ಡಾ. ಎಸ್. ರಾಧಾಕೃಷ್ಣನ್ ಅವರ ಚಿಂತನೆಗಳು ಮತ್ತು ಸಂದೇಶಗಳು

ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕ, ತತ್ವ ಜ್ಞಾನಿ ಹಾಗೂ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರು. ಇವರು ಸುಮಾರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಉದಾತ್ತ ಚಿಂತನೆಯ ರಾಜಕಾರಣಿಯಾಗಿ, ರಾಯಭಾರಿಯಾಗಿ, ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ, ದ್ವಿತೀಯ ರಾಷ್ಟ್ರಪತಿಯಾಗಿ ಸಲ್ಲಿಸಿದ ಸೇವೆಯನ್ನು ದೇಶದ ಜನತೆ ಸದಾ ಸ್ಮರಿಸುತ್ತದೆ. ಅವರ ಹುಟ್ಟಿದ ದಿನವಾದ ಸೆಪ್ಟೆಂಬರ್ ೫ ಅನ್ನು, ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಆ ಮೂಲಕ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಸುತ್ತೇವೆ.
*ಆಡು ಮುಟ್ಟದ ಸೊಪ್ಪಿಲ್ಲ* ಎಂಬ ಮಾತಿನಂತೆ ಮಹಾ ದಾರ್ಶನಿಕ, ತತ್ವ ಜ್ಞಾನಿ, ಖ್ಯಾತ ಲೇಖಕ, ವ್ಯಾಖ್ಯಾನಕಾರ, ತುಲನಾತ್ಮಕ ಚಿಂತಕ, ವಾಗ್ಮಿ, ಭಾರತೀಯ ಧರ್ಮ, ಆಚಾರ-ವಿಚಾರಗಳಡಿ ಸಾಕಷ್ಟು ಚಿಂತಿಸಿ, ಸಮನ್ವಯಿಸಿ ತಮ್ಮದೇ ಶೈಲಿಯಲ್ಲಿ ಬರೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ೧೯ನೇ ಶತಮಾನದ ನಮ್ಮ ರಾಷ್ಟ್ರದ ಅಮೂಲ್ಯ ರತ್ನಗಳಲ್ಲಿ ಓರ್ವರು ಎಂದರೆ ತಪ್ಪಾಗಲಾರದು.
೦೫--೦೯--೧೮೮೮ರಂದು ಬುವಿಯ ಬೆಳಕನ್ನು ಕಂಡವರು ಶ್ರೀಯುತರು. ಓದುವುದರಲ್ಲಿ ಮುಂಚೂಣಿಯಲ್ಲಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಬಹಳಷ್ಟು ಕನಸುಗಳನ್ನು ಕಂಡವರು. ಸ್ವತಃ ತಾವು ಶಿಕ್ಷಕರಾಗಿ, ಶಿಕ್ಷಕರ ಕಷ್ಟವನ್ನು, ಆ ಹುದ್ದೆಗಿರುವ ಗೌರವವನ್ನು ಅರಿತಿದ್ದ ಕಾರಣ ತಮ್ಮ ಜನ್ಮ ದಿನವನ್ನು *ಶಿಕ್ಷಕರ ದಿನ* ವೆಂದು ಆಚರಿಸಬೇಕೆಂಬ ಸೂಚನೆಯಿತ್ತರು. ಪ್ರತಿವರ್ಷ ಸಪ್ಟಂಬರ *೫* ನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತಿದೆ.
ಭಗವಾನ್ ಶಂಕರಾಚಾರ್ಯರ ಧಾರ್ಮಿಕ, ತಾತ್ವಿಕ, ಧರ್ಮದ ತಳಹದಿಯ ಮೇಲಿನ ಬದುಕಿನ ಅನಾವರಣ, ಬ್ರಹ್ಮ ಮತ್ತು ಆತ್ಮದ ನೆಲೆಗಟ್ಟಿನ ಮೇಲೆ ನಂಬಿಕೆ ಬಹಳವಾಗಿಟ್ಟವರು. ಬ್ರಿಟಿಷರ ಆಡಳಿತದಲ್ಲಿ ಅವರಿಗೆ ಹಿಂದೂಧರ್ಮದ ಮೇಲಿದ್ದ ಅಸಡ್ಡೆಯನ್ನು ನೋಡಿ ತುಂಬಾ ಬೇಸರಗೊಂಡು, ಹೇಗಾದರೂ ಮನಸ್ಸು ಪರಿವರ್ತನೆ ಮಾಡಬೇಕೆಂದು ಬಯಸಿದ್ದರು.
ವೇದ, ಉಪನಿಷತ್ತು, ಹಿಂದೂಧರ್ಮದ ಸಾರವನ್ನು, ಸಂಸ್ಕೃತ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿ, ಅದರ ಮೇಲೆ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದು ಪ್ರಚುರಪಡಿಸಿದರು. ಇಂಗ್ಲೆಂಡ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುವ ಸಮಯದಲ್ಲಿ ಅಲ್ಲಿ ನ ಶಿಕ್ಷಣ ಸಂಸ್ಥೆಗಳಲ್ಲಿದ್ದ ಸಮಯದ ಪಾಲನೆ, ಶಿಸ್ತು, ಸಂಯಮ, ನಡೆನುಡಿ ಇವುಗಳನ್ನು ಮೆಚ್ಚಿ, ನಮ್ಮಲ್ಲೂ ಅಳವಡಿಸುವಲ್ಲಿ ಯಶಸ್ವಿಯಾದರು.
ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಸಮಗ್ರ ಭಾರತೀಯ ಚಿಂತನ, ಪರಂಪರೆ, ತತ್ವ ಶಾಸ್ತ್ರದ ಬಗ್ಗೆ ಬರೆದು ಪ್ರಚಾರ ಮಾಡಿದರು. ಪಾಶ್ಚಿಮಾತ್ಯರ ಮತ್ತು ನಮ್ಮ ನಡುವಿನ ಪರಂಪರೆಯ ತುಲನಾತ್ಮಕ ಅಧ್ಯಯನ ಕೈಗೊಂಡ ಶ್ರೀಯುತರು ನವವೇದಾಂತದ ಸಾರವನ್ನು ಅರ್ಥವಾಗುವಂತೆ ತಿಳಿಯಪಡಿಸಿ ಯಶಸ್ವಿಯಾದ ಮಹಾತತ್ವಜ್ಞಾನಿ. ಮುಖ್ಯವಾಗಿ 'ಶಿಕ್ಷಣದ ಗುರಿಗಳು ಧಾರ್ಮಿಕ ನೆಲೆಗಟ್ಟಿನಡಿಯಲ್ಲಿ ಸತ್ಯ ಮತ್ತು ಉನ್ನತ ಧ್ಯೇಯವನ್ನೊಳಗೊಂಡ ತತ್ವಗಳನ್ನು ಹೊಂದಿರಬೇಕೆಂದು 'ಅದನ್ನು ಎಲ್ಲೆಡೆ ಅಳವಡಿಸುವಲ್ಲಿ ಯಶಸ್ವಿಯಾದರು.
ಅವರ ಚಿಂತನಗಳು ವೇದಾಂತದ ಸಾರವೇ ಆಗಿತ್ತು. ಯಾರು ಯಾರೋ ಹೇಳಿದರೆಂದು ಹೇಳುವುದು ಬಿಟ್ಟು ನಾವೇ ಸ್ವತಃ ಅನುಭವಿಸಿದ ಜೀವನಮೌಲ್ಯಗಳ ಜೊತೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಮಾನಸಿಕ, ವೈಜ್ಞಾನಿಕ ತತ್ವಗಳನ್ನು ಹೇಳುವುದು ಮುಖ್ಯವೆಂದು ಸಾರಿದ ವಿಶ್ವವಿಖ್ಯಾತ ಕಂಡ ತತ್ವಜ್ಞಾನಿ.
ಭಾರತದ ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಯಾಗಿ ಆಡಳಿತವನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ನಡೆಸಿದ ಆಡಳಿತಾಧಿಕಾರಿ ಸಹ. ಎಲ್ಲಿಯಾದರೂ ಸದನದಲ್ಲಿ ಗದ್ದಲವಾದರೆ, ತಮ್ಮ ಸಭಾಪತಿ ಸ್ಥಾನದಿಂದ ಸಂಸ್ಕೃತ ಸುಭಾಷಿತ ಶ್ಲೋಕಗಳನ್ನು, ಬೈಬಲ್ ಉಕ್ತಿಗಳನ್ನು ಹೇಳಿ ಶಾಂತಗೊಳಿಸುವಷ್ಟು ಸಮರ್ಥರಾಗಿದ್ದರು. ‘ಹೆಲ್ಪೇಜ್ ಇಂಡಿಯಾ’ ಎಂಬ ಸರಕಾರೇತರ ಸಂಸ್ಥೆಯನ್ನು ವಯೋವೃದ್ಧರಿಗೆ ಮತ್ತು ನಿರ್ಗತಿಕರಿಗಾಗಿ ಸ್ಥಾಪಿಸಿ ಆ ನಿಟ್ಟಿನಲ್ಲೂ ಮಾನವೀಯತೆ ಮೆರೆದರು.
*ಓರ್ವ ಗುರು ಎಂದರೆ ಆತ ದೇವರಿಗೆ ಸಮಾನ. ಈ ಪ್ರಪಂಚದಲ್ಲಿ ಗುರು-ಶಿಷ್ಯ ಪರಂಪರೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ತಾಯಿ ಎಂದರೆ ಈ ಜಗತ್ತಿನ ದೊಡ್ಡ ಗುರು, ಎರಡನೆಯವರೇ ತಿದ್ದಿತೀಡುವ, ಬುದ್ಧಿಕಲಿಸುವ, ಜೀವನ ಹಾದಿ ತೋರಿಸುವ, ಎಲ್ಲರಿಗೂ ಪ್ರೀತಿ ಮತ್ತು ಸತ್ಯದ ದರುಶನ ಮಾಡಿಸುವ, ವಿವೇಕ ಹಂಚುವ, ಉದಾತ್ತ ಮೌಲ್ಯಗಳನ್ನು ಸಾಕಾರಗೊಳಿಸುವ, ಅಪಾರ ಜ್ಞಾನವನ್ನು ನೀಡುವ, ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವ ಮಹಾ ಹೊಣೆಯನ್ನು ಹೊತ್ತಿರುವವರು ಶಿಕ್ಷಕರು ಎಂಬುದಾಗಿ ಹೇಳಿ ಅಧ್ಯಾಪನ ಮತ್ತು ಅಧ್ಯಾಪಕರ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. 'ಭಾರತರತ್ನ'ಪ್ರಶಸ್ತಿಯನ್ನು ತಮ್ಮ ಜೀವಿತಾವಧಿಯಲ್ಲಿ ಪಡೆದವರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವಗಳು,ಚಿಂತನೆಗಳು, ಹೇಳಿಕೆಗಳು ಇಂದಿಗೂ ಪ್ರಸ್ತುತ, ಹೆಮ್ಮೆಯ ನಮ್ಮ ದೇಶದ ಸುಪುತ್ರರು.ನಾವೇ ಧನ್ಯರು.
*ಓಂ ಶ್ರೀ ಗುರುಭ್ಯೋ ನಮಃ*
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ