ಡಾ.ಬಿ.ಸಿ.ರಾಯ್ ನೆನಪಿನಲ್ಲಿ ವೈದ್ಯರ ದಿನಾಚರಣೆ
ನಮ್ಮ ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ 1ನೇ ತಾರೀಕಿನಂದು ‘ರಾಷ್ಟ್ರೀಯ ವೈದ್ಯರ ದಿನ’ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರದ ಅತ್ಯಂತ ಹೆಮ್ಮೆಯ ವೈದ್ಯರೂ, ಪಶ್ಚಿಮ ಬಂಗಾಳದ ೨ನೇ ಮುಖ್ಯಮಂತ್ರಿಗಳೂ ಆಗಿದ್ದ ಡಾ.ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ ಜುಲೈ 1. ಇವರು ವೈದ್ಯಕೀಯ ಲೋಕಕ್ಕೆ ನೀಡಿದ ಅಮೂಲ್ಯ ಸೇವೆಗೆ ಈ ಗೌರವ. ನಿಜವಾಗಿ ನೋಡಿದರೆ ಪ್ರತಿದಿನವೂ ‘ವೈದ್ಯರ ದಿನವೇ.’
ವೈದ್ಯರು ದೇವರ ಅವತಾರ ಎಂಬ ಮಾತಿದೆ. 'ವೈದ್ಯೋ ನಾರಾಯಣೋಹರಿಃ' ಅಕ್ಷರಶಃ ಸತ್ಯ. ರೋಗಿಗಳು, ರೋಗಿಯ ಕುಟುಂಬದವರು ಭಗವಂತನನ್ನು ವೈದ್ಯರಲ್ಲಿ ಕಾಣುತ್ತಾರೆ. ಮತ್ತೆ ನಂಬಿಕೆ ಎಂಬ ಮೂರಕ್ಷರದ ಪದವನ್ನು ವೈದ್ಯರ ವಿಷಯವಾಗಿ ನಂಬುತ್ತಾರೆ, ವಿಶ್ವಾಸ ವಿಡುತ್ತಾರೆ.
ನಮಗೆ ತಿಳಿದಿರುವ ಹಾಗೆ 2020 ಮಾರ್ಚ್ ತಿಂಗಳಿನಿಂದ ಕೊರೋನಾ ಎಂಬ ಮಹಾಮಾರಿಯ ಧಾಳಿಗೆ ನಾವೆಲ್ಲರೂ ಸಿಲುಕಿ ನಲುಗಿದಾಗ ವೈದ್ಯರು, ದಾದಿಯರು ಹಗಲಿರುಳೂ ಗೈದ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಅನ್ನ ನೀರು, ಸ್ವಂತಿಕೆ ಬಿಟ್ಟು, ಅತ್ಯಂತ ಕಷ್ಟದ ಸಂದರ್ಭವನ್ನು ನಿಭಾಯಿಸುತ್ತಾ ಸತತ ಹೋರಾಟ ದಿನದ 24ಗಂಟೆಯೂ ದುಡಿದವರಿದ್ದಾರೆ. ಅವರೊಂದಿಗೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸಹ ಹಗಲಿರುಳು ಸಹಕರಿಸಿದ್ದಾರೆ. ಪ್ರಸಕ್ತ ಸವಾಲಿನ ಕೆಲಸವಾಗಿದೆ ವೈದ್ಯರದು. ಹಳ್ಳಿಯಲ್ಲಿ ಒಂದು ಮಾತಿದೆ 'ಕೊಬಳಿನಲ್ಲಿ ಇಟ್ಟ ತೆಂಗಿನಕಾಯಿಯಂತೆ' ಎಂದು. ಆಚೆಯೂ ಈಚೆಯೂ ಎಷ್ಟು ಹೊತ್ತಿಗೆ ಬೇಕಾದರೂ ಉರುಳಬಹುದು.ಅಂಥ ಸಂದಿಗ್ಧ ಸ್ಥಿತಿ ಡಾಕ್ಟರ್ ಗಳದ್ದಾಗಿದೆ. ಈ ಸೋಂಕು ನಿವಾರಿಸುವಲ್ಲಿ ರೋಗಿಯೊಂದಿಗೆ ತಮ್ಮ ಜೀವದ ಹಂಗು ತೊರೆದು ದುಡಿದಿದ್ದಾರೆ.
ನಮ್ಮ ಬದುಕಿನ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ಗಟ್ಟಿಯಾಗಿ ಉಸಿರಾಡಲು ವೈದ್ಯರಿಗೆ ಆಗ್ತಾ ಇಲ್ಲ. ಆರೋಗ್ಯ ತುರ್ತು ಪರಿಸ್ಥಿಯ ಈ ಕಾಲಘಟ್ಟದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಿರುವ ಎಲ್ಲಾ ವೈದ್ಯ ವೃಂದದವರಿಗೂ ಒಂದು ಸಲಾಂ. ಕೆಲವೊಂದು ಸಂದರ್ಭದಲ್ಲಿ ಮೂಲಸೌಕರ್ಯಗಳಿಲ್ಲದಾಗ ವೈದ್ಯರು ರೋಗಿಯ ಆರೋಗ್ಯ ಕಾಪಾಡಲು ಕಷ್ಟಪಡುತ್ತಾರೆ.ಏನಾದರೂ ಕೊರತೆ ಉಂಟಾದಾಗ ವೈದ್ಯರಾದರೂ ಏನು ಮಾಡಲು ಸಾಧ್ಯ? ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ವೈದ್ಯರು ಎಷ್ಟೋ ಮಂದಿ ಇದ್ದಾರೆ. ನೈಜ ಸ್ಥಿತಿ ಬೇರೆಯೇ ಆಗಿರುತ್ತದೆ.
ಗರ್ಭಿಣಿಯರನ್ನು, ಮಕ್ಕಳನ್ನು, ಮಹಿಳೆಯರನ್ನು, ವೃದ್ಧರನ್ನು, ಇತರ ರೋಗಗಳಿಂದ ಬಳಲುತ್ತಿರುವವರನ್ನು ಅಪರಿಮಿತ ಶ್ರಮವಹಿಸಿ ಕಾಳಜಿಯಿಂದ ನೋಡಿದ ಎಲ್ಲಾ ವೈದ್ಯರನ್ನು ನಾವು ನೆನೆಯಲೇ ಬೇಕು. ರೋಗಿ ಉಳಿದಾಗ ಎಲ್ಲರಿಗೂ ಸಂತಸ. ಅಳಿದಾಗ ಬೇಸರ. ಮೊದಲು ಕೋಪ ಬರುವುದು ಡಾಕ್ಟರ್ ಮೇಲೆ. ಪ್ರೀತಿ,ಗೌರವ ಕೊಟ್ಟು ತೆಗೆದುಕೊಳ್ಳಬೇಕಂತೆ. ವೈದ್ಯರನ್ನು ಗೌರವಿಸೋಣ, ನಂಬಿಕೆಯಿಡೋಣ.
ಅಂದಿನ ಡಾ.ಬಿ.ಸಿ.ರಾಯ್ ಅಂಥವರು ಇಂದು ಸಾವಿರಾರು ಮಂದಿ ನಮ್ಮೆಲ್ಲರ ನಡುವೆ ಇದ್ದಾರೆ. ತಮ್ಮ ಕುಟುಂಬ ಸದಸ್ಯರ ನೋಡದೆ ,ಇರುವವರೂ ಇದ್ದಾರೆ. ತಮ್ಮ ಜೀವದ ಹಂಗು ತೊರೆದು ದುಡಿಯುವ ಇವರನ್ನು ಯೋಧರು ಎಂದರೂ ತಪ್ಪಾಗಲಾರದು.'ನಮ್ಮನ್ನು ಕಾಪಾಡಿದ,ಕಾಪಾಡುತ್ತಿರುವ ಈ ಎರಡು ಕೈಗಳಿಗೆ, ನಮ್ಮ ಕೈಯೆತ್ತಿ ನಮನ ಸಲ್ಲಿಸಿ ಕೃತಜ್ಞರಾಗೋಣ' ವೈದ್ಯರಲ್ಲಿ ದೇವರನ್ನು ಕಾಣೋಣ.
-ರತ್ನಾ ಕೆ.ಭಟ್, ತಲಂಜೇರಿ,ಪುತ್ತೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ