ತಳಮಳ
ಕವನ
ಸಾಗರದ ಅಲೆಯ ಹೊಡೆತಕ್ಕೆ
ಸಿಕ್ಕ ಗುರಿಯಿರದ ನೌಕೆ
ಗಾಳಿ ಬೀಸಿದಾ ಕಡೆ ಚಲಿಸುತ್ತಿದೆ
ಮರದಿಂದ ಮರಕ್ಕೆ
ಬಯಲಿಂದ ಬಯಲಿಗೆ
ಹಗಲ ಪುಟವ ಮಗುಚಲು
ಸುಮ್ಮನೆ ಹಾರುವ ಹಕ್ಕಿ
ಕತ್ತಲಾವರಿಸಿಲ್ಲವೇ......?
ಆಕಾಶದ ತುಂಬಾ
ರೂಪವಿಲ್ಲ , ಅರ್ಥವಿಲ್ಲದ
ಮುಗಿಲ ಚಿತ್ತಾರ
ದುಂಬಿಗೇಕೆ ಕಾಡಲಿಲ್ಲ
ಗಾಢವಾಗಿ ಒಂದು ಗಂಧ...!
ಚಂಚಲತೆಯೊಳಗಡೆ ರವಿ
ಮೂಡಲೇ ಇಲ್ಲ
ಗದ್ದಲದ ನಡುವೆ
ಕಳೆದುಕೊಂಡ ಮುಖ
ಮೂಡದೇ ಹೋದ ದನಿ
ಆಗ ಎಲ್ಲಿ ಅವಿತಿತ್ತು...?
ಸದಾ ತಳಮಳ
ನದಿಯಂತೆ ಹರಿಯಲಾರೆ
ಕೊಳದಂತೆ ತಣ್ಣಗಿರಲಾರೆ
ಕಾರ್ತಿಕದಂತೆ ಬೆಳಗಲಿಲ್ಲ
ಆಲೆ ಅಲೆಯಾಗಿ ನಗಲಿಲ್ಲ
ಅಲ್ಲೊಂದು ಗಳಿಗೆ , ಇಲ್ಲೊಂದು ಗಳಿಗೆ
ಮತ್ತೆ ಮೂರನೇ ಆಯಾಮದ
ನಡುವೆ ತೂಕಡಿಕೆಯಲ್ಲಿ
ಪರಿಣಾಮಕಾರಿಯಾದ ಕೃತಿಯೊಂದು
ಮೂಡಲೇ ಇಲ್ಲ...!!