ಡಾ ಕಣಾದ ರಾಘವ ಭರವಸೆಯ ಕತೆಗಾರ.

ಡಾ ಕಣಾದ ರಾಘವ ಭರವಸೆಯ ಕತೆಗಾರ.

ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ ‘ಮೊದಲ ಮಳೆಯ ಮಣ್ಣು’

ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು ‘ಮೊದಲ ಮಳೆಯ ಮಣ್ಣು’ ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ‘ವರ್ತಮಾನ’ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ ಕತೆಗಾರ ರಾಘವರ ಕತೆಗಳ ಮೂಲ ಆಶಯ ಮನುಷ್ಯ ಮನಸ್ಸಿನ ಸಂಶೋಧನೆ. ಅವರು ತಮ್ಮ ಕತೆಗಳಿಗಾಗಿ ಆಯ್ದಿರುವ ವಸ್ತುಗಳು ಮತ್ತು ಅವುಗಳ ನಿರೂಪಣಾ ಕ್ರಮಕ್ಕೆ ಅನುಭವವನ್ನೇ ಧಾರೆಯೆರೆದಿರುವುದೂ ಮೊದಲ ಓದಿನಿಂದಲೇ ಸ್ಪಷ್ಟವಾಗುತ್ತದೆ. ‘ವರ್ತಮಾನ’ವೆನ್ನುವುದು ಸುದ್ದಿ ಮತ್ತು ಸದ್ಯದ ಕಾಲ ಎರಡನ್ನೂ ಒಳಗೊಂಡ ಶಬ್ದ. ಅದನ್ನು ಅವರು ಎಷ್ಟು ಸಮರ್ಥವಾಗಿ ಎದುರಿಸಿದ್ದಾರೆಂದರೆ ಇಲ್ಲಿನ ಕತೆಗಳು ಬರಿಯ ಕತೆಗಳಾಗಿ ಉಳಿಯದೇ ಅವು ನಿಜ ಬದುಕನ್ನು ಎರಕ ಹೊಯ್ದು ಓದುಗನ ಮುಂದಿಟ್ಟು ಹೌದೋ ಅಲ್ಲವೋ ಎಂಬ ದ್ವಂದ್ವಕ್ಕೂ ಎಳಸುತ್ತವೆ. ಅಂದರೆ ಒಬ್ಬ ಕತೆಗಾರ ತನ್ನ ಕಣ್ಣಿಗೆ ಕಂಡದ್ದನ್ನು ಓದುಗನ ಕಣ್ಣಿಗೂ ಕಟ್ಟುವಂತೆ ಮಾಡುವ ಸೃಜನಶೀಲತೆಯನ್ನು ಅವರು ಸಾಧಿಸಿಕೊಂಡಿದ್ದಾರೆ. ‘ಛಂದಮಾಮ’ ವಸುದೇಂದ್ರರು ನಡೆಸುವ ವಾರ್ಷಿಕ ಕಥಾಸಂಕಲನಗಳ ಸ್ಪರ್ಧೆಯಲ್ಲಿ ೨೦೧೧ರ ಬಹುಮಾನಿತ ಸಂಕಲನವಾಗಿ ಛಂದ ಪುಸ್ತಕ ಈ ಸಂಕಲನವನ್ನು ತನ್ನ ಎಂದಿನ ಅಚ್ಚುಕಟ್ಟುತನದಲ್ಲಿ ಪ್ರಕಾಶಿಸಿದೆ.

ಈ ಹೊತ್ತಿನ ಬಹುತೇಕ ಕತೆಗಾರರು ಅದರಲ್ಲೂ ಕಥಾಸ್ಪರ್ಧೆಗಳ ಬಹುಮಾನಿತರು ಬಳಸುತ್ತಿರುವ ಭಾಷೆ, ನಿರೂಪಣಾ ತಂತ್ರ ಮತ್ತು ವಸ್ತು ನಿರ್ವಹಣೆಯ ಕ್ರಮವನ್ನು ನಿವಾರಿಸಿಕೊಂಡಿರುವ ರಾಘವರ ಕಥನಗಾರಿಕೆಯ ಹಿಂದೆ ದೀರ್ಘ ಪರಂಪರೆಯಿರುವ ಕನ್ನಡ ಕಥಾಪ್ರಪಂಚದ ಅಮೂಲ್ಯಎಳೆಗಳು ಕಾಣಸಿಗುತ್ತವೆ. ಸುಮ್ಮಸುಮ್ಮನೆ ಪರಿಧಿಯಾಚೆಗಿನ ಪ್ರಪಂಚಕ್ಕೆ ಎರಗದೇ, ಜನಪ್ರಿಯವೂ ಆಗಿ ಉಳಿಯುವ ಬ್ಯಾಲೆನ್ಸಿಂಗ್ ರಾಘವರ ಎಲ್ಲ ಕತೆಗಳಲ್ಲೂ ಕಾಣಸಿಗುವ ಹೆಚ್ಚುಗಾರಿಕೆ. ಅವರ ಕಥಾನಿರ್ವಹಣೆಯ ಕ್ರಮ ಅತ್ಯಂತ ಪ್ರಾಮಾಣಿಕವಾಗಿರುವುದೂ ಹಾಗೆಯೇ ಮನುಷ್ಯಮಿತಿಯ ಪಾತಳಿಯಲ್ಲಿ ಲೋಲಕವಾಡುತ್ತಲೇ ಮತ್ತೊಂದು ಮಜಲನ್ನು ದಾಟಿಸುವ ಯತ್ನಗಳೂ ಕನ್ನಡ ಕಥನಗಾರಿಕೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇರುವ ಪ್ರಯೋಗಶೀಲತೆಯ ಕುರುಹಾಗಿಯೂ ಕಾಣುತ್ತದೆ.

ಸಂಕಲನದ ಹನ್ನೆರಡು ಕತೆಗಳ ವಸ್ತು ವಿಷಯಗಳು ಒಂದರಂತೆ ಮತ್ತೊಂದು ಇಲ್ಲದಿದ್ದರೂ, ಅವುಗಳನ್ನು ನಿರಚನೆ ಮಾಡುತ್ತ ಹೋದಂತೆ ಕಾಣುವುದು ಮನುಷ್ಯ ಮನಸ್ಸನ್ನು ಆಕ್ರಮಿಸಿರುವ ಸಾಮಾಜಿಕ ಕ್ರೌರ್ಯ. ಮೇಲ್ನೋಟಕ್ಕೆ ಸಹಜವಾಗಿರುವಂತೆ ಮತ್ತು ಸುಲಭಕ್ಕೆ ನಮ್ಮ ಆಚೀಚೆ ಸಿಕ್ಕುವ ಪಾತ್ರಗಳಿದ್ದರೂ ಅವುಗಳೊಳಗಿರುವ ಆತಂಕ ಮತ್ತು ಆ ಪಾತ್ರಗಳ ಮೂಲಕ ಸಮಾಜವನ್ನು ಕತೆಗಾರರು ವಿಮರ್ಶಿಸಿರುವ ರೀತಿ ಈವರೆಗೂ ನಾವು ಕಾಣುತ್ತ ಬಂದಿದ್ದಕ್ಕಿಂತ ಭಿನ್ನವಾಗಿದೆ. ಮೊಗೇರರ ಬದುಕನ್ನು (ಅಕ್ಬಚ್ಚಿ) ಚಿತ್ರಿಸುವ ತಲ್ಲೀನತೆಯಲ್ಲೇ ಅವರು  ಅಂತೋಣಿ ಅಯ್ಯಾಕುಟ್ಟನ್ನನ (ದೇಶಾಂತರ) ಬದುಕನ್ನೂ ಚಿತ್ರಿಸಬಲ್ಲರು. ಬದುಕಿನ ಕಡೆಯ ದಿನಗಳಲ್ಲಿ ಸಂಗೀತ ಕಲಿಯುವ ನವಾಬ್ ಜಾನ್ (ಇಳಿಹಗಲ ಮಂಜೂಷೆ) ಓದುಗನಿಗೆ ಕೇಳಿಸುವ ಬದುಕಿನ ಸಂಗೀತದ ಗುಂಗು ತಕ್ಷಣಕ್ಕೆ ಬಿಟ್ಟುಹೋಗುವಂಥದ್ದಲ್ಲವೇ ಅಲ್ಲ. ಪ್ರೊಫೆಸರ್ ಬಸವರಾಜು ರಿಟೈರಾಗುವ ಕಾಲಕ್ಕೆ ಬಸವಿಯ ಹಿಂದೆ ಬೀಳುವ ಉಮೇದು (ನನ್ನ ಬೆಳಗು ನನ್ನದು) ಬಾಲ್ಯ ಮೀರಿದ ಆದರೆ ಯೌವ್ವನವಿನ್ನೂ ತೊಟ್ಟಿಕ್ಕುತ್ತಿರುವ ಮುತ್ತು ಮತ್ತು ಪವಲಕುಡಿ ನಡುವೆ ಹುಟ್ಟಿದ ಅನುರಾಗ?ದ (ನಟ್ಟಿರುಳ ಬೆಳಗು) ಉಮೇದನ್ನು ಆಪೋಷನ ತೆಗೆದುಕೊಂಡರೆ, ಅವರಿವರಿಗೆ ಮದ್ಯಸರಬರಾಯಿ ಮಾಡುವ ಕಿಟ್ಟಿಯ ‘ಕ್ಯಾನ್ವಾಸ್ ಹೆಜ್ಜೆಗಳು’ ತುಳಿಯುವ ಜಾಡನ್ನು ‘ಚೇತನ ಗಂಧ’ದ ರಂಗಾಭಟ್ಟ ಮತ್ತೊಂದು ರೀತಿಯಲ್ಲಿ ಮೀರುತ್ತಾನೆ.

ಬಹುತೇಕ ಕತೆಗಳು ಸಾಗುವುದು ನೇರ ನಿರೂಪಣೆಯಲ್ಲಾದರೂ ಅಸಂಗತವನ್ನೇ ಸ್ಥಾಯಿಯಾಗಿಟ್ಟುಕೊಂಡಿರುವ ‘ದಿವಾಸ್ವಾಪ’, ನೈಟ್ ಡ್ಯೂಟಿ ಡಾಕ್ಟರಳ ದಿನಚರಿಯ ಪುಟದಂತಿರುವ ‘ಗಜಲುಗಳು’ ಮತ್ತು ಸತ್ತಮೇಲೂ ಏನಾಗುತ್ತಿದೆಯೆಂದು ಕಾಣಬಯಸುವ ಹೆಣದ ಆತ್ಮಕಥನ ‘ನೇಣಿಗೊಂದು ಸ್ವಗತ’ ಕತೆಗಳಲ್ಲಿ ಕತೆಗಾರರೇ ನಿರೂಪಕನಾಗಿ ಮೇಳವಿಸಿದ್ದಾರೆ. ಉಳಿದೆರಡು ಕತೆಗಳಾದ ‘ಶಲ್ಯ’ದಲ್ಲಿ ಐತಿಹಾಸಿಕ ಘಟನೆಯ ಸಾತತ್ಯವಿದ್ದರೆ, ‘ಕುರೀಮಂದೀ ರೀ’ ಹೆಸರೇ ಹೇಳುವ ಹಾಗೆ ಮಂದಿಯ ಕುರಿತನವನ್ನು ಕುರಿತದ್ದು.

ಹೀಗೆ ಒಂದರಂತಿಲ್ಲದ ಮತ್ತೊಂದು ವಿಷಯವನ್ನು ಕತೆಗಾರ ನಿರ್ವಹಿಸಬೇಕಾದರೆ ಪಾತ್ರಗಳ ಬದುಕಿನ ಸಮಗ್ರ ವಿವರ ಮತ್ತು ಆ ಪಾತ್ರಗಳಿಗಾಗಿ ಅನಿವಾರ್ಯ ಕತೆಗಾರನೂ ಅನುಭವಿಸಬೇಕಾದ ಬದುಕಿನ ಮುಖಗಳ ಅನಾವರಣ ಅತಿ ಮುಖ್ಯ. ಬದುಕಿನ ಸಣ್ಣ ಸಣ್ಣ ವಿವರಗಳಲ್ಲೂ ಕಥನ ಪರಂಪರೆಯಿರುವುದನ್ನು ಕಾಣಬಲ್ಲ ಸೂಕ್ಷ್ಮಗ್ರಾಹಿ ರಾಘವ ಅವನ್ನು ಹಿಡಿದಿಟ್ಟು ಕತೆಯಾಗಿಸಿರುವ ಪರಿ ಮೆಚ್ಚಬೇಕಾದದ್ದೇ ಆದರೂ ಅವರ ಪಾತ್ರಗಳು ಆಯಾ ಪ್ರಾದೇಶಿಕ ನುಡಿಗಟ್ಟುಗಳನ್ನು ಆಡಬಲ್ಲವಾದರೂ ಕತೆಗಾರರ ಕಥನಗಾರಿಕೆಗೆ ಆಶ್ರಯಿಸಿರುವುದು ನಮಗೆಲ್ಲರಿಗೂ ರೂಢಿಯಾಗಿರುವ ಮತ್ತು ತಕ್ಷಣಕ್ಕೆ ಅರ್ಥವಾಗುವ ಭಾಷೆಯನ್ನೇ. ಇದೂ ಕೂಡ ಒಂದು ರೀತಿಯ ಪ್ರಯೋಗವೇ. ಆದರೂ ‘ಗಜಲುಗಳು’ ಕತೆಯಲ್ಲಿ ವೃದ್ಧನೊಬ್ಬನನ್ನು ಚಿತ್ರಿಸುವಾಗ ಬಹುವಚನಕ್ಕಾಗಿ ‘ಅಜ್ಜರು’ ಅಂತ ಬಳಸಿರುವುದು ಮಾತ್ರ ಯಾಕೋ ಕೃತಕವೆನ್ನಿಸುತ್ತದೆ.ಅಜ್ಜ ಎನ್ನುವುದು ಏಕವಚನವೂ ಅಲ್ಲದ ಬಹುವಚನವೂ ಒಲ್ಲದ ಸಂಬಂಧದ ಗುರುತು ಮಾತ್ರ ತಾನೆ?

ಸಂಕಲನಕ್ಕೆ ‘ಸ್ಪಂದನಶೀಲತೆಯ ವೈಶಾಲ್ಯ’ವೆಂಬ ಹಣೆಪಟ್ಟಿಯಲ್ಲಿ ಕೆ.ಸತ್ಯನಾರಯಣರ ಮುನ್ನುಡಿ ಇದೆ. ಸ್ವತಃ ಒಳ್ಳೆಯ ಕತೆಗಾರ ಹಾಗೂ ಪ್ರಬಂಧಕಾರರೂ ಆಗಿರುವ ಕೆ.ಸತ್ಯನಾರಾಯಣ ಒಬ್ಬ ಬರಹಗಾರನ ಕೈ ಮತ್ತೊಬ್ಬ ಬರಹಗಾರನ ಜೇಬಲ್ಲಿ ಅನ್ನುವ ಲೋಕನ್ಯಾಯದ ಮಾತು ಗೊತ್ತಿದ್ದೂ ಬಹುಸೂಕ್ಷ್ಮವಾಗಿ ‘ಕೆಲವರ’ ಜಾಣಕುರುಡನ್ನು ಪ್ರಶ್ನಿಸಿದ್ದಾರೆ. ಆ ಪ್ರಶ್ನೆಗಳನ್ನಿಟ್ಟುಕೊಂಡು ಚರ್ಚಿಸಹೋದರೆ ಒಟ್ಟೂ ಸಾಹಿತ್ಯ ಕ್ಷೇತ್ರವೇ ಬಹುಸಂಕರಣಕ್ಕೆ ಒಳಗಾಗಿರುವುದನ್ನು ಮುಲಾಜುಗಳಿಲ್ಲದೇ ಒಪ್ಪಿಕೊಳ್ಳಬೇಕಾಗುತ್ತದೆ.

ಒಂದೆರಡು ಕತೆಗಳನ್ನು ಬಿಟ್ಟರೆ ಬಹುತೇಕ ಕತೆಗಳು ತೀರ ತೀರ ಸಂಕ್ಷಿಪ್ತವಾಗಿವೆ. ಅನುದಿನದ ಒತ್ತಡದಲ್ಲಿ ದೀರ್ಘವಾದದ್ದನ್ನು ಓದುವ ವ್ಯವಧಾನ ನಮ್ಮ ಓದುಗರಿಗಿಲ್ಲವೋ ಅಥವ ದೀರ್ಘವಾಗಿ ಬರೆಯುವುದು ನಮ್ಮ ಕತೆಗಾರರಿಗೆ ಅಸಾಧ್ಯವೋ ಅಥವ ಬರವಣಿಗೆಯನ್ನು ಪುಟಗಳ ಮಿತಿಗೆ, ಶಬ್ದಗಳ ಮಿತಿಗೆ ಇಳಿಸಿರುವ ನಮ್ಮ ಮಾಧ್ಯಮಗಳ ಅನುಸರೆಣೆಯೋ ಅಂತೂ ಕತೆಗಾರರು ತೀರ ಸಂಕ್ಷಿಪ್ತವಾಗಿಬಿಟ್ಟರೆ ತೋಡಿಕೊಳ್ಳುವುದಕ್ಕೆ ಹದ ಬರುವುದಿಲ್ಲ. ಹಾಗೇ ಅನ್ಯಥಾ ದೀರ್ಘಾಲಾಪನೆಯೂ ಕೃತಿಯ ಹಂದರವನ್ನೇ ವಿಕೃತಗೊಳಿಸಲೂ ಬಹುದು.

ಕಣಾದ ರಾಘವರು ಈ ಕತೆಗಳ ಮೂಲಕ ಹೀಗೆ ಬೇರೆ ಬೇರೆ ವಸ್ತುಗಳಿಗೆ, ಜಗತ್ತುಗಳಿಗೆ, ನಮ್ಮನ್ನು ಕೊಂಡೊಯ್ಯುತ್ತಲೇ ಬಹುತೇಕ ಕತೆಗಾರರು ಹಟಕ್ಕೆ ಬಿದ್ದವರಂತೆ ಬೆಂಬಿಡದೇ ಹಿಡಿದಿರುವ ಬಾಲ್ಯದ ನೆನಪುಗಳನ್ನು, ಟೀವಿ ಸೀರಿಯಲ್ಲುಗಳಲ್ಲಿ ತೋರಿಸುವ ‘ಅಸಾಧ್ಯ’ ಬಡತನವನ್ನೂ ಮೀರಿದ ಹೊಸತನಕ್ಕೆ ಸಾಕ್ಷಿಯಾಗಿದ್ದಾರೆ. ಹಾಗೇ ಮುಂಬರುವ ಅವರ ಕತೆಗಳ ಬಗ್ಗೆ ಸಹಜ ಕುತೂಹಲ ಮತ್ತು ನಿರೀಕ್ಷೆಗಳನ್ನೂ ಹುಟ್ಟಿಸಿದ್ದಾರೆ.

ಪುಸ್ತಕ : ಮೊದಲ ಮಳೆಯ ಮಣ್ಣು  ಲೇಖಕ : ಡಾ.ಕಣಾದ ರಾಘವ  ಪ್ರಕಾಶಕರು : ಛಂದ ಪುಸ್ತಕ, ಬೆಂಗಳೂರು
ಪ್ರಕಟಣ ವರ್ಷ : 2011, ಮೌಲ್ಯ : ರೂ. ೮೦/- ಪುಟಗಳು: ೧೧೬


 

Comments