ಡಿಸೆಂಬರ್ 31

ಡಿಸೆಂಬರ್ 31

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ.ಅಶ್ವಿನ್ ರಾವ್
ಪ್ರಕಾಶಕರು
ಕೆ.ಪಿ.ಅಶ್ವಿನ್ ರಾವ್, ಪದವಿನಂಗಡಿ, ಬೋಂದೇಲ್ ಅಂಚೆ, ಮಂಗಳೂರು-575 008
ಪುಸ್ತಕದ ಬೆಲೆ
ರೂ.10.00 (ಸಾಂಕೇತಿಕ), ಮುದ್ರಣ: 2014

*ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"*

" ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸಾಂಕೇತಿಕ) ಯ ಸಂಕಲನ 2014ರಲ್ಲಿ ಪ್ರಕಟವಾಗಿದೆ. ಸ್ಟೆಲ್ಲಾ ಮನೋಜ್ ರವರು ವಿನ್ಯಾಸಗೊಳಿಸಿದ ಆಕರ್ಷಕ ಮುಖಪುಟದ ಸಂಕಲನವನ್ನು ಲೇಖಕರೇ (ಕೆ. ಪಿ. ಅಶ್ವಿನ್ ರಾವ್, ಪದವಿನಂಗಡಿ, ಅಂಚೆ: ಬೊಂದೇಲ್, ಮಂಗಳೂರು- 575008, ದ. ಕ. ಜಿಲ್ಲೆ, ಮೊಬೈಲ್: 9448253815) ಪ್ರಕಾಶಿಸಿದ್ದಾರೆ.

ಗೌತಮ್ ಹೆಬ್ಬಾರ್, ಹೈದರಾಬಾದ್ ಅವರ ಬೆನ್ನುಡಿ (ಗೆಳೆತನದ ಸಂಭ್ರಮಕ್ಕೆ ಕೈಚಾಚುತ್ತಾ...) ಇರುವ ಸಂಕಲನದ ಆರಂಭದಲ್ಲಿ ಲೇಖಕರು "ನಿಮಗೆ ತಲೆನೋವಾಗುವ ಮುನ್ನ..." ಎನ್ನುತ್ತಾ ಓದುಗರ ಜೊತೆಗೆ ಕೃತಿಯ ಹಿನ್ನೋಟವನ್ನು ಹಂಚಿಕೊಂಡಿದ್ದಾರೆ.

"ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಅಶು ಉಪಸ್ಥಿತಿ ಇದ್ದೇ ಇರುತ್ತಿತ್ತು. ನನ್ನ ಊರು ಮಡಿಕೇರಿಯ ಭಾಗಮಂಡಲದಲ್ಲಿ ತಿರುಗಾಡುವುದು, ಅಲ್ಲಿ ಕಾಡಿನಲ್ಲಿ ಚಾರಣ, ತಲಕಾವೇರಿಯಲ್ಲಿ ಸ್ನಾನ. ಇವೆಲ್ಲಾ ನಾವು ಜೊತೆಯಾಗೇ ಮಾಡಿದೆವು" ಎಂದೂ, "ಭಾಗಮಂಡಲದ ಮಂಜು ಮುಸುಕಿದ ವಾತಾವರಣದಲ್ಲಿ, ಚುಮುಚುಮು ಚಳಿಯಲ್ಲಿ ನಮ್ಮ ನಡುವೆ ಹರಿದಾಡಿದ ಚುಟುಕುಗಳ ನಾ ಹೇಗೆ ಮರೆಯಲಿ ? ಓದಿದ ಪುಸ್ತಕಗಳ ವಿಮರ್ಶೆ, ಹಳೆಯ ಚಲನಚಿತ್ರಗಳ ಹಾಡುಗಳ ಸವಿಯನ್ನು ಸವಿದವನೇ ಬಲ್ಲ"   ಎಂದು ಲೇಖಕರ ಜೊತೆಗಿನ ತಮ್ಮ ಆಪ್ತ ಒಡನಾಟವನ್ನು ನೆನಪು ಮಾಡಿಕೊಂಡ ಗೌತಮ್ ಹೆಬ್ಬಾರ್, "ಇಂಟರ್ ನೆಟ್, ಮೊಬೈಲ್, ಎಸ್ಸೆಮ್ಮೆಸ್, ಚಾಟ್, ವಾಟ್ಸ್ಆಪ್ ಮುಂತಾದುವುಗಳ ನಡುವೆ ಕಳೆದು ಹೋಗದೆ ಈಗಲೂ ಪುಸ್ತಕ, ಗ್ರೀಟಿಂಗ್ ಕಾರ್ಡು, ಒಂದು ಸಣ್ಣ ಮೀಟ್, ದೊಡ್ಡ ಟ್ರಿಪ್ ಗಳನ್ನು ನಂಬುವ ಹುಂಬ ಗೆಳೆಯನೇ ಅಶು" ಎಂದು ಅಶ್ವಿನ್ ರಾವ್ ಅವರ ಲವಲವಿಕೆಯ, ಉತ್ಸಾಹದ, ಮುಗ್ದತೆಯಿಂದ ಕೂಡಿದ ಸ್ನೇಹದ ವ್ಯಕ್ತಿತ್ವವನ್ನು ಬೆನ್ನುಡಿಯಲ್ಲಿ ಬಿಚ್ಚಿಟ್ಟಿದ್ದಾರೆ.

"ಸುಮಾರು 1998ರಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲಿದ್ದ ಸಮಯ. ಸುಮ್ಮನೇ ಬರೆದ ಬಿಡಿ ಬಿಡಿ ಲೇಖನಗಳನ್ನು ಮುದ್ರಣ ರೂಪಕ್ಕೆ ತರುತ್ತಿರುವೆ. ಅಂದಿನ ಅನಿಸಿಕೆ, ಭಾವನೆ, ಬರಹದಲ್ಲಿನ ಬಾಲಿಶತನವನ್ನೆಲ್ಲಾ ನಾನು ಮತ್ತೆ ತಿದ್ದಲು ಹೋಗಿಲ್ಲ. ಅಂದು ಯಾವ ಮೂಡ್ ನಲ್ಲಿ ಬರೆದೆನೋ ಅದೇ ರೀತಿ ಅದನ್ನು ಪುಸ್ತಕ ಮಾಡಲು ಹೊರಟಿರುವೆ. ನಾನು ಕಾಲೇಜ್ ಜೀವನದಲ್ಲಿ ಅನುಭವಿಸಿದ ಸವಿ ಸವಿ ನೆನಪುಗಳು, ಕಹಿ ಭಾವನೆಗಳನ್ನೆಲ್ಲಾ ಇಲ್ಲಿ ತೆರೆದಿಟ್ಟಿರುವೆ. ನಿಮಗೆ ಇಷ್ಟವಾಗುತ್ತೋ ಗೊತ್ತಿಲ್ಲ. ಆದರೆ ನನ್ನ ಮನಸ್ಸು ಹಗುರವಾಗಿದೆ" (ನಿಮಗೆ ತಲೆನೋವಾಗುವ ಮುನ್ನ...) ಎಂದು ಆರಂಭದಲ್ಲಿ ಹೇಳಿಕೊಂಡಿರುವ ಅಶ್ವಿನ್ ರಾವ್ ಅವರ ಈ ಕೃತಿಯಲ್ಲಿ ಒಟ್ಟು 19 ಲೇಖನಗಳಿವೆ. ಇವುಗಳಲ್ಲಿ ನಾಲ್ಕು ಕಥೆಗಳು, ಒಂದು ಹಾಸ್ಯ ಲೇಖನ ಮತ್ತು ಪ್ರವಾಸ ಕಥನವೂ ಇದೆ.

"ಡಿಸೆಂಬರ್ 31 ಯಾಕೆ ?" , ಸಂಕಲನದ ಮೊದಲ ಲೇಖನ. ಸಂಕಲನದ ಶೀರ್ಷಿಕೆಯ ಲೇಖನವೂ ಹೌದು. ಎಲ್ಲರೂ ಹೊಸವರ್ಷದ ದಿನವಾದ ಜನವರಿ ಒಂದನೇ ತಾರೀಕಿಗೆ ಆದ್ಯತೆ ನೀಡುವವರೇ. ಆದರೆ, ಲೇಖಕರು ಇಲ್ಲಿ ಹೇಳುವುದು, ಯಾವತ್ತೂ ಹೊಸ ನಿರೀಕ್ಷೆಗಳಿರುವುದು, ಮೂಡುವುದು ಡಿಸೆಂಬರ್ 31ಕ್ಕೆ ಎಂದು. "ಒಂದು ನಿರೀಕ್ಷೆ ಬದುಕಿನಲ್ಲಿ ಅತ್ಯಂತ ಅಮೂಲ್ಯವಾಗಿರುವುದು. ನಿರೀಕ್ಷೆಯ ನಡುವೆಯೇ ನಾವು ಬದುಕಿರುತ್ತೇವೆ. ನಿರೀಕ್ಷೆಗಳು ನಮ್ಮನ್ನು ಬಹುಮುಖ್ಯವಾಗಿ ಜೀವಂತವಿಡುತ್ತದೆ ಎಂದು ನಂಬಿದವನು ನಾನು", ಆದ ಕಾರಣ, ಡಿಸೆಂಬರ್ 31ನೇ ತಾರೀಕಿಗೇ ತಾನು ಮಹತ್ವ ನೀಡುವುದಾಗಿ ಸಕಾರಣವಾಗಿ ಲೇಖಕರು ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ಈ ಪ್ರತಿಪಾದನೆಗೆ ಲೇಖಕರು ಬಳಸಿಕೊಂಡದ್ದು ತಮ್ಮದೇ ಜೀವನದ ಕೆಲವು ಮೆಲುಕುಗಳನ್ನು. ಇದಕ್ಕೆ ಪೂರಕವಾದ ವಿಷಯಗಳೇ ಇರುವ ಇನ್ನೊಂದು ಲೇಖನವೂ (ಡಿಸೆಂಬರ್ 31ರ ಒಂದು ರಾತ್ರಿ) ಸಂಕಲನದಲ್ಲಿದೆ.

ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಯಾಗಿ ಭಾಗಿಯಾಗುತ್ತಿದ್ದ ಎನ್ ಎಸ್ ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಕ್ಯಾಂಪ್ ಗಳಲ್ಲಿ ಆದ ಅನುಭವದ ಹಿನ್ನೆಲೆಯಲ್ಲಿ "ಕಳೆದು ಹೋದ ಗೆಳತಿಯ ನೆನಪು ಮಾಡುತ್ತಾ..." ಲೇಖನ ಮೂಡಿಬಂದಿದೆ. ಕೆಲವೇ ಸಮಯದಲ್ಲಿ ಆತ್ಮೀಯಳಾದ ವಂದನಾ, ವಿಧಿಯಾಟಕ್ಕೆ ಬಲಿಯಾಗಿ ಹೋದ ಬಗ್ಗೆ ಈ ಲೇಖನದಲ್ಲಿ ವೇದನೆಯಿಂದ ಬರೆದಿದ್ದಾರೆ ಅಶ್ವಿನ್ ರಾವ್.

"ಮಾನವೀಯ ಸಂಬಂಧಗಳು ಶಿಥಿಲವಾಗುತ್ತಿವೆಯೋ ?", ಶೀರ್ಷಿಕೆಯೇ ಹೇಳುವಂತೆ ಸ್ನೇಹವನ್ನು, ಪ್ರೀತಿಯನ್ನು, ಆತ್ಮೀಯತೆಯನ್ನು ಬಯಸುವ ಮುಗ್ದ ಮನಸ್ಸಿನ ತುಡಿತ ಮಿಡಿತಗಳ ಕಳವಳದ ಪ್ರತಿಬಿಂಬವಾಗಿದೆ. ಯಾಂತ್ರಿಕತೆಯಿಂದ ಕೂಡಿದ, ಸಂಕುಚಿತ ದೃಷ್ಟಿಕೋನದ ಜನರ ಜೀವನ ಕ್ರಮದ ಪರಿಣಾಮವಾಗಿ ಮಾನವೀಯ ಸಂಭಂಧಗಳು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಶಿಥಿಲಗೊಳ್ಳುತ್ತಾ ಹೋಗುತ್ತಿರುವ ಕಾಲದಲ್ಲಿ ಮಾನವೀಯ ಸಂಬಂಧವನ್ನು ಉಳಿಸಿ, ಬೆಳೆಸಿ ಗಟ್ಟಿಮಾಡಿಕೊಳ್ಳಬೇಕಾಗಿರುವುದು ಕಾಲದ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಲೇಖನ ಅಪಾರ ಕಾಳಜಿಯಿಂದ ಕೂಡಿದೆ. ಲೇಖಕರ ಒಳತೋಟಿಗಳೂ ಇಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ.

"ಮಂಜು ಕರಗಿದಾಗ ರಾಜಿ ಇರಲಿಲ್ಲ!" , "ಪ್ರಿಯ ಗೆಳತಿಗೆ..." , "ಮರೆಯಲಾಗದ ಆ 7 ದಿನಗಳು" ಲೇಖನಗಳು ಒಂದಕ್ಕೆ ಪೂರಕವಾಗಿ ಇನ್ನೊಂದು ಬರೆದಂತಿದೆ. ಎನ್ ಎಸ್ ಎಸ್ ಕ್ಯಾಂಪ್ ನ ಸಿಹಿ ಅನುಭವಗಳು, ಕಾಲೇಜು ದಿನಗಳಲ್ಲಿನ ಸ್ನೇಹ, ಗೆಳೆಯ - ಗೆಳತಿಯರೊಂದಿಗಿನ ಒಡನಾಟ, ಒಡನಾಟದ ಕಾರಣ ಹುಟ್ಟಿಕೊಳ್ಳುವ ಒಂದು ಅವಿನಾಭಾವ ಸಂಬಂಧ ಇತ್ಯಾದಿಗಳ ಭಾವ ಸಂದನೆ ಸ್ಪುರಣವಾಗಿದೆ.

"ಮೋಸ ?!" , "ಅಂತರಾಳ" , "ಮನದಾಳದಿಂದ..." ಮತ್ತು "ಕಥೆಯಾದಳಾ ಕಪ್ಪುಹುಡುಗಿ" ಎಂಬ ನಾಲ್ಕು ಸಣ್ಣ ಕಥೆಗಳು ಸಂಕಲನದಲ್ಲಿದೆ. ಇವುಗಳು "ಕರ್ಮವೀರ" , "ವಿದ್ಯಾರ್ಥಿ ವಾಣಿ" , "ಅತಿಥಿ" ಮತ್ತು "ಕಥಾಲೋಕ" ಪತ್ರಿಕೆಗಳಲ್ಲಿ 1996, 1997, 2011ರಲ್ಲಿ ಪ್ರಕಟಗೊಂಡ ಕಥೆಗಳಾಗಿವೆ.

ದನ, ಎಮ್ಮೆ, ಆಡುಗಳು ಕಪ್ಪಾದರೂ, ಇವುಗಳ ಹಾಲು ಕಪ್ಪಾಗಿರುವ ಬದಲು ಬಿಳಿಯಾಗಿಯೇ ಇರುವ ಹಾಗೆ; ಗಂಡಸರದ್ದಾಗಲೀ, ಹೆಂಗಸರದ್ದಾಗಲೀ ಅವರ ಮೈ ಬಣ್ಣ ಕಪ್ಪು ಎಂಬುದರ ಆಧಾರದ ಮೇಲೆ ಅವರನ್ನು ನೋಡುವ ದೃಷ್ಟಿಕೋನದಲ್ಲಿನ ದೋಷದ ಬಗ್ಗೆ ಕಥೆಯಾದಳಾ ಆ ಕಪ್ಪು ಹುಡುಗಿ ಕಥೆ ಮೂಡಿಬಂದಿದೆ. ಇದನ್ನೋದುವಾಗ ಇದೊಂದು ಸತ್ಯ ಕಥೆ ಇರಬಹುದೇ ಎಂದು ಅನಿಸುತ್ತದೆ. ಕಥೆಗಾರರು, ಕಪ್ಪು ಮೈಬಣ್ಣದ ಕುಳ್ಳಗಿನ ಹುಡುಗಿಯ ಶ್ರೇಷ್ಟ ವ್ಯಕ್ತಿತ್ವವನ್ನು, ಅಪಾರ ಮಾನವೀಯ ಗುಣಗಳನ್ನೂ ಈ ಕಥೆಯಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ. ವಿಶೇಷವೆಂದರೆ, ಕಥೆಯಲ್ಲಿ ಕಪ್ಪು ಮೈ ಬಣ್ಣದ ಹುಡುಗಿಯನ್ನು ನಕಾರಾತ್ಮಕ ದೃಷ್ಟಿಯಲ್ಲಿ ನೋಡುವ ವ್ಯಕ್ತಿ ಇಲ್ಲಿ "ನಾನು" ಎಂಬ ಕಥೆಗಾರರೇ ಆಗಿರುವುದು. ಕೊನೆಗೆ ಈ ನಾನು ಪಶ್ಚಾತ್ತಾಪದಿಂದ ನೊಂದುಕೊಳ್ಳುವುದು ಇತ್ಯಾದಿ ಓದುಗನನ್ನು ಕಥಾಲೋಕದಲ್ಲಿಯೇ ಮುಳುಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.

ಸಂಕಲನದಲ್ಲಿರುವ ನಾಲ್ಕೂ ಸಣ್ಣ ಕಥೆಗಳ ಪಾತ್ರ ಚಿತ್ರಣ, ಶೈಲಿ ಇತ್ಯಾದಿಗಳನ್ನು ಗಮನಿಸಿದರೆ, ಲೇಖಕ ಅಶ್ವಿನ್ ರಾವ್ ಅವರು ಪ್ರಯತ್ನ ಪಟ್ಟು ಕಥೆ ಬರೆಯುವುದನ್ನು ಮುಂದುವರಿಸಿದರೆ, ಉತ್ತಮ ಕಥೆಗಾರರಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಧೈರ್ಯದಿಂದ ಹೇಳಬಹುದು.

"Life is More important then work" ಎಂಬ ಲೇಖನ ಗೆಳೆಯನೊಬ್ಬನ ಸಹೋದರಿ ಅವಘಡಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಯಲ್ಲಿನ ಚಿಕಿತ್ಸೆಗಾಗಿ ರಕ್ತದಲ್ಲಿನ ಪ್ಲಾಸ್ಮಾವನ್ನು ಆಕೆಗೆ ಒದಗಿಸಲು ಶ್ರಮಿಸಿದ್ದು ಮತ್ತು ಆಗ ಒದಗಿಬಂದ ಅಪರಿಚಿತ ವ್ಯಕ್ತಿಗಳ ಮಾನವೀಯ ಗುಣಗಳ ಮೇಲೆ ಬರೆದ ಲೇಖನ. ಲೇಖಕರು ಒಬ್ಬ ಮಾನವೀಯ ಅಂತಃಕರಣವಿರುವ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತರಾಗಿ ಇಲ್ಲಿ ಓದುಗನ ಹೃದಯಕ್ಕೆ ಲಗ್ಗೆ ಇಡುತ್ತಾರೆ.

1995, ಎಪ್ರಿಲ್ 16ರ "ಹೊಸಸಂಜೆ" ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಬರಹ "ಹೊಟೇಲ್ ಸಂದರ್ಶನ" , "ಕಳೆದುಹೋದ ಗೆಳೆಯ ಮತ್ತೆ ಸಿಕ್ಕಿದಾಗ...", " ನೀರವ ರಾತ್ರಿಗಳಲ್ಲಿ ಏಕಾಂತವಾಗಿ ಅಲೆಯಬೇಕೆಂದು ಅನಿಸಿದೆ !" ,  "ವಿರಾಮದ ಮನೆ ಪ್ರಯಾಣ" ಇತ್ಯಾದಿ ಲೇಖನಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.

"ಸರಕಾರವೇ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿದರೆ ಹೇಗೆ ?" , 2012ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟಿತ ಲೇಖನ. ಇಂಗ್ಲೀಷ್ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸುತ್ತದೆ. ಸರಕಾರವೇ ಜವಾಬ್ದಾರಿ ತೆಗೆದುಕೊಂಡು ಕನ್ನಡ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಒಂದು ಮಾಧ್ಯಮವಾಗಿ ಕಲಿಸಬೇಕೆಂಬ  ಸಲಹೆ ನೀಡಿದ ಒಂದು ಅತ್ಯುತ್ತಮ ಶೈಕ್ಷಣಿಕ ಸಂಬಂಧೀ ಲೇಖನ. ಮಕ್ಕಳು ಮತ್ತು ಭಾಷೆಯ ಮೇಲಿನ ಲೇಖಕರಲ್ಲಿರುವ ಪ್ರೀತಿ, ಕಾಳಜಿಗೆ ಈ ಲೇಖನ ಮಾದರಿಯಾಗಿದೆ.

"ಅನಿಸುತಿದೆ ಯಾಕೋ ಇಂದು..." ಒಂದು ಆಪ್ತ ಪ್ರವಾಸ ಕಥನ. ಕೇರಳದ ಕಾಞಾಂಗಾಡು, ಪರಶಿನಕಡವು, ಸ್ನೇಕ್ ಪಾರ್ಕ್ ಇತ್ಯಾದಿ ಸ್ಥಳಗಳಿಗೆ ಹೋದ, ಹೋಗಿ ಬರುವ ಮುನ್ನ ಜೊತೆಗಿದ್ದ ಒಡನಾಡಿಗಳೊಂದಿಗೆ ಅನುಭವಿಸಿದ ತಮ್ಮ ಗಮ್ಮತಿನ ಅನುಭವಗಳನ್ನು ವಿವಿಧ ವೈವಿಧ್ಯಮಯ ಮಾಹಿತಿಗಳೊಂದಿಗೆ ಇಲ್ಲಿ, ಕೇರಳದಲ್ಲಿ ಲೇಖಕರು ಸವಿದ ಮೀನಿನ ಫ್ರೈ ಮತ್ತು ಬೊಂಡದ ಸವಿಯಷ್ಟೇ ಸವಿಸವಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನೋದುತ್ತಾ ಹೋಗುವಾಗ, ಮೈಸೂರಿನ ಆರ್. ರಂಗಸ್ವಾಮಿ  (ಕೆ.ಎ.ಎಸ್) ಅವರ "ಮಲೆನಾಡಿನಲ್ಲಿ ಸುತ್ತಾಡಿದಾಗ"    ನೆನಪಾಗುತ್ತದೆ.

ಕೆ. ಪಿ. ಅಶ್ವಿನ್ ರಾವ್ , ಮಂಗಳೂರು ಅವರು ಮೊನ್ನೆ ಮೊನ್ನೆಯವರೆಗೂ "ಸುಜಾತ ಸಂಚಿಕೆ" ಎಂಬ ಬಹು ಅಮೂಲ್ಯ ಕೃಷಿ ಸಂಬಂಧಿ ಮಾಸಿಕದ ವ್ಯವಸ್ಥಾಪಕರೂ, ಉಪ ಸಂಪಾದಕರೂ ಆಗಿದ್ದವರು. ಪ್ರಸ್ತುತ "ಸಂಪದ.ನೆಟ್" ನ ನಿರ್ವಾಹಕರಾಗಿದ್ದಾರೆ. ಇವರು ವಿದ್ಯಾರ್ಥಿಯಾಗಿದ್ದಾಗ, ಅಂದರೆ, ಒಂದೆರಡು ದಶಕಗಳ ಹಿಂದೆ ಬರೆದ ಬಿಡಿ ಬಿಡಿ ಬರೆಹಗಳನ್ನು ಒಟ್ಟು ಸೇರಿಸಿದ ಪ್ರಕಟಿಸಿದ ಸಂಕಲನವಿದು. ವಿದ್ಯಾರ್ಥಿ ವಯಸ್ಸಿನಲ್ಲಿ ಅವರ ಮನದಲ್ಲಿ  ಮೂಡಿದ ಮುಗ್ದ ಭಾವಗಳ ಕಲರವವೇ ಇಲ್ಲಿನ ವೈವಿಧ್ಯಮಯ ಬರೆಹಗಳಲ್ಲಿ ಸರಳವಾಗಿ ಮತ್ತು ಅಷ್ಟೇ ಸಹಜವಾಗಿ ಲವಲವಿಕೆಯೊಂದಿಗೆ ಮೂಡಿಬಂದಿದೆ. ಇಲ್ಲಿನ ಬಹುತೇಕ ಲೇಖನಗಳನ್ನೋದುವಾಗ, ಓದುತ್ತಿರುವ ಪ್ರತಿಯೊಬ್ಬನ ಮನಃಪಟಲದಲ್ಲೂ ತನ್ನ ವಿದ್ಯಾರ್ಥಿ ಜೀವನದ ದಿನಗಳು ಹಾದುಹೋಗುವುದರಲ್ಲಿ ಅನುಮಾನವಿಲ್ಲ.

~ *ಶ್ರೀರಾಮ ದಿವಾಣ*