ತಂಗಲಿಯ ಮಹಾನ್ ಚೇತನ
ಹಾಗೇ ಸುಮ್ಮನೆ
ಕಡೂರಿನ ಬಳಿಯಲ್ಲಿರುವ ಒಂದು ಗ್ರಾಮ ತಂಗಲಿ. ಪಾಂಡವರೊಮ್ಮೆ ಇಲ್ಲಿ ತಂಗಿದ್ದರು. ಆದ್ದರಿಂದ ತಂಗಲಿ ಎಂಬ ಹೆಸರು. ತೆಂಗಲೆ ಶ್ರೀ ವೈಷ್ಣವರ ಶ್ರದ್ಧಾಕೇಂದ್ರ. ಇಲ್ಲಿದೆ ಜಾಗೃತ ನರಸಿಂಹ ವಿಗ್ರಹ
ಇಲ್ಲೊಬ್ಬರಿದ್ದರು. ಅವರನ್ನೆಂದಿಗೂ ಕಡೂರು ತಾಲ್ಲೂಕು ಮರೆಯುವಂತಿಲ್ಲ. ತಂಗಲಿಯಲ್ಲಂತೂ ಪ್ರಾತ:ಸ್ಮರಣೀಯರು ಅವರು.
ಅವರು ಟಿ.ಎನ್.ಕೃಷ್ಣಸ್ವಾಮಿ ಅಯ್ಯಂಗಾರ್. ಜನರ ಬಾಯಲ್ಲಿ ತಂಗ್ಲಿ ಸಾವ್ಕಾರ್ರು. ಹಿರಿಯರ ಬಾಯಲ್ಲಿ ಕಿಟ್ಸಾಮಪ್ನೋರು. ಅತ್ಯಂತ ಶ್ರೀಮಂತ, ನಿಗರ್ವಿ,ಅತ್ಯಂತ ಶೋತ್ರೀಯ. ಮಾನವತೆಯ ಸಾಕಾರವಾಗಿ ಬಾಳಿ ಬದುಕಿದ ಮಹಾನ್ ಚೇತನವದು.
ಆಚಾರ್ಯ ವಿನೋಬಾ ಭಾವೆ ಸರ್ವೋದಯ ಚಳುವಳಿಯಲ್ಲಿ ಕಡೂರು ಜಿಲ್ಲೆಗೆ ಬಂದಾಗ ಇಡೀ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಭೂಮಿ ದಾನ ಮಾಡಿದ್ದು ಕೃಷ್ಣಸ್ವಾಮಿ ಅಯ್ಯಂಗಾರ್ರು. ಕಡೂರಿನಲ್ಲಿ ಇಂದಿಗೂ ಕೊಡುಗೈ ದಾನಿಗಳು ಯಾರೆಂದರೆ ಅದರಲ್ಲಿ ತಂಗಲಿ ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ಹೆಸರು ಮೊಲನೆಯದಾಗಿರುತ್ತದೆ.
ಅತ್ಯಂತ ಮಹಾನ್ ದೈವಭಕ್ತರಾಗಿದ್ದ ತಂಗಲಿ ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ತಾತ ಶೇಷಯ್ಯಂಗಾರ್ ಅವರ ಕಾಲದಿಂದಲೂ ಮೈಸೂರಿನ ಪರಕಾಲ ಮಠ, ಮೇಲುಕೋಟೆ ನರಸಿಂಹ ಮುಂತಾದ ಕಡೆ ಭಕ್ತಿಭಾವ ಬೆಳೆಸಿಕೊಂಡಿದ್ದರು. ತಂಗಲಿ ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ತಮ್ಮ ತಾತನ ಹೆಸರಿನಲ್ಲಿ ನಡೆಯುತ್ತಿದ್ದ "ತಂಗಲಿ ಶೆಷಯ್ಯಂಗಾರ್ ಧರ್ಮಸಂಸ್ಥೆ" ಎಂಬ ಟ್ರಸ್ಟ್ ಮೂಲಕ ಆಗ 10 ನೇ ತರಗತಿ ಓದಲು ಮತ್ತು ಪರೀಕ್ಷೆ ಬರೆಯಲು ಕಡೂರಿಗೆ ಬರುತ್ತಿದ್ದ ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಮಾಡುತ್ತಿದ್ದರು. ಅದುಇಂದಿಗೂ ತಂಗಲಿ ಛತ್ರ ಎಂದೇ ಪ್ರಸಿದ್ಧವಾಗಿದ್ದು, ಆ ರಸ್ತೆಗೆ ಛತ್ರದಬೀದಿ ಎಂದೇ ಹೆಸರಾಗಿದೆ.ಕಡೂರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸಿದ್ದು ಇವರೆ. ಆಗ ಅದಕ್ಕೆ ಅಡಿಗಲ್ಲು ಹಾಕಲು ಬಂದಿದ್ದ ಮೈಸುರಿನ ದಿವಾನ್ ಸರ್.ಮಿರ್ಜಾ ಇಸ್ಮಾಯಿಲ್ ಅವರಿಗೆ ಬಿನ್ನವತ್ತಳೆ ಅರ್ಪಿಸಿದ್ದು ಸಾಹುಕಾರರು. ಮೈಸೂರು ಅರಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸಾಹುಕಾರರಿಗೆ ಅಹ್ವಾನ ಖಾಯಂ. ಕೃಷ್ಣಸ್ವಾಮಿ ಅಯ್ಯಂಗಾರರ ತಾತ ಶೇಷಯ್ಯಂಗಾರ್ ಅವರ ಕಾಲದಿಂದಲೂ ಇದು ವಾಡಿಕೆ. ಇಂದಿಗೂ ಆ ಆಹ್ವಾನ ಪತ್ರಿಕೆಗಳೆಲ್ಲ ಅವರ ಮನೆಯಲ್ಲಿದೆ. ತಂಗಲಿ ಸಾಹುಕಾರ್ ಕೃಷ್ಣಸ್ವಾಮಿ ಅಯ್ಯಂಗಾರರ ದಿವಾನ್ ಖಾನೆಯಲ್ಲಿ ಸಾಹುಕಾರರಿಲ್ಲ. ಆದರೆ ಅದು ಇಂದಿಗೂ ಅದೇ ರೂಪದಲ್ಲಿ ಇದೆ. ಅವರ ನೆನಪಿನಲ್ಲಿ ಅದನ್ನು ಹಾಗೇ ರಕ್ಷಿಸಿದ್ದಾರೆ ಅವರ ಮೊಮ್ಮಗ ಮೋಹನ್. ಅವರ ಮನೆಯೆಂದರೆ ಇಂದಿಗೂ ಗತವೈಭವದ ಜೀವಂತ ಪ್ರತೀಕ.
ಇಂದಿಗೂ ತಂಗಲಿ ಗ್ರಾಮದಲ್ಲಿ ಮರೆಯಲಾಗದ ಮಹಾನ್ ಚೇತನ ಕೃಷ್ಣಸ್ವಾಮಿ ಅಯ್ಯಂಗಾರ್ರು-ತಂಗ್ಲಿ ಸಾವ್ಕಾರ್ರು. ಸಾಹುಕಾರರ ಪತ್ನಿ ಕಮಲಮ್ಮ ನನ್ನ ಮಚ್ಚೇರಿಯವರು.
ಮೈಸೂರು ರಾಜಮನೆತನದ ಜಯಲಕ್ಷ್ಮ್ಮಣ್ಣಿಯವರ ವಿವಾಹ ಆಮಂತ್ರಣ ಮೈಸೂರು ಮಹಾರಾಣಿಯವರ ರೀಜೆಂಟ್ ಅವರಿಂದ ಸಾಹುಕಾರರಿಗೆ ಬಂದ ಪತ್ರಿಕೆ ಇಲ್ಲಿದೆ ನೋಡಿ.