ತಿರಸ್ಕಾರ

ತಿರಸ್ಕಾರ

ಈ ದಿನ ತಿರಸ್ಕಾರದ ಬಗ್ಗೆ ತಿಳಿದುಕೊಳ್ಳೋಣ... ದ್ವೇಷ, ತಿರಸ್ಕಾರ ಎನ್ನುವುದು ನಮ್ಮ ಮನೋಭೂಮಿಯಲ್ಲಿ ಬೆಳೆಯುವ ಮುಳ್ಳು ಮತ್ತು ಕಲ್ಲುಗಳು ಇದ್ದಂತೆ. ಭೂಮಿಯಲ್ಲಿ ಮುಳ್ಳು, ಕಲ್ಲುಗಳು ಇದ್ದರೆ, ಸುಂದರ ತೋಟ ಮಾಡಲು ಆಗುವುದಿಲ್ಲ. ಹಾಗೆಯೇ ಮನಸ್ಸಿನಲ್ಲಿ ದ್ವೇಷ, ತಿರಸ್ಕಾರ ತುಂಬಿದ್ದರೆ, ಮನಸ್ಸು ಮಧುರ ಮಾಡಲು ಆಗುವುದಿಲ್ಲ. ಆದ್ದರಿಂದ ಈ ಮುಳ್ಳು, ಕಲ್ಲುಗಳನ್ನು ಮನೋಭೂಮಿಯಿಂದ ತೆಗೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ಹೇಳಿದ ಕಥೆ ಹೇಳುತ್ತೇನೆ.

ಒಂದು ಮರ. ಆ ಮರದ ಎದಿರು ಬದಿರು ಕೊಂಬೆಯಲ್ಲಿ ಕಾಗೆ ಕುಟುಂಬ, ಕೋಗಿಲೆ ಕುಟುಂಬ ವಾಸವಾಗಿದ್ದವು. ಕೋಗಿಲೆಗೆ ಗೂಡು ಇರಲಿಲ್ಲ. ಕಾಗೆ ಗೂಡು ಕಟ್ಟಿಕೊಂಡು ವಾಸವಾಗಿತ್ತು. ಒಂದು ದಿನ ಕೋಗಿಲೆ, ಕಾಗಿಗೆ ಹೇಳಿತು. "ಏನಪ್ಪಾ, ನಿನ್ನ ಧ್ವನಿ ಅಷ್ಟು ಕರ್ಕಶ, ನಿನ್ನ ಧ್ವನಿ ಕೇಳಿದರೆ ನನಗೆ ನಿನ್ನ ಸಹವಾಸ ಮಾಡಬಾರದು ಅಂತ ಅನಿಸುತ್ತದೆ" ಎಂದು ಹೇಳಿತು. ಆಗ ಕಾಗೆ ಹೇಳಿತು. ಕೋಗಿಲೆಯೇ, ನಿನ್ನ ಧ್ವನಿ ಚೆನ್ನಾಗಿದೆ. ನನ್ನ ಧ್ವನಿ ಕರ್ಕಶ. ಚೆನ್ನಾಗಿಲ್ಲ. ಆದರೆ ನನ್ನ ಮನಸ್ಸು ಎಷ್ಟು ಮಧುರ?. ನಿನ್ನ ಮನಸ್ಸು ಎಷ್ಟು ಹೊಲಸಾಗಿದೆಯಲ್ಲ?." ಎಂದಿತು. ಆಗ ಕೋಗಿಲೆ ಹೇಳಿತು. "ಅದು ಹೇಗೆ ನಿನ್ನ ಮನಸ್ಸು ಮದುರ?." ಅಂದಿತು. ಆಗ ಕಾಗೆ ಹೇಳಿತು, "ನಾನು, ನಿನ್ನ ಧ್ವನಿ ಕೇಳಿ ಸಂತೋಷ ಪಡೋದಿಕ್ಕೆ, ನಾನು ನಿನ್ನ ಬಳಿ ಇದ್ದೇನೆ ಮತ್ತು ನೀನು ಹಾಡುವಿಕೆಗೆ ತೊಂದರೆ ಆಗಬಾರದು ಎಂದು, ನಿನ್ನ ತತ್ತಿಗೆ ಕಾವುನೀಡಿ, ಮರಿ ಮಾಡಿ, ಹಾರುವ ಸಾಮರ್ಥ್ಯ ಬಂದಾಗ, ಹಾಡಿಕೊಳ್ತಾ ಇರಲಿ, ಅಂತ ನನ್ನ ಗೂಡಿನಿಂದ ಹೊರ ಹಾಕುತ್ತೀನಿ. ಈಗ ಹೇಳು ಯಾರ ಮನಸು ಮಧುರ ?." ಅಂದಿತು. 

ಇನ್ನೊಂದು ಕಥೆ. ಒಂದು ಮರ. ಅದರಲ್ಲಿ ಹೂವು, ಹಣ್ಣು, ಎಲೆ, ಎಲ್ಲಾ ತುಂಬಿ ಸುಂದರವಾಗಿತ್ತು. ಮೇಲೆ ಹಣ್ಣು, ಬಣ್ಣ ಬಣ್ಣದಿಂದ ಕೂಡಿ, ಸುವಾಸನೆ ಬೀರುತ್ತಿತ್ತು. ಪಕ್ಷಿಗಳು ಆ ಹಣ್ಣಿನ ವಾಸನೆ ಕಂಡು, ಅದನ್ನು ತಿನ್ನಬೇಕೆಂಬ ಆಸೆಯಿಂದ, ಅದರ ಸಮೀಪ ಹಾರಾಡುತ್ತಿದ್ದವು. ಇದನ್ನು ಕಂಡು ಹಣ್ಣಿಗೆ ನಾನೇ ಶ್ರೇಷ್ಠ ಅಂತ ಭಾವ ಬಂದಿತ್ತು. ಅದು ಹೂ, ಎಲೆಗಳನ್ನು ತಿರಸ್ಕಾರದಿಂದ ಹೇಳಿತು. "ನೋಡು ನನ್ನ ಗೌರವ, ನನ್ನ ಬಳಿ ಪಕ್ಷಿಗಳು ಹೇಗೆ ಬಂದು ಹಾರಡುತ್ತಿವೆ?. ನೀವೆಲ್ಲ ವ್ಯರ್ಥ" ಎಂದಿತು. ಆಗ ಹೂ ಹೇಳಿತು, "ನಾನೇ ಅರಳದೆ ಇದ್ದರೆ, ಪರಾಗಸ್ಪರ್ಶ ಮಾಡದೇ ಇದ್ದರೆ, ನೀನು ಹೇಗೆ ಹಣ್ಣಾಗುತ್ತಿದ್ದೆ?. ನೋಡು, ನನ್ನ ಬಣ್ಣ, ರೂಪ, ಸುವಾಸನೆ. ನನ್ನ ಬಳಿ ಕೀಟಗಳ ದಂಡೆ ಇದೆ. ಆದ್ದರಿಂದ ನಾನು ಶ್ರೇಷ್ಠ, ನೀನಲ್ಲ" ಅಂದಿತು. ಆಗ ಎಲೆ ಹೇಳಿತು, "ನೀವಿಬ್ಬರೂ ಶ್ರೇಷ್ಠ, ಉಳಿದವರು ವ್ಯರ್ಥ ಅಂತ ಹೇಳ್ತಾ ಇದ್ದೀರಲ್ಲ, ನಾನು ಸೂರ್ಯನ ಬೆಳಕು ಹೀರಿ, ವಾತಾವರಣದ ಗಾಳಿ ಹೀರಿ, ನೀರು ಪಡೆದು, ಆಹಾರ ತಯಾರಿಸಿ, ನಿಮ್ಮಲ್ಲಿ ಕಳಿಸಿ ಕೊಟ್ಟಿದ್ದೇನೆ. ನಿಮ್ಮಲ್ಲಿ ತುಂಬಿರುವ ಸವಿ ನನ್ನದೇ. ಹಾಗಾಗಿ ನೀವು ಹೇಗೆ ಶ್ರೇಷ್ಠ?. ನಾನು ಶ್ರೇಷ್ಠ" ಎಂದಿತು. ಆ ಕೊಂಬೆ ಸುಮ್ಮನೆ ನೋಡಿಕೊಂಡು ಕುಳಿತಿತ್ತು. ಹೇಳಿತು. "ನಾನು ನಿಮಗೆಲ್ಲಾ ಆಶ್ರಯ ಕೊಟ್ಟಿದ್ದೀನಿ. ನಾನು ಆಶ್ರಯ ಕೊಡದಿದ್ದರೆ, ನೀವು ಹೇಗೆ ಇರುತ್ತಿದ್ರಿ?. ನೀವೆಲ್ಲ ಶ್ರೇಷ್ಠರಲ್ಲ, ನಾನೇ ಶ್ರೇಷ್ಠ" ಅಂದಿತು. ಆಗ ಕಾಂಡ ಹೇಳಿತು, "ನಾನು ನಿಮ್ಮ ಭಾರ ಹೊತ್ತು ನಿಂತಿದ್ದೇನೆ. ನಾನೇ ಇಲ್ಲದಿದ್ದರೆ, ನೀವೆಲ್ಲ ಎಲ್ಲಿ?. ನಾನೇ ಶ್ರೇಷ್ಠ" ಎಂದಿತು. 

ಕೊನೆಗೆ ಬೇರಿಗೆ ತುಂಬಾ ಬೇಸರವಾಯಿತು. "ನಾನು ಭೂಮಿಯ ಕತ್ತಲಲ್ಲಿ ಹೋಗಿ, ನೀರು ಎಲ್ಲಿ ಇದೆಯೋ, ಅಲ್ಲಿ ಹುಡುಕಿ, ಹೀರಿ, ನಿಮಗೆಲ್ಲ ಕಳುಹಿಸುತ್ತಾ ಇದ್ದೀನಿ. ನಾನೇ ಇಲ್ಲದೆ ಇದ್ದರೆ, ನೀವು ಹೇಗೆ ಇರುತಿದ್ರಿ" ಅಂದಿತು. ಆಗ ಇದನ್ನೆಲ್ಲ ನೋಡುತ್ತಿದ್ದ ಭೂಮಿತಾಯಿ ಹೇಳಿದಳು. "ನಾನೆ ಇಲ್ಲದಿದ್ದರೆ ನೀವು ಹೇಗೆ ಇರುತಿದ್ರಿ?" ಅಂತ ಹೇಳಿತು. ಭೂಮಿ ಭೂಕಂಪವಾದ ಹಾಗೆ ಮಾಡಿ ಬಿರುಕು ಬಿಟ್ಟಿತು. ಕಾಂಡ, ಬೇರು, ಕೊಂಬೆ, ಎಲೆ, ಹೂವು, ಹಣ್ಣು ಎಲ್ಲ ನೆಲಕ್ಕೆ ಬಿದ್ದಿದ್ದವು. ಆಗ ಹೇಳಿದವು, ನಾನೊಬ್ಬನೇ ಶ್ರೇಷ್ಠ ಅಲ್ಲ, ನಾವೆಲ್ಲರೂ ಶ್ರೇಷ್ಠರೇ. ಹಾಗೆಯೇ ಭೂಮಿಯ ಮೇಲೆ, ನಿಸರ್ಗ ಏನೇನು ಮಾಡಿದಿಯೋ?. ಪ್ರತಿಯೊಂದರಲ್ಲೂ ವಿಶೇಷತೆ ಇದೆ. ಆ ವಿಶೇಷತೆ ಗಮನಿಸಿದರೆ, ಪ್ರತಿಯೊಂದು ಶ್ರೇಷ್ಠವೇ. ಹಾಗೆ ಪ್ರತಿಯೊಂದು ಪಕ್ಷಿ, ಪ್ರಾಣಿ, ಕೀಟ, ಮಾನವ ಎಲ್ಲರೂ ಶ್ರೇಷ್ಠರೇ. ಮಾನವರಲ್ಲಿ ಕೆಲವರಿಗೆ ಬುದ್ಧಿ ಶಕ್ತಿ, ಕೆಲವರಿಗೆ ಮಾನಸಿಕ ಶಕ್ತಿ, ಕೆಲವರಿಗೆ ಕಲ್ಪನಾ ಶಕ್ತಿ, ಕೆಲವರಿಗೆ ನೃತ್ಯ, ಕೆಲವರಿಗೆ ಶಿಲ್ಪ, ನೆನಪಿನ ಶಕ್ತಿ , ಹಾಡುಗಾರಿಕೆ, ದೈಹಿಕ ಶಕ್ತಿ, ಆರ್ಥಿಕ ಶಕ್ತಿ , ಹೀಗೆ ಇವೆ. ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಇರುವುದರಿಂದ, ಪ್ರತಿಯೊಬ್ಬರು ಶ್ರೇಷ್ಠರೆ. ಆದರೆ ನಾವು ವಿಶೇಷತೆಯನ್ನು ಗಮನಿಸದೆ, ಉಳಿದ ಕಡೆ ಲಕ್ಷ್ಯ ಇರುವುದರಿಂದ, ಹೋಲಿಸಿ ಈ ಗುಣ ಅದರಲ್ಲಿ ಇಲ್ಲ ಆದ್ದರಿಂದ ಇದು ಕನಿಷ್ಠ , ವ್ಯರ್ಥ ಅನ್ನುವ ಭಾವ ಬಂದು, ದ್ವೇಷ ತಿರಸ್ಕಾರ ಬೆಳೆಸಿಕೊಳ್ಳುತ್ತೇವೆ. ವಿಶೇಷತೆಯನ್ನು ಬೆಳೆಸಿಕೊಳ್ಳಲು ನಮ್ಮ ಮನಸ್ಸಿನಲ್ಲಿ ಪ್ರೇಮ ಬೆಳೆಸಿಕೊಳ್ಳಬೇಕು. ಪ್ರೇಮ ಇರುವ ವ್ಯಕ್ತಿಗೆ ಮಾತ್ರ ವಿಶೇಷತೆ ಕಂಡು ಹಿಡಿಯಲು ಸಾಧ್ಯ. ಪ್ರೇಮ ಇದ್ದರೆ ಮನೋಭೂಮಿ ಮಧುರವಾದಂತೆ. ದ್ವೇಷ ತಿರಸ್ಕಾರ ಅಳಿಸಲು ಪ್ರೇಮವೇ ಮದ್ದು. ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ