ಟ್ರಂಕು ತಟ್ಟೆ

ಟ್ರಂಕು ತಟ್ಟೆ

ಪುಸ್ತಕದ ಲೇಖಕ/ಕವಿಯ ಹೆಸರು
ಗುರುಪ್ರಸಾದ್ ಕಂಟಲಗೆರೆ
ಪ್ರಕಾಶಕರು
ಚೈತನ್ಯ ಪ್ರಕಾಶನ, ಹನುಮಂತಪುರ, ತುಮಕೂರು
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ ೨೦೨೩

ವೃತ್ತಿಯಲ್ಲಿ ಶಿಕ್ಷಕರಾದ ಉದಯೋನ್ಮುಖ ಬರಹಗಾರರಾದ ಗುರುಪ್ರಸಾದ್ ಕಂಟಲಗೆರೆ ಅವರು ತಮ್ಮ ಹಾಸ್ಟೆಲ್ ದಿನಗಳ ಅನುಭವಗಳನ್ನು ಬಹಳ ಸೊಗಸಾಗಿ ‘ಟ್ರಂಕು ತಟ್ಟೆ' ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ೧೩೬ ಪುಟಗಳ ಪುಟ್ಟ ಪುಸ್ತಕದಲ್ಲಿ ಬರೆದಿರುವ ಗುರುಪ್ರಸಾದ್ ಇವರ ಹಾಸ್ಟೆಲ್ ಅನುಭವಗಳು ಬಹಳಷ್ಟು ಹಾಸ್ಟೇಲ್ ವಾಸಿಗಳ ಅನುಭವವೂ ಆಗಿರಬಹುದು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...  

“ನಮ್ಮ ಅಮೂಲ್ಯ ಬಾಲ್ಯವನ್ನ ಸರ್ಕಾರಿ ಹಾಸ್ಟೆಲ್‍ನಲ್ಲಿ ಒಟ್ಟಿಗೆ ಕಳೆದಿದ್ದ ನಾವು, ಬೆಳೆದು ದೊಡ್ಡವರಾದ ಮೇಲೆ ಅಲ್ಲಿನ ಸ್ವಾರಸ್ಯಕರ ಬದುಕನ್ನ ಸಿಕ್ಕಿದಾಗಲೆಲ್ಲ ಅಗಿದು ಜಗೆಯುತ್ತಿದ್ದೆವು. ಮತ್ತೆ ಮತ್ತೆ ನೆನೆದು ಪುಳಕಗೊಳ್ಳುತ್ತಿದ್ದೆವು. ಅಲ್ಲಿನ ಕೆಲ ಸುಳಿಗಳನ್ನ ನೆನೆದರೆ ಈಗ ಭೀತಿಗೊಳ್ಳುವ ನಾವು ಆಗ ಸುಮ್ಮನೆ ಅನುಭವಿಸಿದ್ದೆವು. ‘ನಾವು ಈಗ ಏನಾಗಿದ್ದೇವೊ ಅದಕ್ಕೆಲ್ಲ ಕಾರಣ ಬಾಲ್ಯದ ನಮ್ಮ ಹಾಸ್ಟೆಲ್ ಬದುಕು’ ಎಂದು ನಾವು ಗೆಳೆಯರು ಮಾತಾಡಿಕೊಳ್ಳುವುದಿದೆ. ಹಾಸ್ಟೆಲ್‍ನಲ್ಲಿ ಬೆಳೆಯದಿದ್ದರೆ ನಾವು ಏನಾಗುತ್ತಿದ್ದೆವು? ಎಂಬ ಪ್ರಶ್ನೆ, ಉತ್ತರವಿಲ್ಲದೆ ಈಗಲೂ ನಮ್ಮನ್ನು ಕಾಡುತ್ತದೆ.

ಯಾವಾಗ ನಾನು ಇದನ್ನೆಲ್ಲ ಬರೆಯತೊಡಗಿದೆನೊ, ಮೊದಮೊದಲು ನನ್ನ ಒಡನಾಡಿಗಳು ಮೆಚ್ಚಿ ಸ್ವಾದಿಸಿದರು. ಆದರೆ ನಾವು ಬರೆಯದೆ ಇದ್ದು ಸಿಕ್ಕಾಗಲೆಲ್ಲ ಚಪ್ಪರಿಸುತ್ತಿದ್ದೆವಲ್ಲ ಆ ಸುಖ ಬರೆದ ನಂತರ ಇಲ್ಲವಾಯಿತೇನೊ ಅನಿಸುತ್ತಿದೆ. ಬರೆಯದೆ ಹಾಗೆ ಬಿಟ್ಟಿದ್ದರೆ ಖಂಡಿತವಾಗಿ ನಮ್ಮ ಅನುಭವಗಳ ಸ್ವಾದ ಗೆಳೆಯರೊಳಗೆ ಇನ್ನಷ್ಟು, ಮಗದಷ್ಟು ವಿಸ್ತರಿಸಿಕೊಳ್ಳುತ್ತಲೇ ಇರುತ್ತಿತ್ತು.

ಈ ಅನುಭವ ಕಥನದ ಪ್ರಾರಂಭಿಕ ಟಿಪ್ಪಣಿಗಳು ಸುಮಾರು ಹತ್ತು ವರ್ಷಗಳಿಗೂ ಹಿಂದಿನವು. ಇದನ್ನೊಂದು ಪುಸ್ತಕವಾಗಿಸಬೇಕು, ಪುಸ್ತಕವಾಗುತ್ತದೆ ಎಂದು ಅಂದುಕೊಂಡು ಬರೆದದ್ದಲ್ಲ. ಆಗಿಂದಾಗ್ಗೆ ಸಂಗತಿಗಳನ್ನು ಬರಹದಲ್ಲಿ ನೆನೆದು ನಾನೆ ಸುಖಿಸಿದ್ದು. ಬರಹದ ಅಂಗಿತೊಟ್ಟ ಪ್ರಸಂಗಗಳು ಅಣ್ಣ ವೆಂಕಟಾಚಲರವರಿಗೆ ಸಿಕ್ಕಿ ಮೈತ್ರಿ ನ್ಯೂಸ್ ನಲ್ಲಿ ಪ್ರಕಟಗೊಂಡವು. ಅಲ್ಲಿ ಓದಿದ ಅನೇಕರು ತಮ್ಮ ಬದುಕನ್ನು ಇಲ್ಲಿನ ಅನುಭವಗಳೊಂದಿಗೆ ತಾಳೆಹಾಕಿ ನೋಡಿಕೊಂಡು ಮೆಚ್ಚುಗೆಯಿಂದ ಫೋನ್ ಆಯಿಸಿದ್ದರು. ಎರಡುವರ್ಷದ ಅಂತರದಲ್ಲಿ ಒಂದಷ್ಟು ಪರಿಷ್ಕರಣೆಯೊಂದಿಗೆ ಕೆಂಡಸಂಪಿಗೆ ಬ್ಲಾಗ್‍ನಲ್ಲಿ ಮತ್ತೊಮ್ಮೆ ಪ್ರಕಟವಾಯಿತು. ಇಷ್ಟೆಲ್ಲ ಆದರೂ ಪುಸ್ತಕವಾಗಿ ಪ್ರಕಟಿಸಲು ಧೈರ್ಯ ಸಾಲುತ್ತಲೇ ಇರಲಿಲ್ಲ.

ಪ್ರಾಮಾಣಿಕವಾಗಿ ಹೇಳುತ್ತೇನೆ ಇಲ್ಲಿನ ಅನುಭವಗಳು ನನ್ನೊಬ್ಬನವೇ ಅಲ್ಲ. ಇವು ಘಟಿಸುವ ಕಾಲದಲ್ಲಿ ನಾನೂ ಇದ್ದೆ ಎಂಬುದೇ ಸತ್ಯ. ಬರೆದವನು ನಾನಾಗಿರಬಹುದು ಆದರೆ ಇಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಆಯಾ ಸನ್ನಿವೇಷ ಅಥವ ಅನುಭವದ ಮೇಲೆ ತನ್ನದೇ ಆದ ಹಕ್ಕು ಇದ್ದೇ ಇದೆ. ಅದಕ್ಕಾಗಿಯೇ ನಾನು ಈ ಅನುಭವ ಕಥನದ ಪ್ರಕಟಣೆಯ ಹೊಣೆಗಾರಿಕೆಯನ್ನು ನನ್ನ ಗೆಳಯರಿಗೇ ಬಿಟ್ಟುಬಿಟ್ಟೆ. ಅಷ್ಟೇ ತನ್ಮಯತೆಯಿಂದ ಗೆಳೆಯ ರಂಗಧಾಮಯ್ಯ ಈ ಕೃತಿಯನ್ನು ತನ್ನದಾಗಿಸಿಕೊಂಡು ‘ಚೈತನ್ಯ’ ಪ್ರಕಾಶನದ ಮೂಲಕ ಪ್ರಕಟಿಸುತ್ತಿದ್ದಾನೆ.

ನನಗೆ ಅನ್ನ ಹಾಕಿದ ವಾರ್ಡನ್‍ಗಳನ್ನ ಅದರಲ್ಲೂ ಗೆಸ್ಟ್ ಆಗಿ ಸಾಕಿಕೊಂಡಿದ್ದ ನಾಗರಾಜಪ್ಪನವರನ್ನ ನೆನೆಯುವೆ. ಚಿಕ್ಕಂದಿನಲ್ಲೇ ಹಾಸ್ಟೆಲ್‍ಗೆ ಬಿಟ್ಟು ಉಣ್ಣುವ ಪ್ರತಿಗುಕ್ಕಿಗೂ ನೆನೆಯುತ್ತಿದ್ದ, ಕದ್ದು ಪಿಚ್ಚರ್ ನೋಡುವಾಗಲೆಲ್ಲ ದುತ್ತನೆ ಎದುರಿಗೆ ಬಂದಂತಾಗುತ್ತಿದ್ದ ಅಪ್ಪ ಅಮ್ಮನನ್ನು ನೆನೆವೆ. ಸಂವಿಧಾನ ಬರೆದು ಸಾಮಾಜಿಕ ನ್ಯಾಯ ಎಂದವರು ಆ ಅಂಬೇಡ್ಕರ್ ಆದರೆ ದೈನಂದಿನ ಜೀವನದಲ್ಲಿ ಜೊತೆಯಿದ್ದು ನಮ್ಮನ್ನು ರೂಪಿಸಿದ ಹಲವು ಅಂಬೇಡ್ಕರ್ ಗಳು ಇದ್ದಾರೆ, ಮಾವ ಕುಂದೂರು ತಿಮ್ಮಯ್ಯ, ವಿರೂಪಾಕ್ಷಣ್ಣನನ್ನು ನೆನೆವೆ. ಊರು ಕೇರಿ ಅಪ್ಪ-ಅಮ್ಮ ಅಕ್ಕ-ತಮ್ಮ ಎಲ್ಲವೂ ಆಗಿದ್ದ ಭಗತ್, ಕಿರಣ್, ರೋಹಿತ್, ಮುರುಳಿ, ಜೇಪಿ, ಚೇತನ್, ಪ್ರಭ, ರವಿ, ಸೂರಿ, ಕೃಷ್ಣಮೂರ್ತಣ್ಣ, ರಂಗಸ್ವಾಮಣ್ಣ, ಚಂದ್ರ, ಹರೀಶ, ಮಂಜು, ಜಟ್ಲಿ, ರಂಗಧಾಮಯ್ಯ, ಜಯರಾಮ, ಮಹದೇವಣ್ಣ ಮುಂತಾದ ಅಸಂಖ್ಯ ಗೆಳೆಯರನ್ನ ನೆನೆಯುವೆ. ನಾನು ಏನನ್ನಾದರು ಬರೆಯಲು ಕೂತಾಗ ಮಾತಾಡಿಸಿ ರೇಗಿಸಿಕೊಳ್ಳುವ ಹೆಂಡತಿ ಪುಷ್ಪ, ಮಕ್ಕಳಾದ ದ್ಯುತಿ-ಧವನ್‍ರಿಗೆ ಸಣ್ಣ ರಿಲ್ಯಾಕ್ಸ್.”