ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨

ಬರಹ

ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್ನ ದೂರದೃಷ್ಟಿಯನ್ನು ಕಳಕೊಳ್ಳದಂತೆ ಪ್ರವಾಹದ ವಿರುದ್ಧ ಸಾಗಿ ಬಂದವರೆಂದರೆ ಈ ನಾಲ್ಕು ಮಂದಿ ಮಾತ್ರ. ಈ ನಾಲ್ವರ ಪ್ರಯತ್ನದಿಂದಲೇ ಟೀಮ್ ಮಂಗಳೂರು ತನ್ನ ಈಗಿನ ಯಶಸ್ಸಿನ ಹೊಸ್ತಿಲನ್ನು ತಲುಪಿದೆಯಲ್ಲದೇ ಬೇರೆ ಯಾರದೇ ಯಾವುದೇ ರೀತಿಯ ಕೊಡುಗೆ ಇಲ್ಲ.

ಗಾಳಿಪಟ ತಯಾರಿಸಲು ಬೇಕಾದ ವಸ್ತುಗಳನ್ನು ತರಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹಣಕಾಸಿನ ಜವಾಬ್ದಾರಿಯನ್ನು ಸರ್ವೇಶ್ ವಹಿಸಿಕೊಂಡರೆ, ಯಾವ ಕಡೆ, ಹೇಗೆ ಮತ್ತು ಎಲ್ಲೆಲ್ಲಿ ಕಡ್ಡಿಗಳನ್ನು ಯಾವ್ಯಾವ ಕೋನ ಮತ್ತು ಆಕಾರಗಳಲ್ಲಿ ಜೋಡಿಸಬೇಕು ಮತ್ತು ಗಾಳಿಯ ರಭಸವನ್ನು ತಡೆದುಕೊಳ್ಳಲು ಎಲ್ಲೆಲ್ಲಿ ತೂತುಗಳನ್ನು ಮಾಡಬೇಕು ಎಂಬಿತ್ಯಾದಿ 'ಟೆಕ್ನಿಕಲ್' ವಿಷಯಗಳ ಜವಾಬ್ದಾರಿ ಪ್ರಶಾಂತ್ ರದ್ದು. ದಿನೇಶ್ ಹೊಳ್ಳ ಒಬ್ಬ ಚಿತ್ರ ಕಲಾವಿದರಾಗಿದ್ದು, ತಾನೇ ಕೈಯಾರೆ ಬಿಡಿಸಿ ಗಾಳಿಪಟದ ವಿನ್ಯಾಸವನ್ನು ಸಿದ್ಧಪಡಿಸುವುದರಿಂದ ಶುರುಮಾಡಿ, ಅದಕ್ಕೆ ಖುದ್ದಾಗಿ ತಕ್ಕ ಬಣ್ಣ ನೀಡಿ ಅಂತಿಮ ರೂಪ ಕೊಟ್ಟ ಮೇಲೆ ನಂತರ ಬಟ್ಟೆಯನ್ನು ತಕ್ಕ ಆಕಾರಗಳಲ್ಲಿ ತುಂಡು ಮಾಡಿ ಬಣ್ಣ ಬಳಿದು, ಹೊಲಿಸಿ ಜೋಡಿಸುವವರೆಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಂತರ ಗಿರಿಧರ್ ಕಾಮತ್ರದ್ದು 'ಸಾರ್ವಜನಿಕ ಸಂಪರ್ಕಾಧಿಕಾರಿ'ಯ ಕೆಲಸ. ಪತ್ರಿಕಾ ಪ್ರಕಟಣೆಗಳನ್ನು ಸಿದ್ಧಪಡಿಸುವುದು, ಪ್ರಾಯೋಜಕರನ್ನು ಹುಡುಕಾಡುವುದು, ಟೀಮ್ ಮಂಗಳೂರಿನ ಪರವಾಗಿ ಅವಕಾಶ ಸಿಕ್ಕಲ್ಲಿ ಒಂದೆರಡು ಮಾತನಾಡಿ ಉತ್ತಮ ಅಭಿಪ್ರಾಯ ಮೂಡಿಸುವುದು, ಗಾಳಿಪಟ ಉತ್ಸವದ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸುವುದು ಇವರ ಜವಾಬ್ದಾರಿ.

ಒಂದು ಗಾಳಿಪಟ ತಯಾರಿಸಲು ಕನಿಷ್ಟ ೫೦೦ ಗಂಟೆಗಳಷ್ಟು ಸಮಯ ಬೇಕು. ರಾತ್ರಿ ೧೧ ರಿಂದ ಬೆಳಗ್ಗಿನ ಜಾವ ೩.೦೦ ಗಂಟೆಯವರೆಗೆ ಸರ್ವೇಶ್ ಮನೆಯಲ್ಲಿ ಗಾಳಿಪಟಕ್ಕೆ ನಿಧಾನವಾಗಿ ಆಕಾರ ಮತ್ತು ಬಣ್ಣ ನೀಡುವ ಕಾರ್ಯ ನಡೆಯುತ್ತದೆ. ಸುಮಾರು ೫ ತಿಂಗಳ ಬಳಿಕ ಒಂದು ದೈತ್ಯ ಯಕ್ಷಗಾನ ಪಾತ್ರಧಾರಿಯೋ, ಕಥಕ್ಕಳಿ ನೃತ್ಯಗಾರನೋ, ಭೂತ ಪಾತ್ರಧಾರಿಯೋ, ಡ್ರಾಗನ್ ಗಾಳಿಪಟವೋ ಅಥವಾ ಇನ್ಯಾವುದೋ ದೈತ್ಯ ಗಾಳಿಪಟ ತಯಾರಾಗುತ್ತದೆ. ನಂತರ ಪಣಂಬೂರು ಕಡಲ ತೀರಕ್ಕೆ ತೆರಳಿ ಕೆಳೆದೈದು ತಿಂಗಳಿಂದ ರಾತ್ರಿಯೆಲ್ಲ ನಿದ್ದೆಬಿಟ್ಟು ತಯಾರಿಸಿದ ಗಾಳಿಪಟ ಸರಿಯಾಗಿ ಹಾರುತ್ತೋ ಇಲ್ವೋ ಎಂದು ಪರೀಕ್ಷೆ ಮಾಡುವ ಕಾಯಕ - ಟೆಸ್ಟ್ ಫ್ಲೈಯಿಂಗ್. ಆಗ ಇವರನ್ನು ನೋಡಿ 'ಗಾಳಿಪಟ ಮರ್ಲೆರ್ಗ್ ಬೇತೆ ಬೇಲೆ ಇಜ್ಜಾ ಪಣ್ದ್' (ಗಾಳಿಪಟ ಹುಚ್ಚರಿಗೆ ಬೇರೆ ಕೆಲಸ ಇಲ್ವಾ ಅಂತ) ಎಂದು ಕೊಂಕು ಮಾತನಾಡುವವರೇ ಹೆಚ್ಚಾಗಿದ್ದರು. ಹಾಗೆ ಮಾತನಾಡಿದವರೇ ಇಂದು 'ಯಾನ್ ಲಾ ಉಲ್ಲೆ ಟೀಮ್ ಮಂಗಳೂರುಡ್' (ನಾನೂ ಇದ್ದೇನೆ ಟೀಮ್ ಮಂಗಳೂರಿನಲ್ಲಿ) ಎಂದುಕೊಂಡು ಓಡಾಡುವುದು, ಮಾಧ್ಯಮದವರ ಮುಂದೆ ಹೇಳಿಕೆ ಕೊಡುವುದು, ಫೋಟೊಗಳಿಗೆ ಪೋಸು ಕೊಡುವುದು, ಇತ್ಯಾದಿಗಳನ್ನು ಮಾಡುವುದನ್ನು ನೋಡಿದರೆ.....

ಮೊದಲೆಲ್ಲ ಸಣ್ಣ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲು ಈ ನಾಲ್ವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಂಗಳೂರಿನಲ್ಲಿ ದೊಡ್ಡ ಮಟ್ಟದ ವ್ಯವಹಾರ ಮಾಡಿಕೊಂಡಿರುವವರಲ್ಲಿ ಗಾಳಿಪಟ ಉತ್ಸವವನ್ನು ಪ್ರಾಯೋಜಿಸುವಂತೆ ವಿನಂತಿಸಿದರೆ, ಅವರು ಇವರನ್ನು ಗಂಟೆಗಟ್ಟಲೆ ಕಾಯಿಸುವುದು, ಭಿಕ್ಷೆ ಬೇಡಲು ಬಂದವರಂತೆ ಮಾತನಾಡುವುದು, ತೀರ ನಿರ್ಲಕ್ಷ್ಯದಿಂದ ನಾಳೆ ಬಾ/ ಮುಂದಿನ ವಾರ ಬಾ ಎಂದು ಹೊರಗಟ್ಟುವುದು, ಕೊನೆಗೆ ಅಪಹಾಸ್ಯ ಮಾಡಿ ಜುಜುಬಿ ಎನಿಸಿಕೊಳ್ಳುವ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ನೀಡುವುದು - ಇವೆಲ್ಲವನ್ನು ಸಹಿಸಿಕೊಂಡು ಕೊಟ್ಟಷ್ಟನ್ನು ಒಟ್ಟು ಮಾಡಿ ಕಡೆಗೆ ತಮ್ಮ ಕೈಯಿಂದಲೇ ಹಣ ಹಾಕಿ ವರ್ಷಕ್ಕೊಮ್ಮೆ ಗಾಳಿಪಟ ಉತ್ಸವವನ್ನು ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಪಣಂಬೂರಿನ ಕಡಲ ತೀರದಲ್ಲಿ ಆಯೋಜಿಸುತ್ತಿದ್ದರು. ಆಗೆಲ್ಲ ಈ ನಾಲ್ವರೊಡನೆ ಕೈ ಜೋಡಿಸಿ ಸಹಾಯ ಮಾಡಲು ಮತ್ತೊಬ್ಬನಿರಲಿಲ್ಲ. ಈ ಎಲ್ಲಾ ಪ್ರಯತ್ನಗಳು ವ್ಯರ್ಥವೆನಿಸಲಿಲ್ಲ. ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರ ಮಕ್ಕಳ/ ಯುವಕರ ಸಂಖ್ಯೆ ಹೆಚ್ಚಾಗುತ್ತಿತ್ತು. ನಿಧಾನವಾಗಿಯಾದರೂ ಸರಿ ಆದರೆ ಸರಿಯಾದ ದಿಕ್ಕಿನಲ್ಲಿ ಟೀಮ್ ಮಂಗಳೂರು ಸಾಗತೊಡಗಿತ್ತು.

ದೊರಕಿರುವ ಯಶಸ್ಸಿನೊಂದಿಗೆ ಈಗ ಟೀಮ್ ಮಂಗಳೂರಿನ ಅನಧಿಕೃತ ಸದಸ್ಯರ ಸಂಖ್ಯೆ ಹೆಚ್ಚಾಗತೊಡಗಿದೆ. ಈ ನಾಲ್ವರ ಸ್ವಲ್ಪ ಪರಿಚಯವಿದ್ದವನೂ ಈಗ ಟೀಮ್ ಮಂಗಳೂರಿನ ಸದಸ್ಯನೇ! ಮಂಗಳೂರಿನಲ್ಲೊಬ್ಬ ಹೆಸರುವಾಸಿ ಚಿತ್ರಕಾರರಿದ್ದಾರೆ. ಮೊದಲು ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣಗಳನ್ನು ನೋಡಿ 'ಇವೆಲ್ಲ ಸರಿಯಿಲ್ಲ', 'ಇವರು ಸರಿಯಾಗಿ ಅಧ್ಯಯನ ಮಾಡದೇ ಬಣ್ಣ ಬಳಿಯುತ್ತಿದ್ದಾರೆ' ಎಂಬ ಹೇಳಿಕೆಗಳನ್ನು ತಾವಾಗಿಯೇ ಕೊಡುತ್ತಿದ್ದರು. ಈಗ ಟೀಮ್ ಮಂಗಳೂರು ಹೆಸರು ಗಳಿಸಿದ ಬಳಿಕ, ಆ ಗಾಳಿಪಟಗಳಿಗೆ ಬಣ್ಣ ಹಚ್ಚಿದ್ದು ನಾನೇ ಎಂದುಕೊಂಡು ಓಡಾಡುತ್ತಿದ್ದಾರೆ!

ಈಗ ವಿದೇಶ ಪ್ರವಾಸದ ಗೀಳು ಈ ಅನಧಿಕೃತ ಸದಸ್ಯರಿಗೆ. ದಿನೇಶ್ ಹೊಳ್ಳರಲ್ಲಿ ಪಾಸ್ ಪೋರ್ಟ್ ಇಲ್ಲ ಎಂಬ ವಿಷಯ ಗೊತ್ತಾದ ಕೂಡಲೇ ಅವರ ಜಾಗದಲ್ಲಿ ವಿದೇಶಕ್ಕೆ ತೆರಳಲು ಪೈಪೋಟಿ! ಹಾಗೆ ಪುಕ್ಕಟೆಯಾಗಿ ಹೋದವರು ಅಲ್ಲಾದರೂ ಸರಿಯಾಗಿ ಕೆಲಸ ಮಾಡಿದರೇ? ಅದೂ ಇಲ್ಲ. ಬರೀ ಗಾಳಿಪಟದ ನೂಲು ಹಿಡಕೊಂಡು ನಿಂತರೆ ಸಾಕಿತ್ತು. ಅದೂ ಮಾಡದೆ, ತಮ್ಮನ್ನು ಸ್ವಾಗತಿಸುವ ಸಮಯದಲ್ಲಿ ಕೆನ್ನೆಗೆ ಮುತ್ತಿಕ್ಕಿ ಸ್ವಾಗತಿಸಿದ ನಾರಿಯನ್ನು ಹುಡುಕಿಕೊಂಡು ಹೋಗುವುದು, ಚೆನ್ನಾದ ಬಟ್ಟೆ ಧರಿಸಿಕೊಂಡು 'ಸನ್ ಗ್ಲಾಸ್' ಏರಿಸಿಕೊಂಡು ಒಂದು ಆಯಕಟ್ಟಿನ ಸ್ಥಳದಲ್ಲಿ ಕುರ್ಚಿ ಹಾಕಿ ವಿ.ಐ.ಪಿ ಯಂತೆ ಏನೂ ಕೆಲಸ ಮಾಡದೆ ಕೂತುಬಿಡುವಿದು, ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿರುವವರ ಚಿತ್ರ ತೆಗೆಯುತ್ತ ಅಲೆದಾಡುವುದು ಇತ್ಯಾದಿಗಳನ್ನು ಮಾಡಿ, 'ಟೀಮ್ ಮಂಗಳೂರು' ಹೆಸರಿನಲ್ಲಿ ವಿದೇಶ ಪ್ರವಾಸ ಮಾಡಿ ಬಂದು, 'ಫಾರೀನ್ ಪೋದ್ ಬತ್ತೆ' (ವಿದೇಶಕ್ಕೆ ಹೋಗಿ ಬಂದೆ) ಎಂದು ಸಿಕ್ಕವರಲ್ಲಿ ಕೊರೆದರಾಯಿತು. ಇಂತಹ ದಂಡಪಿಂಡಗಳ ಸಹವಾಸದಿಂದ ರೋಸಿಹೋಗಿರುವ ಸರ್ವೇಶ್, ಈಗ ದಿನೇಶ್ ಹೊಳ್ಳರಿಗೊಂದು ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದಾರೆ.

ತಂಡದ ಪ್ರಮುಖ ಸದಸ್ಯರಾಗಿರುವ ಪ್ರಶಾಂತ್ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವುದರಿಂದ ಗಾಳಿಪಟ ತಯಾರಿ ಈಗ ಸ್ವಲ್ಪ ನಿಧಾನವಾಗಿ ಸಾಗುತ್ತಿದೆ. ಪ್ರತಿ ಮುಂಜಾನೆ ೧೧.೧೫ಕ್ಕೆ ಮಂಗಳೂರಿನ 'ಕಾರ್ ಸ್ಟ್ರೀಟ್' ನಲ್ಲಿರುವ ಹೊಟೇಲ್ ತಾಜ್ ಮಹಲ್ ನಲ್ಲಿ ತನ್ನ ವಿಶಿಷ್ಟ ರುಚಿಯಿಂದ ಪ್ರಸಿದ್ಧಿ ಪಡೆದಿರುವ ಕಾಫಿಯನ್ನು ಹೀರುತ್ತಾ ಸರ್ವೇಶ್ ಮತ್ತು ದಿನೇಶ್ ಹೊಳ್ಳರದ್ದು ಗಾಳಿಪಟ ತಯಾರಿಯ ಹಂತದ ಬಗ್ಗೆ ಚರ್ಚೆ. ಟೀಮ್ ಮಂಗಳೂರಿನ ಎಲ್ಲಾ ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣದ ಬಗ್ಗೆ ಅಂತಿಮ ನಿರ್ಧಾರ ಇದೇ ಹೊಟೇಲ್ ತಾಜ್ ಮಹಲ್ ನ ಮೂಲೆಯ ಟೇಬಲ್ ಗಳಲ್ಲೊಂದರಲ್ಲಿ ತೆಗೆದುಕೊಳ್ಳಲಾಗುತ್ತದೆ! ನಾನೂ ಆಗಾಗ ಇಲ್ಲಿ ಇವರಿಬ್ಬರನ್ನು ಸೇರಿಕೊಳ್ಳುತ್ತೇನೆ. ತಿಂಗಳ ಹಿಂದೆ ಭೇಟಿಯಾದಾಗ ಹೊಸದೊಂದು ವಿನ್ಯಾಸದ ಚರ್ಚೆ ನಡೆಯುತ್ತಿತ್ತು. ದಿನೇಶ್ ಹೊಸ ವಿನ್ಯಾಸವೊಂದನ್ನು ತಗೊಂಡು ಬಂದಿದ್ದರು ಮತ್ತು ಸರ್ವೇಶ್ ಎಲ್ಲಾ ಕೋನಗಳಿಂದ ಅದನ್ನು ಪರೀಕ್ಷಿಸುತ್ತಿದ್ದರು. ೨೦೦೭ರಲ್ಲಿ ಎರಡು ಹೊಸ ದೈತ್ಯಗಾತ್ರದ ಗಾಳಿಪಟಗಳು ಹೊರಬರಲಿವೆ. ಯಾವುದೆಂದು ಹೇಳಲಾರೆ. ಕಾದು ನೋಡುವಿರಂತೆ.

ಕೊನೆಯದಾಗಿ ಗಾಳಿಪಟ ತಯಾರಿಸುವ ವಸ್ತುಗಳನ್ನು ತರಿಸುವ ಸ್ಥಳಗಳ ಬಗ್ಗೆ ಒಂದು ಮಾತು. ಕಡ್ಡಿಗಳನ್ನು ಹೊಸನಗರದಿಂದ ಸರ್ವೇಶ್ ಖುದ್ದಾಗಿ ಹೋಗಿ ತರುತ್ತಾರೆ. ಈ ಕಡ್ಡಿಗಳಿಗೆ ಅಂತಿಮ ರೂಪ ಕೊಡುವುದನ್ನು ನಂತರ ಪ್ರಶಾಂತ್ ಮಾಡುತ್ತಾರೆ. ಇಲ್ಲಿ ತುಂಬಾ ಕೆಲಸ ಇರುತ್ತೆ. ಈಗ ಕೆಲವು ಕಡ್ಡಿಗಳು ಮುಂಬೈನಲ್ಲಿ 'ರೆಡಿಮೇಡ್' ಆಗಿ ಸಿಗುವುದರಿಂದ ಆಲ್ಲಿಂದಲೂ ತರಿಸಲಾಗುತ್ತದೆ. ನೂಲನ್ನು ಆಸ್ಟ್ರ್‍ಏಲಿಯಾದಿಂದ ಮತ್ತು ಕಡ್ಡಿಗಳನ್ನು ದೃಢವಾಗಿ ಜೋಡಿಸಲು ಬಳಸಲಾಗುವ 'ಕ್ಲಿಪ್' ಗಳನ್ನು ಆಸ್ಟ್ರೇಲಿಯ ಮತ್ತು ಇಂಗ್ಲಂಡ್ ನಿಂದ ತರಿಸಲಾಗುತ್ತದೆ. ಬಟ್ಟೆಯನ್ನು ಇಂಗ್ಲಂಡ್, ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಕಡ್ಡಿ ಇರುವಲ್ಲಿ ಉನ್ನತ ಗುಣಮಟ್ಟದ ಬಟ್ಟೆಯನ್ನು ಬಳಸಬೇಕಾಗುವುದರಿಂದ ಅವನ್ನು ಇಂಗ್ಲಂಡ್ ನಿಂದಲೂ ಮತ್ತು ಕಡ್ಡಿಯಿಲ್ಲದಿರುವಲ್ಲಿ ಸ್ವಲ್ಪ ಕಡಿಮೆ ಗುಣಮಟ್ಟದ ಬಟ್ಟೆಯನ್ನು ಬಳಸಬಹುದಾದರಿಂದ ಅವನ್ನು ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಎಟ್ ಲೀಸ್ಟ್ ಬಣ್ಣವಾದರೂ ಭಾರತದ್ದು!

ಟೀಮ್ ಮಂಗಳೂರು ಇನ್ನಷ್ಟು ಯಶಸ್ಸನ್ನು ಕಂಡುಕೊಳ್ಳಲಿ ಮತ್ತು ಕರ್ನಾಟಕದ ಹಾಗೂ ಭಾರತದ ಪತಾಕೆಯನ್ನು ಎಲ್ಲೆಡೆ ಹಾರಿಸಲಿ ಎಂಬ ಶುಭ ಹಾರೈಕೆಗಳು.