ತಾರಸಿಗೆ ಬಿಳಿ ಬಣ್ಣ:ಪರಿಸರಪ್ರಿಯವೇ?
ತಾರಸಿಗೆ ಬಿಳಿ ಬಣ್ಣ:ಪರಿಸರಪ್ರಿಯವೇ?
ತಾರಸಿಗೆ ಬಿಳಿ ಬಣ್ಣ ಬಳಿದರೆ,ಸೂರ್ಯನ ಕಿರಣಗಳು ಪ್ರತಿಫಲಿತವಾಗುವುದು ಹೆಚ್ಚುತ್ತದೆ.ತಾರಸಿಯು ಕಾದು ಬಿಸಿಯಾಗುವಿಕೆಯೂ ಕಡಿಮೆಯಾಗುತ್ತದೆ.ಇದರಿಂದ ಕಟ್ಟಡದ ಒಳಗೆ ತಂಪಿನ ಅನುಭವವಾಗುತ್ತದೆ ಎನ್ನುವುದು ಹೆಚ್ಚಿನವರೂ ಬಲ್ಲ ವಿಚಾರವೇ.ಅಮೆರಿಕಾದಲ್ಲಿ ಕಂಪ್ಯೂಟರ್ ಸಿಮ್ಯುಲೇಶನ್ ಬಳಸಿ ನಡೆಸಲಾದ ಅಧ್ಯಯನದಿಂದ,ಇಡೀ ನಗರದ ಕಟ್ಟಡಗಳಿಗೆಲ್ಲಾ ಬಿಳಿ ಬಣ್ಣ ಬಳಿದರೆ,ಇಂಧನ ಉಳಿತಾಯ ಸಾಧ್ಯ ಎಂದು ಕಂಡುಕೊಳ್ಳಲಾಗಿದೆ.ಸರಾಸರಿ ಒಂದರಿಂದ ಮೂರು ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಳಿಕೆಯಾಗಬಹುದು.ಪರಿಣಾಮವಾಗಿ ಕಟ್ಟಡಗಳು ಹೀರಿಕೊಳ್ಳುವ ಶಾಖದ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.ಕಟ್ಟಡಗಳಲ್ಲಿ ಬಳಸಲಾಗುವ ವಾತಾನುಕೂಲಿ ವ್ಯವಸ್ಥೆಗಳು ಇದರಿಂದ ಕಡಿಮೆ ಇಂಧನ ಬಳಸಿ,ಪರಿಸರದ ಮೇಲೆ ಒತ್ತಡ ಕಡಿಮೆಯಾಗಬಹುದು ಎಂದು ಅಧ್ಯಯನದಿಂದ ವ್ಯಕ್ತವಾದ ಇನ್ನೊಂದು ಅಂಶ.ಇದರ ನಿಜವಾದ ಪರಿಣಾಮಗಳೇನು ಅನ್ನುವುದು ಕಟ್ಟಡಗಳ ಸಾಂದ್ರತೆ,ಅವುಗಳ ಮೇಲ್ಮೈಯು ಎಷ್ಟು ಸ್ವಚ್ಛವಾಗಿವೆ,ಕಟ್ಟಡ ನಿರ್ಮಾಣಕ್ಕೆ ಬಳಸಿದ ವಸ್ತುಗಳು ಯಾವುವು ಎನ್ನುವ ಅಂಶವನ್ನೂ ಹೊಂದಿಕೊಂಡಿವೆ.
----------------------------------------------------------
ಅಂತರ್ಜಾಲದಲ್ಲೀಗ ಯುನಿಕೋಡ್ ಬಳಕೆ ತಾರಕಕ್ಕೆ
ಅಂತರ್ಜಾಲದಲ್ಲಿ ಅಸ್ಕೀ,ಯುನಿಕೋಡ್,ವಿಂಡೋಸ್,ಲ್ಯಾಟಿನ್ ಮುಂತಾದ ಮಾನಕಗಳನ್ನು ಬಳಸಿ,ಅಕ್ಷರಗಳನ್ನು ಮೂಡಿಸಬಹುದು.ಅವುಗಳ ಪೈಕಿ,ಯುನಿಕೋಡ್ ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳ ಅಕ್ಷರಗಳಿಗೂ ಲಭ್ಯವಿದೆ.ಹಾಗಾಗಿ,ಯುನಿಕೋಡ್ ಬಳಕೆ ಅಂತರ್ಜಾಲ ತಾಣಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.ಗೂಗಲ್ ಅಧ್ಯಯನದ ಪ್ರಕಾರ ಈಗ ಅಂತರ್ಜಾಲತಾಣಗಳ ಪೈಕಿ ಅರ್ಧಕ್ಕೂ ಹೆಚ್ಚು ತಾಣಗಳು ಯುನಿಕೋಡ್ ಬಳಸುತ್ತಿವೆ.ಶೋಧ ಸೇವೆ ಒದಗಿಸುವ ದೃಷ್ಟಿಯಿಂದ ಈ ಬೆಳವಣಿಗೆ ಹೆಚ್ಚು ಸಮಾಧಾನ ಕೊಡುವ ಸಂಗತಿಯಾಗಿದೆ.
----------------------------------------------------------------
ಯಾವ ಅಕ್ಷರಶೈಲಿ ಬಳಸಿದರೆ ಶಾಯಿ ಖರ್ಚು ಕಡಿಮೆ?
ಪುಟಗಳನ್ನು ಮುದ್ರಿಸುವಾಗ ಶಾಯಿ ಬಳಕೆ,ಪುಟದಲ್ಲಿ ಬಳಕೆಯಾದ ಅಕ್ಷರಶೈಲಿಯನ್ನೂ ಅವಲಂಬಿಸಿದೆ ಎನ್ನುವುದು ಸ್ಪಷ್ಟ ತಾನೇ?ಈ ಬಗ್ಗೆ ನಡೆಸಿದ ಅಧ್ಯಯನವೊಂದು ಅಕ್ಷರಶೈಲಿಯಲ್ಲಿ ರಂಧ್ರಗಳನ್ನು ಬಳಸಿರುವ ಇಕೋಫಾಂಟ್ ಕಡಿಮೆ ಶಾಯಿ ಬಳಸುವುದು ಕಂಡುಕೊಂಡಿದೆ.ಏರಿಯಲ್,ಟೈಮ್ಸ್ ರೋಮನ್,ಕೊರಿಯರ್ ಮುಂತಾದ ಜನಪ್ರಿಯ ಅಕ್ಷರಶೈಲಿಗಳ ಪೈಕಿ,ಕೊರಿಯರ್ ಶಾಯಿ ಬಳೆಕೆಯ ದೃಷ್ಟಿಯಿಂದ ಮಿತವ್ಯಯಿ ಎನ್ನುವುದೂ ಗೊತ್ತಾಗಿದೆ.
--------------------------------------------------------------
ನಮ್ಮ ವಿಟ್ಲ
ಅಂತರ್ಜಾಲತಾಣವೊಂದನ್ನು ಬಳಸಿಕೊಂಡು,ಊರಿನ ಅಭಿವೃದ್ಧಿ ಕಾರ್ಯಗಳ ಬಗೆಗೆ ವರದಿ,ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ,ಸಾಂಸ್ಕೃತಿಕ ಚಟುವಟಿಕೆಗಳ ಬಗೆಗೆ ವಿವರಗಳನ್ನು ನೀಡುವ ಪರಿಪಾಠ ಹೆಚ್ಚುತಿದೆ.ಇಸ್ಮಾಯಿಲ್ ಬಶೀರ್ ಸಂಪಾದಕತ್ವದಲ್ಲಿ ಬರುತ್ತಿರುವ "ನಮ್ಮ ವಿಟ್ಲ" ತಾಣ ಇಂತಹ ಒಂದು ಪ್ರಯತ್ನ ಮಾಡುತ್ತಿದೆ.ವಿಟ್ಲ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು,ಪ್ರೇಕ್ಷಣೀಯ ಸ್ಥಳಗಳು,ಜನರ ಸಾಧನೆಗಳ ಬಗ್ಗೆ ಇಲ್ಲಿ ವರದಿಗಳಿವೆ.ಫೊಟೋಗ್ಯಾಲರಿಯೂ ಇಲ್ಲಿದೆ.ಜನರ ಸಮಸ್ಯೆಗಳ ಬಗೆಗೆ ಗಮನ ಸೆಳೆಯಲು,"ಜನದನಿ" ಅಂಕಣವೂ ಇಲ್ಲಿದೆ.ಅಂತರ್ಜಾಲ ಬಳಕೆ ಜನರಲ್ಲಿ ಹೆಚ್ಚಿದರೆ ಇಂತಹ ತಾಣಗಳು ಹೆಚ್ಚು ಫಲಪ್ರದವಾದಾವು."ನಮ್ಮ ವಿಟ್ಲ" ಕಾಣಲು http://vittla.webs.com/ ಅಂತರ್ಜಾಲ ತಾಣದ ವಿಳಾಸ ನೋಡಿ.
ಅಟೋ ಚಾಲಕನ ಅಂತರ್ಜಾಲ ತಾಣವೂ ಇದೆ ಎಂದರೆ ಆಶ್ಚರ್ಯವಾಯಿತೇ?http://tuktastic.com/ ಅಂತಹ ಒಂದು ತಾಣ.ಚೆನ್ನೈಯ ಸಾಮ್ಸನ್ ಈ ತಾಣದ ಒಡೆಯ.ತಾಜ್ ಕೋರಮಂಡಲ್ ಹೋಟೆಲ್‌ನ ತಂಗುದಾಣದಲ್ಲಿ ಈತನ ರಿಕ್ಷಾ ನಿಲ್ಲುತ್ತದಂತೆ.ಊರು ಸುತ್ತಲು ತನ್ನ ಟುಕ್‌ಟುಕ್ ಅಗ್ಗದ ವಾಹನ ಎಂದಾತ ಹೇಳಿಕೊಳ್ಳುತ್ತಾನೆ.ಅಟೋದಲ್ಲಿ ಸುತ್ತುವ ಮಜಾವೇ ಬೇರೆ ಎಂದು ಬೇರೆ ಹೇಳಿಕೊಳ್ಳುತ್ತಾನೆ.
--------------------------------------------------------------
ಆಪಲ್ ಐಪ್ಯಾಡ್‌ನಲ್ಲಿ ಏನಿಲ್ಲ?
ಆಪಲ್ ಕಂಪೆನಿಯ ಹೊಸ ಸಾಧನ ಐಪ್ಯಾಡ್ ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಿದೆ.ಐಸ್ಲೇಟ್ ಎಂಬ ಹೆಸರು ಬಳಕೆಯಾಗಬಹುದೆಂಬ ಗುಮಾನಿ ಸುಳ್ಳಾಯಿತು.ಸುಮಾರು ಆರುನೂರೈವತ್ತು ಗ್ರಾಂ ತೂಗುವ ಐಪ್ಯಾಡ್,ಇಪ್ಪತ್ತನಾಲ್ಕು ಸೆಂಟಿಮೀಟರ್ ಉದ್ದ,ಹದಿನೆಂಟು ಸೆಂಟಿಮೀಟರ್ ಅಗಲವಾಗಿದೆ.ಇದರಲ್ಲಿ ಕೀಲಿಮಣೆಯಿಲ್ಲ,ಬದಲಾಗಿ ಪರದೆಯ ಮೇಲೆ ಕೀಲಿ ಮಣೆ ಮೂಡಿಸಿ,ಅದನ್ನು ಬಳಸಿ ಟೈಪಿಸಬೇಕು.ವಿಡಿಯೊ ಅಥವಾ ಕ್ಯಾಮರಾವೂ ಇದರಲ್ಲಿಲ್ಲ.ಹಾಗಾಗಿ ಅಂತರ್ಜಾಲ ಕರೆಗಳನ್ನು ಮಾಡುವಾಗ,ಅದು ಧ್ವನಿ ಅಥವ ಪಠ್ಯದ ಮೂಲಕ ಮಾತ್ರಾ ಸಾಧ್ಯವಾಗುತ್ತದೆ.ಯುಎಸ್ಬಿ ಪೋರ್ಟ್ ಸೌಲಭ್ಯವಿಲ್ಲವಾದ ಕಾರಣ,ಪ್ರಿಂಟರಿಗೆ ಸಂಪರ್ಕಿಸಲು ತಂತಿ ಬಳಸುವಂತಿಲ್ಲ.ಫ್ಲ್ಯಾಶ್ ಎನ್ನುವ ತಂತ್ರಾಂಶ ಇದರಲ್ಲಿ ಬಳಕೆಯಾಗದ ಕಾರಣ,ಯುಟ್ಯೂಬ್ ವಿಡಿಯೋ ನೋಡಲು ಸಮಸ್ಯೆಯಾಗಬಹುದು.ಇದರ ಉದ್ದ-ಅಗಲದ ಪ್ರಮಾಣ 4:3ಆಗಿರುವುದು,ಅಗಲ ತೆರೆಯಲ್ಲಿ ನೋಡಲು ನಿರ್ಮಿಸಿರುವ ಚಿತ್ರಗಳ ವೀಕ್ಷಣೆಗೂ ಸೂಕ್ತವಾಗಿಲ್ಲ.ಐಪ್ಯಾಡ್‌ನಲ್ಲಿ ಒಂದು ಸಲ ಒಂದು ಕೆಲಸ ಮಾತ್ರಾ ಮಾಡಲು ಸಾಧ್ಯ.ಜಿಪಿಎಸ್ ಸೌಕರ್ಯ ಲಭ್ಯವಿಲ್ಲ.ಹೆಚ್ಚು ಬೆಲೆಯ ಐಪ್ಯಾಡ್‌ಗಳಲ್ಲಿ ಮಾತ್ರಾ ಮೂರು-ಜಿ ಸೌಕರ್ಯ ಇದೆ.
ಇದರ ಬೆಲೆ ಐನೂರರಿಂದ ಎಂಟುನೂರ ಇಪ್ಪತ್ತೊಂಭತ್ತು ಡಾಲರು ಪರಿಮಿತಿಯಲ್ಲಿದೆ. ಈ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುವ ನೆಟ್‌ಬುಕ್ ಬಿಟ್ಟು ಜನ ಇದನ್ನು ಖರೀದಿಸಬಹುದೇ ಎಂದು ಪ್ರಶ್ನಿಸುವವರಿದ್ದಾರೆ.ಆದರೆ ನೆಟ್‌ಬುಕ್‌ಗಿಂತ ಹಿಡಿದು ಬಳಸಲು ಹೆಚ್ಚು ಅನುಕೂಲ ಎನ್ನುವುದರಲ್ಲಿ ಅನುಮಾನ ಇಲ್ಲ.ಐಪೋಡ್ ಇದ್ದವರಿಗೆ ಐಪ್ಯಾಡ್ ಅಗತ್ಯವಿಲ್ಲ ಎಂಬ ಅಭಿಪ್ರಾಯ ಹಲವರದ್ದಾಗಿದೆ.ಪತ್ರಿಕೆಗಳನ್ನು ಇಳಿಸಿ ಐಪ್ಯಾಡ್ ಅನುಕೂಲಕರ ಎನ್ನುವುದು,ಪತ್ರಿಕಾ ಮಾಧ್ಯಮದ ಗಮನ ಸೆಳೆದಿದೆ.ಓದುಗರನ್ನು ಹೆಚ್ಚಿಸಿಕೊಳ್ಳಲು ವಿಫಲವಾಗಿರುವ ವಿದೇಶೀ ಪತ್ರಿಕೆಗಳು ಐಪ್ಯಾಡ್ ಒದಗಿಸಲು ಉದ್ದೇಶಿಸಿರುವ ಚಂದಾದಾರತ್ವದ ಆಧಾರದ ಪತ್ರಿಕೆಯನ್ನು ಇಳಿಸಿಕೊಂಡು,ಐಪ್ಯಾಡಿನಲ್ಲಿ ಓದುವ ಸೌಕರ್ಯವು ಹೊಸ ಆದಾಯ ಮೂಲವಾಗಬಹುದೇನೋ ಎನ್ನುವ ಕುತೂಹಲ ಹೊಂದಿವೆ.ಸಂಗೀತ ಉದ್ಯಮಕ್ಕೆ ಐಪೋಡ್ ಕಾಯಕಲ್ಪ ಒದಗಿಸಿದಂತೆ,ಮುದ್ರಣ ಮಾಧ್ಯಮಕ್ಕೆ ಐಪ್ಯಾಡ್ ಬೆಂಬಲದಿಂದ ಹೆಚ್ಚು ಆದಾಯ ಬರಬಹುದು ಎನ್ನುವ ನಿರೀಕ್ಷೆ ಇದೆ.
ಐಪ್ಯಾಡ್ ಎನ್ನುವ ಹೆಸರಿನ ಬಗ್ಗೆಯೂ ವಿವಾದ ಎದ್ದಿದೆ.ಇದು ನ್ಯಾಪ್‌ಕಿನ್ ಅಂತಹ ಉತ್ಪನ್ನದಂತೆ ಕಾಣಿಸುತ್ತದೆ ಎಂಬ ಕಟಕಿಯಂತೂ ಸಾಮಾನ್ಯ.ಫ್ಯುಜಿತ್ಸು ಎನ್ನುವ ಜಪಾನಿ ಕಂಪೆನಿಯೂ ಇದೇ ಹೆಸರಿನ ಸಾಧನವೊಂದನ್ನು ಈಗಾಗಲೇ ಮಾರುತ್ತಿದೆ.ಅಂಗಡಿಗಳಲ್ಲಿ ಸಾಮಗ್ರಿಗಳ ಸ್ಟಾಕು ಪರಿಶೀಲನೆಗೆ ಬಳಕೆಯಾಗುವ ಸಾಧನವದು.ಎಸ್ಟಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಎನ್ನುವ ಕಂಪೆನಿಯು ಯುರೋಪಿನಲ್ಲಿ ಐಪ್ಯಾಡ್ ಪದ ಬಳಕೆಯ ಹಕ್ಕು ಹೊಂದಿದೆ.