ಡಿಟೆಕ್ಟಿವ್ ಸ್ಟೋರೀಸ್

ಡಿಟೆಕ್ಟಿವ್ ಸ್ಟೋರೀಸ್

ಪುಸ್ತಕದ ಲೇಖಕ/ಕವಿಯ ಹೆಸರು
ಗಿರೀಶ್ ತಾಳಿಕಟ್ಟೆ
ಪ್ರಕಾಶಕರು
ಸಂಚಲನ, ಕನಕಪುರ ಮುಖ್ಯ ರಸ್ತೆ, ಬೆಂಗಳೂರು - ೫೬೦೦೬೨
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೩

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗೆ ಆರಕ್ಷಕ ಲಹರಿ ಮಾಸ ಪತ್ರಿಕೆಯ ಸಂಪಾದಕರೂ, ಗಿರೀಶ್ ತಾಳಿಕಟ್ಟೆ ಅವರ ‘ಬಾಸ್’ ಆಗಿರುವ ನಿವೃತ್ತ ಡಿಐಜಿಪಿ ಡಾ. ಡಿ.ಸಿ.ರಾಜಪ್ಪ ಅವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ. ನಮ್ಮ ಸಹೋದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ “ ಪತ್ರಕರ್ತ ಗಿರೀಶ್ ತಾಳಿಕಟ್ಟೆಯವರು ಆರಕ್ಷಕ ಲಹರಿ ಮಾಸಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಪೋಲೀಸ್ ಫೈಲ್ಸ್' ಎಂಬ ಅಂಕಣದ ಬರಹಗಳು ಈಗ ಕೃತಿಯ ರೂಪ ಪಡೆದು ಓದುಗರ ಕೈಸೇರುತ್ತಿರುವುದು ಖುಷಿಯ ವಿಚಾರ. ಬೇರೆ ಬೇರೆ ಕಾಲಘಟ್ಟದಲ್ಲಿ, ಜಗತ್ತಿನ ಬೇರೆ ಬೇರೆ ಮೂಲೆಯಲ್ಲಿ ನಡೆದಿದ್ದ ಕುತೂಹಲಕಾರಿ, ಇದುವರೆಗೆ ಪತ್ತೆಯಾಗದ ನಿಗೂಢ ಅಪರಾಧ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿದ್ದ ಆ ಅಂಕಣ ಓದುಗರ ನಡುವೆ ಅಪಾರ ಜನಪ್ರಿಯತೆ ಗಳಿಸಿತ್ತು.

ಪೋಲೀಸ್ ಲೋಕದ ತನಿಖಾ ಚಾತುರ್ಯಕ್ಕೆ ಸವಾಲೆಸೆಯುವಂತಹ ಹಾಗೂ ಆಧುನಿಕ ತಂತ್ರಜ್ಞಾನಗಳ ಕಾಲದಲ್ಲೂ ಬೇಧಿಸಲು ಸಾಧ್ಯವಾಗದ ಈ ರಹಸ್ಯ ಪ್ರಕರಣಗಳು ಓದುಗರಿಗೆ ರೋಚಕ ಅನುಭವ ಉಣಿಸುವುದರ ಜೊತೆಗೆ, ಅವರನ್ನು ತರ್ಕಶೀಲರನ್ನಾಗಿಯೂ ಮಾಡುತ್ತದೆ. ಇಲ್ಲಿರುವ ಪ್ರತಿ ಪ್ರಕರಣವೂ ತನ್ನೊಳಗೆ ಒಂದು ಬೃಹತ್ ಕಾದಂಬರಿಯಾಗುವಷ್ಟು ಅಗಾಧ ಸಾಮಗ್ರಿ ಒಳಗೊಂಡಿದೆ. ಆದಾಗ್ಯೂ, ಆ ಕೌತುಕಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಓದುಗರ ಮುಂದಿರಿಸಿರುವ ಗಿರೀಶ್ ಅವರ ವಿಶಿಷ್ಟ ನಿರೂಪಣಾ ಶೈಲಿ ಮನಸೆಳೆಯುತ್ತದೆ ಮತ್ತು ಘಟನೆ ನಡೆದ ಕಾಲಘಟ್ಟಕ್ಕೆ ನಮ್ಮನ್ನು ಕರೆದೊಯ್ದು, ಅದ್ಭುತ ಅನುಭವವ ನೀಡುತ್ತದೆ.” ಎಂದಿದ್ದಾರೆ.

ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಫ್ ಪೋಲೀಸ್ ಆಗಿ ಕೆಲಸ ಮಾಡಿ ಈಗ ನಿವೃತ್ತರಾಗಿರುವ ಬಿ ಕೆ ಶಿವರಾಂ ಅವರು ಈ ಕೃತಿಗೆ ಬಹಳ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ “ಮುನ್ನುಡಿ ಬರೆಯುವ ಮುನ್ನ ಈ ಕೃತಿಯ ಹಸ್ತಪ್ರತಿಯನ್ನು ನಾನು ಎರಡು ಬಾರಿ ಓದಿದೆ. ಮೊದಲನೆಯ ಸಲ ಒಬ್ಬ ಓದುಗನಾಗಿ, ಎರಡನೇ ಸಲ ಒಬ್ಬ ಪೋಲೀಸ್ ವ್ಯಕ್ತಿಯಾಗಿ. ಎರಡು ಆಯಾಮದಿಂದಲೂ ನನಗೆ ಈ ಕೃತಿ ವಿಶಿಷ್ಟ ಎನಿಸಿತು. ಮೊದಲಿನಿಂದಲೂ ನಾನು ಸಾಹಿತ್ಯದ ಗಂಭೀರ ಓದುಗ. ಗಿರೀಶ್ ತಾಳುಕಟ್ಟೆಯವರು ಹಸ್ತಪ್ರತಿಯನ್ನು ಕೈಗಿತ್ತು ಹೋದಾಗ, ಸಹಜವಾಗಿಯೇ ಒಬ್ಬ ಓದುಗನಾಗಿ ಓದಿದೆ. ಪತ್ತೇದಾರಿ ಅಥವಾ ಕ್ರೈಂ ಕೇಂದ್ರಿತ ಬರಹಗಳನ್ನು ನಾವು ಎಷ್ಟು ಮಾತ್ರ ಲಘುವಾಗಿ ಪರಿಗಣಿಸಿ ಓದುತ್ತೇವೆಯೋ, ಅಷ್ಟೇ ಲಘುವಾಗಿ ಓದು ಶುರು ಮಾಡಿದೆ. ಓದುತ್ತಾ ಹೋದಂತೆ ನನ್ನ ಅಭಿಪ್ರಾಯ ಬದಲಾಗುತ್ತಾ ಸಾಗಿತು. ಇಲ್ಲಿರುವ ಎಲ್ಲಾ ಘಟನೆಗಳು ನೈಜ ಘಟನೆಗಳು ಮತ್ತು ಯಾವುವೂ ಕಾಲ್ಪನಿಕ ಅಲ್ಲ. ಹಾಗಾಗಿ ರೋಚಕತೆ ಅಥವಾ ನಿಗೂಢತೆಗೆ ಕೊರತೆಯೇನೂ ಇರಲಿಲ್ಲ. ಆದರೆ ಅದರಾಚೆಗೆ ಮನುಷ್ಯ ಬಾಂಧ್ಯವ್ಯದ ತೊಳಲಾಟ, ತಲ್ಲಣಗಳನ್ನು ಲೇಖಕರು ಇಲ್ಲಿ ಒಳಗೊಳ್ಳುತ್ತಾ ಸಾಗಿದ ನಿರೂಪಣೆ, ಇಲ್ಲಿನ ಕಥನಗಳನ್ನು “ಕ್ರೈಂ” ನಿಂದ ಆಚೆಗೆ ತಂದು ನಮ್ಮನ್ನು ಕಾಡುವಂತೆ ಮಾಡುತ್ತವೆ. 

ಸುಮಾರು ಶತಮಾನದ ಹಿಂದೆ, ಹಲವಾರು ದಶಕಗಳ ಹಿಂದೆ ನಡೆದ ಇಂತಹ ವಿಶಿಷ್ಟ ಎನ್ನಬಹುದಾದ ಪ್ರಕರಣಗಳನ್ನು ಜಗತ್ತಿನ ಬೇರೆ ಬೇರೆ ಮೂಲೆಯಿಂದ ಹೆಕ್ಕಿ ತೆಗೆದು, ಇದುವರೆಗೆ ಸಾಗಿ ಬಂದ ಅವುಗಳ ಸುತ್ತಲಿನ ಪತ್ತೇದಾರಿಕೆ ಪ್ರಯತ್ನಗಳನ್ನು ಗಿರೀಶ್ ತಾಳಿಕಟ್ಟೆಯವರು ಈ ಕೃತಿಯ ಮೂಲಕ ನಮ್ಮ ಮುಂದಿರಿಸಿದ್ದಾರೆ. ಹಾಗಾಗಿ ಕೇವಲ ಪತ್ತೇದಾರಿ ಶೈಲಿಯ ಓದುಗರಿಗಷ್ಟೇ ಅಲ್ಲ, ಸಾಹಿತ್ಯದ ಓದುಗರಿಗೂ ಈ ಕೃತಿ ಇಷ್ಟವಾಗಲಿದೆ ಎಂದು ನಾನು ಹೇಳಬಲ್ಲೆ. ಲೇಖಕರು ಈ ಕೃತಿಗೆ “ಡಿಟೆಕ್ಟಿವ್ ಸ್ಟೋರೀಸ್" ಎಂಬ ಹೆಸರನ್ನು ಆಯ್ಕೆ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಇದು “ಅನ್ ಡಿಟೆಕ್ಟಿವ್ ಸ್ಟೋರೀಸ್ !” ಅಂದರೆ ಇಲ್ಲಿ ಯಾವ ಪ್ರಕರಣದ ತನಿಖೆಯೂ ತಾರ್ಕಿಕ ಅಂತ್ಯ ಕಂಡಿಲ್ಲ. ಅಪರಾಧಗಳು ಸಾಬೀತಾಗಿಲ್ಲ. ಪೋಲೀಸರು ಅಥವಾ ಇನ್ವೆಸ್ಟಿಗೇಷನ್ ಏಜೆನ್ಸಿಗಳು ಸೋತು ಹೋಗಿವೆ. ನೆನಪಿರಲಿ, ನಮಗೆ ನಿಜವಾದ ಪಾಠಗಳು ಸಿಗುವುದು ಸೋಲಿನಿಂದಲೇ ಹೊರತು ಗೆಲುವಿನಿಂದಲ್ಲ !”

ಲೇಖಕರು ತಮ್ಮ ಮಾತಿನಲ್ಲಿ ತಾವು ಈ ಪುಸ್ತಕ ಬರೆಯಲು ಪೂರಕವಾದ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ೧೮ ಅಪರಾಧಿ ತನಿಖಾ ಪ್ರಕರಣಗಳಿವೆ. ಎಲ್ಲವೂ ನೈಜವಾದದ್ದು. ಎಲ್ಲದ್ದಕ್ಕೂ ಛಾಯಾಚಿತ್ರ ಸಹಿತವಾದ ದಾಖಲೆಗಳಿವೆ. ಬಹಳ ಅಪರೂಪದ ಪ್ರಕರಣವಾದ ‘ಜ್ಯಾಕ್ ದಿ ರಿಪ್ಪರ್', ಜಪಾನ್ ನ ೨೧ ಮುಖಗಳ ರಕ್ಕಸ, ಡಿಬಿ ಕೂಪರ್ ಎನ್ನುವ ಅನ್ ಸಾಲ್ವಡ್ ಹೈಜಾಕರ್, ಕೋಡ್ ವರ್ಡ್ ಕಿಲ್ಲರ್, ಅನಾಮಿಕ ಪತ್ರಗಳು ಮೊದಲಾದ ರೋಚಕ ಕಥಾನಕಗಳಿವೆ.

ಈ ಡಿಟೆಕ್ಟಿವ್ ಸ್ಟೋರೀಸ್ ಪುಸ್ತಕವನ್ನು ಗಿರೀಶ್ ಅವರು “ಅಪಾರ ಶ್ರಮ ಮತ್ತು ವಿಪರೀತ ದುಡಿಮೆಯ ಹೊರತಾಗಿಯೂ ಜಗತ್ತಿನ ದೃಷ್ಟಿಯಲ್ಲಿ ಒಂದು ಕ್ಷುದ್ರಜೀವಿಯಂತೆ ಸೇವೆಗೈದು ನಿವೃತ್ತಿಗೊಳ್ಳುವ ಪ್ರತಿ ಪೋಲೀಸ್ ಕಾನ್ ಸ್ಟೇಬಲ್ ಗೆ ಅರ್ಪಣೆ ಮಾಡಿದ್ದಾರೆ. ೧೬೫ ಪುಟಗಳ ಈ ಕುತೂಹಲಕಾರಿ ಪುಸ್ತಕವನ್ನು ಪತ್ತೇದಾರಿ ಕಥೆಗಳ ಆಸಕ್ತರು ಓದಲೇ ಬೇಕು.