ತಂದೆಯ ಮನದ ನೋವು ಶ್ರೀಕೃಷ್ಣನ ಹೃದಯ ತಟ್ಟಿದಾಗ...!

ತಂದೆಯ ಮನದ ನೋವು ಶ್ರೀಕೃಷ್ಣನ ಹೃದಯ ತಟ್ಟಿದಾಗ...!

ತಂದೆಯೆಂಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ವ್ಯಕ್ತಿಯು ಮಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸೋಲಾರ್ ಅಳವಡಿಕೆಯ ಮಾರಾಟ ಪ್ರತಿನಿಧಿಯಾಗಿ ಆಗಿ ಕೆಲಸ ಮಾಡುತ್ತಿದ್ದರು. ಆ ಕಂಪೆನಿಯಿಂದ ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಸಂಬಳ ಮತ್ತು ವಾರಕ್ಕೊಮ್ಮೆ ಬಸ್ ಚಾರ್ಜ್ ಕೂಡ ಪಡೆಯುತ್ತಾ ಇದ್ದರು. ಆ ಸಂಬಳದ ಮೇಲೆ ಬ್ಯಾಂಕ್ ಲೋನ್ ಮಾಡಿದ್ದು ಮಾತ್ರವಲ್ಲದೇ ಕಂಪೆನಿಯಿಂದ ಪಿ ಎಫ್ ಫಂಡ್ ಕೂಡ ಪಡೆದು ಮನೆ ಕಟ್ಟಿಕೊಂಡಿದ್ದರು. ಪರಿಣಾಮ, ಬ್ಯಾಂಕ್ ಸಾಲದ ಮೇಲಿನ ಮಾಸಿಕ ಬಡ್ಡಿ ಕಟ್ಟಿ, ಉಳಿದ ಹಣದಿಂದ ಮನೆ ಖರ್ಚು ಮತ್ತು ಮಕ್ಕಳ ಎಜುಕೇಷನ್ ಖರ್ಚು ನಿಭಾಯಿಸಲು ತುಂಬಾ ಕಷ್ಟ ಪಡುತ್ತಿದ್ದರು. 

ದಿನ ಹೋದಂತೆ ಮಂಗಳೂರಿನಲ್ಲಿ ಒಂದು ಹೊಸ ಸೋಲಾರ್ ಆಫೀಸ್ ತೆರೆಯಿತು. ಅವರು ಆ ತಂದೆಯನ್ನು ಆಫೀಸಿಗೆ ಕರೆಸಿ, ತಮ್ಮ ಆಫೀಸಿಗೆ ಸೇರಿಕೊಳ್ಳುವಂತೆ ಮನವಿ ಮಾಡಿದರು. ಜೊತೆಗೆ ಮೊದಲ ಕಂಪೆನಿಗಿಂತ ಹೆಚ್ಚು ಸಂಬಳ ಮತ್ತು ವಾಹನದ ಸೌಲಭ್ಯ ನೀಡುವುದಾಗಿ ಹೇಳಿದರು. ಅವರ ಮಾತನ್ನು ನಂಬಿ ದುಡಿಯುತಿದ್ದ ಕಂಪೆನಿಗೆ ರಾಜಿನಾಮೆ ಕೊಟ್ಟು, ಅವರ ಹೊಸ ಸೋಲಾರ್ ಆಫೀಸಿಗೆ ಸೇರಿಕೊಂಡರು. ಅಲ್ಲಿಗೆ ಆ ತಂದೆಯ ಹಣೆ ಬರಹ ಕೆಟ್ಟು ಹೋಯಿತು .

ಕೆಲಸಕ್ಕೆ ಸೇರಿ ಹದಿನೈದು ದಿನ ಕಳೆದಿಲ್ಲ, ಅಷ್ಟರಲ್ಲಿ ಕೊರೋನಾ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಾಯಿತು. ದೇಶ ಸಂಪೂರ್ಣ ಲಾಕ್ ಡೌನ್ ಆಯಿತು. ಮನೆಯಿಂದ ಹೊರಗೆ ಹೋಗುವ ಹಾಗಿಲ್ಲ. ಮನೆ ಪರಿಸ್ಥಿತಿ ಹದಗೆಡಲು ಶುರುವಾಯಿತು. ಮನೆಯಲ್ಲಿ ಇದ್ದ ಅಕ್ಕಿ ಬೇಳೆ ಎಲ್ಲವೂ ಖಾಲಿಯಾಗ ತೊಡಗಿತು. ಎಪಿಎಲ್ ಪಡಿತರ ಕಾರ್ಡ್ ಹೊಂದಿದ್ದರಿಂದ ಸರಿಯಾಗಿ ರೇಷನ್ ಕೂಡ ಸಿಗುತ್ತಿರಲಿಲ್ಲ. ಪರಿಣಾಮ, ಹೆಂಡತಿ ಮಕ್ಕಳ ಹೊಟ್ಟೆ ತುಂಬಲು ಅಕ್ಕಿ, ಬೇಳೆ ಸಂಬಂಧಿಕರಿಂದ ಕೇಳಿ ಪಡೆಯುವ ಪರಿಸ್ಥಿತಿ ಆ ತಂದೆಯ ಪಾಲಿಗೆ ಒದಗಿಬಂತು. ಕೈಯಲ್ಲಿ ಇದ್ದ ದುಡ್ಡು ಕೂಡ ಖಾಲಿ ಖಾಲಿ. ಯಾರಾದರೂ ಸಹಾಯಧನ ಆ ತಂದೆಯ ಖಾತೆಗೆ ಜಮಾ ಮಾಡಿದರೆ, ಅದು ಕೂಡ ಬ್ಯಾಂಕ್ ಲೋನ್ ಅಂತ ಕಟ್ಟಾಗಿ ಹೋಗುತಿತ್ತು. ಕಂಪೆನಿ ಮಾಲೀಕರಿಂದ ಸ್ವಲ್ಪ ದುಡ್ಡು ಕೇಳೋಣ ಎಂದರೆ, ಅವರೂ ಸಹ ಮಾತನಾಡಲು ಸಿಗುತ್ತಿರಲಿಲ್ಲ. ಕಂಪೆನಿ ಕೊಟ್ಟ ಸಿಮ್ ಕಾರ್ಡ್ ಕೂಡ ಬಂದ್ ಬಿದ್ದಿತ್ತು. ಕಾರಣ ಅವರು ಬಿಲ್ ಪಾವತಿ ಮಾಡಿಲ್ಲ ಅದಕ್ಕೆ. ಹಲವು ತಿಂಗಳ ನಂತರ ಲಾಕ್ ಡೌನ್ ಸಡಿಲವಾಯಿತು. ಬಸ್ ಸಂಚಾರ ಆರಂಭವಾಯಿತು. ಎಲ್ಲಾ ಆಫೀಸುಗಳು ತೆರೆಯಿತು. ಆದರೆ ಆ ತಂದೆ ಸೇರಿದ ಹೊಸ ಸೋಲಾರ್ ಆಫೀಸ್ ಮಾತ್ರ ತೆರೆಯಲೇ ಇಲ್ಲ. ಮೂರು ನಾಲ್ಕು ಸಲ ಹೋದರು ಕೂಡ ಬಾಗಿಲು ತೆರೆಯಲೇ ಇಲ್ಲ. ಮತ್ತೆ ಗೊತ್ತಾಯಿತು. ಆ ಹೊಸ ಆಫೀಸಿನ ಮಾಲಿಕರು ಆಫೀಸ್ ಬಾಡಿಗೆ ಕೊಡದೆ, ಮುಚ್ಚಿ ಓಡಿ ಹೋಗಿದ್ದಾರೆಂದು. ದಿಕ್ಕು ತೋರದ ಆ ತಂದೆಗೆ ಮುಂದೆ ಗತಿ ಏನು ಎಂಬ ಚಿಂತೆ ಮತ್ತಷ್ಟು ಹೆಚ್ಚಾಯಿತು.

ಆ ತಂದೆ ಸಂಜೆ ವೇಳೆಗೆ ಕೆಲಸ ಮುಗಿಸಿ ಮನೆಗೆ ಹೋಗಬೇಕಾದರೆ, ಎಂದೂ ಬರಿ ಕೈಯಲ್ಲಿ ಹೋದ ವ್ಯಕ್ತಿ ಅಲ್ಲ. ಮಕ್ಕಳಿಗೆ ಏನಾದರೂ ತಿಂಡಿ, ತಿನಿಸು ತಗೊಂಡು ಹೋಗುತ್ತಿದ್ದರು. ಮಕ್ಕಳಿಗೂ ಗೊತ್ತು, ಅಪ್ಪ ಬರಿ ಕೈಯಲ್ಲಿ ಬರುವುದಿಲ್ಲ. ಬರುತ್ತಾ ಏನಾದರೂ ತಿಂಡಿ ತಿನಿಸು ತರುತ್ತಾರೆ ಎಂದು. ಅದಕ್ಕೆ ಮನೆ ಬಾಗಿಲಲ್ಲಿ ಅವರ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. ಅಂದು ಕೈಯಲ್ಲಿ ಹೆಚ್ಚು ದುಡ್ಡು ಇಲ್ಲದ ಕಾರಣ ಹೊರಗಡೆ ಎಲ್ಲೂ ಊಟ ಮಾಡದೆ ಬರೀ ಹೊಟ್ಟೆಯಲ್ಲಿ ಮಕ್ಕಳಿಗೆ ತಿಂಡಿ ತಗೊಂಡು ಮನೆಗೆ ಬಂದವರು ಮಕ್ಕಳ ಕೈಗೆ ತಿಂಡಿ ಕೊಟ್ಟು, ಸೀದಾ ಕೋಣೆ ಸೇರಿಕೊಳ್ಳುತ್ತಾರೆ. ಹೆಂಡತಿ ಮಕ್ಕಳಿಗೆ ಗೊತ್ತಾಗದ ಹಾಗೆ ಕಣ್ಣೀರು ಹಾಕುತ್ತಾರೆ. ಅವರ ಹೆಂಡತಿ, ಹೋದ ವಿಷಯ ಏನಾಯಿತು ಎಂದು ಕೇಳಿದಾಗ, ಆಫೀಸ್ ಬಂದಾದ ವಿಷಯ ತಿಳಿಸುತ್ತಾರೆ. ಆಗ ಹೆಂಡತಿಯೂ ಆತಂಕಕ್ಕೆ ಒಳಗಾಗುತ್ತಾಳೆ. 

ಆಗ ಅವರಿಗೆ ಗೋಚರಿಸಿದ್ದು ಅವರ ಮೊದಲ ಮಾಲಿಕ. ತಕ್ಷಣ ಅವರಿಗೆ ಫೋನ್ ಮಾಡಿ, ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಂಡರು. ಆದರೆ ಅವರು, ಕೆಲಸ ಖಾಲಿ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದರು. ಅಲ್ಲಿಯೂ ದಂಪತಿಗೆ ನಿರಾಶೆ ಉಂಟಾಯಿತು. ಬ್ಯಾಂಕ್ ಲೋನ್ ಇರುವುದರಿಂದ ಮುಂದೆ ಮನೆ ಖರ್ಚು ನಿಭಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಿ, ಅವರ ಹೆಂಡತಿಯೂ ಹೊರಗಡೆ ಕೆಲಸಕ್ಕೆ ಹೋಗಲು ತೀರ್ಮಾನ ಮಾಡಿದಳು. ಆದರೆ ಹೆಚ್ಚು ಓದಿಲ್ಲದ ಕಾರಣ ಎಲ್ಲಿ ಕೆಲಸ ಕೊಡುತ್ತಾರೆ, ಯಾವ ಕೆಲಸ ಮಾಡಬೇಕು ಎಂಬ ಗೊಂದಲ ಅವಳನ್ನು ಕಾಡ ತೊಡಗಿತು.

ಆ ತಂದೆಯೂ ಬೇರೆ ಕೆಲಸ ಸಿಗುವವರೆಗೂ ಹೋಟೆಲಲ್ಲಿ ಕೆಲಸ ಮಾಡುವುದಾಗಿ ತೀರ್ಮಾನಿಸಿದರು. ಬೆಳಿಗ್ಗೆ ಬೇಗನೆ ಎದ್ದವರು ಒಣ ಮೀನಿನ ಚಟ್ನಿ ಯೊಂದಿಗೆ ಸ್ವಲ್ಪ ಗಂಜಿ ಕುಡಿದು, ಹೆಂಡತಿ ಮಕ್ಕಳ ಬ್ಯಾಗ್, ಕಿಸೆ ಹುಡುಕಾಡಿದಾಗ ಒಟ್ಟು ನೂರೈವತ್ತು ಚಿಲ್ಲರೆ ಹಣ ಸಿಕ್ಕಿತ್ತು. ಅದನ್ನು ಬ್ಯಾಗಲ್ಲಿ ತುಂಬಿಕೊಂಡು, ಸೀದಾ ಬಸ್ ಹತ್ತಿ ಹೋಟೆಲ್ ಕೆಲಸ ಹುಡುಕಲು ಹೊರಟು ಹೋದರು. ಬಸ್ ಟಿಕೇಟ್ ದರ ಕೂಡ ಜಾಸ್ತಿ ಆಗಿತ್ತು. ಮೂರು ನಾಲ್ಕು ಬಸ್ ಬದಲಿಸಿ, ಕೆಲಸ ಕೇಳಿಕೊಂಡು ಕೇಳಿಕೊಂಡು ಉಡುಪಿ ತನಕ ಬಂದು ಬಿಡುತ್ತಾರೆ. ಲಾಕ್ ಡೌನ್ ಪರಿಣಾಮ, ಯಾವ ಹೋಟೆಲಿಗೂ ಕೆಲಸಕ್ಕೆ ಜನ ಬೇಡ. ಕಾರಣ, ಕೆಲಸಕ್ಕೆ ಜನ ಇದ್ದಾರೆ. ವ್ಯಾಪಾರ ಇಲ್ಲ ಎಂಬ ಉತ್ತರ.

ಮಧ್ಯಾಹ್ನ ಎರಡುವರೆ ಗಂಟೆ. ಸೋತು ಹೋದ ಆ ತಂದೆಯು ಹಸಿವು ತಾಳಲಾರದೆ ಸಂಕಟಕ್ಕೆ ಒಳಗಾಗುತ್ತಾರೆ. ಕೈಯಲ್ಲಿ ಎಷ್ಟು ಹಣ ಉಳಿದಿದೆ ಎಂದು ಲೆಕ್ಕ ಹಾಕಿ ನೋಡಿದರೆ ಬರೀ 70 ರೂಪಾಯಿ ಮಾತ್ರ ಉಳಿದಿದೆ. 80 ರೂಪಾಯಿ ಆಗಾಗಲೆ ಬಸ್ ಟಿಕೆಟುಗೆ ಅಂತ ಖರ್ಚಾಗಿ ಹೋಗಿತ್ತು. ಮತ್ತೆ ಹಿಂತಿರುಗಿ ಮನೆಗೆ ವಾಪಸ್ ಹೋಗಬೇಕಾದರೆ 55 ರೂಪಾಯಿ ಬಸ್ ಟಿಕೆಟಿಗೆ ಬೇಕು. ಹೋಟೆಲಲ್ಲಿ ಗಂಜಿ ಊಟ ಮಾಡಲು 30 ರೂಪಾಯಿ ಬೇಕು. ದಾರಿ ಕಾಣುವ ಮಕ್ಕಳಿಗೆ ತಿಂಡಿ ತಗೊಂಡು ಕೊಟ್ಟಿಲ್ಲ ಅಂದರೆ ಅದೂ ಕೂಡ ತಪ್ಪಾಗುತ್ತದೆ ಎಂದು ಭಾವಿಸಿದರು. ಏನು ಮಾಡೋಣ ಎಂದು ಯೋಚಿಸಿದಾಗ, ಆಗ ಆ ತಂದೆಗೆ ಗೋಚರಿಸಿದ್ದು ಉಡುಪಿ ಶ್ರೀ ಕೃಷ್ಣ ಮಠ. ಅಲ್ಲಿ ಅನ್ನ ಪ್ರಸಾದ ಇದೆ ಎಂದು ಅವರಿಗೆ ಗೊತ್ತು. ಆದರೆ ಅಲ್ಲಿ ಉಡುಪಿ ಶ್ರೀ ಕೃಷ್ಣ ಪರಮಾತ್ಮನ ದರ್ಶನ ಪಡೆದು ಊಟ ಮಾಡೋಣ ಎಂದರೆ, ಅಶುದ್ಧತೆಯ ಚಿಂತೆ. ಅಂದರೆ ಮನೆಯಲ್ಲಿ ಒಣ ಮೀನಿನ ಚಟ್ನಿ ತಿಂದಿದ್ದರು.

ಅದಕ್ಕೆ ಮಠದ ಹಿಂದಿನ ಬಾಗಿಲಿಗೆ ಹೋಗಿ ಬರೀ ಊಟ ಮಾಡಿ ಬರೋಣ ಎಂದು ಚಪ್ಪಲಿ ಕಳಚಿ ಹಿಂದುಗಡೆಗೆ ಹೋದರು. ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ತಡೆದು ನಿಲ್ಲಿಸಿದರು. ದರ್ಶನಕ್ಕೆ ಎದುರಿನ ದ್ವಾರದಿಂದ ಹೋಗಿ, ಇಲ್ಲಿಂದ ಬಿಡುವುದಿಲ್ಲ ಎಂದರು. ಆಗ ಆ ತಂದೆ, ನಾನು ದರ್ಶನ ಪಡೆಯಲು ಬಂದಿದ್ದಲ್ಲ. ಅನ್ನ ಪ್ರಸಾದ ಸೇವಿಸಿ ಹೋಗಲು ಬಂದಿದ್ದೇನೆ ಎಂದು ಹೇಳಿದರು. ಆಗ ಆ ಸೆಕ್ಯುರಿಟಿ ಗಾರ್ಡ್, ಊಟ ಗೀಟ ಏನೂ ಇಲ್ಲ. ಊಟ ಇನ್ನೂ ಶುರು ಮಾಡಿಲ್ಲ. ಲಾಕ್ ಡೌನ್. ಹೋಗಿ ಹೋಗಿ, ಮುಂದೆ ಹೋಗಿ ಎಂದು ದೂರ ಕಳಿಸಿ ಬಿಟ್ಟರು. ಅಲ್ಲಿಗೆ ಅಲ್ಲಿಯೂ ಆ ತಂದೆಗೆ ನಿರಾಸೆ ಉಂಟಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಏನೇ ಆಗಲಿ, ಎಲ್ಲಿಯಾದರೂ ಹೋಟೆಲಲ್ಲಿ ಸ್ವಲ್ಪ ನೀರು ಕುಡಿದು ಮಕ್ಕಳಿಗೆ ತಿಂಡಿ ತಗೊಂಡು ವಾಪಸ್ ಮನೆಗೆ ಹೊರಟು ಹೋಗುತ್ತೇನೆ ಎಂದು ಭಾವಿಸಿ, ಕಳಚಿಟ್ಟ ಚಪ್ಪಲಿ ಹಾಕಿಕೊಂಡು ಮುಂದೆ ಹೋಗುತಿರಬೇಕಾದರೆ ಅಲ್ಲಿದ್ದ ಚಪ್ಪಲಿ ಸ್ಟಾಂಡಿನ ವ್ಯಕ್ತಿಯೊಬ್ಬರು ಕರೆದು, ಎಲ್ಲಿಗೆ ಹೋಗುತ್ತಿದ್ದೀರಿ. ಚಪ್ಪಲಿ ಇಲ್ಲಿ ಸ್ಟಾಂಡಲ್ಲಿ ಬಿಟ್ಟು ಹೋಗಿ ಎಂದರು. ಅಲ್ಲಿ ಯಾತ್ರಿಕರು ಕೂಡ ಚಪ್ಪಲಿ ಬಿಟ್ಟು ಹೋಗುವುದನ್ನು ಗಮನಿಸಿ, ನೊಂದ ಆ ತಂದೆಯೂ ಅದೇ ಸ್ಟಾಂಡ್ ನಲ್ಲಿ ಚಪ್ಪಲಿ ಬಿಟ್ಟು ಅವರ ಹಿಂದೆಯೇ ಹೋಗಿ ಬಿಟ್ಟರು. ಗೋಚರ ಇಲ್ಲದೆ ಹೋದವರು , ಸೀದಾ ಶ್ರೀ ಕೃಷ್ಣ ಮಠದ ಒಳಗೆಯೇ ಹೋಗಿ ಬಿಟ್ಟರು. ಆಗ ಅವರಿಗೆ ಕಂಡಿದ್ದು ವಜ್ರ ಖಚಿತ ಶ್ರೀ ಕೃಷ್ಣ ಪರಮಾತ್ಮನ ಒಂದು ಸುಂದರ ಮೂರ್ತಿಯ ದರ್ಶನ.

ತಾನು ಅಶುದ್ಧ ಅನಿಸಿಕೊಂಡ ಆ ತಂದೆ, ಕಿಂಡಿಯ ಸಮೀಪ ಹೋಗದೆ ದೂರದಲ್ಲೇ ನಿಂತು ಎರಡು ನಿಮಿಷ ಪ್ರಾರ್ಥನೆ ಮಾಡಿ ಕೈ ಮುಗಿದು ದರುಶನ ಪಡೆದರು. ಕಿಸೆಯಲ್ಲಿದ್ದ ಚಿಲ್ಲರೆ ಹಣದಿಂದ ಹತ್ತು ರೂಪಾಯಿ ಹುಂಡಿಗೆ ಹಾಕಿದರು. ಅಲ್ಲಿಂದ ಅಲ್ಲಿದ್ದ  ಹೊರಗೆ ಹೋಗುವ ದಾರಿಯನ್ನು ಅನುಸರಿಸಿಕೊಂಡು ಹೊರಗೆ ಹೊರಟು ಹೋದರು. ಆಗ ಅಲ್ಲಿ ನಡೆದಿದ್ದೆ ಬೇರೆ. ಪವಾಡ ಅನ್ನಬೇಕು. ಹೊರಗೆ ಹೋಗುತಿದ್ದೇನೆ ಎಂದು ಅಂದುಕೊಂಡ ಅವರು, ಹೋಗಿದ್ದು ಸೀದಾ ಅನ್ನಪೂರ್ಣ ಹಾಲ್ ಗೆ. ಅಲ್ಲಿ ಸ್ಟೀಲ್ ಬಟ್ಟಲು ಹಿಡಿದು ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಅನ್ನ ಪ್ರಸಾದ ಬಡಿಸಲಾಗುತಿತ್ತು. ಅರೆ ಇದೇನು ವಿಚಿತ್ರ. ಅಲ್ಲಿ ಸೆಕ್ಯುರಿಟಿ ಗಾರ್ಡ್ ಊಟ ಇಲ್ಲ ಅಂದಿದ್ದರು. ಇಲ್ಲಿ ನೋಡಿದರೆ ಊಟ ಬಡಿಸುತ್ತಾರೆ. ಆ ತಂದೆಗೆ ಒಂದು ಕಡೆಯಿಂದ ವಿಚಿತ್ರ. ಮತ್ತೊಂದು ಕಡೆಯಿಂದ ಖುಷಿ ತಡೆಯಲಾಗದೆ ಕಣ್ಣೀರು ಬರುತ್ತಿತ್ತು. ಆಚೆ ಈಚೆ ನೋಡದೆ ಸ್ಟೀಲ್ ಬಟ್ಟಲು ಹಿಡಿದು ಲೈನಲ್ಲಿ ನಿಂತೇ ಬಿಟ್ಟರು. ಸಿಹಿ ಜಿಲೇಬಿ, ಅನ್ನ ಸಾರು, ಮಜ್ಜಿಗೆ ಪಾಯಸ ಅಂತ ಹೊಟ್ಟೆ ತುಂಬಾ ಊಟ ಮಾಡಿಯೇ ಬಿಟ್ಟರು. ಊಟದ ನಂತರ ಒಂದು ಕಡೆ ಕೂತು ನಿಟ್ಟುಸಿರು ಬಿಟ್ಟರು. 

ಇನ್ನೊಂದು ಎರಡು ಕಡೆ ಕೆಲಸ ಕೇಳಿ ಮತ್ತೆ ಮನೆಗೆ ಹೊರಟು ಹೋಗುತ್ತೇನೆ ಎಂದು ಭಾವಿಸಿದಾಗ ಕಿಸೆಯಲ್ಲಿದ್ದ ಫೋನ್ ರಿಂಗಾಯಿತು. ನೋಡಿದಾಗ ಅದು ಅವರು ಮೊದಲು ಸೇಲ್ಸ್‌ಮನಾಗಿ  ಕೆಲಸ ಮಾಡುತ್ತಿದ್ದ ಕಂಪನಿಯ ಮಾಲಿಕರದ್ದು.

ಅವರು ಆ ತಂದೆಗೆ ಕೆಲವೊಂದು ಪ್ರಶ್ನೆ ಮಾಡಿ ಬೈದರು. ಅಂದರೆ, ಮೊದಲ ಬಾರಿ ನನ್ನ ಕಂಪೆನಿಗೆ ಕೆಲಸಕ್ಕೆ ಸೇರಿದಾಗ ಏಳು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತಿದ್ದೆ. ಈಗ ಹತ್ತು ವರ್ಷದ ಅವಧಿಯಲ್ಲಿ ಇಪ್ಪತ್ತು ಸಾವಿರ ರೂಪಾಯಿಗಿಂತಲೂ ಅಧಿಕ ಸಂಬಳದ ಜೊತೆಗೆ ಬಸ್ ಚಾರ್ಜ್ ಕೂಡ ನೀಡುತಿದ್ದೆ. ಆದರೂ ನನಗೆ ತಿಳಿಸದೆ ಕೆಲಸಕ್ಕೆರಾಜೀನಾಮೆ ನೀಡಿದೆ ಎಂದು ಬೇಸರ ವ್ಯಕ್ತ ಪಡಿಸಿ ಬೈದರು. ಆದರೆ ಕಣ್ಣೀರು ಬಿಟ್ಟು ಬೇರೆ ಯಾವುದೇ ಉತ್ತರ ಆ ತಂದೆಯ ಬಾಯಿಯಲ್ಲಿ ಬಂದಿಲ್ಲ.

ಕೊನೆಗೆ ಆ ಮಾಲಿಕ, ನೀವು ಕೆಲಸ ಬಿಡುವ ಹೊತ್ತಿಗೆ ಹತ್ತು ದಿನದ ಸಂಬಳ ಹಾಗೆಯೆ ಬಿಟ್ಟು ಹೋಗಿದ್ದೀರಿ ನೆನಪಿದೆಯಾ...ಎಂದು ಹೇಳಿ, ನಾಳೆ ಬೆಳಿಗ್ಗೆ ಬಂದು ಆ ಹತ್ತು ದಿನದ ಸಂಬಳ ಪಡೆದು , ಮರು ಕೆಲಸಕ್ಕೆ ಸೇರಿಕೊಳ್ಳುವಂತೆ ಹೇಳಿ ಫೋನ್ ಕಟ್ ಮಾಡಿದರು. 

ಆ ಒಂದು ಕ್ಷಣಕ್ಕೆ ಆ ನೊಂದ ತಂದೆಯ ಖುಷಿಗೆ ಕೊನೆಯೆ ಇಲ್ಲ. ತಕ್ಷಣ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸಿಯೂ ಆಯಿತು. ಆ ಕ್ಷಣಕ್ಕೆ ಅವರ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೂತಲ್ಲಿಯೆ ಉಡುಪಿ ಶ್ರೀ ಕೃಷ್ಣ ಪರಮಾತ್ಮನಿಗೆ ಕೈ ಮುಗಿದು ನಮಸ್ಕಾರ ಮಾಡಿದರು. ಶ್ರೀ ಕೃಷ್ಣ ಮಠದಿಂದ ಹೊರಗೆ ಬಂದು ಮಕ್ಕಳಿಗೆ ತಿಂಡಿ ತಗೊಂಡು ವಾಪಸ್ ಮನೆಗೆ ಹೋದರು.

(ವಾಟ್ಸಾಪ್ ನಲ್ಲಿ ಯಾರೋ ಅಜ್ಞಾತ ಲೇಖಕ ಬರೆದ ಕಥೆಯಿದು. ನಿಜ ಜೀವನದ ಪ್ರಸಂಗವೋ, ಕಾಲ್ಪನಿಕ ಕಥೆಯೋ ತಿಳಿಯದು. ಆದರೆ ಕಥೆಯ ಒಳಾರ್ಥ ಬಹಳ ಸೊಗಸಾಗಿದೆ ಎಂದು ಭಾವಿಸಿ, ಅನಾಮಧೇಯ ಲೇಖಕರಿಗೆ ಕೃತಜ್ಞತೆ ಸಲ್ಲಿಸುತ್ತಾ ಕಥೆಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.) 

ಚಿತ್ರ ಕೃಪೆ: ಇಂಟರ್ನೆಟ್ ತಾಣ