ತಾಟೀನುಂಗು, ತಾಜಾ ನುಂಗು

ತಾಟೀನುಂಗು, ತಾಜಾ ನುಂಗು

ಹತ್ತು ವರುಷಗಳಲ್ಲಿ ಮೊದಲ ಬಾರಿ ನಾನು ಸಿಂಗಪುರದಲ್ಲಿ ತಾಟಿನುಂಗು ಕಂಡೆ. ೬ ನುಂಗಿಗೆ ೪ ವಳ್ಳಿ ಎಂದ ತಮಿಳಿನವ. ಇದು ಒಂದೇ ದೇಶ, ಒಂದೇ ಸರಕಾರ, ಒಂದೇ ಕೇಬಲ್ ಹಾಗೆ ಒಂದೇ ರೇಟು. ಎರಡು ಮಾತಿಲ್ಲ ಬಿಡಿ.


ದಶಕಗಳ ಹಿಂದೆ ಬೇಸಿಗೆ ಕಾಲದಲಿ ರಾತ್ರಿ ಮದರಾಸಿನ ಮೆಯಿಲ್ ಗಾಡಿ ಬಂದಂತೆ ಬೆತ್ತದ ಬುಟ್ಟಿಯನು ಸೈಕಲಿನಲಿಟ್ಟು ಅದಕ್ಕೊಂದು ಲಾಂದ್ರ ತೂಗಿ ಹಾಕಿ ನುಂಗು...ತಾಟೀನುಂಗು, ತಾಜಾ ನುಂಗು", ಆಂಬೂರ್ ಮಲ್ಲಿ ಎಂದು ಕೂಗುತ್ತಾ ಹೋಗುತ್ತಿದ್ದ ಬೆಂಗಳೂರಿನ ಕಡೆಯ ಸೈಕಲ್ ವ್ಯಾಪಾರಿ.


ಕಾಲೇಜಿನ ದಿನಗಳು ಅವು. ನಮ್ಮಣ್ಣ ನುಂಗು..ನುಂಗು ಎಂದು ಓಡುತ್ತಿದ್ದ. ಮೆತ್ತಕೆ ತಕ್ಕೋಳಿ ಸಾಮಿ ಎಂದು ವ್ಯಾಪಾರಿ ಹೇಳುತ್ತಿದ್ದ. ಬೆತ್ತದ ಬುಟ್ಟಿಯಲಿ ತರುತ್ತಿದ್ದ ತಾಜಾ ತಾಜಾ ತಣ್ಣನೆಯ ನುಂಗನ್ನು ಕೈಯಲ್ಲಿ ಹಿಡಿದು, ತೆಳ್ಳನೆಯ ಸಿಪ್ಪೆ ಬಿಡಿಸಿ -ಮೃದುವಾದ ನುಂಗು ಎಲ್ಲಿ ಕೈಯಿಂದ ಜಾರಿ ಬೀಳುವುದೋ ಎಂದು ಜೋಪಾನವಾಗಿ ಕಚ್ಚುತ್ತಾ, ಚಿಮ್ಮುವ ತಂಪು ಸಿಹಿ ನೀರನ್ನು ಕುಡಿಯುತ್ತಾ ಆಹಾ-ಸುವೆಯೋ ಸುವೆ. ಸವಿದವನೇ ಬಲ್ಲ ಆ ನುಂಗಿನ ಸವಿಯ. ಗಟ್ಟಿಯಾಗಿ ಹಿಡಿಯದಿದ್ದರೆ ಥಟ್ಟನೆ ಜಾರುವ ನುಂಗು ಬಿದ್ದರಂತೂ ಗೊಳ್ಳನೆ ನಗು. ಅಯ್ಯೋ, ತೊಳ್ಕೊಂಡು ತಿನ್ನೋ ಏನೂ ಆಗೊಲ್ಲ ಎನ್ನುತ್ತಿದ್ದ ಕಾಲವೂ ಒಂದಿತ್ತು. ಹಾಗೆಯೇ ಏನೊಂದೂ ಅನಿಸದೆ ತೊಳೆದು ತಿಂದದ್ದೂ ಉಂಟು. ಈಗ?


ಕರ್ನಾಟಕದಲ್ಲಿ ತಾಟಿನುಂಗು, ತಾಟೀ ಹಣ್ಣು, ತುಳುವಿನಲ್ಲಿ ತಾಟಿಬೋಂಡ, ತಮಿಳಿನಲ್ಲಿ ನುಂಗು, ಮರಾಠಿಯಲಿ ತಾಡ್‌ಗೋಳ್, ಬೆಂಗಾಲಿಯಲ್ಲಿ ತಾಳ್, ಬಿಹಾರಿ ಭಾಷೆಯಲ್ಲಿ ತಾರಿ, ತೆಲುಗಿನಲ್ಲಿ ತಾಟಿ ಗೊಂಚಲು-ಗೊಂಚಲಾಗಿ ಕಂದುಬಣ್ಣದಲಿ ಬೊಡ್ಡೆಗಳಂತೆ ಇರುತ್ತದೆ. ಒಂದು ಬೊಡ್ಡೆಯಲ್ಲಿ ಮೂರ್ನಾಲ್ಕು ತಾಟಿನುಂಗು ಇರುತ್ತದೆ. ಇತ್ತೀಚೆಗೆ ಎಳನೀರಿನಂತೆ ಬೀದಿ ಬೀದಿಗಳಲ್ಲಿ ಕೊಚ್ಚಿ ತಾಜಾ-ತಾಜಾ ತಾಟಿನುಂಗು ಮಾರುತ್ತಾರೆ.


ತೆಂಗಿನ ಜಾತಿಗೆ ಸೇರಿದ Palmyra ಮರ ಸುಮಾರು 30 ಮೀಟರ್ ಎತ್ತರಕ್ಕೆ ಬೆಳೆಯುವುದು. ಇಂಡೋನೇಶಿಯಾದಲಿ ತಾಟಿನುಂಗಿನ ಸಕ್ಕರೆ ಉಪಯೋಗಿಸುತ್ತಾರೆ. ಇದಕ್ಕೆ ಗುಲ-ಜಾವಾ ಎನ್ನುತ್ತಾರೆ. ಕಾಂಬೋಡಿಯಾದ ರಾಷ್ಟ್ರೀಯ ಮರ. ಪ್ರಸಿದ್ಧ ಅಂಕೋರ್‌ವಾಟ್ ದೇಗುಲದ ಸುತ್ತ-ಮುತ್ತ ಕಾಣಬಹುದು. ಕಲ್ಪವೃಕ್ಷ ತೆಂಗಿನ ಮರದಂತೆಯೇ ತಾಟಿ ಮರದ ಗರಿ, ಬೊಡ್ಡೆ, ಕಾಯಿಗಳು ಬಲು ಉಪಯುಕ್ತ.


ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲಿ ಬೆಳೆಯುವ ತಾಟಿಯಿಂದ ಬೆಲ್ಲವೂ ತಯಾರು. ಈ ಬೆಲ್ಲ ಬಾಣಂತಿಯರಿಗೆ, ಮುಟ್ಟಿನ ತೊಂದರೆ ಇರುವವರಿಗೆ ಔಷಧಿ. ತಾಟಿನುಂಗಿನಲ್ಲಿ ಪೊಟಾಶಿಯಂ ಹಾಗೂ ನಾರಿನಂಶ ಹೆಚ್ಚಿದೆ. ತಿನ್ನಲು ಸುವೆಯಾದ ಇದರಲ್ಲಿ ಕೊಬ್ಬಿಲ್ಲ. ಎಚ್ಚರಿಕೆ ಬಾಯಾರಿಕೆ ನೀಗಿಸುವ ಈ ತಾಟಿನುಂಗಿಗೆ "ನೀರಾ"ದಲ್ಲೂ ಪಾಲುಂಟು. ಹುಷಾರು.


 

Comments