ಡಿಸ್ನಿ ಲ್ಯಾಂಡ್ ನ, ’ಸುಂದರ ಮತ್ಸ್ಯಕನ್ಯೆ’ !

ಡಿಸ್ನಿ ಲ್ಯಾಂಡ್ ನ, ’ಸುಂದರ ಮತ್ಸ್ಯಕನ್ಯೆ’ !

ಬರಹ

ಮರ್ಮೇಡ್ ಕಥಾಪ್ರಸಂಗ, ಇಂದು ಅಪ್ರಸ್ತುತ ; ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ! ಮರ್ಮೇಡ್ ಗಳ ಬಗ್ಗೆ ಅದೆಷ್ಟು ಜನ ಸಮುದ್ರಯಾನ ಮಾಡಿದ ಧೀರ ನಾವಿಕರು, ನಿಜಕ್ಕೂ ತಲೆಯಮೇಲೆ ಹೊಡೆದಂತೆ ಕೊಟ್ಟಿರುವ ಮಾಹಿತಿಗಳು ಅನನ್ಯ.

ಮನುಷ್ಯನಿಗೆ ಈ ಅಗಾಧ-ವಿಶ್ವದ ಅರಿವು ಇಲ್ಲದಿದ್ದಾಗ, ವಿಜ್ಞಾನ ಇನ್ನೂ ಜನಜೀವನದಲ್ಲಿ ಪಾದಾರ್ಪಣೆ ಮಾಡದಿದ್ದಾಗ, ಕೆಲವೊಂದು ಆಗುಹೋಗುಗಳಬಗ್ಗೆ, ನಿರ್ಧರಿಸುವುದು, ಯಕ್ಷಪ್ರಶ್ನೆಯಾಗಿ, ಬಹುಕಾಲದವರೆಗೆ, ರೂಢಿಯಲ್ಲಿತ್ತು. ಆತಂಕ, ಗಾಬರಿ, ವಿಸ್ಮಯಗಳನ್ನು ತಂದಿತ್ತು. ದೂರದ ದೇಶಗಳಿಗೆ ಹೋಗಿ, ನೆಮ್ಮದಿಯಿಂದ ಜೀವನ ನಡೆಸುವ ಆಶೆ ಎಲ್ಲರದು !

ಪೋರ್ಚುಗೀಸ್, ಡಚ್, ಸ್ಪಾನಿಷ್ ದೇಶದಜನಗಳು, ಹೊಸದೇಶ, ಹಾಗೂ ಭೂಭಾಗಗಳನ್ನು ಅರಸುತ್ತಾ, ಸಮುದ್ರದಮೇಲೆ ಯಾತ್ರೆಕೈಗೊಂಡರು.ನಂತರ ಬ್ರಿಟಿಷ್, ಫ್ರೆಂಚ್ ದೇಶಗಳೂ, ಈ ಅಭಿಯಾನವನ್ನು ಮುಂದುವರೆಸಿದವು. ಬಹಳಹಿಂದೆ, ಪ್ಲಿನಿ, ಮಾರ್ಕೋಪೋಲೋ, ಅಲೆಕ್ಸಾಂಡರ್, ಮುಂತಾದವರು, ತಮ್ಮ ಹಡಗುಗಳಲ್ಲಿ ವಿಶ್ವವನ್ನು ಶೋಧಿಸಲು ಪ್ರಯತ್ನಮಾಡಿದ್ದರು. ಕೊಲಂಬಸ್, ಅಮೆರಿಕವನ್ನು, ಕಂಡುಹಿಡಿದದ್ದೂ ಆಕಸ್ಮಿಕ. ಅವನು ಭಾರತವನ್ನು ಹುಡುಕಿಕೊಂಡು ಹೋಗಿದ್ದವನು, ವೆಸ್ಟ್ ಇಂಡೀಸ್, ತಲುಪಿದನು. ಹೀಗೆ ಪ್ರಯಾಣಿಸುವಾಗ ಸುಗಮವಾಗಿ ಆದ ಯಾನವನ್ನು ದೇವರ ಆಶೀರ್ವಾದ, ಅಥವಾ ತಮ್ಮ ’ನಸೀಬ್,’ ಎಂದು ಮಾತ್ರಾ ಹೇಳಬಹುದಾದಕಾಲವದು. ಹೆಚ್ಚಿನ ಮಾಹಿತಿಗಳು, ತಂತ್ರಜ್ಞಾನ ಯಾರಿಗೂಗೊತ್ತಿರಲಿಲ್ಲ. ಹಿಂದೆಯಾರೋ ಪ್ರಯಾಣಿಸಿದಾಗ ಆದ ಘಟನೆಗಳೇ ಮಾನದಂಡವಾಗಿದ್ದವು. ಹಾಗೆ ಪ್ರಚಲಿತವಾಗಿದ್ದ ಹಲವಾರು ಕಟ್ಟುಕಥೆಗಳಿಗೆ ಗ್ರಾಸವಾಗಿದ್ದದ್ದು, ’ಮರ್ಮೇಡ್,’ ಅಥವಾ, ’ಮತ್ಸಕನ್ಯೆಯ ವುತ್ತಾಂತ ! ಇದೇ ತರಹ ಗಂಡಸೂ(ಮತ್ಸ್ಯಪುರುಷ) ಜನರನ್ನು ಮರುಳುಮಾಡಿದ ಹಲವಾರು ದೃಷ್ಟಾಂತಗಳಿವೆ.

ಸಮುದ್ರಯಾನ ಮಾಡುವ ನಾವಿಕರಿಗೆ ಈತರಹದ ಕಥೆಗಳಲ್ಲಿ ನಂಬಿಕೆ ಹೆಚ್ಚು. ಆಗಿನಕಾಲದಲ್ಲಿ ಹುಟ್ಟುಹಾಕಿ, ಗಾಳಿಶಕ್ತಿಯನ್ನೂ ಬಳಸಿ, ಭಗವಂತನ ನಂಬಿಕೆಯಿಂದಲೇ ಸಹಸ್ರಾರು ಮೈಲಿಗಳ ಕಡಲಯಾನ, ಒಂದು ವಿಸ್ಮಯ ಪ್ರಪಂಚವನ್ನೇಸೃಷ್ಟಿಮಾಡಿತ್ತು. ಪ್ರತಿನಾವಿಕನದೂ ಒಂದು ಅನೌಖಿಕ ಅನುಭವ ! ಕಡಲಯಾನ ಮಾಡುವವರ ಸಂಖ್ಯೆಯೂ ತೀರಾ ಕಡಿಮೆ. ಗ್ರೀಕ್ ಕಥೆಗಳ ಪ್ರಭಾವ ಹೆಚ್ಚಾಗಿತ್ತು. ಬ್ಯಾಬಿಲೋನಿಯದ ಪೌರಾಣಿಕ ಕಥೆಗಳು, ಗ್ರೀಕರ, ಸೈರೆನ್ ಮತ್ತು ಟ್ರೈಟನ್ ಗಳು ಬ್ಯಾಬಿಲೋನಿಯದ ಮತ್ಸ್ಯದೇವತೆಗಳು ಅರ್ಧ ಮನುಷ್ಯ ಮೀನಿನ ದೇಹದ ಮರ್ಮೇಡ್ ಗಳ ಬಗ್ಗೆ ಸ್ವಲ್ಪಮಾಹಿತಿ ನೀಡುತ್ತವೆ. ಅತಿಕಡಿಮೆ ಕಡಲ ಸಂಪರ್ಕಹೊಂದಿದ್ದ ಭಾರತದನಾವಿಕರು, ಇವರನ್ನು ಅಪ್ಸರಯೆಂದು ಕರೆಯುತ್ತಿದ್ದರಂತೆ.

ಈ ಕಾಲ್ಪನಿಕ ಕಥೆಗಳು ಬಹಳ ರೋಚಕ. ಸಾಗರದಲ್ಲಿ ನಾವಿಕರಿಗೆ ಕಂಡ ಕಾಲ್ಪನಿಕ, ಗ್ರೀಕ್ ಮತ್ತು ಬ್ಯಾಬಿಲೋನಿಯದಪೌರಾಣಿಕ ಕಥೆಗಳ ಆಧಾರದಮೇಲೆ ತಲೆ, ಹಾಗೂ ದೇಹದಮೇಲ್ಭಾಗವೆಲ್ಲಾ ಸುಂದರ ಯುವ-ಸ್ತ್ರೀಯದು. ಸೊಂಟದಿಂದ ಕೆಳಭಾಗ, ಮೀನಿನ ಆಕಾರದ ದೇಹ. ಈ ಮರ್ಮೇಡ್ ಗಳು, ಸಮುದ್ರ, ಜಲಾಶಯ, ಸರೋವರ, ಅಥವಾ ಕಲ್ಲುಬಂಡೆಯಮೇಲೆ ಮೋಹಕಭಂಗಿಯಲ್ಲಿ ಮಲಗಿ, ಒಂದು ಕೈನಲ್ಲಿ ಕನ್ನಡಿಯನ್ನು ಹಿಡಿದು ನೋಡುತ್ತಾ, ಇನ್ನೊಂದು ಕೈನಲ್ಲಿ ತಲೆಗೂದಲನ್ನು ಓರಣವಾಗಿ ಬಾಚಿಕೊಳ್ಳುವ ಭಂಗಿ, ಸಾಮಾನ್ಯವಾಗಿತ್ತಂತೆ ! ಇವರು ಭವಿಷ್ಯವನ್ನೂ ನುಡಿಯಬಲ್ಲರು. ’ಸೀಲ್,’ ಗಳೂ ಅವರಜೊತೆಯಲ್ಲಿ ಬರುತ್ತಿದ್ದವಂತೆ.

ಕೆಲವು ಪೌರಾಣಿಕ-ಕಥೆಗಳಪ್ರಕಾರ, ಈ ದಿವ್ಯ-ಸುಂದರ ಕನ್ಯೆಯರು, ಇಂಪಾದ ಹಾಡುಗಳನ್ನು ಹಾಡುತ್ತಾ , ತಮ್ಮ ಹಾವ-ಭಾವಗಳಿಂದ ಸಮುದ್ರಪಯಣಿಗರನ್ನು ಮರುಳುಗೊಳಿಸಿ, ದಾರಿತಪ್ಪಿಸಿ, ಸಮುದ್ರದ ಅಡಿಗೆ ಕರೆದೊಯ್ಯುತ್ತಾರಂತೆ. ಅಲ್ಲಿನ ತಮ್ಮ ನೆಲೆಯಲ್ಲಿ ಜನರನ್ನು ಬಂದಿಗಳಾಗಿ ಇಡುತ್ತಾರಂತೆ. ಕೆಲವರಂತೂ ಈ ಕನ್ಯೆಯರನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು, ತಮ್ಮ ಅಳಿವುಸನ್ನಿಹಿತವಾಯಿತೆಂದು, ತಮ್ಮ ದುರಾದೃಷ್ಟದ ಗಳಿಗೆಗಳು ಹತ್ತಿರವಾದವೆಂದು, ನಿರ್ಧರಿಸುತ್ತಿದ್ದರು.

ಈಗ ನಾವು ಕಾಣುವ ’ಮರ್ಮೇಡ್’ ಯುವತಿಯರು, ತಮ್ಮ ಅದ್ಭುತ ರೂಪದಿಂದ ದಾರಿಹೋಕರ ಹೃದಯವನ್ನು ಸೂರೆಗೊಳ್ಳುತ್ತಾರೆ, ನಿಜ. ಆದರೆ ಅವರು ನಮ್ಮನ್ನು ಸರ್ವನಾಶಮಾಡುವ ಅಪಾಯವಿಲ್ಲ.ಅವರೊಡನೆ ಕುಳಿತು ಫೋಟೊ ತೆಗೆಸಿಕೊಳ್ಳಬಹುದು. ’ಆಟೋಗ್ರಾಫ್,’ ಪಡೆಯಬಹುದು. ’ ಡಿಸ್ನಿ ಲ್ಯಾಂಡ್,’ ನಂತಹ ಒಂದು ಪ್ರಖ್ಯಾತ-ಪ್ರದೇಶದ ಶೋಭೆಹೆಚ್ಚಿಸಲು ಅವರು ಅಗತ್ಯ ಕೂಡ !

ಡಿಸ್ನಿ ಲ್ಯಾಂಡ್ ನಲ್ಲಿ ಗುಹೆಯಾಕಾರದ ಕಲ್ಲಿನ ಮನೆಯೊಳಗೆ ಕುಳಿತಿದ್ದ ಮರ್ಮೇಡ್ , ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಳು. ಪಕ್ಕದಲ್ಲೇ ಡಿಸ್ನಿಲ್ಯಾಂಡ್ ನ ಅಧಿಕೃತ ಫೋಟೋಗ್ರಾಫರ್, ಇದ್ದು, ಮೊದಲೇ ನಿರ್ಣಯವಾಗಿರುವೆ ವಿಶೇಷಭಂಗಿಗಳಲ್ಲಿ ಆಕೆಯಜೊತೆ ಕೂಡಲು ಸೂಚಿಸಿ, ಫೋಟೊ ತೆಗೆಯುತ್ತಾನೆ. ಆತನಲ್ಲದೆ ಬೇರೆಯಾರೂ ಫೋಟೋ ತೆಗೆಯುವಂತಿಲ್ಲ !

ಬೆಳಗಿನಿಂದ ೫-೬ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಂತು ಸುಸ್ತಾಗಿದ್ದ ನಮಗೆ, ಪುನಃ ಕ್ಯೂನಲ್ಲಿ ನಿಂತು, ಆ ಮತ್ಸ್ಯಕನ್ಯೆಯ "ಆಟೋಗ್ರಾಫ್,’ ಪಡೆಯುವ ತ್ರಾಣವಿರಲಿಲ್ಲ. ಆಗತಾನೇ ಪುಷ್ಕಳ ಭೋಜನಮಾಡಿಮುಗಿಸಿದ್ದೆವು. ಮೇಲೆ ಏಳಲಾರದಷ್ಟು ಸೋಮಾರಿತನ ಬಂದಿತ್ತು. ನನಗಂತೂ, ಒಂದುಕಡೆ ಕಣ್ಣೆಳೆದುಕೊಂಡು ಹೋಗುತ್ತಿತ್ತು ! ಆದರೂ ಜ್ಞಾಪಕಾರ್ಥವಾಗಿರಲೆಂದು ದೂರದಿಂದ ಒಂದು ಫೋಟೋ ತೆಗೆದುಕೊಂಡೆ. ಯಾರೂ ಅದನ್ನು ಗಮನಿಸಲಿಲ್ಲ !

-ಚಿತ್ರ-ವೆಂ.