ತಂದೆಯ ಮನಸು...

ತಂದೆಯ ಮನಸು...

ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ " ನಿನಗೇನೂ ಆಗಲ್ಲ ಚಿನ್ನೂ , ಏನೂ ಹೆದರಬೇಡ " ಅಂತ ಒಳಗೊಳಗೆ ಅಳು ಉಕ್ಕಿ ಬರುತ್ತಿದ್ದರೂ, ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ ಹಣೆಗೆ ಮುತ್ತಿಕ್ಕಿ  ಸಾಂತ್ವನ ಹೇಳುತ್ತಾ ಕಳುಹಿಸಿಕೊಡುವಾಗ - " ಓ ದೇವರೇ ತಾಯಿ ಮಗುವನ್ನು ನೀನೇ ಕಾಪಾಡು " ಎಂಬ ಪ್ರಾರ್ಥನೆಯಾಗಿರುತ್ತದೆ ಗಂಡನಾದವನ ಮನಸಲ್ಲಿ.... 

ನಿಮ್ಮ ಪತ್ನಿ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ತಾಯಿ ಮಗು ಚೆನ್ನಾಗಿದ್ದಾರೆ... ಅಂತ ಡೋರ್ ತೆರೆದು ಬಂದ ನರ್ಸ್ ಹೇಳುವಾಗ ಆತನ ಕಣ್ಣುಗಳಲ್ಲಿ ಆತಂಕ ಮತ್ತು ಮನದೊಳಗೆ ಸಂತೋಷವೂ ಕಾಣಿಸುತ್ತದೆ ಆ ತಂದೆಯಲ್ಲಿ....

ನಂತರದ ದಿನಗಳಲ್ಲಿ ಆ ಮುದ್ದು ಮಗಳ ಉತ್ತಮ ಭವಿಷ್ಯವನ್ನು ರೂಪಿಸುವ ತಯಾರಿಯಲ್ಲಿ ಮಾತ್ರ ಬ್ಯುಸಿಯಾಗಿರುತ್ತಾರೆ ಆ ತಂದೆ.....ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹಿ, ಸಂತೋಷದ ದಿನಗಳುರುಳುತ್ತಿದ್ದಂತೆ ಒಂದು ದಿನ ಆಕೆ ಋತುಮತಿಯಾದಾಗ ,  ಮೊದಲು ಆ ತಂದೆಯ ಮನಸೊಮ್ಮೆ ಮರುಗಿತಾದರೂ, ಈ ಕ್ರಿಯೆಯು ಯಾವತ್ತಾದರೂ ಹೆಣ್ಣೊಬ್ಬಳಿಗೆ ಆಗಲೇ ಬೇಕಲ್ಲವೇ ಅಂತ ತನ್ನನ್ನು ತಾನೇ ಸಂತೈಸುವ ಮನಸಾಗಿರುತ್ತದೆ ಆ ತಂದೆಯದ್ದು....

ವಯಸಿಗೆ ಬಂದ ಮಗಳ ಶರೀರ ಭಾಗಗಳಲ್ಲಿ ಬೆಳವಣಿಗೆಯ ಬದಲಾವಣೆಯಾದಾಗ ಆ ತಂದೆಯ ಮನಸಲ್ಲಿ ಭಯವೆಂಬ ಕಪ್ಪುಛಾಯೆ ನೆಲೆಯೂರುತ್ತದೆ....ನಂತರದ ದಿನಗಳಲ್ಲಿ ಮಗಳ ಪ್ರಯಾಣ ಮತ್ತು ವಸ್ತ್ರಧಾರಣೆಯು ತಂದೆ ಹೇಳುವ ಪ್ರಕಾರವೇ ಆಗಿರುತ್ತದೆ. ದಿನನಿತ್ಯ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುವಾಗ ಖರ್ಚುಗಳನ್ನು ಕಡಿಮೆ ಮಾಡಿಯೂ , ಸಾಮಾನುಗಳ ಬೆಲೆಯನ್ನು ಚರ್ಚೆ ಮಾಡಿಯೂ ಮಗಳ ಮದುವೆ ಖರ್ಚಿಗಾಗಿ ಒಂದೊಂದು ರುಪಾಯಿಗಳನ್ನು ಒಟ್ಟುಗೂಡಿಸುತ್ತಿರುತ್ತಾನೆ ಆ ತಂದೆ....

ತಡ ರಾತ್ರಿಯವರೆಗೂ ಮಗಳ ಕೋಣೆಯಲ್ಲಿ ಲೈಟ್ ಆನ್ ಮತ್ತು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕುಳಿತಿರುವ ಮಗಳನ್ನು ನೋಡುವಾಗ ಆ ತಂದೆಯ ಮನಸಿನಲ್ಲಿ ಒಂದೇ ಪ್ರಾರ್ಥನೆಯಾಗಿರುತ್ತದೆ - "ದೇವರೇ ಮಗಳು ದಾರಿತಪ್ಪದಿರಲಿ... ಮಗಳ ನಡೆ ಒಂದು ಅವಘಡಕ್ಕೆ ಕಾರಣವಾಗದಿರಲಿ....."

ಮಗಳನ್ನು ಕಾಣಲು ಬಂದ ವರನ ಮುಂದೆ ಮಗಳನ್ನು ಕರೆತಂದು ನಿಲ್ಲಿಸುವಾಗ ಆ ತಂದೆಯ ಮುಖದಲ್ಲಿ ಮುಗುಳ್ನಗುವಿದ್ದರೂ, ಅವನ ಮನಸಲ್ಲಿ ಒಂದು ನಡುಕ ಉಂಟಾಗುವುದು..... ತನ್ನ ಮುದ್ದು ಮಗಳನ್ನು ಅಪರಿಚಿತನೊಬ್ಬನ ಮನೆಗೆ ಕಳುಹಿಸಿಕೊಡುವುದನ್ನು ನೆನೆದು ಉಂಟಾದ ನಡುಕ....

ಮದುವೆ ನಿಶ್ಚಯವಾದಾಗ ದಿನಗಳು ಬೇಗ ಬೇಗ ಉರುಳುತ್ತಿರುವಂತೆ ಅನಿಸುತ್ತದೆ ಆ ತಂದೆಗೆ.... ಮನೆಯಲ್ಲಿ ಒಂದು ಕಪ್ ಟೀಯನ್ನು ಕೂಡಾ ನೆಮ್ಮದಿಯಿಂದ ಕುಡಿಯಲು ಸಾಧ್ಯವಾಗದಷ್ಟು ಅಲ್ಲೋಲ ಕಲ್ಲೋಲವಾಗಿರುತ್ತದೆ ಆ ತಂದೆಯ ಮನಸು..... ಮದುವೆ ದಿನದಂದು ಆ ಅಪರಿಚಿತನ ಕೈಗೆ ತನ್ನ ಮಗಳ ಕೈಯನ್ನು ಜೋಡಿಸಿ ಹಿಡಿಯುವಾಗ ಆ ತಂದೆಯ ತುಂಬಿದ ಕಣ್ಣುಗಳು ಮತ್ತು ದುಃಖ ತಡೆಯಲಾಗದೆ ನಡುಗುತ್ತಿರುವ ತುಟಿಗಳು ಕಾಣುವುದು...

ಮನೆಯ ಮೆಟ್ಟಿಲುಗಳನ್ನು ಇಳಿದು ಹೋಗುವಾಗ ತನ್ನ ಎದೆಯ ಮೇಲೆ ಮಲಗಿದ ಮುದ್ದು ಮಗಳ ಬಾಲ್ಯದ ನೆನಪುಗಳಾಗಿರುತ್ತದೆ ಆ ತಂದೆಯ ಮನಸಲ್ಲಿ..... ಮದುವೆಯ ಕಾರ್ಯಕ್ರಮವೆಲ್ಲಾ ಮುಗಿದ ನಂತರದ ದಿನಗಳಲ್ಲಿ ಮದುವೆಯ ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಆ ತಂದೆಯು ಕಷ್ಟಪಡುವ ದಿನರಾತ್ರಿಗಳಾಗಿರುತ್ತದೆ....

ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆ ಕಟ್ಟಲಾಗದು.....ಹೆಣ್ಣು ಮಕ್ಕಳೇ ಇಂತಹ ಶಾಶ್ವತ ಪ್ರೀತಿಯಿಂದ ವಂಚಿತರಾಗಿ ಭವ್ಯವಾದ ಬಾಳನ್ನು ಕಳೆದುಕೊಳ್ಳದಿರಿ. ಹರೆಯದ ಬಯಕೆಗೆ ಕಡಿವಾಣವಿರಲಿ. ಹಿರಿಯರ ಪ್ರೀತಿಗೆ ಬೆಲೆ ಇರಲಿ ಆಧುನಿಕ ಪೀಳಿಗೆಯಲ್ಲಿ ನನ್ನ ವಿನಮ್ರ ಪ್ರಾಥ೯ನೆ. ಓದಿರಿ ಅಥೈ೯ಸಿಕೊಳ್ಳಿರಿ ಇದೋ ನಿಮಗಾಗಿ.

ಕ್ಷಮೆ ಇರಲಿ..ಈ ಲೇಖನದ ಕರ್ತೃ ಯಾರು ಅಂತ ಗೊತ್ತಿಲ್ಲ....ಆದರೆ ಎಲ್ಲ ತಂದೆಯರಿಗೂ ಅನ್ವಯ ಆಗತ್ತೆ...

 

ಫೇಸ್ ಬುಕ್ ನಿಂದ ಸಂಗ್ರಹಿತ. ಚಿತ್ರ: ಇಂಟರ್ನೆಟ್