ತಾಪಮಾನದ ಅಪಾಯ

ತಾಪಮಾನದ ಅಪಾಯ

ತಾಪಮಾನ ಹೆಚ್ಚಳ ಈಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲ ದೇಶಗಳನ್ನು ಕಳವಳಕ್ಕೆ ಈಡುಮಾಡಿರುವ ಸಂಗತಿ. ಇದಕ್ಕೆ ಕಾರಣ ಇಲ್ಲದಿಲ್ಲ. ತಾಪಮಾನ ಈಗಿನದಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಹೆಚ್ಚಿದರೂ, ಅದರಿಂದ ಹಿಮಪರ್ವತಗಳು, ಸಮುದ್ರಗಳು ಹಾಗೂ ಒಟ್ಟಾರೆಯಾಗಿ ಪರಿಸರದ ಮೇಲೆ ಅನೇಕ ಬಗೆಗಳಲ್ಲಿ ಪರಿಣಾಮವಾಗಿ, ಮಳೆಬೆಳೆ ವಿಷಯದಲ್ಲೂ ಏರುಪೇರುಗಳಾಗುತ್ತವೆ. ಅಷ್ಟೇ ಅಲ್ಲ, ಮಾನವನ ಆರೋಗ್ಯದ ಮೇಲೂ ಇದರಿಂದ ಪ್ರತ್ಯಕ್ಷ-ಪರೋಕ್ಷ ಪರಿಣಾಮ ಇದ್ದೇ ಇರುತ್ತದೆ. ಹೀಗಾಗಿಯೇ, ವಿಶ್ವರಾಷ್ಟ್ರಗಳು ಪ್ಯಾರಿಸ್ ಹವಾಮಾನ ಒಡಂಬಡಿಕೆ ಮೂಲಕ, ಈ ಸಮಸ್ಯೆಯನ್ನು ಎದುರಿಸಲು ಸಜ್ಜಾಗಿವೆ. ತಾಪಮಾನ ಏರಿಕೆಯ ದುಷ್ಪರಿಣಾಮಗಳು ಈಗಾಗಲೇ ಕಂಡು ಬರುತ್ತಿದ್ದು, ಅಕಾಲಿಕ ಮಳೆ ಹಾಗೂ ಬಿಸಿಲು ಅನುಭವಕ್ಕೆ ಬರುತ್ತಿವೆ. ಈ ನಡುವೆ ದೇಶದ ಐದು ರಾಜ್ಯಗಳಲ್ಲಿ ಉಷ್ಣಮಾರುತದ ಮುನ್ಸೂಚನೆಯನ್ನೂ ಭಾರತೀಯ ಹವಾಮಾನ ಇಲಾಖೆ ನೀಡಿದೆ. ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಒಡಿಶಾಗಳಲ್ಲಿ ಉಷ್ಣಮಾರುತದ ಪ್ರಭಾವ ಅಧಿಕವಾಗಲಿದ್ದು, ಉಷ್ಣತೆ ೪೫ ಡಿಗ್ರಿ ಸೆಲ್ಸಿಯಸ್ ದಾಟಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉಷ್ಣಮಾರುತದಿಂದ ಅನೇಕ ಬಗೆಯ ದುಷ್ಪರಿಣಾಮ ಖಚಿತ. ಇನ್ನೊಂದೆಡೆ, ತಾಪಮಾನ ಬದಲಾವಣೆಯಿಂದ ಜಗತ್ತಿನಲ್ಲಿ ಹೊಸ ಸಾಂಕ್ರಾಮಿಕ ರೋಗಗಳು ಹೆಚ್ಚುವ ಸಾಧ್ಯತೆ ಅಧಿಕವಾಗಿದೆ ಎಂದು ಅಧ್ಯಯನವೊಂದು ಹೇಳಿರುವುದು ಕಳವಳ ಮೂಡಿಸುವಂತಿದೆ. ೨೦೭೦ರ ಹೊತ್ತಿಗೆ ಪ್ರಾಣಿ ಸಂಕುಲದಲ್ಲಿ  ಸಾವಿರಾರು ಹೊಸ ವೈರಸ್ ಗಳು ಹರಡಬಹುದು. ಅವುಗಳಿಂದಾಗಿ ಸಾಂಕ್ರಾಮಿಕ ರೋಗಗಳುಂಟಾಗಿ ಮಾನವರಿಗೂ ಕಂಟಕವಾಗಬಹುದು. ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೊಸ ಸಾಂಕ್ರಾಮಿಕತೆಯ ಅಪಾಯ ಅಧಿಕ ಎಂದು ‘ನೇಚರ್' ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೇಳಿದೆ. ಪ್ರಾಣಿಗಳಿಂದ ಮಾನವರಿಗೆ ಅಥವಾ ಮಾನವರಿಂದ ಪ್ರಾಣಿಗಳಿಗೆ ಹರಡಿದ ಎಚ್ ಐ ವಿ, ಎಬೋಲಾ, ಫ್ಲೂ ನಂತಹ ರೋಗಗಳ ಪ್ರದೇಶವಾಗಿರುವ ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಜನರು ಹೊಸ ವ್ಯಾಧಿಗಳಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಎಂಬುದು ತಜ್ಞರ ಊಹೆ. ಜಗತ್ತಿನ ತಾಪಮಾನ ಈಗಿರುವುದಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಏರಿಕೆಯಾದರೆ ಮುಂದಿನ ೫೦ ವರ್ಷಗಳಲ್ಲಿ ೩,೦೦೦ಕ್ಕೂ ಅಧಿಕ ಸಸ್ತನಿ ಪ್ರಭೇಧಗಳು ವಲಸೆ ಹೋಗಬಹುದು ಹಾಗೂ ವೈರಸ್ ಗಳನ್ನು ಹರಡಬಹುದು ಎಂಬುದು ಈ ಸಾಧ್ಯತೆಗೆ ಕಾರಣ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಪಮಾನ ಹೆಚ್ಚಳ ಪ್ರಮಾಣ ಈಗ ಜಾಸ್ತಿಯಾಗಿದೆ. ಹೀಗಾಗಿ ಉಷ್ಣಮಾರುಗಳು ಹಾಗೂ ಕಾಡ್ಗಿಚ್ಚು ಕೂಡ ಅಧಿಕವಾಗಿದೆ. ಇನ್ನೊಂದೆಡೆ, ಮರುಭೂಮಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ, ಅತಿಯಾದ ನಗರೀಕರಣ, ಅರಣ್ಯ ನಾಶ, ಮಾಲಿನ್ಯಕಾರಕ ವಸ್ತುಗಳ ಅತಿಯಾದ ಬಳಕೆ, ವಾಹನಗಳಿಂದ ಹೊರಸೂಸುವ ಹೊಗೆ..ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಮಾಲಿನ್ಯ ತೀವ್ರಗತಿಯಲ್ಲಿ ಹೆಚ್ಚಿದೆ ; ಹೆಚ್ಚುತ್ತಲೇ ಇದೆ. ಆಧುನೀಕರಣದ ಹೆಸರಿನಲ್ಲಿ ನಡೆದ ವಿವೇಚನಾರಹಿತ ಅಭಿವೃದ್ಧಿಯ ದುಷ್ಪರಿಣಾಮ ತಗ್ಗಬೇಕಿದೆ. ಏಗಲಾದರೂ ಎಚ್ಚೆತ್ತು, ತಕ್ಕಮಟ್ಟಿಗಾದರೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಭವಿಷ್ಯ ಇನ್ನಷ್ಟು ಕರಾಳ. ಈ ನಿಟ್ಟಿನಲ್ಲಿ, ಪ್ಯಾರಿಸ್ ಒಡಂಬಡಿಕೆಯ ಅಂಶಗಳನ್ನು ಜಾರಿಗೆ ತರುವ ವಿಷಯದಲ್ಲಿ ಭಾರತ ಹೆಜ್ಜೆಗಳನ್ನು ಇರಿಸುತ್ತಿದೆ. ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯ ಹೆಚ್ಚಳ, ವಾಹನಗಳಲ್ಲಿ ಎಥೆನಾಲ್ ಬಳಕೆ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತಿನ ಎಲ್ಲ ದೇಶಗಳು ಕೈಜೋಡಿಸಿದರೆ ಮಾತ್ರ ತುಸುವಾದರೂ ಪರಿಹಾರ ಸಾಧ್ಯ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೯-೦೪-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ