ಡಾರ್ವಿನ್ ಪತ್ರಗಳು ಅಂತರ್ಜಾಲದಲ್ಲಿ ಲಭ್ಯ(ಇ-ಲೋಕ 23) (20/5/2007)
ವಿಕಾಸವಾದದ ಹರಿಕಾರ,ಮಂಗನಿಂದ ಮಾನವನ ಉಗಮವಾಯಿತೆಂದು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್ ತಮ್ಮ ಜೀವಿತ ಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಅಪಾರ. ಸುಮಾರು ಎರಡು ಸಾವಿರ ಜನರ ಜತೆ ಪತ್ರ ವ್ಯವಹಾರ ಹೊಂದಿದ್ದ, ಡಾರ್ವಿನ್ ತಮ್ಮ ಸಂಶೋಧನೆಗೆ ಬೇಕಾದ ಮಾಹಿತಿ ಕಲೆ ಹಾಕಲು ಪತ್ರಗಳನ್ನೇ ಅವಲಂಬಿಸಿದ್ದರು.ಡಾರ್ವಿನ್ ಬರೆದ ಹದಿನಾಲ್ಕು ಸಾವಿರಕ್ಕೂ ಅಧಿಕ ಪತ್ರಗಳು ಲಭ್ಯವಿದ್ದು, ಇವನ್ನು ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈಗ ಅವುಗಳ ಪೈಕಿ ಮೂರನೆ ಒಂದಂಶ ಪತ್ರಗಳ ಡಿಜಿಟಲ್ ಪ್ರತಿಗಳು ಅಂತರ್ಜಾಲ ತಾಣದ ಮೂಲಕ ಲಭ್ಯವಾಗಲಿವೆ.ಅವರ ಹಲವು ವೈಯುಕ್ತಿಕ ಪತ್ರಗಳೂ ಇಲ್ಲಿದ್ದು, ತಂಗಿಗೆ ಬರೆದ ಒಂದು ಪತ್ರದಲ್ಲಿ ಅವರು ತಾನು ಕಾಲುಗಳನ್ನು ತೊಳೆದುಕೊಳ್ಳುವುದು ಅಪರೂಪ,ತಾನು ಕೊಳಕ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ!
ಕಚೇರಿಯಲ್ಲೂ ವ್ಯಾಯಾಮ!
ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಕಾರಣ ತಮ್ಮ ದೇಹ ತೂಕ ಹೆಚ್ಚಿಸಿಕೊಳ್ಳುವ ನೌಕರರು, ಕಚೇರಿಯ ಸಮಯದಲೇ ವ್ಯಾಯಾಮ ಮಾಡಿ ದೇಹ ತೂಕ ಇಳಿಸಿಕೊಳ್ಳುವಂತೆ ಟ್ರೆಡ್‍ಮಿಲ್ ಯಂತ್ರವನ್ನು ಕಚೇರಿಯಲ್ಲೇ ಒದಗಿಸುವ ಕ್ರಮವನ್ನು ಇಂಗ್ಲೆಂಡಿನ ಕಂಪೆನಿಗಳು ಅನುಸರಿಸುತ್ತಿವೆ. ಆದರೆ ವ್ಯಾಯಾಮ ಸಮಯ ವ್ಯರ್ಥವಾಗಿ, ಕಚೇರಿ ಕೆಲಸ ಹಿಂದೆ ಬೀಳುವುದನ್ನು ತಡೆಯಲು ಟ್ರೆಡ್‍ಮಿಲ್‍ನಲ್ಲೂ ಕಂಪ್ಯೂಟರ್ ಅಳವಡಿಸಲಾಗಿದ್ದು, ನಡೆಯುತ್ತಾ ಅಥವ ನಿಂತಾಗಲೂ ಕೆಲಸ ಮಾಡುವ ಅನುಕೂಲತೆ ಒದಗಿಸಲಾಗಿದೆ.ದಿನಕ್ಕೆ ಎರಡು-ಮೂರು ಗಂಟೆ ಇದರಲ್ಲಿ "ನಡೆದು" ಕೆಲಸ ಮಾಡಿದರೆ,ವರ್ಷಕ್ಕೆ ಮೂವತ್ತು ಕಿಲೋ ಮೈತೂಕ ಇಳಿಸಬಹುದೆನ್ನುವ ಖಾತರಿಯನ್ನು ಇದನ್ನು ತಯಾರಿಸಿದ ಕಂಪೆನಿ ನೀಡಿದೆ.
ಚಿತ್ರೀಕರಣ ನಡೆಸದೆ ಚಲನಚಿತ್ರ!
ಚಿತ್ರೀಕರಣವೇ ನಡೆಯದೆ ಚಿತ್ರ ನಿರ್ಮಿಸುವುದು ಸಾಧ್ಯವೇ? ಆಸ್ಟ್ರೀಯಾದ ನಿರ್ದೇಶಕರೋರ್ವರು ನಿರ್ಮಿಸಿದ ರೀತಿ ಚಿತ್ರ ನಿರ್ಮಾಣ ನಡೆಸಿದರೆ ಸಾಧ್ಯ.ಮನು ಲಕ್ಷ್ ಎನ್ನುವಾಕೆ "ಫೇಸ್‍ಲೆಸ್" ಎನ್ನುವ ತನ್ನ ಚಿತ್ರವನ್ನು ಪೂರ್ತಿಯಾಗಿ ಇಂಗ್ಲೆಂಡ್‍ನ ಮೂಲೆ ಮೂಲೆಗಳಲ್ಲಿ ಸ್ಥಾಪಿಸಲಾಗಿರುವ ಕ್ಲೋಸ್ಡ್ ಸರ್ಕ್ಯೂಟ್ ಟಿವಿಯ ಚಿತ್ರಗಳನ್ನು ಬಳಸಿಕೊಂಡು ತಯಾರಿಸಿದ್ದಾರೆ. ಆಕೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿಗಳಲ್ಲಿ ಸೆರೆಹಿಡಿಯಲ್ಪಟ್ಟ ತನ್ನ ಚಿತ್ರಗಳುಳ್ಳ ದೃಶ್ಯಗಳನ್ನು ಪಡೆದುಕೊಂಡು, ಅದರಿಂದ ಇತರರ ಮೊಗಗಳನ್ನು ಕಾಣದಂತೆ ಮಾಡಿ ವಿಶಿಷ್ಠ ಕತೆಯುಳ್ಳ ಚಿತ್ರ ನಿರ್ಮಾಣ ಮಾಡಿದ್ದಾರೆ. ವ್ಯಕ್ತಿಯೋರ್ವನಿಗೆ ಸಂಬಂಧ ಪಟ್ಟ ಕ್ಲೋಸ್ಡ್ ಸರ್ಕ್ಯೂಟ್ ಟಿವಿಯ ದೃಶ್ಯಗಳನ್ನು ಅ ವ್ಯಕ್ತಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ ಎನ್ನುವ ಕಾನೂನಿನ ನೆರವು ಪಡೆದು, ತನ್ನ ಚಿತ್ರಗಳುಳ್ಳ ದೃಶ್ಯಗಳನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳಲು ಸಫಲರಾದ ಆಕೆ ಕೊನೆಗೆ ಅವೆಲ್ಲವನ್ನೂ ಸೇರಿಸಿ, ಚಿತ್ರ ನಿರ್ಮಿಸಿದ್ದಾರೆ.
ಅಂತರ್ಜಾಲದ ಮಾಹಿತಿಯನ್ನು ನಂಬಬಹುದೇ?
ಅಂತರ್ಜಾಲದಲ್ಲಿ ನಮಗೆ ಅತಿಯೆನಿಸುವಷ್ಟು ಮಾಹಿತಿ ಸಿಕ್ಕಿದರೂ, ಅದರ ಸತ್ಯಾಸತ್ಯತೆ ಬಗ್ಗೆ ಯಾವ ಖಾತರಿಯೂ ಇಲ್ಲ. ವಿಶ್ವವಿದ್ಯಾಲಯವೋ, ಸರಕಾರಿ ಅಂತರ್ಜಾಲ ಜಾಲ ತಾಣದಲ್ಲಿ ಸಿಗುವ ಮಾಹಿತಿ ನಂಬುಗೆಗೆ ಅರ್ಹವಾದರೂ, ಇತರೆಡೆ ಸಿಕ್ಕುವ ಮಾಹಿತಿಯನ್ನು ನಂಬುವುದು ಬಿಡುವುದೂ ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ.ಇದರ ಬದಲಿಗೆ ನಂಬಿಕೆಗೆ ಅರ್ಹವಾದ ಮಾಹಿತಿಯನ್ನೇ ಒದಗಿಸುವ ಹೊಸ ಪ್ರಯತ್ನವೊಂದನ್ನು ಯುಎಸ್‍ವೆಬ್ ಸ್ಥಾಪಕರಾದ ಜೋ ಫರ್ಮೇಜ್ ಎನ್ನುವಾತ ತನ್ನ ಮೆನಿವನ್‍ನೆಟ್‍ವರ್ಕ್ಸ್ ಅನ್ನುವ ಕಂಪೆನಿಯ ಪ್ರಾಯೋಜನೆಯೊಂದಿಗೆ ಆರಂಭಿಸಿದ್ದಾನೆ.ಜನರು ಹೆಚ್ಚಾಗಿ ಬಯಸುವ ಮಾಹಿತಿಗಳ ಬಗ್ಗೆ ಪ್ರತಿಷ್ಠಿತ ತಾಣಗಳ ಮಾಹಿತಿಯ ಕೊಂಡಿಗಳನ್ನು ಒಂದೇ ಕಡೆ ಒದಗಿಸುವ ವ್ಯವಸ್ಥೆ ಅಲ್ಲಿರುತ್ತದೆ.ಮಾಹಿತಿಯನ್ನು ಪರಿಶೀಲಿಸಿ, ಅದರ ಬಗ್ಗೆ ಖಾತರಿ ನೀಡಲು, ಸಂಬಳ ಪಡೆಯುವ ಸಂಪಾದಕರ ಬಳಗವನ್ನೂ ತಾಣ ಹೊಂದಲಿದೆ.ಈ ತಾಣವನ್ನು ಯಾವ ಬ್ರೌಸರ್ ತಂತ್ರಾಂಶವನ್ನು ಉಪಯೋಗಿಸಿಯೂ ಜಾಲಾಡಲು ಅನುವಾಗುವಂತೆ ರಚಿಸಲಾಗುವುದು. ಬಳಕೆದಾರನು ತನ್ನ ಪ್ರಾಯ ನಮೂದಿಸಿದರೆ, ಆತನ ವಯಸ್ಸಿಗೆ ಸರಿಯದ ಮಟ್ಟದ ಮಾಹಿತಿಯನ್ನು ಒದಗಿಸುವ ರೀತಿ ತಾಣವನ್ನು ವ್ಯವಸ್ಥೆಗೊಳಿಸಲಾಗಿದೆ.http://www.earthportal.org/ ಎನ್ನುವುದು ಇಂತಹ ಒಂದು ಮೊದಲ ಪ್ರಯತ್ನ.
ನೀವು ಹೇಳಿದಂತೆ ಕೇಳುವ ರೊಬೊಟ್
ಹಾಂಕಾಂಗ್‍ನ ಕಂಪೆನಿ ವೋವೀ ರೊಬೋಟಿಕ್ಸ್ ಹೊಸ ತೆರನ ರೊಬೋಟ್‍ಗಳನ್ನು ತಯಾರಿಸಿದೆ.ಅರ್ಧ ಮೀಟರ್ ಎತ್ತರವುಳ್ಳ ಈ ರೊಬೋಟ್‍ಗಳ ಎದೆಯಲ್ಲಿ ಕಂಪ್ಯೂಟರ್ ತೆರೆಯೂ ಇದೆ. ರೊಬೊಟ್ ಕೆಲಸ ಮಾಡದಿದ್ದಾಗ ಇದನ್ನು ಮನರಂಜನೆಗಾಗಿಯೂ ಬಳಸಲು ಈ ತೆರೆ ಸಹಾಯಕ.ಜಾವಾ ಕಂಪ್ಯೂಟರ್ ಭಾಷೆಯಲ್ಲಿ ಕ್ರಮವಿಧಿ ಬರೆದು ಇದರ ಕಾರ್ಯವಿಧಾನ ಬದಲಿಸಲೂ ಸಾಧ್ಯ.ಇದರ ದೇಹದ ವಿನ್ಯಾಸ ಹೇಗಿದೆಯೆಂದರೆ, ಇದಕ್ಕೆ ಇನ್‍ಫ್ರಾರೆಡ್ ಕಿರಣಗಳ ಸಹಾಯದಿಂದ ಎದುರಿನ ವಸ್ತುಗಳನ್ನು "ಕಾಣುವ" ಸಾಮರ್ಥ್ಯವಿದೆ.ಇದು ಶಬ್ದವನ್ನಾಲಿಸಿ, ಅದರ ಮೂಲದೆಡೆ ಸಾಗಬಲ್ಲುದು.ಕೈಯಲ್ಲಿ ಹಿಡಿದದ್ದನ್ನು ಎಸೆಯಲು ಇದಕ್ಕೆ ಸಾಧ್ಯ. ಕೈಕಾಲುಗಳನ್ನು ಮಡಿಸಲು,ಭಾರ ಎತ್ತಲು ಇದು ಸಮರ್ಥ. *ಅಶೋಕ್‍ಕುಮಾರ್ ಎ