ಟ್ವೆಂಟಿ ಟ್ವೆಂಟಿ ವಿಶ್ವ ಕಪ್ ಗೆದ್ದ ನಂತರ ರವಿ ಶಾಸ್ತ್ರಿ - ಧೋಣಿ ಸಂದರ್ಶನದ ವಿವರ
( ಮೂಲ - ಇಂಗ್ಲೀಷ್ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ)
- ನವರತ್ನ ಸುಧೀರ್
ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ.
ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು
ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!”
ಧೋ: ಧನ್ಯವಾದ ರವಿ, ಪಂದ್ಯದ ಕೊನೆ ನಿಜಕ್ಕೂ ರೋಮಾಂಚಕವಾಗಿತ್ತು. ನಮ್ಮ ಹುಡುಗರು ಕೊನೆಯವರೆಗೂ
ಧೈರ್ಯಗುಂದಲಿಲ್ಲ. ಅದೇ ಕಾರಣದಿಂದ ನಾವು ಕಪ್ ಗೆದ್ದದ್ದು.
ರ: ನಿಮ್ಮ ಅಭಿಪ್ರಾಯದಲ್ಲಿ ನಿಮ್ಮ ಈ ವಿಜಯಕ್ಕೆ ಮುಖ್ಯ ಕಾರಣ ಯಾರು?
ಧೋ: ನಾವೆಲ್ಲರೂ ಚೆನ್ನಾಗಿಯೇ ಆಡಿದ್ದೆವು. ಆದರೆ ನನ್ನ ಅಭಿಪ್ರಾಯದಲ್ಲಿ ಪಂದ್ಯ ಗೆಲ್ಲಲು ಮುಖ್ಯ ಕಾರಣರಾದವರು
ಅಜಿತ್ ಅಗರ್ಕರ್.
ರ: (ಕಕ್ಕಾಬಿಕ್ಕಿಯಾಗಿ) ಅಜಿತ್ ಅಗರ್ಕರ್!!! ಅವರು ಫೈನಲ್ನಲ್ಲಿ ಆಡಲೇ ಇಲ್ಲವಲ್ಲ!!!!
ಧೋ: ಅದಕ್ಕೇ ಹೇಳಿದ್ದು. ಅಷ್ಟು ಕಡಿಮೆ ಸ್ಕೋರಿನ ಮ್ಯಾಚ್ನಲ್ಲಿ ಅವರೇನಾದರೂ ಆಡಿದ್ದರೆ, ಅವರ ನಾಲ್ಕು ಓವರ್ಗಳಲ್ಲಿ
ಖಂಡಿತ ಭರ್ಜರಿ ರನ್ ಮಾಡಿ ಪಾಕಿಸ್ತಾನ ಗೆಲ್ಲೋದು ಖಚಿತವಾಗುತ್ತಿತ್ತು.
ರ: (ಉಗುಳು ನುಂಗಿ) ಸರಿ.. ಸರಿ..ಈ ವಿಜಯಕ್ಕಾಗಿ ನೀವು ಮತ್ತೆ ಯಾರಿಗೆ ಧನ್ಯವಾದ ಕೊಡಲಿಚ್ಚಿಸುತ್ತೀರಿ?
ಧೋ: ನಮ್ಮೆಲ್ಲರ ಧನ್ಯವಾದಗಳು ಮೊದಲು ನಮ್ಮ ಟೀಮ್ ಡಾಕ್ಟರ್ರವರಿಗೇ ಸಲ್ಲಬೇಕು. ನಮ್ಮ ಫೈನಲ್ ಮುನ್ನ ತಯಾರಿಗೆ
ಅವರು ಸಲ್ಲಿಸಿದ ಸೇವೆ ಅಮೋಘ!
ರ: (ತಬ್ಬಿಬ್ಬಾಗಿ) ನನಗಿದ್ಯಾಕೋ ಅರ್ಥವಾಗಿಲ್ಲ. ಕನ್ಫ್ಯೂಸ್ ಆಗ್ತಿದೆ. ನಿಮ್ಮ ಡಾಕ್ಟರ್ ಅದೇನು ಸಹಾಯ ಮಾಡಿದರು?
ನಿಮ್ಮ ಕೋಚ್ ಅಥವಾ ಫಿಷಿಯೋ ಸಹಾಯ ಅಂದರೆ ಒಪ್ಪಿಕೋಬಹುದು… ಆದರೇ….
ಧೋ: (ಅಡ್ಡ ಬಾಯಿ ಹಾಕುತ್ತ) ಇದರಲ್ಲಿ ಕನ್ಫ್ಯೂಸ್ ಆಗೋ ಮಾತೇನಿದೆ? ಅವರು ಸೆಹ್ವಾಗ್ನನ್ನು ಫಿಟ್ನೆಸ್ ಟೆಸ್ಟ್
ನಲ್ಲಿಫೇಲ್ ಮಾಡಿದ್ದೆ ನಮ್ಮ ಟೀಮ್ಗೆ ಕೊಟ್ಟ ಅಮೋಘ ಅನುದಾನ. ನಾವೆಲ್ಲರೂ ಮೈದಾನದಲ್ಲಿ ಮಾಡಿದ್ದಕ್ಕಿಂತಲೂ
ಹೆಚ್ಚಿನ ಶ್ರೇಯ ಅವರಿಗೇ ಹೋಗಬೇಕು. ಅವರು ನಮ್ಮ ಟೀಮ್ನ ಟ್ಯಾಕ್ಟಿಕ್ಸ್ನ ಮುಖ್ಯ ಭಾಗ.
ರ: (ತಲೆ ಕೊಡವುತ್ತ) ಹೂಂ! ಹೋಗಲಿ ಬಿಡಿ! ಈ ನಿಮ್ಮ ವಿಜಯದ ಸಂಕೇತವಾದ ಕಪ್ ಯಾರಿಗೆ ಡೆಡಿಕೇಟ್ ಮಾಡ್ತೀರಿ?
ಧೋ: ನಾನು ಮತ್ತು ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನೂ ಕೂಡ ಒಮ್ಮತದಿಂದ ಈ ಕಪ್ ಅನ್ನು ಸಚಿನ್, ಗಂಗೂಲಿ ಮತ್ತು
ಡ್ರಾವಿಡ್ರವರಿಗೆ……..
ರ: (ಮಧ್ಯೆ ಬಾಯಿ ಹಾಕುತ್ತ) ನಿಜವಾಗಿಯೂ ನೀವುಗಳು ಬಹಳ ಪ್ರಶಂಸಾರ್ಹರು. ನಿಮಗೆಲ್ಲ ನಿಮ್ಮ ಹಿರಿಯರ ಬಗ್ಗೆ ಇಷ್ಟು
ಗೌರವ ಮತ್ತು ಅಭಿಮಾನವಿರುವುದು ಕಂಡು……..
ಧೋ: ಸ್ವಲ್ಪ ತಡೆಯಿರಿ ರವಿ! ನಾನು ಹೇಳುವುದನ್ನು ಪೂರ್ತಿ ಕೇಳಿಸಿಕೊಳ್ಳಿ! ಅವರೇನಾದರೂ ಈ ಪಂದ್ಯಾವಳಿಯಲ್ಲಿ
ಆಡಿದ್ದಿದ್ದರೆ ನಾವು ಮೊದಲನೇ ಸುತ್ತಿನಲ್ಲೇ ಮನೆಯ ಮುಖ ನೋಡುತ್ತಿದ್ದೆವು. ಅವರುಗಳು ತಾವಾಗಿಯೆ ಪಂದ್ಯಾವಳಿಯಲ್ಲಿ
ಆಡದಿರಲು ನಿರ್ಧಾರ ತೆಗೆದುಕೊಂಡದ್ದಕ್ಕೆ ನಾವೆಲ್ಲರೂ ಭಗವಂತನಿಗೆ ವಂದಿಸಬೇಕು. ಅವರ ರಾಜಕೀಯವಿಲ್ಲದ ಕಾರಣ
ನಮಗೆಲ್ಲರಿಗೂ ಕ್ರಿಕೆಟ್ ಉತ್ತಮವಾಗಿ ಆಡಿ ಕಪ್ ಗೆಲ್ಲಲು ಸಾಧ್ಯವಾಯಿತು.
ರ: ಹೋಗಲಿ ಬಿಡಿ. ಅಂತೂ ಪಂದ್ಯ ಕೊನೆಯ ಓವರ್ವರೆಗೂ ಬಹಳ ರೋಚಕವಾಗಿತ್ತು. ಕೊನೆಯಲ್ಲಿ ಪಾಕಿಸ್ತಾನದ ಮಿಸ್ಬಾಹ್
ಮಾಡಿದ ಸಣ್ಣದೊಂದು ತಪ್ಪಿನಿಂದಾಗಿ ಕಪ್ ನಮ್ಮ ವಶವಾಯಿತು.
ಧೋ: ಸಣ್ಣದೊಂದು ತಪ್ಪು? ಇದೇನು ಹೀಗೆ ಹೇಳುತ್ತೀರಿ ರವಿ! ಆ ಶಾಟ್ ಹೊಡೆದ ಕೂದಲೆ ಆ ಮಿಸ್ಬಾಹ್ ನನಗೆ ಹೇಳಿದ
ಮಾತು -ನೋಡೋ ಧೋಣಿ. ನಾನು ಯಾರೂ ಇಲ್ಲದ ಕಡೆ ಯಲ್ಲಿ ಶಾಟ್ ಹೊಡೆದಿದ್ದೇನೆ ! ಅಂತ. ಪಾಪ ಆ ಮುಂಡೇದರ
ಮಹಾ ತಪ್ಪು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಮಲೆಯಾಳಿಗಳಿರುತ್ತಾರೆ ಅನ್ನುವುದನ್ನು ಮರೆತದ್ದು!
ಈ ಎಕ್ಸ್ಪ್ಲನೇಷನ್ ಕೇಳುತ್ತಿದ್ದಂತೆಯೇ ಸಂದರ್ಶಕ ರವಿ ಶಾಸ್ತ್ರಿ ಜ್ನಾನ ತಪ್ಪಿ ಕೆಳಗುರುಳಿದ. ಧೋಣಿ ಕಪ್ ಎತ್ತಿಕೊಂಡು ಮುನ್ನಡೆದ ಜಂಬದ ಕೋಳಿಯ ರೀತಿಯಲಿ.
*************