ಟಿಪ್ಪು - ಶಿವಾಜಿ - ನಿಜ ಕನಸುಗಳು...!

ಟಿಪ್ಪು - ಶಿವಾಜಿ - ನಿಜ ಕನಸುಗಳು...!

ಇತಿಹಾಸವೂ ಚುನಾವಣಾ ರಾಜಕೀಯವಾದಾಗ… ಶಿವಾಜಿ - ಟಿಪ್ಪು ಸುಲ್ತಾನ್  ರಾಜಕೀಯ ಪಕ್ಷಗಳ ಚುನಾವಣಾ ಗುರಾಣಿಗಳಾದಾಗ...ದಾರಿ ತಪ್ಪಿದ ಮಕ್ಕಳು ಸೃಷ್ಟಿಯಾಗುತ್ತಾರೆ. ನಿಜ ಕನಸುಗಳು ಎಂಬುದೇ ಒಂದು ತಪ್ಪು ಮತ್ತು ಸ್ವಯಂ ಸೃಷ್ಟಿಯ ಸುಳ್ಳು ಕಲ್ಪನಾ ಲೋಕದ ಪರಿಕಲ್ಪನೆ. ಇತಿಹಾಸದಲ್ಲಿ ಗತಿಸಿದ ವ್ಯಕ್ತಿಯ ನಿಜ ಕನಸುಗಳು ಈಗ ನಮಗೆ ಹೇಗೆ ತಿಳಿಯಲು ಸಾಧ್ಯ. ಕೇವಲ ನಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ಪುಸ್ತಕ ಅಥವಾ ನಾಟಕ ಅಥವಾ ಸಿನಿಮಾ ಕಥೆ ರಚಿಸಬಹುದಷ್ಟೇ. ಅಂತಹ ಅತ್ಯಂತ ಮೂರ್ಖ ಸಾಮಾಜಿಕ ವ್ಯವಸ್ಥೆಯಲ್ಲಿ ನಾವು - ನೀವು...

ಅದನ್ನು ಸರಳವಾಗಿ ಹೇಳುವುದಾದರೆ… ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ( ಚಾರ್ಟರ್ಡ್ ಅಕೌಂಟೆಂಟ್ ) ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು, ವೃತ್ತಿಪರರು ಮತ್ತು ವ್ಯಾಪಾರಸ್ಥರು ಮೊದಲು ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿಸಬೇಕಾಗಿತ್ತು. ಅದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ ಗಳ ಬಳಿ ಬ್ಯಾಂಕ್ ಸ್ಟೇಟ್ ಮೆಂಟ್ ನಿಂದ ಹಿಡಿದು ಎಲ್ಲಾ ಕಾಗದ ಪತ್ರಗಳನ್ನು ನೀಡುತ್ತಿದ್ದರು. ಅದನ್ನು ಸಿಎಗಳ   ಸಹಾಯಕರು ತೆರಿಗೆ ಇಲಾಖೆ  ಮೊದಲೇ ಸಿದ್ದಪಡಿಸಿದ ನಮೂನೆಯಲ್ಲಿ ಕಂಪ್ಯೂಟರ್ ಸಹಾಯದಿಂದ ಎಲ್ಲವನ್ನೂ ಭರ್ತಿ ಮಾಡುತ್ತಿದ್ದರು.

ಕೆಲವು ತೀರಾ ಶಿಸ್ತುಬದ್ಧ ಮತ್ತು ನೇರ ವ್ಯವಹಾರಸ್ಥರನ್ನು ಬಿಟ್ಟರೆ ಉಳಿದವರೆಲ್ಲ ಹಣದ ಕೊಡು ಕೊಳ್ಳುವ ವ್ಯವಹಾರದಲ್ಲಿ ನಗದು ಅಥವಾ ಚೆಕ್ ಅಥವಾ ಕಪ್ಪು ಇದ್ಯಾವದನ್ನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೇಗೋ ಆ ತಕ್ಷಣದ ಸಮಸ್ಯೆ ಬಗೆಹರಿದರೆ ಸಾಕು ಎನ್ನುವ ಮನೋಭಾವದವರೇ ಹೆಚ್ಚಾಗಿದ್ದರು. ಆಗ ಇನ್ನೂ ನೋಟ್ ಬ್ಯಾನ್, ಜಿಎಸ್ಟಿ, ಡಿಜಿಟಲೀಕರಣ ಜಾರಿಯಾಗಿರಲಿಲ್ಲ. 

ಎಲ್ಲಾ ಲೆಕ್ಕಗಳ ಎನ್ಟ್ರಿ ಆದ ಮೇಲೆ ಕಂಪನಿಯ ಜವಾಬ್ದಾರಿಯುತ ವ್ಯಕ್ತಿ ಆಡಿಟರ್ ಬಳಿ ಚರ್ಚಿಸುತ್ತಾನೆ. ಆಗ ಅನೇಕ ಬಾರಿ ಲೆಕ್ಕದ ಪುಸ್ತಕದಲ್ಲಿ ತುಂಬಾ ಲಾಭಾಂಶ ಅಥವಾ ತುಂಬಾ ನಷ್ಟ ತೋರಿಸುತ್ತಿತ್ತು. ಕಾರಣ ವ್ಯವಹಾರದ ಬಹುಪಾಲು ಅವಶ್ಯಕತೆಗೆ ಅನುಗುಣವಾಗಿ ನಗದು ರೂಪದಲ್ಲಿ ಇರುತ್ತಿತ್ತು. ಅದು ದಾಖಲೆಯಲ್ಲಿ ಬರುತ್ತಿರಲಿಲ್ಲ. ಆಗ ಆಡಿಟರ್ ಆ ವ್ಯಕ್ತಿಯ ಬಳಿ ಕೆಲವು ಆಪ್ಷನ್ ಗಳನ್ನು ಕೊಡುತ್ತಿದ್ದರು. ನಷ್ಟ ತೋರಿಸಿದರೆ ಆಗುವ ಅನುಕೂಲ ಅನಾನುಕೂಲಗಳು ಮತ್ತು ಲಾಭಾಂಶ ತೋರಿಸಿದರೆ ಆಗುವ ಅನುಕೂಲ ಅನಾನುಕೂಲಗಳು ಹಾಗು ಎಷ್ಟು ಲಾಭಾಂಶ ತೋರಿಸಬೇಕು ಅದಕ್ಕೆ ಎಷ್ಟು ಆದಾಯ ತೆರಿಗೆ ಕಟ್ಟಬೇಕು ಎಲ್ಲವನ್ನೂ ತಿಳಿಸುತ್ತಿದ್ದರು. ಆಗ ಮಾಲೀಕ ಒಪ್ಪುವ ಹಣಕ್ಕೆ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ. ಅಂದರೆ ಕೂಡುವುದು, ಕಳೆಯುವುದು, ಭಾಗಿಸುವುದು, ಸಾಲ ಪಡೆದಂತೆ ತೋರಿಸುವುದು, ಮುಂಗಡ ಪಡೆದಂತೆ ಮಾಡುವುದು, ಕೃಷಿ ಆದಾಯ ಅಥವಾ ಪತಿ ಪತ್ನಿ ಮಕ್ಕಳ ಹೆಸರಿನಲ್ಲಿ ಉಪ ಕಸುಬು ತೋರಿಸುವುದು ಹೀಗೆ ನಾನಾ ರೀತಿಯ ಅವಕಾಶವನ್ನು ಉಪಯೋಗಿಸಿಕೊಂಡು ಲೆಕ್ಕ ಸರಿ ಮಾಡುತ್ತಾರೆ.

ಕೆಲವು ಲಕ್ಷಗಳ ಆದಾಯವನ್ನು ಸಾಮಾನ್ಯವಾಗಿ ತೆರಿಗೆ ಅಧಿಕಾರಿಗಳು ಹೆಚ್ಚು ತಪಾಸಣೆ ಮಾಡುತ್ತಿರಲಿಲ್ಲ. ನಂತರವೂ ಕೆಲವು ತೊಂದರೆ ಇದ್ದರೆ ಆಡಿಟರ್ ಗಳು ಅಡ್ಜೆಸ್ಟ್ ಮಾಡುತ್ತಿದ್ದರು. ಕೂಲಂಕಷ ಪರಿಶೀಲನೆಯಲ್ಲಿ ಮಾತ್ರ ತಪ್ಪು ಸಿಗುತ್ತಿತ್ತು. ಡಿಟೋ ಈ ಟಿಪ್ಪು ಮತ್ತು ಶಿವಾಜಿ ಇತಿಹಾಸವನ್ನು ಬಹುತೇಕ ಪಕ್ಷಪಾತಿಗಳು ಆಡಿಟರ್ ಲೆಕ್ಕದಂತೆ ಕೂಡಿ ಕಳೆದು ಭಾಗಿಸಿ ತಮಗೆ ಅನುಕೂಲಕರ ಅಂಶಗಳನ್ನು ಎತ್ತಿಕೊಂಡು ಒಂದು ಅಭಿಪ್ರಾಯ ರೂಪಿಸುತ್ತಿದ್ದಾರೆ ಮತ್ತು ಬರಹಗಳಲ್ಲಿ ಹರಿಯ ಬಿಡುತ್ತಿದ್ದಾರೆ ಅಲ್ಲದೆ ಅದಕ್ಕೆ ಇವರಿಬ್ಬರ ವ್ಯಕ್ತಿತ್ವಗಳು ಸಹ ಸಾಕಷ್ಟು ಅವಕಾಶ ಒದಗಿಸಿವೆ.

ಇಬ್ಬರೂ ಪ್ರಾಂತ್ಯಗಳ ಅಧಿಪತ್ಯಕ್ಕಾಗಿ ಸಂಘರ್ಷಮಯ ವಾತಾವರಣದಲ್ಲಿ ಹೋರಾಡಿದವರು, ಆಗಿನ್ನೂ ಭಾರತ ಒಂದು ಒಕ್ಕೂಟ ವ್ಯವಸ್ಥೆಯಾಗಿರಲಿಲ್ಲ. ಹಿಂದೂ ಹೆಸರಿನ ಆರ್ಯನ್ - ದ್ರಾವಿಡ ಜೀವನಶೈಲಿಯೇ  ಇಲ್ಲಿನ ಜೀವನವಿಧಾನವಾಗಿತ್ತು. ಆಗ ಪರ್ಷಿಯನ್ ಅರಬ್ ಮುಂತಾದ ಇಸ್ಲಾಂ ಧರ್ಮದ ರಾಜರ ದಾಳಿಯಿಂದಾಗಿ ಅವರು ಸಹ ಕೆಲವು ಪ್ರಾಂತ್ಯಗಳನ್ನು ಆಕ್ರಮಿಸಿ ಆಡಳಿತ ನಡೆಸುತ್ತಿದ್ದರು. ಆಗಲೂ ಒಂದಷ್ಟು ಘರ್ಷಣೆಗಳು ನಡೆಯುತ್ತಲೇ ಇದ್ದವು. ಕ್ರಮೇಣ ಬ್ರಿಟೀಷರು ಸೇರಿ ಫ್ರೆಂಚರು ಡಚ್ಚರು ಪೋರ್ಚುಗೀಸರು ಇಲ್ಲಿಗೆ ವ್ಯಾಪಾರಕ್ಕಾಗಿ ಬಂದು ಆಕ್ರಮಣ ಮಾಡಿದರು.

ಆಗ ತ್ರಿಕೋನ ಸಂಘರ್ಷವೂ ಪ್ರಾರಂಭವಾಯಿತು. ಶಿವಾಜಿ ಮುಸ್ಲಿಂ - ಹಿಂದೂ ದೊರೆಗಳ ವಿರುದ್ಧ, ಟಿಪ್ಪು ಬ್ರಿಟಿಷ್ ಮತ್ತು ಹಿಂದೂ ರಾಜರುಗಳ ವಿರುದ್ಧ ಹೆಚ್ಚಾಗಿ ಹೋರಾಡಿದವರು. ನಾವು ಆಗಿನ ಇತಿಹಾಸವನ್ನು ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ, ಬಿಜೆಪಿ ಕಾಂಗ್ರೆಸ್ ಕಮ್ಯುನಿಸ್ಟ್ ಚುನಾವಣಾ ರಾಜಕೀಯ, ಸಾಮಾಜಿಕ ಜಾಲತಾಣಗಳ ಚರ್ಚೆ, ಬಲಪಂಥ ಎಡಪಂಥ ಮುಂತಾದ ದೃಷ್ಟಿಯಿಂದ ನೋಡಲು ಹೋಗಬಾರದು.

ಅಂದಿನ ಪರಿಸ್ಥಿತಿಯಲ್ಲಿ ಟಿಪ್ಪು ‌ಶಿವಾಜಿ ಮುಂತಾದವರಿಗೆ ತಮ್ಮ ಪ್ರಾಂತ್ಯ ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಯಾವುದೇ  ಸಿದ್ದಾಂತ ತತ್ವ ಅವರಿಗೆ ಬೇಕಿರಲಿಲ್ಲ. ತಮ್ಮ ರಾಜ್ಯದ ಉಳಿವಿಗಾಗಿ ಹಿಂದೂ ರಾಜರೋ ಮುಸ್ಲಿಮರೋ ಡಚ್ಚರೋ ಎಂಬುದಕ್ಕಿಂತ ಶತ್ರುವಿನ ಸೋಲು ಮತ್ತು ಶತ್ರುವಿನ ಶತ್ರು ನಮ್ಮ ಮಿತ್ರ ಎಂಬುದಷ್ಟೇ ಅವರ ಆಧ್ಯತೆಯಾಗಿತ್ತು. ಟಿಪ್ಪು ಅಥವಾ ಶಿವಾಜಿಯನ್ನು ಯಾವುದೇ ಸಂವಿಧಾನಾತ್ಮಕ ಕಾನೂನು ಕಟ್ಟಿ ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ತಂತ್ರವೋ ಕುತಂತ್ರವೋ ಮೋಸವೋ  ಒಟ್ಟಿನಲ್ಲಿ ತಮ್ಮ ರಾಜ್ಯದ ರಕ್ಷಣೆ ಮಾಡಿಕೊಳ್ಳಬೇಕಿತ್ತು. ಆಗ ತಮ್ಮ ವಿರೋಧಿಗಳನ್ನು ಮುಲಾಜಿಲ್ಲದೆ ಹತ್ಯೆ ಮಾಡಿದ್ದಾರೆ. ಹಾಗೆಯೇ ತಮ್ಮ ಬೆಂಬಲಿಗರಿಗೆ ಒಳಿತನ್ನೂ ಮಾಡಿದ್ದಾರೆ. ಈಗ ನಾವು ಅದನ್ನು ವಿಮರ್ಶೆಗೆ ಒಳಪಡಿಸಿದರೆ ವಿವಿಧ ಅರ್ಥಗಳು ಮೂಡುತ್ತವೆ.

ಎಷ್ಟೋ ಬಾರಿ ಹಿಂದೂ - ಹಿಂದೂ, ಹಿಂದೂ - ಮುಸ್ಲಿಂ, ಮುಸ್ಲಿಂ - ಮುಸ್ಲಿಂ, ಹಿಂದೂ - ಮುಸ್ಲಿಂ - ಬ್ರಿಟಿಷ್ ಹೀಗೆ ಒಡನಾಟ ಮತ್ತು ಕಚ್ಚಾಟ ಇತಿಹಾಸದಲ್ಲಿ ದಾಖಲಾಗಿದೆ. ಇಲ್ಲಿ ತಮ್ಮ ರಾಜ್ಯಗಳ ಸ್ವ ಹಿತಾಸಕ್ತಿ ಮಾತ್ರ ಮುಖ್ಯವಾಗಿರುತ್ತದೆ. ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಹಾಜಿ ಮಸ್ತಾನ್, ಕರಿಂಲಾಲ್, ವರದರಾಜ್ ಮೊದಲಿಯಾರ್, ಅರುಣ್ ಗಾವ್ಳಿ, ಶರದ್ ಶೆಟ್ಟಿ ಮುಂತಾದ ಭೂಗತ ಪಾತಕಿಗಳು ತಮ್ಮ ಹಿಡಿತಕ್ಕಾಗಿ ಕೊಲೆಗಳನ್ನು ಮಾಡಿ ತದನಂತರ ಜನಪ್ರಿಯತೆ ಗಳಿಸಲು‌ ತಾನು ಹಿಂದೂ ಡಾನ್, ತಾನು ಮುಸ್ಲಿಂ ಡಾನ್ ಮುಂತಾದ ಹೆಸರುಗಳಿಂದ ಕರೆದುಕೊಳ್ಳುವುದಿಲ್ಲವೇ ಹಾಗೆ ಶಿವಾಜಿ ಟಿಪ್ಪು ಸುಲ್ತಾನ್ ಗಳನ್ನು ಅವರವರ ಬೆಂಬಲಿಗರು ಮತ್ತು ವಿರೋಧಿಗಳು ವರ್ಣಿಸುತ್ತಾರೆ.

ಇಂದು ಪಕ್ಷ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಬಂದ ನಂತರ ಇತಿಹಾಸವನ್ನು ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಮತಗಳ ದೃಷ್ಟಿಯಿಂದ ನೋಡುವ ಪರಿಪಾಠ ಪ್ರಾರಂಭವಾಗಿದೆ. ಟಿಪ್ಪು ಮತ್ತು ಶಿವಾಜಿ ಮಹಾನ್ ದೇಶಭಕ್ತರೂ ಅಲ್ಲ ಅಥವಾ ‌ದೇಶವಿರೋಧಿಗಳು ಅಲ್ಲ. ತಮ್ಮ ಕಾಲದಲ್ಲಿ ರಾಜ್ಯದ ಹಿತಾಸಕ್ತಿಕಾಗಿ ಧೈರ್ಯದಿಂದ ಶೌರ್ಯದಿಂದ ತಂತ್ರದಿಂದ ಹೋರಾಡಿದ ಒಳಿತು ಕೆಡಕುಗಳು ಎರಡನ್ನೂ ನಿಭಾಯಿಸಿದ ಸ್ಪೂರ್ತಿದಾಯಕ ವೀರರು ಎಂದು ಕರೆಯಬಹುದು.

ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡದೆ ಕೆಲವು ನಿರ್ದಿಷ್ಟ ಘಟನೆಗಳನ್ನು  ತಮ್ಮ ತಮ್ಮ ಧರ್ಮದ ಪಕ್ಷದ ಪರವಾಗಿ ತಿರುಚುವುದು ಒಂದು ಚಾಳಿಯಾಗಿದೆ. ಅದು ಅಪಾಯಕಾರಿ. ಇತಿಹಾಸ ಒಂದು ಪಾಠವಾಗಬೇಕೆ ಹೊರತು ರಾಜಕೀಯ ಅಸ್ತ್ರವಾಗಬಾರದು...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ