ತಬ್ಬಲಿಯು ನೀನಾದೆ ಮಗನೆ...(ಪ್ರೀತಿ)

ತಬ್ಬಲಿಯು ನೀನಾದೆ ಮಗನೆ...(ಪ್ರೀತಿ)

ಪ್ರೀತಿಯೇಕೊ ಆಯ್ತಲ್ಲೆ ತಬ್ಬಲಿ, ತಬ್ಬಿದಾಗ ಶಂಕೆಯಾ ಹೆಬ್ಬುಲಿ 
ಅಬ್ಬರಿಸಿ ಹಿಡಿದವೆ ಅನುಮಾನ, ಮೌನ ಬೇಟೆಯಾಡಿ ಮಾತನ್ನ 
ತಬ್ಬಿದದೆ ಮನಗಳದೇಕೊ ಮುನಿಸು, ಜಾರೆಲ್ಲಿ ಹೋಯಿತವೆ ಕನಸು ?
ಯಾಕಾಯಿತು ಹೀಗೆ ಹೇಳು ? ಬಿತ್ತನೆ ಪೈರಾಗುವ ಮೊದಲೆ ಹಾಳು ?

ಕೈ ಕೈ ಹಿಡಿದು ನಡೆದಂತೆ ಜೊತೆ, ಮನಸಾಗಿತ್ತಲ್ಲ ಜೋಡಿ ಕವಿತೆ ?
ಸಾಲು ಹಾಡುವ ಮೊದಲೆ ಪದ, ಮೂಡಿ ಅನುರಣಿಸಿತ್ತೆಲ್ಲಾ ನಿನಾದ ?
ಬಂದಿತ್ತೆಲ್ಲಿಂದಲೀ ನಂಟು ಬಂಧ ? ಎಂದ ಮಾತದೇಕೀಗ ಬರಿ ನಿಶ್ಯಬ್ದ ? 
ಬಾಂಧವ್ಯದ ಬಾಂದಳದಲೀಗ, ಯಾಕೆ ಬರಿ ಬಂಧನದ ಹಿಂಸ ರಾಗ  ?

ಅತಿಯಾದ ಪ್ರೀತಿಯವತಾರ , ರೂಪು ತಾಳಿತ್ತಲ್ಲ ಜನ್ಮಾಂತರ ಪ್ರವರ 
ಮಿತಿಯಿಲ್ಲದತಿಯ ಪ್ರಕಟ, ಮಾಡಲ್ಹೊರಟಿತಲ್ಲ ನಿನ್ನ ಮೆಚ್ಚಿಸುವಾಟ ?
ಅರಿವಾಗದೆ ಹೋಯ್ತು ಅತಿ ಪ್ರೀತಿ, ಉಸಿರುಗಟ್ಟಿಸುವಾ ಅದರ ರೀತಿ 
ಅತಿಯಿಂದ ಮೆಚ್ಚಿಸೆ ಪ್ರವಾಹ, ಅವಸರವೆ ಬಳಲಿಸಿ ಮನ ಪ್ರಯಾಸ ..

ಇಂದರಿವಾಗುತಿದೆ ಅದರ ನೋವು, ನೀ ದೂರ ನಿಂತ ಗಳಿಗೆಯ ಕಾವು 
ಬೇಕೆನಿಸಿದ ಆಸೆಯ ಬೆರಗೆ, ತಂದು ಕೂರಿಸಿದೆ ನೋಡು ಹೃದಯ ಬೇಗೆ
ತಪ್ಪಾಯಿತು ನನಗೀಗರಿವಾಯ್ತೆ, ಅರಿತಾಗ ನೀನೇಕೊ ದೂರದೆ ನಿಂತೆ 
ಕೊಡಬಾರದೆ ಒಂದವಕಾಶ ? ಸರಿ ಮಾಡಿಬಿಡುವ ಮರೆಸೆಲ್ಲ ತರ ಕ್ಲೇಷ..

ತಪ್ಪಾಗದು ಮತ್ತೆ ಎಂದು, ಹೇಳಲ್ಹೇಗೆ - ಹುಟ್ಟುಗುಣದ ಪರಿ ಬಿಡದು 
ಆಗಬಿಡದೆ ಪ್ರೀತಿಸುವೆ ನಿನ್ನ, ತೂಗಿ ಅಳೆದು ಅತಿಯಾಗದಂತೆ ಚಿನ್ನ 
ಮಾಡಿ ತೋರಿಸುವ ಹುಚ್ಚು ಬಿಡುವೆ, ಸಹಜದಲಿ ನಿನ್ನ ಜತೆಜತೆಗೆ ಬೆರೆವೆ  
ಅರಳಿಸುವೆ ಪ್ರೀತಿಯ ಕುಸುಮ, ಮುದದೆ ತಾನಾಗಿ ವಿಕಸಿಸೆ ಸಂಭ್ರಮ 
 

Comments

Submitted by nageshamysore Wed, 02/24/2016 - 19:51

In reply to by kavinagaraj

ನಿಮ್ಮ ಮಾತು ನಿಜ ಕವಿಗಳೇ, ಇಲ್ಲಿ ಸೋತು ಗೆದ್ದವರು ಅಭಿನಂಧನಾರ್ಹರಾದರೆ, ಗೆದ್ದು ಸೋತವರು ಅನುಕಂಪಾರ್ಹರಾಗುವ ವಿಪರ್ಯಾಸ. ಇತ್ತ ಗೆದ್ದ ಸರದಾರರೂ ಆಗಲಿಲ್ಲ, ಸೋತು ಸುಣ್ಣವಾಗಲೂ ಇಲ್ಲ ಎನ್ನುವ ತ್ರಿಶಂಕುಗಳ ಕಥೆ ಮಾತ್ರ 'ತಬ್ಬಲಿಯೂ ನೀನಾದೆ ... ' ಎನ್ನುವ ಹಾಗೆಯೆ..! ಅವರಿಗಿಂತ ಹೆಚ್ಚು ತಬ್ಬಲಿಯಾಗುವುದು ನಡುವಿನ ಅನಾಥ ಪ್ರೀತಿ..!!