ತನ್ನ ಸಂಗಾತಿಯನ್ನೇ ತಿನ್ನುವ ಹೆಣ್ಣು ಅಕ್ಟೋಪಸ್ !

ತನ್ನ ಸಂಗಾತಿಯನ್ನೇ ತಿನ್ನುವ ಹೆಣ್ಣು ಅಕ್ಟೋಪಸ್ !

ಅಕ್ಟೋಪಸ್ ಒಂದು ಅಚ್ಚರಿದಾಯಕ ವಿಭಿನ್ನ ರೀತಿಯ ಜೀವಿ. ಸಮುದ್ರದಾಳದ ಕೌತುಕಗಳಲ್ಲಿ ಒಂದಾದ ಈ ಜೀವಿಯ ಬಗ್ಗೆ ಈಗಾಗಲೇ ‘ಸಂಪದ' ಜುಲೈ ೧೩, ೨೦೨೦ರಲ್ಲಿ ವಿವರವಾಗಿ ಪ್ರಕಟಿಸಿದ್ದೇವೆ. ನಂತರದ ದಿನಗಳಲ್ಲಿ ನಡೆದ ಸಂಶೋಧನೆಗಳಿಂದ ತಿಳಿದುಬಂದ ಕೆಲವೊಂದು ಕುತೂಹಲಭರಿತ ವಿಷಯಗಳನ್ನು ಆ ಲೇಖನಕ್ಕೆ ಪೂರಕ ಮಾಹಿತಿಯಾಗಿ ನೀಡುತ್ತಿದ್ದೇವೆ.

ಗಂಡು ಅಕ್ಟೋಪಸ್ ಹಾಗೂ ಹೆಣ್ಣು ಅಕ್ಟೋಪಸ್ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಗಂಡು ಅಕ್ಟೋಪಸ್ ಅನ್ನು ತಿಂದು ಬಿಡುತ್ತದೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ಈ ಮೊದಲೇ ಬಹಿರಂಗ ಪಡಿಸಿದ್ದರು. ಆದರೆ ಯಾವ ಕಾರಣಕ್ಕಾಗಿ ಹೆಣ್ಣು ಅಕ್ಟೋಪಸ್ ಈ ರೀತಿಯ ವರ್ತನೆಯನ್ನು ತೋರ್ಪಡಿಸುತ್ತದೆ ಎನ್ನುವ ಬಗ್ಗೆ ಸೂಕ್ತ ವಾದ ಉತ್ತರ ದೊರೆತಿರಲಿಲ್ಲ, ಈ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ನಡೆಸಲಾಗಿ ವಿಜ್ಞಾನಿಗಳು ಒಂದು ಸಮಾಧಾನಕರವಾದ ಉತ್ತರವನ್ನು ಕಂಡುಕೊಂಡಿದ್ದಾರೆ. 

ಗಂಡು-ಹೆಣ್ಣು ಅಕ್ಟೋಪಸ್ ಸಮಾಗಮದ ಬಳಿಕ ಗಂಡು ಅಕ್ಟೋಪಸ್ ಹೆಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಹೆಣ್ಣು ಅಕ್ಟೋಪಸ್ ಬಿಡಬೇಕೇ? ಆಗ ಅದರ ಸ್ವಭಾವವೇ ಬದಲಾಗಿ ಅದು ಗಂಡನ್ನು ಹಿಡಿದು ಕೊಂದು ತಿಂದು ಬಿಡುತ್ತದೆ. ಇದಕ್ಕೆ ಕಾರಣ ಲೈಂಗಿಕ ಕ್ರಿಯೆಯ ಬಳಿಕ ಹೆಣ್ಣು ಅಕ್ಟೋಪಸ್ ನ ದೇಹದಲ್ಲಾಗುವ ಬದಲಾವಣೆ. ಹೆಣ್ಣಿನ ಶರೀರದಲ್ಲಿ ಉತ್ಪತ್ತಿಯಾಗುವ ಒಂದು ರಾಸಾಯನಿಕವು ಈ ಬದಲಾವಣೆಗೆ ಕಾರಣವಾಗುತ್ತದೆ. ಈ ರಾಸಾಯನಿಕವು ಹೆಣ್ಣು ಗಂಡನ್ನು ಕೊಲ್ಲುವುದಕ್ಕೆ ಪ್ರಚೋದಿಸುತ್ತದೆ. ಈ ಪ್ರಯೋಚನೆಯಿಂದ ಹೆಣ್ಣು ಗಂಡನ್ನು ಕೊಂದು ತಿಂದೇ ಬಿಡುತ್ತದೆ. ಈ ರಾಸಾಯನಿಕದ ಸ್ರವಿಸುವಿಕೆಯ ಕಾರಣದಿಂದಲೇ ಅಕ್ಟೋಪಸ್ ತನ್ನನು ತಾನು ಹಿಂಸಿಸಿಕೊಳ್ಳುತ್ತದೆ.

ಕೆಲವು ಸಂದರ್ಭದಲ್ಲಿ ಗಂಡು ಅಕ್ಟೋಪಸ್ ಹೆಣ್ಣಿನ ಬಾಹುಗಳಿಂದ ತಪ್ಪಿಸಿಕೊಂಡರೂ ಹೆಚ್ಚು ಸಮಯ ಬದುಕುಳಿಯಲಾರದು. ಗಂಡು ಅಕ್ಟೋಪಸ್ ಕಣ್ಣಿನ ಬಳಿಯ ಗ್ರಂಥಿಯಿಂದ ಒಂದು ರೀತಿಯ ಹಾರ್ಮೋನ್ ಸ್ರವಿಸಲಾರಂಭಿಸುತ್ತದೆ. ಈ ಕಾರಣದಿಂದ ಗಂಡು ಹೆಚ್ಚು ಸಮಯ ಬದುಕಿ ಉಳಿಯಲಾರದು. 

ಇನ್ನೊಂದು ವಿಶೇಷ ಸಂಗತಿ ಗೊತ್ತೇ? ಸಮಾಗಮದ ನಂತರದ ದಿನಗಳಲ್ಲಿ ಹೆಣ್ಣು ಅಕ್ಟೋಪಸ್ ಕಡಲಿನಾಳದಲ್ಲಿ ಸುರಕ್ಷಿತ ಸ್ಥಳವನ್ನು ಹುಡುಕಿ ತನ್ನ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಡುವ ಸಮಯದಲ್ಲೂ ಹೆಣ್ಣು ಅಕ್ಟೋಪಸ್ ಶರೀರದಲ್ಲಿ ಮೂರು ಬಗೆಯ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಪ್ರಾಜೆಸ್ಟೆರೋನ್, ಪ್ರೆಗ್ನೆನೊಲೋನ್ ಹಾಗೂ ಡೀಹೈಡ್ರೋಕೊಲೆಸ್ಟರಾಲ್ ಎಂಬ ಈ ರಾಸಾಯನಿಕಗಳು ಅಕ್ಟೋಪಸ್ ತನ್ನನ್ನು ತಾನೇ ತಿನ್ನುವಂತೆ ಪ್ರಚೋದಿಸುತ್ತದೆ. ಈ ಕಾರಣದಿಂದ ಆಕ್ಟೋಪಸ್ ತನ್ನ ಶರೀರದ ಭಾಗಗಳನ್ನು ತಾನೇ ತಿನ್ನಲು ಪ್ರಾರಂಭಿಸುತ್ತದೆ. ಈ ರಾಸಾಯನಿಕ ಪ್ರಭಾವ ಕಮ್ಮಿಯಾದ ಕೂಡಲೇ ಅಕ್ಟೋಪಸ್ ಶಾಂತವಾಗಿ ಬಿಡುತ್ತದೆ. ತಿಂದ ಭಾಗಗಳು ಮತ್ತೆ ಚಿಗುರುತ್ತವೆ. 

ಸಾಮಾನ್ಯ ತಳಿಯ ಅಕ್ಟೋಪಸ್ ಗಳು ಮೊಟ್ಟೆಯಿಟ್ಟು ಕಾವು ನೀಡಿ ಮರಿ ಮಾಡಲು ಸುಮಾರು ೫೦ ದಿನಗಳನ್ನು ತೆಗೆದುಕೊಂಡರೆ, ಅಪರೂಪದ ವಿಶೇಷ ಅಕ್ಟೋಪಸ್ ಗಳು ಸುಮಾರು ೪ ವರ್ಷ ತೆಗೆದುಕೊಳ್ಳುವುದೂ ಇದೆಯಂತೆ. ಮೊಟ್ಟೆಯೊಡೆದು ಮರಿ ಹೊರಬಂದ ಬಳಿಕ ತಾಯಿ ಅಕ್ಟೋಪಸ್ ಸಾವನ್ನಪ್ಪುತ್ತದೆ. ಇದೊಂದು ಅದ್ಭುತವಾದ ಸಂಗತಿಯಲ್ಲವೇ? ಹೀಗೇ ಸಾಗರದ ಅಡಿಗಳಲ್ಲಿ ಇನ್ನೆಷ್ಟು ಕೌತುಕಗಳಿವೆಯೋ?

(ಮಾಹಿತಿ: ಕರೆಂಟ್ ಬಯಾಲಜಿ ಪತ್ರಿಕೆ) 

***

ನೀರು ಮತ್ತು ಕೋಲಾ ; ನಿಮ್ಮ ಆಯ್ಕೆ ಯಾವುದು?

ಶರೀರದ ಚಯಾಪಚಯಗಳಿಂದ ಸದಾ ಕಾಲ ನೀರು ಬಾಷ್ಪವಾಗುತ್ತಲೆ ಇರುತ್ತದೆ. ಈ ನೀರಿನ ಅಂಶ ಒಂದು ಹಂತಕ್ಕಿಂತ ಕಡಿಮೆಯಾದಾಗ ನಮ್ಮ ಮಿದುಳು ಅದನ್ನು ದಾಹ ಎಂದು ಗುರುತಿಸುತ್ತದೆ. ಆಗ ನೀರು ಕುಡಿಯುವ ಬಯಕೆ ಕಾಡುತ್ತದೆ. ಅಂದರೆ, ನೀರಡಿಕೆ ಎಂಬುದು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ನಮ್ಮ ಮಿದುಳು ನೀಡುವ ಸಂಕೇತ. ಈ ಸೂಚನೆಯನ್ನು ಅವಗಣಿಸಿದರೆ ಅಥವಾ ನೀರಿನ ಬದಲಿಗೆ ಸಕ್ಕರೆಯುಕ್ತ ಪೇಯಗಳನ್ನು (ಕೋಲಾ, ಆರೆಂಜ್ ಇತ್ಯಾದಿ) ಸೇವಿಸಿದರೆ, ನೀರಡಿಕೆ ತಾತ್ಕಾಲಿಕವಾಗಿ ಇಂಗುತ್ತದೇನೊ ನಿಜ. ಆದರೆ, ಸಕ್ಕರೆಯುಕ್ತ ಪಾನೀಯಗಳು ಮೂತ್ರಪಿಂಡಗಳ ಮೂಲಕ ಹೆಚ್ಚು ನೀರನ್ನು ಸೋಸಿ, ಇನ್ನಷ್ಟು ನೀರನ್ನು ಮೂತ್ರದಲ್ಲಿ ಹೊರಹಾಕುತ್ತವೆ. ಇಂತಹ ಪಾನೀಯಗಳ ಜೊತೆಗೆ ಸೇವಿಸಿದ ನೀರಿಗಿಂತ ಶರೀರ ಹೊರಹಾಕುವ ನೀರಿನ ಅಂಶವೇ ಅಧಿಕ. ಅದರಿಂದ ಸುಸ್ತು, ನಿತ್ರಾಣದಂತಹ ಲಕ್ಷಣಗಳು ಕಾಣಬಹುದು. ಹೀಗಾಗಿ, ದಾಹವಾದಾಗ ಮೊದಲು ಸಾಕಷ್ಟು ನೀರು ಕುಡಿಯುವುದು ಸರಿಯಾದ ಪದ್ಧತಿ. 

(ಮಾಹಿತಿ: ಸೂತ್ರ ಪತ್ರಿಕೆ)

***

ಚಿತ್ರ ಕೃಪೆ: ಅಂತರ್ಜಾಲ ತಾಣ