ್ಲರೂ ಆಡುತ್ತೇವೆ. ಎಷ್ಟೊಂದು ಆಟಗಳು! ಎಲ್ಲ ಆಟಗಳಿಗೂ ಅದರದೇ ಆದ ನಿಯಮಗಳು! ಹೊರಾಂಗಣ ಮತ್ತು ಒಳಾಂಗಣದ ಆಟಗಳೆಂದು ಮತ್ತೆ ವಿಭಾಗಗಳು. ಎಲ್ಲ ನಿಯಮಗಳಾಗಲೀ, ಆಟಗಳ ನಿಯಮಗಳಾಗಲೀ ಆಡುವ ವಿಧಾನವಾಗಲೀ ಯಾರಿಗೂ ಇರಲು ಸಾಧ್ಯವಿಲ್ಲ. ಅಪರಿಚಿತವೇ ಆಗಿದ್ದರೂ ಯಾವುದೇ ಆಟಗಳನ್ನು ನೋಡಿದಾಗ "ಅದು ಆಟ” ಎಂದು ಹೇಳುವ ಜ್ಞಾನ ಎಲ್ಲರಿಗೂ ಇರುತ್ತದೆ ಮತ್ತು ಇರಲೇ ಬೇಕು.

ನಮ್ಮ ದೇಹದ ಬೆಳವಣಿಗೆಗೆ ಆಹಾರ ಬೇಕೇ ಬೇಕು. ಆದರೆ ಆಹಾರಗಳ ಪರಿಚಯ ಮತ್ತು ಅವುಗಳ ಬಗ್ಗೆ ಸಂಪೂರ್ಣವಾದ ಜ್ಞಾನ ಇದೆಯೇ? ಎಲ್ಲ ಆಹಾರಗಳ ತಯಾರಿಯ ಜ್ಞಾನ ಎಲ್ಲರಿಗೂ ಇದೆಯೇ? ರುಚಿಕರವಾಗಿದ್ದರೆ ಅದನ್ನು “ನಳ ಪಾಕ” ಎಂದು ಹೇಳುವರು. ನಳ ಎಂಬುದು ಐತಿಹಾಸಕ ರಾಜನೊಬ್ಬನ ಹೆಸರು. ಆತ ಬೆಂಕಿಯಿಲ್ಲದೆ ಅಡುಗೆ ಮಾಡುವುದರಲ್ಲಿ “ಪಕ್ಕಾ” ಇದ್ದನಂತೆ. ಆ ನಳ ಮಹಾರಾಜನಿಗೂ ಪ್ರಪಂಚದ ಎಲ್ಲ ಅಡುಗೆಗೆಳ ಪರಿಚಯವಿರದು. ಆದರೆ ಅಡುಗೆಯನ್ನು ಆಸ್ವಾದಿಸುವಾಗ ಅದರಲ್ಲಿ ಪ್ರಧಾನವಾಗಿ ಏನನ್ನು ಬಳಸಲಾಗಿದೆ ಎಂದು ಎಲ್ಲರಿಗೂ ಬಹುತೇಕ ಹೇಳಬಹುದಾದ ಜ್ಞಾನ ಇರುತ್ತದೆ.

ಬಹಳಷ್ಟು ಜನರು ಊಟದ ತಟ್ಟೆಯಲ್ಲಿ ಉಳಿಸುವುದನ್ನು ಕಾಣುತ್ತೇವೆ. ಹೋಟೆಲುಗಳಲ್ಲಿ ತಟ್ಟೆಯಲ್ಲಿ ಒಂದು ಬೆಳಗ್ಗಿನಿಂದ ಒಂದು ಸಂಜೆಯ ತನಕ ಮಿಗತೆಯಾಗುವ ಆಹಾರವನ್ನು ಒಟ್ಟು ಮಾಡಿದರೆ ಸಿಗುವ ಪ್ರಮಾಣ ಎಲ್ಲರನ್ನೂ ದಂಗು ಪಡಿಸುತ್ತದೆ. ಮುಂದಿನ ನಾಲ್ಕು ದಿನಕ್ಕೆ ಸಾಕಾಗುವ ಕಚ್ಚಾ ವಸ್ತುಗಳು ಆಹಾರದ ರೂಪದಲ್ಲಿ ತಿಪ್ಪೆಗೆ ಸೇರುತ್ತಿವೆ. ಆಳವಾಗಿ ಯೋಚಿಸಿದಾಗ ಒಂದು ನೂರು ದಿನದೊಳಗೆ ವರ್ಷವೊಂದಕ್ಕೆ ನಮಗೆ ಸಾಕಾಗುವ ಆಹಾರ ಮುಗಿದು ಹೋಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿಂದ ಆಹಾರವೂ ನಷ್ಟದ ಮೂಲವೇ ಆಗುತ್ತದೆ. ಅಧಿಕ ಆಹಾರ ತಿಂದರೆ ಆತ ರೋಗಿಯಾಗಿಯೂ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾದರೆ ನಮಗೆ ಸಾಕಾಗುವ ಆಹಾರದ ಪ್ರಮಾಣದ ಜ್ಞಾನ ನಮಗಿಲ್ಲವೇ? ಹೆಚ್ಚು ಹಾಕಿಸಿ ಎಸೆಯುವ ಅಜ್ಞಾನಿಗಳ ಸಾಲಿನಿಂದ ನಮಗೆ ಹೊರ ಬರಲಾಗದೇ? ನಮ್ಮ ಬಗ್ಗೆ ನಮಗೆ ಅರಿವಿರಲೇ ಬೇಕು.

ಇತರ ಪ್ರಾಣಿಗಳು ನಮ್ಮ ಬೆಳೆಗಳನ್ನು ನಾಶಮಾಡಿದವೆಂದು ಕರುಬುವ ನಮಗೆ, ನಾವೇ ಆಹಾರ ಎಸೆಯುವಾಗಲೂ ನಾವು ಕರುಬಬೇಡವೇ? ನೀರು, ಗಾಳಿ, ಮಣ್ಣು, ಆಹಾರ ಎಲ್ಲವನ್ನೂ ಸುರಕ್ಷಿತವಾಗಿಡುವ ಬಗ್ಗೆ ನಮಗೆ ಜ್ಞಾನ ಅತ್ಯಗತ್ಯ. ನಾವು ನಮಗಾಗಿ ಬದುಕಬಾರದು. ನಮ್ಮ ಬದುಕು ಸಮಾಜಕ್ಕಾಗಿಯೇ ಮೀಸಲಿರಬೇಕು. ಸಮಾಜ ಒಪ್ಪುವ ಬದುಕು ನಮ್ಮದಾಗಿರಲಿ ಎಂಬ ಜ್ಞಾನ ನಮ್ಮದಾಗಲಿ.

-ರಮೇಶ  ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ