ಜ್ಞಾನ ಮಾಡಿಕೊಳ್ಳುವ ರೀತಿ

ಜ್ಞಾನ ಮಾಡಿಕೊಳ್ಳುವ ರೀತಿ

ಇಂದು ಜ್ಞಾನ ಹೇಗೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಬಗ್ಗೆ ನಿಜಗುಣ ಶಿವಯೋಗಿಗಳು ಅದ್ಭುತವಾಗಿ ಹೇಳಿದ್ದಾರೆ.

"ಕೆಲವಂ ಬಲ್ಲವರಿಂದ ಕಲಿತು, 

ಕೆಲವಂ ಶಾಸ್ತ್ರಂಗಳಂ ಕೇಳುತ್ತಾ,

ಕೆಲವಂ ಮಾಲ್ಪವರಿಂದ ಕಂಡು,

ಕೆಲವಂ ಸುಜ್ಞಾನದಿಂ ನೋಡುತಂ,

ಕೆಲವಂ ಸಜ್ಜನ ಸಂಗದಿಂದ ,

ಅರಿಯಲ್ ಸರ್ವಜ್ಞಂ ಮಪ್ಪಂನರಂ."

ಇದು ಕಲಿಯುವ ರೀತಿ. ನಾವು ಐದು ರೀತಿಯಿಂದ ಕಲಿಯಬೇಕಾಗುತ್ತದೆ.

1. ನೋಡಿ ಕಲಿಯುವುದು: ಈ ಜಗತ್ತಿನಲ್ಲಿ ಕೆಲವು ಸಂಗತಿಗಳನ್ನು ನೋಡಿ ಕಲಿಯಬೇಕು. ಇನ್ನೊಬ್ಬ ಮನುಷ್ಯ ಏನು ಮಾಡುತ್ತಾನೆ ?. ಅದರ ಫಲ ಏನು ಆಗುತ್ತಿದೆ ?. ಅದರ ಪರಿಣಾಮ ಆತನ ಮೇಲೆ ಹೇಗೆ ಆಗಿದೆ ?. ಇಂತಹುದನ್ನು ನೋಡಿ ನೋಡಿ ಕಲಿಯುವುದು. ಅದಕ್ಕಾಗಿ ಇಷ್ಟೊಂದು ಸಾಹಿತ್ಯ ಜಗತ್ತಿನಲ್ಲಿ ಇದೆ. ಎಲ್ಲಾ ನನಗೆ ತಿಳಿಯುತ್ತದೆ ಅಂತ ಹೋಗಬಾರದು. ಸಣ್ಣವರೇ ಇರಲಿ, ದೊಡ್ಡವರೇ ಇರಲಿ, ಕಲಿಯುವ ಮನಸ್ಸು ಇರಬೇಕು. ಅದನ್ನು ಸ್ವೀಕರಿಸುವ ಮನಸ್ಸು ಇರಬೇಕು. ಆಗ ಜೀವನ ಸಮೃದ್ಧವಾಗುತ್ತದೆ.

ಒಬ್ಬ ಮನುಷ್ಯ, ಕಾರಿನಲ್ಲಿ, ಹೊಸ ದಾರಿಯಲ್ಲಿ ಹೋಗುತ್ತಿದ್ದಾನೆ. ಆ ದಾರಿಯ ಮುಂದೆ ಮೂರು ಕವಲು ಇರುತ್ತದೆ. ಬೇರೆ ಜನ ಇರಲಿಲ್ಲ. ಅಲ್ಲಿ ಒಬ್ಬ ಕುಡುಕ ಕುಡಿದು ಕುಳಿತಿದ್ದಾನೆ. ಆ ಕುಡುಕನನ್ನು ಈ ಕಾರಿನ ಚಾಲಕ, ನಾನು ಇಂತಹ ಊರಿಗೆ ಹೋಗಬೇಕು. ಯಾವ ದಾರಿಯಲ್ಲಿ ಹೋಗಬೇಕು?. ಅಂತ ಕೇಳಿದ. ಆಗ ಕುಡುಕ ಹೇಳಿದ. ಈ ಮಧ್ಯ ದಾರಿಯಲ್ಲಿ ಹೋಗು. ನೀನು ಸರಿಯಾಗಿ ಊರು ತಲುಪುತ್ತಿ ಎಂದನು. ಆ ಮನುಷ್ಯ ಹೇಳಿದ ಈತ ಕುಡಿದಿದ್ದಾನೆ. ಇವನ ಮಾತು ಏನು ಕೇಳೋದು ಎಂದ. ಅವಾಗ ಕುಡುಕ ಹೇಳಿದ. ಈಗ ಇಲ್ಲಿ ಹೇಳೋರು ಯಾರು ಇಲ್ಲ. ನಾನೊಬ್ಬನೇ. ನಾನು ಹೇಳೋದು ಸತ್ಯ ಇದೆ ಅಂದ. ನನ್ನ ಕಡೆ ನೋಡಬೇಡ. ದಾರಿ ಮಹತ್ವದ್ದು ನಿನಗೆ ಎಂದ. ನಾನು ಹೇಳಿದ್ದು ಸತ್ಯ ಇದ್ದರೆ ಸ್ವೀಕರಿಸಬೇಕು. ನಾನು ಬಾಟಲಿ ಹಿಡಿಯಲಿ, ಏನೇ ಮಾಡಲಿ, ವಿಚಾರ ಮಾಡಬೇಡ ಎಂದ. ಇದರ ಅರ್ಥ ಯಾರು ಹೇಳುತ್ತಾರೆ ಅವರ ಬಗ್ಗೆ ತಕರಾರು ಮಾಡಬಾರದು. ಆತ ಬಾಲಕ, ಕುಡುಕ, ಆ ಜಾತಿಯವ, ಈ ಜಾತಿಯವ, ಕರಿಯ, ಬಿಳಿಯ ಅದು ಮಹತ್ವ ಅಲ್ಲ. ಆ ಮಾತು ಸತ್ಯ ಇದ್ದರೆ ಸ್ವೀಕಾರ ಮಾಡಬೇಕು. ಚಾಲಕ ಅದೇ ದಾರಿಯಲ್ಲಿ ಮುಂದೆ ಹೋದ. ಅಲ್ಲಿ ಬೋರ್ಡ್ ನೋಡಿದ ಸರಿಯಾಗಿತ್ತು. ಇದರ ಅರ್ಥ ಯಾರು ಹೇಳುತ್ತಾರೆ ಮಹತ್ವದಲ್ಲ. ಏನು ಹೇಳುತ್ತಾರೆ ಅದು ಮಹತ್ವದ್ದು. ಕುಡಿದವ ಹೇಳುತ್ತಾನೆ. ನೀನು ಕುಡಿಯಬೇಡ ಅಂತ. ಆದ್ರೆ ನಮ್ಮ ತಕರಾರು, ನೀನು ಕುಡುಕ. ನೀನು ನನಗೆ ಏನು ಹೇಳುವುದು ಅಂದ. ಆಗ ಕುಡುಕ ಹೇಳಿದ. ನಾನು ಕುಡಿದಿದ್ದೇನೆ ಅಂತ ಹೇಳುತ್ತಿದ್ದೇನೆ. ಅದರದ್ದು ಎಲ್ಲಾ ಅನುಭವಿಸಿದ್ದೇನೆ. ನಾನು ಅನುಭವಿ. ಮನೆ ಹಾಳಾಗಿದೆ. ನನ್ನ ಯಾರು ಪ್ರೀತಿಸುವುದಿಲ್ಲ. ನನ್ನ ಆರೋಗ್ಯ ಕೆಟ್ಟಿದೆ. ಯಾರು ನನ್ನ ಮಾತು ನಂಬೋದಿಲ್ಲ. ಇಷ್ಟೆಲ್ಲಾ ಆಗಿದೆ. ಅದಕ್ಕಾಗಿ ನೀನು ಕುಡಿಯಬೇಡ ಎಂದನು. ಈತ ಗುರು ಅಲ್ಲವೇನು. ಪ್ರಯೋಗ ಮಾಡಿದ ಗುರು. ತನ್ನ ಆರೋಗ್ಯ ಹಾಳುಮಾಡಿಕೊಂಡು. ಅನುಭವ ಮಾಡಿಕೊಂಡು, ಹೇಳುತ್ತಿದ್ದಾನೆ. ನಾವು ಅವರ ಬಗ್ಗೆ ತಕರಾರು ಮಾಡಬಾರದು. ನೋಡಿ ಕಲಿಯಬೇಕು.

2. ಕೆಲವೊಂದು ಶಾಸ್ತ್ರಗಳಿಂದ ಕೇಳುತ್ತ ಕಲಿ: ಅಂದರೆ ಬಲ್ಲವರು ಬರೆದಿರುತ್ತಾರೆ. ಅದನ್ನು ಓದಿ ಕಲಿ ಅಥವಾ ಅವರ ಮಾತನ್ನು ಕೇಳಬೇಕಾಗುತ್ತದೆ. ಬಲ್ಲವರು, ತಿಳಿದವರು ಮಾತುಗಳನ್ನು ಕೇಳಿ ಕಲಿಯಬೇಕು. ಬಲ್ಲವರು ಸಿಗಲಿಲ್ಲ ಎಂದರೆ ಬಲ್ಲವರು ಬರೆದಿರುವ ಗ್ರಂಥಗಳಿವೆ. ಅವುಗಳನ್ನು ಓದಿ ಕಲಿಯಬೇಕಾಗುತ್ತದೆ. 

3. ಮಾಡುವುದರಿಂದ ನೋಡಿ ಕಲಿಯುವುದು: ಕೆಲವು ಕೌಶಲಗಳು ಇರುತ್ತವೆ. ಅವನ್ನು ನಾವೇ ನೇರವಾಗಿ ಕಲಿಯಲು ಕಷ್ಟ .ಅವುಗಳನ್ನು ಮಾಡುವಾಗ ನೋಡುತ್ತಾ ಇದ್ದರೆ, ಕಲಿಯಲು ಸಾಧ್ಯವಾಗುತ್ತದೆ. 

4. ಕೆಲವೊಂದನ್ನು ಸುಜ್ಞಾನದಿಂದ ನೋಡುತ್ತಾ ಕಲಿ: ಅಂದರೆ ನಾವೇ ವಿಚಾರ ಮಾಡುತ್ತಾ ಕಲಿಯಬೇಕು. ಇದಕ್ಕೆ ಒಂದು ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ಕೆ ಆನಂದ್ ರವರು ಕರ್ತವ್ಯ ನಿರ್ವಸುತ್ತಿದ್ದಾರೆ. ಒಮ್ಮೆ ಎಪಿಎಫ್ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ, ಮಕ್ಕಳಿಗೆ ಮೊಟ್ಟೆ ಬಿಡುಗಡೆಯ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಮಾತನಾಡುತ್ತಾ ಕೇಳಿದರು. ಭೂಕಂಪನ ಎಂದರೇನು? ಎಂದರು. ಮಕ್ಕಳು ಮುಜುಗರದಿಂದ ಹೇಳಲು ಸಂಕೋಚ ಪಡುತ್ತಿದ್ದರು. ಮತ್ತೆ ವಿದ್ಯುತ್ ಎಂದರೇನು? ಎಂದರು. ಮಕ್ಕಳು ಉತ್ತರಿಸಲಿಲ್ಲ. ಆಗ ನಿಮಗೆ ವಿಷಯ ಗೊತ್ತಿಲ್ಲದಿದ್ದರೆ ಎಲ್ಲಿ ತಿಳಿಯುತ್ತೀರಿ ಎಂದರು. ಮಕ್ಕಳು ಇಂಟರ್ನೆಟ್ ನಲ್ಲಿ ಸಿಗುತ್ತದೆ ಎಂದರು. ಇಂಟರ್ನೆಟ್ಟಲ್ಲಿ ಎಲ್ಲಿ ಸಿಗುತ್ತದೆ ಎಂದರು. ಗೂಗಲ್ ಎಂದರು ಮಕ್ಕಳು. ಆಗ ಅವರು ಸುಂದರವಾಗಿ ಹೇಳಿದ್ದು ವಿದ್ಯುತ್ ಎಂದರೇನು? ಮಾಹಿತಿ ತಿಳಿದುಕೊಂಡರೆ ಸಾಕಾಗುವುದಿಲ್ಲ. ಅದರ ಮೇಲೆ ನೀವೇ ಪ್ರಶ್ನೆ ಹಾಕಿಕೊಳ್ಳಬೇಕು. ಉತ್ತರ ಹುಡುಕಬೇಕು. ಮತ್ತೆ ಪ್ರಶ್ನೆ ಹಾಕಿಕೊಳ್ಳಬೇಕು ಉತ್ತರ ಹುಡುಕಬೇಕು. ಹೀಗೆ ಹೆಚ್ಚು ಹೆಚ್ಚು ಪ್ರಶ್ನೆ ಹಾಕಿಕೊಳ್ಳುತ್ತಾ ಉತ್ತರ ಹುಡುಕಿಕೊಂಡರೆ ಅದರ ಸಮಗ್ರ ಜ್ಞಾನ ಬರುತ್ತದೆ. ಹೀಗೆ ದಿನಕ್ಕೆ ಒಂದು ವಿಷಯ ಕಲಿಯಿರಿ. ಅದು ನಿಮಗೆ ಬಹಳ ಉಪಯುಕ್ತವಾಗುತ್ತದೆ ಎಂದರು. ಇದನ್ನೇ ವಿಚಾರ ಮಾಡುತ್ತ ಕಲಿ ಎನ್ನುವುದು.

5. ಸಜ್ಜನ ಸಂಗದಿಂದ ಕಲಿ: ಅಂದರೆ ಸತ್ಸಂಗದಿಂದ ಕಲಿಯುವುದು. ಸತ್ಸಂಗ ಎಂದರೆ ಕೇವಲ ಮನುಷ್ಯರ ಸಂಗ ಅಂತ ಅಲ್ಲ. ಸೌಂದರ್ಯದ ಸಂಗದಿಂದ ಸೌಂದರ್ಯ, ಮಾಧುರ್ಯದ ಸಂಗತಿಯಿಂದ ಮಾಧುರ್ಯ. ಅಂದರೆ ಸುಂದರ ತೋಟದ ಸಂಗ ಮಾಡಿದರೆ, ಸೌಂದರ್ಯ ಮನ ತುಂಬಿ, ಮನಸು ಸುಂದರವಾಗುತ್ತದೆ. ಯಾವ ಯಾವುದು ಒಳ್ಳೆಯದು ಇದೆ?. ಅದರ ಸಂಗ ಮಾಡಿದರೆ ಒಳ್ಳೆಯ ಕಲಿಕೆಯಾಗುತ್ತದೆ. ಅದನ್ನು ಬಿಟ್ಟು ಕೆಟ್ಟವರ ಸಂಗ, ಮಧ್ಯದ ಸಂಗ, ಜೂಜಾಟದ ಸಂಗ ಮಾಡಿದರೆ, ಕೆಟ್ಟ ಕಲಿಕೆಯಾಗುತ್ತದೆ. ಹೀಗೆ ಕಲಿತರೆ ಸರ್ವಜ್ಞಮಪಂ ಅಂದರು. ಅಂದರೆ ಜೀವನ ಹೇಗೆ ಸಾಗಿಸಬೇಕು ಅನ್ನುವುದು ತಿಳಿಯುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪುರಾಣಗಳನ್ನು ಬರೆದಿದ್ದಾರೆ. ಅದರಲ್ಲಿ ಬರುವ ಹೆಸರು ಸುಳ್ಳು. ಘಟನೆ ಸತ್ಯ. ನಮ್ಮ ಹೆಸರು ಬರೆದರೆ ಗಲಾಟೆ ಅಂತ ದೇವರ ಹೆಸರು ಬರೆದರು. ಆಗ ಜೂಜಾಟ ಮಾಡಿದ್ದು, ರಾಜ್ಯ ಹಾಳು ಮಾಡಿಕೊಂಡವರು, ಇದು ಸುಳ್ಳೇ ಅಲ್ಲ. ಭಸ್ಮಾಸುರ ತಪಸ್ಸು ಮಾಡಿ, ಯಾರಿಂದಲೂ ಸಾಯಬಾರದು, ನಾನು ಯಾರ ಮೇಲೆ ಕೈ ಹಾಕಿದರೆ ಅವರು ಸಾಯಬೇಕು ಅಂತ ಶಿವನಿಂದ ವರ ಪಡೆದ. ನಂತರ ಶಿವನ ಮೇಲೆ ಪ್ರಯೋಗಿಸಲು ಹೊರಟ. ಆಗ ಶಿವ ಓಡುತ್ತಾ ಇದ್ದ. ಭಸ್ಮಾಸುರ ಹಿಂದಿನಿಂದ ಹೋಗುತ್ತಿದ್ದ. ಆಗ ವಿಷ್ಣು ಸುಂದರ ತರುಣಿಯಾಗಿ ಬಂದನು. ಭಸ್ಮಾಸುರ ಅವಳನ್ನು ನೋಡಿ ಶಿವನನ್ನು ಬಿಟ್ಟನು. ನನ್ನ ಮದುವೆಯಾಗು ಎಂದನ್ನು ಭಸ್ಮಾಸುರ. ಆಗ ಸುಂದರ ತರುಣಿ ಹೇಳಿದಳು, ನನ್ನ ಹಾಗೆ ನರ್ತನ ಮಾಡಿದರೆ ಮದುವೆ ಆಗುತ್ತೇನೆ ಎಂದಳು. ಆಗ ಭಸ್ಮಾಸುರ ಹೇಳಿದ, ಅದೇನು ಮಹಾ, ಆಗಲಿ ಎಂದನು. ಇಬ್ಬರು ನೃತ್ಯ ಮಾಡುತ್ತಾ ತಲೆ ಮೇಲೆ ಕೈ ಹಾಕಿದರು. ಈತನು ಕೂಡ ತನ್ನ ತಲೆಯ ಮೇಲೆ ಕೈ ಹಾಕಿದ. ತಾನೇ ಭಸ್ಮವಾಧನು. ಅಂದರೆ ಬೇರೆಯವರನ್ನು ಸುಡಲು ಹೋಗಿ ತಾನೇ ಸುಟ್ಟುಕೊಂಡ ಅಂತ ಈ ಕಥೆ ಸಾರಾಂಶ. 

ಈ ಜಗತ್ತು ಪ್ರಯೋಗಶಾಲೆ ಅಲ್ಲವೇ. ನಮ್ಮ ಹೆಸರು ಹಾಕಿಕೊಂಡರೆ ಘಟನೆ ನಮ್ಮದೇ ಆಗುತ್ತದೆ. ಗೆದ್ದವರಿಂದ ಕಲಿಯುವುದು. ಬಿದ್ದವರಿಂದ ಕಲಿಯುವುದು. ಬಿದ್ದವರು ಹೇಗೆ ಎದ್ದರು ಅನ್ನುವುದನ್ನೂ ಕಲಿಯುವುದು. ಹೇಗೆ ಬಿದ್ದರು ಅಂತ ಕಲಿಯುವುದು. ಅದರಿಂದ ನಮ್ಮ ಜೀವನ ಸಮೃದ್ಧವಾಗುತ್ತದೆ. ದತ್ತಾತ್ರೇಯ ಅನ್ನುವವರಿದ್ದರು. ಅವರಿಗೆ 24 ಗುರುಗಳು. ಗುರುಗಳು ಅಂದರೆ ಮನುಷ್ಯರು ಅಂತ ಅಲ್ಲ. ಅವರಿಗೆ ಗಿಡ ಗುರು, ಹುಲ್ಲು ಗುರು, ಪಕ್ಷಿ ಗುರು, ಹೀಗೆ ಎಲ್ಲವರಿಂದಲೂ ಕಲಿಯುತ್ತಿದ್ದರು. ಹಾಗೆ ಮಕ್ಕಳೇ ನಾವು ಎಲ್ಲದರಿಂದ, ಎಲ್ಲವರಿಂದ ಕಲಿಯಬೇಕು ಅಲ್ಲವೇ...?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ