ಡಂಕಲ್ ಪೇಟೆ
ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮಓದಿಗಾಗಿ...
“ಡಂಕಲ್ಪೇಟೆ' ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ- ಮಳೆ- ದೂಳು-ಕೆಸರು- ಉಸಿರು- ಬೆವರು- ಜನ- ಭಾಷೆ- ಸಂಸ್ಕೃತಿ- ನಂಬಿಕೆ-ನಿತ್ಯದ ಗೋಳು-ನಗುವಿನ ಅಬ್ಬರ-ಎಲ್ಲವನ್ನೂ ಕಟ್ಟಿಕೊಂಡಿರುವ ನಿಜ ಪೇಟೆ. ದೇಶದ ವಿದ್ಯಮಾನಗಳೆಲ್ಲ ಈ ಪೇಟೆಯ ಕನ್ನಡಿಯಲ್ಲಿ ಬಿಂಬಿತವಾಗುತ್ತವೆ. ಜನರ ಸಿಟ್ಟು ಸೆಡವುಗಳು ಇಲ್ಲಿ ಸಿಡಿಯುತ್ತವೆ. ಕಾಲಾಂತರದ ಇತಿಹಾಸ, ವರ್ತಮಾನದ ಆವಾಂತರಗಳು, ಏಳು-ಬೀಳುಗಳ ನಡುವೆ ಈ ಬದುಕಿನ ಬಂಡಿಯನ್ನು ಎಳೆಯುತ್ತ ಸಾಗಿದ ಮಂದಿ. ಹೀಗಾಗಿಯೇ ಇಲ್ಲಿ ಮಸೀದಿ-ಮಂದಿರಗಳ ಬಡಿದಾಟವಿದೆ; ಕೊರೋನಾದ ಭೀಕರ ನೆರಳಿದೆ; ನೋಟು ಅಮಾನ್ಯೀಕರಣದ ಬೆಂಕಿ ಸಾಮಾನ್ಯ ಜನತೆಯ ಬದುಕನ್ನು ಸುಟ್ಟು ಕರುಕುಮಾಡಿದ ಕಟು ಸತ್ಯವೂ ಇದೆ. ಡಂಕಲ್ಪೇಟೆಯ ರೊಕ್ಕದ ವಹಿವಾಟೂ ಇದೆ. ಹಾಗೆಯೇ ಆಳದಲ್ಲಿ ಮನುಷ್ಯ ಮನುಷ್ಯನನ್ನು ನಂಬಿಕೆಯಿಂದ, ಪ್ರೀತಿಯಿಂದ ನೋಡುವ ಹೃದಯವಂತಿಕೆಯೂ ಇದೆ.
ಇಂಥ ನೆಲೆಗಟ್ಟಿನಲ್ಲಿ ನಿಂತು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತ, ಮಿಡಿಯುತ್ತ, ತಮ್ಮ ಲೇಖನಿಯನ್ನು ಚುರುಕಾಗಿ, ಕ್ರಿಯಾತ್ಮಕವಾಗಿ ಇಟ್ಟುಕೊಂಡಿರುವ ತರುಣ ಮಿತ್ರ ವೀರೇಂದ್ರ ರಾವಿಹಾಳ್ ಸಹಜ ಕತೆಗಾರ. ಅನುಭವ ಸಮೃದ್ಧಿ, ಸ್ಥಳೀಯ ಭಾಷೆಯ ಕಸುವು, ಕಥನ ತಂತ್ರ, ನಿರೂಪಣೆಯ ಸೊಗಸು-ಇವುಗಳಿಂದಾಗಿ ವೀರೇಂದ್ರರ ಕತೆಗಳು ಗಮನ ಸೆಳೆಯುತ್ತವೆ. ʼಕಾಡಿʼ ಎನ್ನುವ ಕತೆಯ ಸಾಮಾನ್ಯ ನಾಯಿಯೊಂದು ಬೆಳೆಯುತ್ತ ಬೆಳೆಯುತ್ತ ಇಡೀ ವಿದ್ಯಮಾನಗಳನ್ನು ಆವರಿಸುವುದು, ಬದುಕಿನ ಸಂಕೀರ್ಣ ಸಂಗತಿಗಳನ್ನು ಕಟ್ಟಿಕೊಡುತ್ತಾ ಹೋಗುವುದು; ತಿಳಿಹಾಸ್ಯವನ್ನು ಹೊದ್ದುಕೊಂಡೇ ಬದುಕಿನ ಗಂಭೀರ ಸಮಸ್ಯೆಗಳಿಗೆ ಎದುರಾಗಿ ನಿಲ್ಲುವುದು-ವೀರೇಂದ್ರರ ಕಥನ ಪ್ರತಿಭೆಗೆ ಕನ್ನಡಿ ಹಿಡಿಯುತ್ತವೆ.
ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ ಅಖಾಡ. ಭೂತ-ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್ಪೇಟೆಯಲ್ಲಿಯೇ.
ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚೆಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ನೆಲದಲ್ಲಿ ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.
ಕಾಡಸಿದ್ಧೇಶ್ವರ, ಹಳೆಕೋಟೆ ವೀರಭದ್ರ, ಚಾಮುಂಡವ್ವ, ಸುಂಕ್ಲಮ್ಮ, ಜಂಡಾಕಟ್ಟೆ ಎಲ್ಲವೂ ಜೀವತಳೆದು ಡಂಕಲ್ಪೇಟೆಯ ಜೀವಂತ ಪಾತ್ರಗಳಾಗಿ ಜನರ ಬದುಕನ್ನು ಸಂಕೀರ್ಣವೂ, ಸೂಕ್ಷ್ಮವೂ, ಸಹನೀಯವೂ, ಮಾನವೀಯವೂ ಮಾಡುತ್ತ ಬೆಳೆಯುವ ಪರಿ ವೀರೇಂದ್ರರ ಕತೆಗಳಿಗೆ ವಿಭಿನ್ನ ಆಯಾಮಗಳನು ಕೂಡಿಸುತ್ತವೆ.
ತನ್ನ ನೆಲದಲ್ಲಿ ನಿಂತು ಬರೆಯುವ ಕತೆಗಾರ ಎಂದೂ ಹುಸಿಯಾಗಲಾರ. ಈ ಸಂಕಲನದಲ್ಲಿರುವ ಎಲ್ಲ ಕತೆಗಳೂ ಕೊರತೆಯನ್ನು ಮೀರಿದ ಕತೆಗಳೆಂದು ನಾನು ಹೇಳುತ್ತಿಲ್ಲ. ಒಂದೆರಡು ಕತೆಗಳನ್ನು ಮತ್ತೆ ಬರೆಯಬೇಕಾದ, ತಿದ್ದಿ ತೀಡಬೇಕಾದ ಅಗತ್ಯವೂ ಇದೆ. ವಿಮರ್ಶೆಯ ಹತಾರವನ್ನು ಹಿಡಿದು ಹೊರಟವರಿಗೆ ಕತೆಗಾರನ ಹೆಜ್ಜೆಗಳಲ್ಲಿ ಇನೂ ಕೆಲವು ಕೊರತೆಗಳು ಕಾಣಬಹುದು. ಅದು ಸಹಜ ಕೂಡಾ. ಆದರೆ ವೀರೇಂದ್ರ ಅವರು ಪಯಣವನ್ನು ಇದೀಗ ಆರಂಭಿಸಿರುವ ಉತ್ಸಾಹಿ. ಅವರು ಇಂಥ ಎಲ್ಲ ತೊಡಕುಗಳನ್ನೂ ದಾಟುತ್ತಾರೆ ಎಂಬ ವಿಶ್ವಾಸ ನನ್ನದು. ಇಲ್ಲಿನ ಕೆಲವು ಕತೆಗಳಾದರೂ ನನ್ನ ಮಾತಿಗೆ ಸಾಕ್ಷಿ ಹೇಳುತ್ತವೆ.”