ತರ್ಕಸಂಗತ -ದೈವಸಂಮತ

ತರ್ಕಸಂಗತ -ದೈವಸಂಮತ

ಕವನ

ಕಣ್ವಪುರದಿಂದನತಿ ದೂರದಿ ಮೂಡಣದಲಿದೆ  ಕಾನವು

ಹರಿಹರರು ಧೂಮಾವತಿಯು ನೆಲಸಿರುವ ಸುಂದರ ತಾಣವು         [೧]

ಹಸುರು ಚೆಲ್ಲಿದ ಬಯಲ ಕೋಡಿದು ಕಂಗು ಕೊಬೆಗಳ ಮಧ್ಯದಿ

ಎಸೆವ ಕಬೆಕೋಡಿನೋಳಿರುವುದೀ ಊರ ದೈವದ ಸನ್ನಿಧಿ            [೨]

ಆಂಗ್ಲರಾಳ್ವಿಕೆ ದೇಶದಲ್ಲಿರೆ ಲೋಕಮತವಿಲ್ಲಿದ್ದಿತು

ಹತ್ತು ಜನರೇ ಮಾನ್ಯರೆನ್ನುವ ನಂಬಿಕೆಯ ಸೊಡರುರಿಯಿತು          [೩]

ಜನರಿಗಾಗಿಯೇ ದೈವ-ದೇವರು,ಜನರ ಹಿತವೇ ಮುಖ್ಯವು

ಜನರೆ ಪ್ರಭುಗಳು,ಜನರೆ ಮಾನ್ಯರು,ಇದಕೆ ಸಂಶಯವಿಲ್ಲವು          [೪]

ಪ್ರತಿವರುಷವೂ ದೇವಕಾರ್ಯವು ,ಹೊಸತು ಪಾಯಸದೌತಣ

ಭೂತ ನೃತ್ಯದ ಕಟ್ಟು-ಕಟ್ಟಳೆ,ಭಕ್ತಿ ಭಾವದ ರಿಂಗಣ                     [೫]

ನಂಬಿರೆನ್ನನು,ಬರಿದೆ ಕಾಣಿಕೆ ಸಲಿಸಿ ಹೋದರೆ ಸಾಲದು

ಸಲಹುವೆನು ನಿಮ್ಮೆಲ್ಲರನುದಿನವೆನುತ ದೈವವು ನುಡಿವುದು            [೬]

ಸರದಿಯಾಳ್ವಿಕೆ ನಡೆಸಿ ಬರುವರು ಸತತ ಹವ್ಯಕ ವಿಪ್ರರು

ಒಂದುಗೂಡುತ ಚಂದಗಾಣಿಪರಿಲ್ಲಿಯೂರ ಸಮಸ್ತರು                     [೭]

ಸಹಜವೀ ಜನರೊಳಗೆ ಭಿನ್ನತೆ ವಿರಸ ಭಾವದ ಮೊಳಕೆಯು

ಲೋಕಸತ್ತೆಯ ಪೀಠವೀ ಮಠ ,ನಡೆಯುವುದು ಪಂಚಾಯ್ತಿಯು          [೮]

ಯಾವ ವಿಷಯದ ವ್ಯಾಜ್ಯವಿದ್ದರು ಹತ್ತು ಮಂದಿಯ ತೀರ್ಪಿಗೆ

ತಲೆಯ ತೂಗುತ ದೈವ ಕೊಡುವುದು ತನ್ನ ಬೆಂಬಲದೊಪ್ಪಿಗೆ           [೯]

ಹರಿಯು ಬೇರೆಯೆ?ಹರನು ಬೇರೆಯೆ ? ನ್ಯಾಯ ಬೇರೆಯೆ?ದೈವಕೆ

ತರ್ಕಸಂಗತ ಮಾತು ಸಂಮತವಿರಲು  ಭಯವಿನ್ನೇತಕೆ?                [೧೦]

ಶುದ್ಧ ಮನಸಿನೋಳೆಲ್ಲರೊಂದಾಗುತ್ತ ಕಾಣಿಕೆಯರ್ಪಿಸಿ

ಎಲ್ಲ ವಿರಸವ ಮರೆತು ಬಾಳುವ ಕಾನ ದೇವರ ಪೂಜಿಸಿ                 [೧೧]

 

[ಅಡಿ ಟಿಪ್ಪಣಿ-ಕಾನ=ಕಾಸರಗೋಡು ತಾಲೂಕು ಕುಂಬಳೆಯ ಬಳಿ ಇರುವ ಹಳ್ಳಿ.ಇಲ್ಲಿ ಶಂಕರ ನಾರಾಯಣ  ಮಠ  ಮತ್ತು ಧೂಮಾವತಿ ದೈವದ ಸನ್ನಿಧಿಯಿದೆ.ವರ್ಷವೂ ದೇವಕಾರ್ಯ ,ದೈವದ ನೃತ್ಯ ಅಂದರೆ ಕೋಲ ನಡೆಯುತ್ತದೆ.ನಾಡಿನ ವಿವಿಧ ಊರುಗಳ ಆಚರಣೆಗಳ ಕುರಿತು ಆಸಕ್ತಿಯಿರುವ ಸಂಪದಿಗರಿಗೋಸ್ಕರ ಇಲ್ಲಿ ಹಾಕುತ್ತಿದ್ದೇನೆ.]