ಟೆಲಿವಿಷನ್ ರಿಲೇ ಮತ್ತು ಮದುವೆಮನೆ ಊಟದ ಎಲೆ

ಟೆಲಿವಿಷನ್ ರಿಲೇ ಮತ್ತು ಮದುವೆಮನೆ ಊಟದ ಎಲೆ

ಬರಹ

ನನ್ನ ಸ್ವಭಾವವೆಂದರೆ ಬೆಳಗಿನ ತಿಂಡಿ ತಿಂದನಂತರ ಹತ್ತು, ಹತ್ತೂವರೆಯ ಹೊತ್ತಿಗೆ ಒಂದು ರೌಂಡ್ ಟಿವಿ ನೋಡುವುದು. ನೌಕರಿಯಿಂದ ನಿವೃತ್ತಿಯಾಗಿದೆ, ಕಚೇರಿಗೆ ಹೋಗುವಂತಿಲ್ಲ, ಮನೇಲಿ ಯಾರಿಗೂ ಬೇಕಿಲ್ಲ. ಎಂದಮೇಲೆ ನನ್ನನ್ನು ಕೇಳುವವರಾದರೂ ಯಾರು? ನನ್ನ ಕಿರಿಕಿರಿ ನನ್ನಾಕೆಯೂ ಸೇರಿ ಮನೆಯಲ್ಲಿ ಎಲ್ಲರಿಗೂ ತ್ಯಾಜ್ಯ ವಸ್ತುವಾಗಿರುವುದರಿಂದ ಬೆಳಗಿನ ತಿಂಡಿ ಹಾಕಿ, ಕಾಫಿ ಕೊಟ್ಟು ಟಿವಿ ಮುಂದೆ ಕೂರಿಸಿಬಿಡುತ್ತಾರೆ. ನಂತರ ಊಟದವರೆಗೂ ಯಾರೂ ನನ್ನನ್ನು ’ಕ್ಯಾರೆ’ ಎನ್ನುವುದಿಲ್ಲ. ಹೋಗಲಿ ಬಿಡಿ, ನನಗೂ ಸಂಸಾರದ ಜಂಜಾಟ ತಪ್ಪಿದೆ. ಇರಲಿ, ಈಗ ವಿಷಯಕ್ಕೆ ಬರೋಣ.

ಸೊನ್ನೆಯಿಂದ ಪ್ರಾರಂಭಿಸಿ ನೂರಾರು ಚಾನೆಲ್ ಗಳನ್ನು ಹಿಂದೆ ಮುಂದೆ ಮಾಡುತ್ತಾ ಸ್ವಲ್ಪ ಕಾಲಕಳೆದಂತೆ ಮನಸ್ಸಿಗೆ ಹುಮ್ಮಸ್ಸು ಮೂಡುತ್ತದೆ. ಬೆಳ್ಳಂಬೆಳಗ್ಗೆ ಧಾರಾವಾಹಿಗಳನ್ನು ನೋಡಿದರೆ, ಈ ಮನುಷ್ಯನಿಗೆ ಇದೇನು ಗಾಸಿ ಎಂದುಕೊಳ್ಳುತ್ತಾರೆ ಎಂದುಕೊಂಡು, ಮೆತ್ತಗೆ ಸಿ ಎನ್ ಬಿ ಸಿ ಅಥವಾ ಪ್ರಾಫಿಟ್ ಇತ್ಯಾದಿ ಹಾಕುತ್ತೇನೆ. ಈಗ ನೋಡಿ ನಾನು ಹೇಳಿದ ಮದುವೆ ಮನೆ ಊಟದೆಲೆಯ ಕಥೆ ಕಣ್ಣಿಗೆ ರಾಚುತ್ತದೆ. ಇದೇನಪ್ಪಾ, ಪ್ರಾಫಿಟ್ಟಿಗೂ ಊಟದೆಲೆಗೂ ಏನು ಸಂಬಂಧ ಎಂದಿರಾ . . .ತಗೊಳ್ಳಿ ಹೇಳ್ತೀನಿ.

ಫರದೆಯ ಮೇಲಿನ ಎಡ ಮೂಲೆಯಲ್ಲಿ ನೋಡಿ, ಈಗ ಪ್ರಸಾರವಾಗುತ್ತಿರುವ ಸುದ್ದಿ ಯಾವ ಚಾನೆಲ್ಲಿನ ಕೃಪಾಕಟಾಕ್ಷ ಎಂದು ತಿಳಿಸುವ ಚಿತ್ರ ಕಾಣುತ್ತಿರುತ್ತದೆ. ಇದು ಉಪ್ಪು ಮತ್ತು ಉಪ್ಪಿನ ಕಾಯಿಯ ಜಾಗ. ಬಲ ತುದಿಯಲ್ಲಿ ವರದಿಗಾರನ ಚಿತ್ರ ಚೌಕಟ್ಟಿನಲ್ಲಿ ಕಣ್ಣು ಕಣ್ಣು ಬಿಡುತ್ತಾ ಇರುತ್ತದೆ. ಜೊತೆಗೆ ದಿನಾಂಕ ಮತ್ತು ಸಮಯ. ಇದು ಪಲ್ಯಗಳನ್ನು ಪೇರಿಸುವ ಜಾಗ. ಫರದೆಯ ಮಧ್ಯಕ್ಕೆ ಬನ್ನಿ, ಸ್ಟುಡಿಯೋದಲ್ಲಿ ಕೂತ ಗಂಡು ಅಥವಾ ಹೆಣ್ಣಿಯ ಚಿತ್ರ ಮತ್ತು ಬೇರಾವುದೋ ಸ್ಥಳದಲ್ಲಿ ಅವರ ವರದಿಗಾರ ತೋರಿಸುತ್ತಿರುವ ಇನ್ನೊಂದು ಚಿತ್ರ. ಎರಡನ್ನೂ ಜೊತೆ ಜೊತೆಯಾಗಿ ಎರಡು ಚೌಕಟ್ಟುಗಳಲ್ಲಿ ತೋರಿಸುತ್ತಿರುತ್ತಾರೆ. ಇದು ಅನ್ನ ಸಾರು/ಸಾಂಬಾರಿನ ಜಾಗ. ಇವನು ಹೇಳಿದ್ದಕ್ಕೆ ಅವನು ಹೂಂ ಅನ್ನಬೇಕು ಇಲ್ಲವೇ ಅವನು ಹೇಳಿದ್ದಕ್ಕೆ ಇವನು ಹೂಂ ಅನ್ನಬೇಕು. ಅನ್ನ ಸಾರಿನ ಹೊಂದಾಣಿಕೆಯಂತೆ. ಕೆಲವು ಸಾರಿ ಸ್ಟುಡಿಯೋದಿಂದ ಇವನೇನೋ ಪ್ರಶ್ನೆ ಕೇಳುತ್ತಾನೆ, ಅವನ ಕಿವಿಗೆ ಬೀಳುವುದಿಲ್ಲ, ಅವನು ಕಣ್ಣು ಕಣ್ಣು ಬಿಡುತ್ತಿರುತ್ತಾನೆ ಅಥವಾ ಉತ್ತರ ಗೊತ್ತಿಲ್ಲದಿದ್ದರೆ ಏನೋ ಒಂದು ವದರಿಬಿಡುತ್ತಾನೆ. ಊಟದಲ್ಲೂ ಅಷ್ಟೆ, ನಮಗೆ ಉಪ್ಪಿನ ಕಾಯಿ ಬೇಕಿರುತ್ತದೆ, ಕೇಳುತ್ತೇವೆ. ಆದರೆ ಬಡಿಸುವವನಿಗೆ ಅದನ್ನು ತಂದು ಬದಿಸುವ ಇಷ್ಟವಿರುವುದಿಲ್ಲ. ಸುಮ್ಮನೆ ನಮ್ಮನ್ನೆ ಎರಡು ಸೆಕೆಂಡ್ ಕಣ್ಣು ಬಿಟ್ಟು ನೋಡಿ "ಆಯ್ತು ಸಾರ್" ಅಂತಾನೋ ಅಥವಾ ನಿರ್ದಾಕ್ಷಿಣ್ಯವಾಗಿ "ಇಲ್ಲಾ" ಅಂತಾನೋ ಹೇಳಿ ಮುಂದಕ್ಕೆ ಹೋಗುತ್ತಾನೆ. ಕೆಲವು ಸಾರಿ ಇವು ವಾಣಿಜ್ಯ ವಿಷಯಗಳನ್ನು ಬಿಟ್ಟು ವಿಷಯಾಂತರವಾಗಿ ಶಿವಮೊಗ್ಗ ರಾಮನಗರ ಹೆದ್ದಾರಿಯಲ್ಲಿ ಒಂದು ಕತ್ತೆ ಮತ್ತು ಒಂದು ಕುದುರೆ ಒಂದಾಗಿ ಬಾಳುವ ಸ್ನೇಹ ತೋರಿಸಿ, ನಂತರ ಪರಸ್ಪರ ಅಕ್ಷರಶಃ ಒದ್ದಾಡಿ, ತತ್ಪರಿಣಾಮವಾಗಿ ಕತ್ತೆ ಕುದುರೆಯ ಒದೆತಕ್ಕೆ ಸಿಕ್ಕಿ ಮಾರುದ್ದ ಹೋಗಿ ಬಿದ್ದದ್ದು, ಕುದುರೆ ಕತ್ತೆಯ ಬಲವಾದ ಒದೆತಕ್ಕೆ ಸಿಕ್ಕಿ ಹಿಂದಿನ ಕಾಲುಗಳನ್ನೇ ಕುಂಟು ಮಾಡಿಕೊಂಡು, ಹೇಳಲಾರದೆ, ಬಿಡಲಾರದೆ ಸಂಯುಕ್ತ ಸರಕಾರದಲ್ಲಿನ ಕಲ್ಲು-ಕಡಲೆಗಳನ್ನು ನೆನಪಿಸುವುದನ್ನು ಮಹತ್ತರ ವಿಷಯವೆಂಬಂತೆ ತೋರಿಸಲಾಗುತ್ತದೆ.

ಮತ್ತೆ ಕೆಳಕ್ಕೆ ಬಂದರೆ ಮೂರು ಪಟ್ಟಿಗಳು. ಒಂದರಲ್ಲಿ ಶೇರುಗಳ ಸ್ನಾಯ್ ಸೆಕ್ಸ್ ಬೆಲೆಗಳು, ಅದರ ಕೆಳಗೆ ಬಿ ಎಸ್ ಎ ಶೇರು ಬೆಲೆಗಳು ಉದ್ದಕ್ಕೆ ಓಡುತ್ತಿರುತ್ತವೆ. ಇದನ್ನು ನೋಡಿದರೆ ಸಾರು ಅಥವಾ ಪಾಯಸ ಕಲಬೆರಕೆಗೊಂಡು ಎಲೆಯಿಂದ ಕೆಳಕ್ಕೆ ಓಡುತ್ತಿರುವ ನೆನಪು ಬರುವುದಿಲ್ಲವೆ? ಇನ್ನೂ ಅದರ ಕೆಳಗೆ ಬಂದರೆ ಯಾರಿಗೂ ಬೇಕಿಲ್ಲದ ವಿಜ್ಞಾಪನೆಗಳು ಎಂದರೆ ಪ್ರಕಟಣೆಗಳು. ಇದು ನಮ್ಮ ಕೈಜಾರಿ ತಿನ್ನಲು ಬೇಡವಾದ ಅಗುಳುಗಳನ್ನು ನೆನಪಿಸುವುದು ಖಂಡಿತಾ. ಮಧ್ಯೆ ಮಧ್ಯೆ ’ನ್ಯೂಸ್ ಪ್ಲಾಷ್’ ಅಂತಾ ಶೇರು ಬೆಲೆಗಳ ಮೇಲ್ಭಾಗದಲ್ಲಿ ಆಗಿಂದಾಗೆ ಕಣ್ಣು ಮಿಟುಕಿಸುವಂತೆ ಕಾಣಿಸಿಕೊಳ್ಳುವ ಬಿಸಿ ಬಿಸಿ ಸುದ್ದಿಗಳು. ಇವನ್ನು ನೋಡಲಾಗುವುದಿಲ್ಲ ಅಥವಾ ಮತ್ತೆ ಹಾಕುವುದಿಲ್ಲ. ಇದು ಹಾಕಲೋ ಬೇಡವೋ ಎಂಬಂತೆ ಸುರಿಯುವ ತುಪ್ಪ ಅಥವಾ ಸಿಹಿ ತಿಂಡಿ ತುಣುಕುಗಳು. ಇವನ್ನು ಇನ್ನೂ ಬೇಕು ಎನ್ನುವಂತಿಲ್ಲ, ಅಥವಾ ಬೇಡ ಎನ್ನುವಂತಿಲ್ಲ. ಬಡಿಸುವ ಮರ್ಜಿ ಬಡಿಸುವವರಿಗೇ ಬಿಟ್ಟದ್ದು. ಜಾಣ ಬಾಣಸಿಗರು ಅತಿ ಕಡಿಮೆ ಊಟವನ್ನು ಅತಿ ಹೆಚ್ಚು ಜನರಿಗೆ ಪಟಪಟನೆ ಬಡಿಸಿ, ಅರ್ಧ ಗಂಟೆಯಲ್ಲಿ ಊಟ ಬಡಿಸುವುದನ್ನು ಮುಗಿಸುವಂತೆ, ಇಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ವಾರ್ತೆಗಳು ಮತ್ತು ಚಿತ್ರಗಳು. ಯಾವುದನ್ನು ನೋಡಲಿ, ಯಾವುದನ್ನು ಬಿಡಲಿ, ಯಾವ ವಿಷಯ ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನೇ ತಿಳಿಯದ ಗೋಜಲಾಗಿ, ಕೊನೆಗೆ ಎಲ್ಲವನ್ನೂ ನೋಡಿದ ಸಮಾಧಾನ, ಏನೂ ನೋಡಲಾಗದ ಮಂಕುತನ ಎರಡು ತಲೆಗೆ ತುಂಬಿದಾಗ, ಸಾಕಪ್ಪಾ ಸಾಕು ಎಂದು ಟಿವಿ ಆರಿಸುತ್ತೇನೆ, ಇಲ್ಲವೇ ಚಾನೆಲ್ ಬದಲಿಸಿ ಕೊಂಚ ಪ್ಯಾಷನ್ ಟಿವಿ ನೋಡಿ ಮನಸ್ಸು ಹಗುರ ಮಾಡಿಕೊಳ್ಳುತ್ತೆನೆ. ಇದನ್ನೇ ಮದುವೆ ಮನೆ ಊಟದಲ್ಲಿ ಯಾವುದನ್ನು ತಿನ್ನಲಿ, ಯಾವುದನ್ನು ಬಿಡಲಿ, ಇದನ್ನು ತಿನ್ನುತ್ತಾ ಕೂತರೆ ಅದು ಸಿಕ್ಕದಂತಾಗುತ್ತದೆ, ಮತ್ತೆ ತನ್ನಿ ಎಂದು ಬಡಿಸುವವರನ್ನು ಕೇಳುವಂತಿಲ್ಲ, ಕೇಳಿದರೂ ಅವನು ತರುವುದಿಲ್ಲ, ಪಕ್ಕ ಊಟಕ್ಕೆ ಕುಳಿತವರು ಇವನೇನಪ್ಪಾ ಪೆಕರ, ಸರಿಯಾಗಿ ಊಟ ಮಾಡುವುದಕ್ಕೂ ಬರುವುದಿಲ್ಲ ಎಂಬಂತೆ ನೋಡುವುದರಿಂದ ಸುಮ್ಮನೆ ಊಟ ಮಾಡಿದ ಶಾಸ್ತ್ರ ಮಾಡಿ, ಸುಳ್ಳು ಸುಳ್ಳೇ ಡರ್ ಎಂದ್ದು ತೇಗಿ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಹಾಗೆಯೇ ಮನಸ್ಸಮಾಧಾನಕ್ಕಾಗಿ ಎದುರುಸಾಲಿನಲ್ಲಿ ಕುಳಿತ ತೆಳ್ಳನೆ ಬೆಳ್ಲನೆ ಹುಡುಗಿಯನ್ನೊಮ್ಮೆ ಪ್ಯಾಷನ್ ಟಿವಿ ನೋಡಿದಂತೆ ನೋಡಿ, ನನ್ನ ಪತ್ನಿಯೂ ಒಂದಾನೊಂದು ಕಾಲದಲ್ಲಿ ಹೀಗಿದ್ದಳೇನೋ ಅಂದುಕೊಂಡು ಸಮಾಧಾನ ಪಟ್ಟುಕೊಂಡು ಕೈ ತೊಳೆದುಕೊಳ್ಳಲು ಹೊರಡುತ್ತೇನೆ.

ನೀವೇನಂತೀರಿ, ಟಿವಿ ಚಾನೆಲ್ಲಿಗೂ ಮದುವೆ ಮನೆ ಊಟಕ್ಕೂ ಸಾಮರಸ್ಯ ಇದೆ ಅಂತೀರೋ ಇಲ್ಲಾ ಅಂತೀರೋ?

ಎ.ವಿ. ನಾಗರಾಜು