ತಂತ್ರಜ್ಞಾನದ ಯುಗದಲ್ಲೋ ಮೂಢನಂಬಿಕೆಗಳಿಂದ ಹೊರಬರದ ಹಳ್ಳಿಯ ಜನತೆ, ಸಾಂಕ್ರಮಿಕ ರೋಗಕ್ಕೆ ಶ್ವಾನ ಚಿಕಿತ್ಸೆ
ಒಂದು ಕಾಲದಲ್ಲಿ ಜೈನರ ರಾಜಧಾನಿಯಾಗಿ ಮೆರೆದ ಭಟ್ಕಳ ನಗರದಿಂದ ಸುಮಾರು ೨೦ಕಿ.ಮಿ ದೂರದಲ್ಲಿರುವ ಹಿಂದುಳಿದ ಪ್ರದೇಶವೆಂದೇ ಗುರುತಿಸಲ್ಪಡುವ ಹಾಡುವಳ್ಳಿಯ ಕೆಲವು ಪ್ರದೇಶಗಳಲ್ಲಿ ಯಾವುದೋ ಸಾಂಕ್ರಾಮಿಕ ರೋಗವು ಮನೆಮಾಡಿಕೊಂಡಿದ್ದು ಅದೀಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಅಲ್ಲಿನ ಜನತೆಯಲ್ಲಿ ದಿಗ್ಭ್ರಮೆಯನ್ನು ಮೂಡಿಸಿದೆ. ಆತಂಕಿತ ಗ್ರಾಮೀಣ ಜನತೆ ಇದೊಂದು ಭೂತ (ಗಾಳಿ) ಎಂದು ಭಾವಿಸಿ ಮಾಟ ಮಂತ್ರ ಅಥವ ಮತ್ಯಾವುದೋ ಬಾಬಗಳಿಗೆ ಮೊರೆಹೋಗಿರುವ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ಎರಡು ತಿಂಗಳ ಹಿಂದೆ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಯಾಣಿ, ಮೂರ್ಕೋಡಿ,ತೋಟದಮಕ್ಕಿ ಮುಂತಾದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು ಅದೀಗ ಬಹಿರಂಗಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದಲೋ ಅಥವಾ ಇನ್ನಿತರ ಯಾವುದೋ ಕಾರಣದಿಂದಲೋ ಓರ್ವ ಮಹಿಳೆ ಇಲ್ಲಿ ಸಾವನ್ನಪ್ಪಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮೃತ ಮಹಿಳೆ ಮಾಸ್ತಮ್ಮ ನಾರಾಯಣ ನಾಯ್ಕ (೩೫) ಕಳೆದ ಕೆಲವು ದಿನಗಳಿಂದ ತೀವ್ರತರವಾದ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ಕೂಡ ನೀಡಲಾಗಿತ್ತು. ಆಕೆಯನ್ನು ಬದುಕಿಸಲು ಕುಟುಂಬದವರು ಹಳ್ಳಿವೈದ್ಯರ ಮೊರೆ ಹೋಗಿದ್ದು ಅವರು ಆಕೆಗೆ ಮುರ್ತಿ(ದೆವ್ವ) ಹೊಡೆದಿದೆ ಎಂದು ನಂಬಿಸಿ ಕಡಲತೀರದ ಗ್ರಾಮವೊಂದರಲ್ಲಿ ಶ್ವಾನ ಚಿಕಿತ್ಸೆಯನ್ನೂ ಸಹ ಕೈಗೊಳ್ಳಲಾಗಿತ್ತು. ಇದು ಯಾವುದು ಸಹ ಆಕೆಗೆ ಬದುಕನ್ನು ನೀಡಲಿಲ್ಲ. ಏನು ಮಾಡಿದರೂ ಸಹ ಮಾಸ್ತಮ್ಮಳ ಜೀವ ಉಳಿಯಲಿಲ್ಲ. ಆದರೆ ತಾಲೂಕಾ ವೈದ್ಯರು ಆಕೆ ಮೃತಪಟ್ಟಿದ್ದು ಸಾಂಕ್ರಾಮಿಕ ರೋಗದಿಂದ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗದರೆ ಮೂಢನಂಬಿಕಯು ಆಕೆಯ ಜೀವಕ್ಕೆ ಮುಳುವಾಯಿತೆ? ಇಂದಿನ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿಯು ಸಹ ಇಂತಹ ಮೂಢನಂಬಿಕೆ ಬಲಿಯಾಗುವವರು ಇದ್ದಾರೆಯೆ? ಎಂದು ಜನ ಆಡಿಕೊಳ್ಳುವಂತಾಗಿದೆ.
ಹಾಡುವಳ್ಳಿ ಪ್ರದೇಶದಲ್ಲಿ ಇಲ್ಲಿಯ ವರೆಗೆ ಸುಮಾರು ಹದಿನೈದು ಮಂದಿ ವಿವಿಧ ಕಾಯಿಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರು ಗುಣಮುಖರಾದರೆ, ಇನ್ನೂ ಕೆಲವರು ಕುಂದಾಪುರ, ಮಣಿಪಾಲ ಹಾಗೂ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹಾಡುವಳ್ಳಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ತೇಜಸ್ವಿನಿ ಪದ್ಮಯ್ಯ ನಾಯ್ಕ ತೀವ್ರತರವಾದ ಕಿವಿ ಸೋರುವಿಕೆಯಿಂದ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅದರಂತೆ ಶಾರದಾ ನಾಯ್ಕಳು ವಾಂತಿ, ಜ್ವರದಿಂದ ಬಳಲುತ್ತಿದ್ದು, ನಿಧಾನವಾಗಿ ಗುಣಮುಖವಾಗುತ್ತಿದ್ದಾಳೆ. ಪಾರ್ವತಿ ಹಾಗೂ ರಮೇಶ ಪೂಜಾರಿ ಜ್ವರದಿಂದ ಬಳಲಿ ಗುಣಮುಖರಾಗುತ್ತಿದ್ದಾರೆ. ಅದರಂತೆ ರಾಧಾ ನಾಯ್ಕ ಸಣ್ಣ ಕರುಳು ಸೋಂಕಿನಿಂದ ಬಳಲುತ್ತಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಾದೇವಿ ಜೈರಾಮ ನಾಯ್ಕ ಜ್ವರ ವಾಂತಿಯಿಂದ, ಗಣೇಶ ದಯಾನಂದ ಬಂಡಾರಿ ತಲೆ ನೋವು, ಜ್ವರ, ವಾಂತಿಯಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಂತೆ ಕೃಷ್ಣ ತಿಮ್ಮಪ್ಪ ಜಂಬೂರಮಠ, ಶ್ರೀಧರ ನಾಯ್ಕರೂ ಸಹ ಜ್ವರ, ನೆಗಡಿಯಿಂದ ಬಳಲುತ್ತಿದ್ದಾರೆ. ವೃದ್ದ ಶನಿಯಾರ ನಾಯ್ಕ ಮೂತ್ರ ಸೋಂಕಿನಿಂದ ಕಂಗಾಲಾಗಿದ್ದಾರೆ, ಸಣ್ಣಿ ಗೊಂಡ ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಿನ್ನೆ ಬೆಳಿಗ್ಗೆಯಿಂದ ವಿದ್ಯಾರ್ಥಿನಿ ಮುಕ್ತಾ ಶೆಟ್ಟಿ ಸಹ ಜ್ವರ, ವಾಂತಿ, ತಲೆ ನೋವಿನಿಂದ ಕಂಗಾಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ವಿಚಿತ್ರವೆಂದರೆ ಕಳೆದ ಎರಡು ತಿಂಗಳಿನಿಂದ ಇಲ್ಲಿನ ಜನರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದರೂ ಮನೆ ಮನೆಗೆ ತಿರುಗಾಡುವ ಆರೋಗ್ಯ ಸಹಾಯಕಿಯ ಗಮನಕ್ಕೆ ಬಂದಿಲ್ಲವೇ ಎಂಬುದು ಪ್ರಶ್ನೆಯಾಗಿದೆ. ಕಾಯಿಲೆಯ ಕುರಿತು ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಜನರು ಚಿಕಿತ್ಸೆಗಾಗಿ ದೂರದ ಮಂಗಳೂರು, ಮಣಿಪಾಲ, ಕುಂದಾಪುರಕ್ಕೋ ಹೋಗುವುದನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನಿದ್ದರೂ ಅತಂಕಕ್ಕೊಳಗಾದ ಗ್ರಾಮೀಣ ಪ್ರದೇಶದ ಜನರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಪಂ ಆಡಳಿತ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಬೇಕಿದೆ.
ದೆವ್ವ ಭೂತದ ಭ್ರಮೆಯಿಂದ ಹೊರಬರದ ಹಳ್ಳಿಯ ಜನ ರೋಗಪೀಡಿತರಿಗೆ ಶ್ವಾನ ನೆಕ್ಕಿಸುವುದು: ಹಳ್ಳಿಯ ಜನ ಇನ್ನು ತಮ್ಮ ಹಳ್ಳಿಯ ಗುಂಗಿನಲ್ಲೆ ಇದ್ದಾರೆ ಅವರು ಅದರಿಂದ ಹೊರಬರಲು ಈಗಲೂ ಸಿದ್ದರಿಲ್ಲ, ಇತ್ತಿಚೆಗೆ ಜರುಗಿದ ಒಂದು ಪ್ರೌಢಶಾಲಾ ಶಿಕ್ಷಕರ ಆರೋಗ್ಯ ಕಾರ್ಯಗಾರದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ಮಂಜುನಾಥ್ ಶೆಟ್ಟಿ ಹೇಳಿದ್ದು ಜನರು ಹಾವು ಕಚ್ಚಿದರು ಕೂಡ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವುದನ್ನು ಬಿಟ್ಟು ಕಚ್ಚಿದ ಹಾವು ಹುಡಕಾಟದಲ್ಲಿ ಸಮಯ ಹಾಳು ಮಾಡುತ್ತಾರೆ. ಹಾವು ಸಿಗುವ ವೇಳೆಗೆ ಹಾವು ಕಚ್ಚಿಸಿಕೊಂಡಾತನ ಪ್ರಾಣ ಪಕ್ಷಿ ಹಾರಿಹೋಗಿರುತ್ತದೆ ಇಲ್ಲವೆ ಅದರ ಚಿಕಿತ್ಸೆಯ ಸಮುಯ ಮುಗಿದಿರುತ್ತದೆ ಆಗ ವೈದ್ಯರ ಕೆಲಸ ಏನು ಇರುವುದಿಲ್ಲ. ಭಟ್ಕಳ ತಾಲೂಕಿನಾದ್ಯಂತ ಮೂಢನಂಬಿಗೆ ಬಹುವಾಗಿ ಹರಡಿಕೊಂಡಿದ್ದು ಇದಕ್ಕೆ ಉತ್ತಮ ಉದಾಹರಣೆ ಹೆಬಳೆ, ತೆಂಗಿನಗುಂಡಿ ಭಾಗದಲ್ಲಿ ಕೆಲವು ವಿಚಿತ್ರ ಸಾಂಕ್ರಾಮಿಕ ರೋಗ ಗಳಿಗೆ ನಾಯಿಯನ್ನು ನೆಕ್ಕಿಸಿ ಚಿಕಿತ್ಸೆಯನ್ನು ನಿಡುತ್ತಿದ್ದಾರೆ. ರೋಗಿಯ ಬೆನ್ನೆಗೆ ನಾಯಿಯನ್ನು ನೆಕ್ಕಿಸುವ ಮೂಲಕ ಈ ರೋಗ ಗುಣಪಡಿಸಬಹುದೆಂಬ ಹುಚ್ಚು ಈಗಲೂ ಜನರಲ್ಲಿ ಮನೆ ಮಾಡಿಕೊಂಡಿದ್ದು ನಾಯಿ ಜೊಲ್ಲಿನಿಂದ ಮಹಾ ಮಾರಕ ಕಾಯಿಲೆ ರ್ಯಾಬಿಸ್ ಉಂಟಾಗುವ ಸಾಧ್ಯತೆ ಇರುವುದರಿಂದ ಈ ನಾಯಿ ನೆಕ್ಕಿಸುವುದು ಅತ್ಯಂತ ತೊಂದರೆದಾಯಕವಾಗಿದ್ದು ಇದರಿಂದ ಜನರನ್ನು ತೆಡೆಯಬೇಕು ಎಂದು ಹೇಳಿದ್ದು ಜನರು ತಮ್ಮ ಹಳ್ಳಿಯ ಗುಂಗಿನಿಂದ ಹೊರಬರಬೇಕಾಗಿದೆ.
ಹಾಡುವಳ್ಳಿಯ ವಿವಿಧ ಪ್ರದೇಶಗಳಲ್ಲಿ ಕಲುಷಿತವಾದ ನೀರು ಕುಡಿದಿದ್ದರಿಂದಲೋ ಅಥವಾ ಆಹಾರ ಪದ್ದತಿಯಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದಲೋ ತೀವ್ರತರವಾದ ಜ್ವರ, ವಾಂತಿ ನೆಗಡಿ,ಕೈಕಾಲು ನೋವಿನಿಂದ ಕಂಗಾಲಾದ ಜನರಿಗೆ ಮುರ್ತಿ ಹೊಡೆದಿದೆ ಎಂದು ಕೆಲವರು ಹೇಳಿದ್ದರಿಂದ ಇದನ್ನೇ ನಂಬಿದ ಕುಟುಂಬಸ್ಥರು ಭಟ್ಕಳದ ಕಡಲತೀರ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಶ್ವಾನ ಚಿಕಿತ್ಸೆಯನ್ನೂ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಜನತೆ ಇಂದಿನ ವಿಜ್ಞಾನ ತಂತ್ರಜ್ಞಾನದ ಯುಗದಲ್ಲೂ ಮುರ್ತಿ,ಗಾಳಿ,. ದೆವ್ವ ಹೊಡೆಯುತ್ತದೆ ನಂಬಿಕೆಯಿಂದ ಜೀವಿಸುತ್ತಿರುವುದು ಕಂಡರೆ ನಿಜಕ್ಕೂ ನಮ್ಮ ದೇಶ ಹೊಳೆಯುತ್ತಿದೆಯೆ? ಎಂಬ ಸಂಶಯ ಮೂಡುತ್ತದೆ. ಮುರ್ತಿ ಹೊಡೆದ ವ್ಯಕ್ತಿಗಳ ಬೆನ್ನಿಗೆ ಶ್ವಾನದಿಂದ ನೆಕ್ಕಿಸುವುದು, ಮಂತ್ರ, ತಾಯಿತಗಳನ್ನು ಕಟ್ಟಿಸುವುದರಿಂದ ರೋಗ ಪರಿಹಾರವಾಗುತ್ತಿದ್ದರೆ ನಮ್ಮ ದೇಶಕ್ಕೆ ವೈದ್ಯರ ಅವಶ್ಯಕತೆ ಇರುತ್ತಿರಲಿಲ್ಲ ಮತ್ತು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿಯೂ ಮೆಡಿಕಲ್ ಸೀಟು ಸಿಗಲಿಲ್ಲ ಎಂದು ಆತ್ಮ ಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯು ಉದ್ಭವಿಸುತ್ತಿರಲ್ಲ. ಸಾಂಕ್ರಾಮಿಕ ರೋಗ ಹರಡಿದ ಹಾಡುವಳ್ಳಿಯಲ್ಲೂ ಇಂತಹದ್ದೊಂದು ಪ್ರಯೋಗ ನಡೆದಿರಲೂಬಹುದು.
ಹಾಡುವಳ್ಳಿಯಲ್ಲಿ ಯಾವೂದೋ ಅಮ್ಮನ ಮೂರ್ತಿಯೊಂದು ಭಗ್ನವಾಗಿದ್ದು ಆ ಭಗ್ನಗೊಂಡ ಮೂರ್ತಿಯನ್ನು ಪೂಜಿಸುತ್ತಿರುವುದರಿಂದಲೆ ಜನರು ಇಂತಹ ಸಮಸ್ಯೆಯಲ್ಲಿ ಸಿಲುಕಲು ಕಾರಣ ಎಂಬ ಕಥೆಯೊಂದು ಈ ಭಾಗದಲ್ಲಿ ಹುಟ್ಟಿಕೊಂಡಿದೆ. ಏನೆ ಇರಲಿ ಇಂದಿಗೂ ಹಳ್ಳಿಗಳು ಸುಧಾರಣೆಯಾಗಿಲ್ಲ ಎನ್ನುವ ವಿಚಾರಗಳು ಇಂತಹ ಘಟನೆಗಳಿಂದ ಸಾಬೀತಾಗುತ್ತದೆ. ನಮ್ಮ ದೇಶ ಹಳ್ಳಿಗಳ ದೇಶವಾಗಿದ್ದು ಗ್ರಾಮಗಳ ಸುಧಾರಣೆಯಿಂದಲೆ ದೇಶದ ಸುಧಾರಣೆ ಸಾಧ್ಯ ಎನ್ನವ ಮಾತನ್ನು ನಾವಿಂದು ಒಪ್ಪಲೆಬೇಕಾಗಿದ್ದು ಸರಕಾರವು ಗ್ರಾಮಗಳ ಸುಧಾರಣೆಗಳಿಗೆ ಸಾಕಷ್ಟು ಒತ್ತು ನೀಡಬೇಕು ಅಲ್ಲಿ ಸ್ವಚ್ಚವಾದ ಕುಡಿಯುವ ನೀರು ಶಿಕ್ಷಣ ಮಹಿಳೆಯರ ಸಾಕ್ಷರತೆ, ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಜನರನ್ನು ಹೆಚ್ಚು ಹೆಚ್ಚು ಶಿಕ್ಷಿತರನ್ನಾಗಿಸುವ ಕಾರ್ಯವಾಗಬೇಕಿದೆ.
ಶಿಕ್ಷಣದ ಮೂಲ ಸೌಲಭ್ಯಗಳಿಂದ ವಂಚಿತರು: ಸರಕಾರ ಶಿಕ್ಷಣವನ್ನು ಎಷ್ಟೆ ವ್ಯಾಪಕಗೊಳಿಸಲಿ,ಶಿಕ್ಷಣವನ್ನು ನಮ್ಮ ದೇಶದ ಶೇ೪೦ರಷ್ಟು ಜನರಿಗೆ ಇನ್ನು ತಲುಪದೆ ಇರುವ ಕುರಿತು ಸರಕಾರಿ ಮಾಹಿತಿಗಳೇ ಬಹಿರಂಗಪಡಿಸಿವೆ. ಹೀಗಿರುವಾಗ ನಮ್ಮದೇಶದ ಅದೆಷ್ಟೋ ಹಳ್ಳಿಗಳು ಇನ್ನು ಕರೆಂಟು, ಬಸ್ಸು,ರಸ್ತೆಗಳನ್ನು ಕಂಡಿಲ್ಲ ಶಿಕ್ಷಣ ಹೇಗೆ ತಾನೆ ಕಂಡಿಯಾರು. ಶಿಕ್ಷಣವೆ ಮನುಷ್ಯನನ್ನು ಬದಲಾಯಿಸುತ್ತದೆ. ಅದೆ ಇಲ್ಲ ಎಂದಾದ ಮೇಲೆ ಬದಲಾಗುವುದಾದರೂ ಹೇಗೆ? ಯಾವುದಾದರೂ ರೋಗರುಜಿನಗಳು ಬಂದರೆ ಅದು ತಮ್ಮ ಯಾವದೋ ದೇವತೆ ತಮ್ಮ ಮೇಲೆ ಮುನಿಸಿಕೊಂಡಿದ್ದಾಳೆ ಆಕೆಗೆ ತೃಪ್ತಿಗೊಳಿಸಲು ಏನಾದರೂ ಬಲಿ ನೀಡಬೇಕು ಇಲ್ಲವೆ ಮನುಷ್ಯರೇ ಬಲಿಯಾಗಬೇಕು ಇಂತಹ ಪರಿಸ್ಥಿತಿ ಈಗಲೂ ನಮ್ಮ ದೇಶದ ಹಳ್ಳಿಗಳಲ್ಲಿ ಕಾಣುತ್ತೇವೆ ಎಂದಾದರೆ ಇನ್ನೂ ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎನ್ನವುದರ ಕುರಿತು ನಮ್ಮನ್ನು ನಾವೆ ಅವಲೋಕನ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ. ಕನಿಷ್ಠ ಸೌಲಭ್ಯಗಳು ಇಲ್ಲದ ಬದುಕನ್ನು ಬದುಕನ್ನು ಬದುಕುತ್ತಿರುವ ನಮ್ಮ ಹಳ್ಳಿಗರು ಅವರು ಅನುಮಾನ ಪಡುತ್ತಿರುವುದರಲ್ಲಿ ಅವರದ್ದೇನು ತಪ್ಪಿಲ್ಲ. ಚುನಾವಣೆಯ ಸಂದರ್ಭದಲ್ಲಿ ಉದ್ದುದ್ದ ಆಶ್ವಾಸನೆಗಳನ್ನು ನೀಡಿ ಜನರಿಗೆ ಮರಳುಗೊಳಿಸುವ ನಮ್ಮ ಸ್ತಾರ್ಥಿ ರಾಜಕಾರಣಿಗಳು ಎಲ್ಲಯವರೆಗೆ ಈ ದೇಶದಲ್ಲಿ ಇರುತ್ತಾರೋ ಅಲ್ಲಿಯವರೆಗೆ ಈ ದೇಶದ ಶೇ೯೦ ರಷ್ಟು ಹಳ್ಳಿಗಳು ಸುಧಾರಣೆಯನ್ನು ಕಾಣದೆ ಹಾಗೆಯೆ ಉಳಿಯುತ್ತವೆ. ನಾವು ಯಾವ ಯುಗದಲ್ಲದ್ದರೇನು ನಮ್ಮ ಜನತೆಗೆ ಸರಿಯಾದ ಶಿಕ್ಷಣ ಸಿಗದೆ ಇದ್ದರೆ ಇಪ್ಪತ್ತೊಂದನೆಯ ಶತಮಾನವೇನು ೨೫ನೇ ಶತಮಾನ ಬಂದರೂ ನಮ್ಮ ಜನರಲ್ಲಿಯ ಮೂಢನಂಬಿಕೆಗಳು ತೊಲಗಲು ಸಾಧ್ಯವಾಗಲಿಕ್ಕಿಲ್ಲ.