ತಂದೆ ಮಕ್ಕಳ ಮಿಲನ

ತಂದೆ ಮಕ್ಕಳ ಮಿಲನ

ಕವನ

ದಿಟ್ಟ ತನದಲಿ ಹಯವ ಬಂಧಿಸಿ

ಕಟ್ಟಿ ಛಲದಲಿ ಸಮರಕೆಳಸಿದ

ಪುಟ್ಟ ಬಾಲರ ಕಂಡು ಭ್ರಮಿತನು ದೇವ ಶ್ರೀರಾಮ

ಸಿಟ್ಟುಗೊಳ್ಳದೆ ನುಡಿದನವರಲಿ

ಕೆಟ್ಟ ಹಟವನು ತೊರೆದು ಮೊದಲಲಿ

ಬಿಟ್ಟು ಕಳುಹಿರಿ ಯಜ್ಞ ಕುದುರೆಯ, ಬೇಡ ಸಂಗ್ರಾಮ

 

ಇಂತು ಲವ ಕುಶರಲ್ಲಿ ಮಮತೆಯು

ಬಂತು ಮನದಲಿ ರಾಮಚಂದ್ರಗೆ

ನಿಂತು ಬಾಲರ ತಬ್ಬುವಾಸೆಯು ಬೆಳೆದು ಮನದೊಳಗೆ

ಇಂಥ ಮಾತಿನ ಯತ್ನ ಸಾಗಿರೆ

ಹಂತ ಹಂತದಿ ಮಣಿಸಲಾಗದೆ

ಚಿಂತೆಯಾಯಿತು ನೊಂದ ಮನದಲಿ ತಂದ ಬೇಗುದಿಗೆ

 

ಮುಂದೆ ನಿಂತಿಹ ಮಕ್ಕಳಿಬ್ಬರ

ತಂದೆ ತಾನೆಂದರಿಯ ದೇವನು

ಕಂದರೀರ್ವರ ಮುದ್ದು ಮೊಗವನು ಕಂಡು ಯೋಚಿಸಿದ

ಚಂದ ಮಾತಲಿ ಮಣಿಸಲಾಗದೆ

ಕೊಂದು ಕಳೆಯುವುದೆಂತು ಚಿಣ್ಣರ

ನೊಂದ ಮನದಲಿ ದೇವ ರಘಪತಿ ಸಮರಕಣಿಯಾದ

 

ಸಿದ್ಧಗೊಂಡಿತು ಸಮರಕಣವದು

ಯುದ್ಧ ರಂಗದಲೇನಿದಚ್ಚರಿ

ಗೆದ್ದ ಬಾಲರು ಶೌರ್ಯದಿಂದಲಿ ಪಿತನೆಂದರಿಯದೆಲೆ

ಸುದ್ದಿಯರಿತಳು ಮಾತೆ ಜಾನಕಿ

ಮುದ್ದು ಮಾಡದೆ ಪುತ್ರರತ್ನರ

ಖುದ್ದು ಪುತ್ರರನಿರಿಸಿ ರಾಮನ ದಿವ್ಯ ಚರಣದಲೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್