ಜ್ಞಾನವನ್ನು ಕೇಳಿದ ಬಾಲಕ

ಜ್ಞಾನವನ್ನು ಕೇಳಿದ ಬಾಲಕ

ಬಾಲಕನೋರ್ವ ತಪಸ್ಸು ನಡೆಸಿ, ಧ್ಯಾನ ಮಾಡಿ, ಅಸಾಧಾರಣ ಜ್ಞಾನವನ್ನು ಪಡೆದ ಕಥೆಯು ನಮ್ಮ ಪುರಾಣಗಳಲ್ಲಿ ದಾಖಲಾಗಿದೆ. ಜ್ಞಾನಾರ್ಜನೆಗಾಗಿ ನಮ್ಮ ಬದುಕಿನಲ್ಲಿ ಯಾವುದೇ ತ್ಯಾಗವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಬಾಲಕನೇ ಒಂದು ಉದಾಹರಣೆ. 

ಸ್ವಯಂಭೂ ಮನುವಿನ ಮಗನಾದ ಉತ್ಥಾನಪಾದನು ರಾಜನಾಗಿದ್ದು, ಆತನಿಗೆ ಇಬ್ಬರು ಮಡದಿಯರು. ಒಬ್ಬಳ ಹೆಸರು ಸುನೀತಿ ಮತ್ತೊಬ್ಬಳ ಹೆಸರು ಸುರುಚಿ. ಮೊದಲನೆಯ ಮಡದಿ ಸುನೀತಿಯ ಮಗ ಧ್ರುವ. ಎರಡನೆಯ ಮಡದಿ ಸುರುಚಿಯ ಮಗ ಉತ್ತಮ. ಇವರಿಬ್ಬರಲ್ಲಿ ಉತ್ತಮನು ಚಿಕ್ಕವನು. ಮೊದಲನೆಯ ಮಡದಿಯ ಮಗನ ಮೇಲೆ ಅಸೂಯೆ ಹೊಂದಿದ್ದ ಸುರುಚಿಯು, ತನ್ನ ಮಗ ಉತ್ತಮನನ್ನು ರಾಜನೊಂದಿಗೆ ಹೆಚ್ಚು ಒಡನಾಟ ಹೊಂದುವಂತೆ ಪ್ರಯತ್ನ ನಡೆಸಿದ್ದಳು.

ಒಮ್ಮೆ ಧ್ರುವನು ತಂದೆಯ ಬಳಿಗೆ ಬಂದಾಗ, ಅವನ ತಮ್ಮ ಉತ್ತಮನು ತಂದೆಯ ತೊಡೆಯ ಮೇಲೆ ಕುಳಿತಿದ್ದ. ಧ್ರುವನಿಗೂ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುವ ಆಸೆಯಾಯಿತು. ಆದರೆ ಉತ್ತಮನ ತಾಯಿಯಾಗಿದ್ದ ಸುರುಚಿಯು ಧ್ರುವನನ್ನು ತಳ್ಳಿದಳು. ‘ನಾನೂ ಸಹ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬೇಕು' ಎಂದು ಧ್ರುವ ಹೇಳಿದಾಗ, ಸುರುಚಿಯು ಆ ದೇವರನ್ನು ಕೇಳಿಕೊಂಡು ಬಾ’ ಎಂದು ಗದರಿದಳು.

ಇದು ನಡೆದಾಗ ಧ್ರುವನಿಗೆ ಕೇವಲ ಐದು ವರ್ಷ. ಅವನು ತನ್ನ ತಾಯಿ ಸುನೀತಿಯ ಬಳಿ ಹೋಗಿ, ‘ನನಗೆ ತಂದೆಯ ತೊಡೆಯ ಮೇಲೆ ಕುಳಿತಕೊಳ್ಳುವ ಆಸೆಯಾಗಿದೆ. ಆದರೆ ದೇವರನ್ನು ಕೇಳಿಕೊಂಡು ಬರುವಂತೆ ಚಿಕ್ಕಮ್ಮ ಹೇಳಿದ್ದಾಳೆ. ನಾನು ಬೆಟ್ಟದ ತುದಿಗೆ ಹೋಗಿ ದೇವರನ್ನು ಕೇಳಿಕೊಂಡು ಬರುತ್ತೇನೆ' ಎಂದು ಹೊರಟ. ಸುನೀತಿಯು ಗಾಬರಿಯಿಂದ ಮಗನನ್ನು ಸಂತೈಸಿದಳು. ಧ್ರುವನು ‘ನಾನು ದೇವರನ್ನು ಕೇಳಲು ಹೊರಟಿರುವೆ. ದೇವರು ಒಳ್ಳೆಯವನು ಎಂದು ನೀನೇ ಹೇಳಿರುವೆ ಅಲ್ಲವೇ? ಅಂತಹ ಸರ್ವಶಕ್ತ ದೇವರನ್ನು ಕೇಳಿ, ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತೇನೆ. ಎಂತಿದ್ದರೂ, ಅದು ನನ್ನ ಹಕ್ಕು.’ ಎಂದು ವಾದಿಸಿ, ದೇವರನ್ನು ಕೇಳಲು ಹೊರಟ. ಪುಟ್ಟ ಬಾಲಕನಾದ ಆತನ ದಿನಚರಿಯನ್ನು ನೋಡಿಕೊಳ್ಳಲು ತಾಯಿಯೂ ಅವನ ಜತೆ ಬೆಟ್ಟಕ್ಕೆ ಹೊರಟಳು. 

ಧ್ರುವನು ಬೆಟ್ಟದ ತುದಿಯಲ್ಲಿ ಕುಳಿತು, ದೇವರ ಧ್ಯಾನ ಮಾಡತೊಡಗಿದ. ಆ ಸಮಯದಲ್ಲಿ ಅಲ್ಲಿಗೆ ಬಂದ ನಾರದನು ಬಾಲಕನ ಧೃಢ ನಿಶ್ಚಯವನ್ನು ನೋಡಿ, ಮೆಚ್ಚಿ ‘ಬಾಲಕನೇ, ನೀನು ದೇವರನ್ನು ಕೇಳುವ ವಿಚಾರದಲ್ಲಿ ತಪ್ಪಿಲ್ಲ. ಅವನನ್ನು ಸರಿಯಾದ ಕ್ರಮದಲ್ಲಿ ಕೇಳು. ವಿಷ್ಣುವಿನ ಧ್ಯಾನ ಮಾಡು. ಓಂ ನಮೋ ಭಗವತೇ ವಾಸುದೇವಾಯ ಎಂದು ಹೇಳುತ್ತಾ ದೇವರನ್ನು ಧ್ಯಾನಿಸು' ಎಂದು ಹೇಳಿದ.

ನಾರದ ಹೇಳಿಕೊಟ್ಟ ‘ಓಂ ನಮೋ ಭಗವತೇ ವಾಸುದೇವಾಯ' ಎಂಬ ಪದಪುಂಜವನ್ನು ಹೇಳುತ್ತಾ ಧ್ರುವನು ಹಲವು ತಿಂಗಳುಗಳ ಕಾಲ ಧ್ಯಾನ ಮಾಡಿದ. ಕೊನೆಗೆ ವಿಷ್ಣುವು ಧ್ರುವನ ಮುಂದೆ ಪ್ರತ್ಯಕ್ಷನಾದ. ಆದರೆ, ಧ್ಯಾನದಲ್ಲಿ ಮುಳುಗಿ ಹೋಗಿದ್ದ ಧ್ರುವನಿಗೆ ತಕ್ಷಣ ಮಾತು ಹೊರಡಲಿಲ್ಲ. ವಿಷ್ಣುವು ತನ್ನ ಶಂಖದಿಂದ ಧ್ರುವನ ಕೆನ್ನೆಯನ್ನು ಮುಟ್ಟಿದ. ಆ ತಕ್ಷಣ ಧ್ರುವನ ಕವಿತಾ ಶಕ್ತಿಯು ಪ್ರಕಟಗೊಂಡು, ಹನ್ನೆರಡು ಪದ್ಯಗಳು ಅವನ ಬಾಯಿಯಿಂದ ಹೊರಹೊಮ್ಮಿದವು. ಅದನ್ನು ಧ್ರುವ ಸ್ತುತಿ ಎನ್ನಲಾಗಿದೆ. 

ಧ್ರುವನ ಧ್ಯಾನವನ್ನು ಮೆಚ್ಚಿ ವಿಷ್ಣುವು 'ನಿನಗೇನು ಬೇಕು?’ ಎಂದು ಕೇಳಿದ. ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುವ ಆಸೆಯಿಂದ ಧ್ರುವ ಬಂದಿದ್ದ. ಆದರೆ, ದೀರ್ಘಕಾಲದ ಧ್ಯಾನದಿಂದಾಗಿ, ಅದೊಂದು ಕ್ಷುಲ್ಲುಕ ಆಸೆ ಎಂದು ಧ್ರುವನಿಗೆ ಅರಿವಾಯಿತು. ‘ನನಗೆ ಸ್ತುತಿಯ ವರದಾನ ನೀಡು' ಎಂದು ವಿಷ್ಣುವನ್ನು ಕೇಳಿದ.

ವೈಯಕ್ತಿಕವಾಗಿ ಏನನ್ನೂ ಕೇಳದೇ, ಸ್ತುತಿ ಅಥವಾ ಜ್ಞಾನವನ್ನು ವರವಾಗಿ ಕೇಳಿದ ಧ್ರುವನು ಎಲ್ಲಾ ಮಕ್ಕಳಿಗೆ ಆದರ್ಶ ಎನಿಸಿದ್ದಾರೆ. ವಿಷ್ಣುವು ಧ್ರುವನಿಗೆ ಅಪಾರ ಜ್ಞಾನವನ್ನು ಬೋಧಿಸಿದ್ದರ ಜತೆಯಲ್ಲೇ, ನಮ್ಮ ತಾರಾ ಮಂಡಲದಲ್ಲಿ ಆತನಿಗೆ ಶಾಶ್ವತ ಸ್ಥಾನ ಕಲ್ಪಿಸಿದ. ಆ ನಂತರ ತನ್ನ ರಾಜ್ಯಕ್ಕೆ ವಾಪಾಸಾದ ಧ್ರುವನು ಹಲವು ವರ್ಷಗಳ ಕಾಲ ರಾಜ್ಯಭಾರ ಮಾಡಿದ. ವಿಷ್ಣುವಿನ ವರದಾನದಿಂದ ಧ್ರುವಪದವನ್ನು ಸಾಧಿಸಿದ ಧ್ರುವನು, ಒಂದು ನಕ್ಷತ್ರದ ರೂಪದಲ್ಲಿ ನಭೋಮಂಡಲದಲ್ಲಿ ನೆಲೆಸಿದ್ದಾನೆ. ಉತ್ತರ ಧ್ರುವ ನಕ್ಷತ್ರದ ಸ್ಥಾನವನ್ನು ಪಡೆದಿದ್ದಾನೆ.

-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ