ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

ಬರಹ

ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.

 

ಮೊದಲಿಗೆ ಒಂದು ವಿಷಯದ ಬಗ್ಗೆ ಹೇಳಿಬಿಡುತ್ತೇನೆ. ಇದು ಕಾವೇರಿ ಜಲವಿವಾದದ ಪ್ರಶ್ನೆಯ ಬಗ್ಗೆಯ ಬರಹವಲ್ಲ :) ನನ್ನ ಉದ್ದೇಶವೇ ಬೇರೆ. ಎಲ್ಲ ನದಿಗಳೂ ಸಾಮಾನ್ಯ ಸಮುದ್ರ ಸೇರುವ ಬಳಿ ಕವಲೊಡೆದು, ಹಲವು ಭಾಗಗಳಾಗುತ್ತವೆ. ಕಾವೇರಿಯೂ ಇದಕ್ಕೆ ಹೊರತಲ್ಲ. ತಮಿಳುನಾಡಿನ ತಿರುಚ್ಚಿರಾಪಳ್ಳಿಯ ಬಳಿ ಕಾವೇರಿ ಐದು ಭಾಗಗಳಾಗಿ ಒಡೆಯುತ್ತಾಳೆ. ಈ ಶಾಖೆಗಳಿಗೆ ಕಾವೇರಿ, ವೆಣ್ಣಾರ್, ವೆಟ್ಟಾರ್, ಕೊಡಮುರುಟಿ ಮತ್ತು ಕೊಲ್ಲಿಡಮ್ ಎಂದು ಹೆಸರಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕು. ವೆಣ್ಣಾರ್, ವೆಟ್ಟಾರ್ ಎಂಬಲ್ಲಿ ಬರುವ ರ ಕಾರ, ಹಳೆಗನ್ನಡದ ಶಕಟರೇಫ; (ನನಗೆ ಅದನ್ನು ಇಲ್ಲಿ ಬರೆಯಬೇಕೆಂದು ತಿಳಿಯದು). ಮತ್ತೆ, ಈ ಪದಗಳು ರ್ ಎನ್ನುವ ವ್ಯಂಜನದಿಂದ ಕೊನೆಯಾಗಿಲ್ಲ. ಬದಲಿಗೆ, ಅರ್ಧ ಉಕಾರದಲ್ಲಿ ಮುಗಿಯುತ್ತವೆ. (ಈ ರೀತಿಯ ಉಕಾರ ಇರುವ ಪದ ನೆನಪಿಗೆ ಬರುತ್ತಿಲ್ಲ). ಕನ್ನಡದ ಆರು, ಮಗು, ನಗು ಮೊದಲಾದ ಪದಗಳಲ್ಲಿ ಬರುವ ಪೂರ್ಣ ಉಕಾರವನ್ನು ಉಪಯೋಗಿಸದೇ ಹೇಳಿದರೆ ಹೇಗಿರುತ್ತೋ ಆ ರೀತಿ ಇರಬೇಕು ತಮಿಳಿನಲ್ಲಿ ಪದದ ಕೊನೆಗೆ ಬರುವ ಉಕಾರಗಳ ಉಚ್ಚಾರ. ಇನ್ನೂ ಹೇಳಬೇಕೆಂದರೆ ವೆಣ್ಣಾರು ಅನ್ನುವ ಪದವನ್ನು ವೆಣ್ಣಾಋ ಎನ್ನುವ ರೀತಿಯಲ್ಲಿ ಉಚ್ಚರಿಸಿದರೆ, ಮೂಲಕ್ಕೆ ಹತ್ತಿರವಾಗುತ್ತದೆ.

 

ತಿರುವೈಯ್ಯಾರು ಸುತ್ತಮುತ್ತ

ತಿರುವೈಯ್ಯಾರು ಸುತ್ತಮುತ್ತ: ಕಾವೇರಿಯ ಕವಲುಗಳನ್ನು ಗಮನಿಸಿ.

 

ಆರು (ಅಥವ ಆಋ) ಎಂದರೆ, ನೀರು, ನದಿ ಎಂದರ್ಥ. ನಮ್ಮ ನಂದಿದುರ್ಗದಲ್ಲಿಯೂ ಪಾಲಾರ್, ಪೆನ್ನಾರ್ (ಪಿನಾಕಿನಿ) ಅನ್ನುವ ನದಿಗಳು ಹುಟ್ಟುತ್ತವಲ್ಲ, ಅದರಲ್ಲಿ ಬರುವ ಆರ್ ಎನ್ನುವುದೂ ಈ ನೀರಿನ ಸೂಚಕ ಪದವೇ.

 

ತಿರುಚ್ಚಿರಾಪಳ್ಳಿಯಿಂದ ಸುಮಾರು ೫೦-೬೦ ಕಿ.ಮೀ. ಪೂರ್ವದಲ್ಲಿ, ತಂಜಾವೂರಿನಿಂದ ಸುಮಾರು ೧೫-೨೦ ಕಿ.ಮೀ. ಉತ್ತರದಲ್ಲಿ ಕಾವೇರಿಯ ಐದು ಭಾಗಗಳನ್ನು ನೆನಪಿಸುವ ಒಂದು ಊರಿದೆ. ಅದೇ ತಿರುವೈಯ್ಯಾರು. ಇದು ಇರುವುದು ಕಾವೇರಿಯ ಮುಖ್ಯ ಕಾವೇರಿ ಕವಲಿನ ಮೇಲೆ. ತಿರು ಎನ್ನುವುದು ತಮಿಳಿನಲ್ಲಿ ಗೌರವಾರ್ಥವಾಗಿ ಉಪಯೋಗಿಸುವ ಪದ. ತಿರು+ಐ+ಆಋ ಅಂದರೆ, ಪವಿತ್ರವಾದ ಐದು ನದಿಗಳು (ಅಥವ , ಅವುಗಳ ನಡುವೆ ಇರುವ ಸ್ಥಳ) ಎಂದು ಅರ್ಥ ಮಾಡಿಕೊಳ್ಳಬಹುದು. ಈ ಊರಿನಲ್ಲಿ ಚೋಳರ ಕಾಲದ ಪಂಚನದೀಶ್ವರನ ದೇವಾಲಯವಿದೆ. ಇವನನ್ನು ಐಯಾರಪ್ಪರ್ ಅಂತಲೂ ಕರೆಯುತ್ತಾರೆ. (ಎರಡೂ ನೋಡಿ ಅದೇ ಅರ್ಥ - ಪಂಚ = ಐದು, ನದಿಗಳ ಒಡೆಯನಾದ, ತಂದೆಯಾದ ಶಿವ). ಶಿವನ ಈ ರೂಪಕ್ಕೆ ಮನೆಯೊಡತಿಯಾಗಿ ಇರುವವಳು ಧರ್ಮಸಂವರ್ಧಿನಿ ದೇವಿ.

ಪಂಚನದೀಶ ದೇವಾಲಯ - ತಿರುವೈಯ್ಯಾರು

ತಿರುವೈಯ್ಯಾರಿನ ಪಂಚನದೀಶ್ವರ ದೇಗುಲ: ಚಿತ್ರ ಕೃಪೆ ನ್ಯಾಶನಲ್ ಇನ್ಫರ್ಮ್ಯಾಟಿಕ್ಸ್

 

ಈ ಚೋಳಸೀಮೆಯಲ್ಲಿ ಭಾರೀ ದೇಗುಲಗಳಿಗೇನೂ ಕೊರತೆ ಇಲ್ಲ. ಹಾಗಿದ್ದರೆ ತಿರುವೈಯ್ಯಾರೆಂಬ ಈ ಚಿಕ್ಕ ಊರು ನಮಗೆ ಏಕೆ ಮುಖ್ಯವಾಗುತ್ತದೆ? ಅದಕ್ಕೆ ಮೂಲ ಕಾರಣ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರು. ಇವರು ಇದೇ ಊರಿನಲ್ಲಿ ಬದುಕಿದವರು. ಹತ್ತಿರದ ತಿರುವಾರೂರಿನಲ್ಲು ೧೭೬೭ರಲ್ಲಿ ಜನಿಸಿದ ತ್ಯಾಗರಾಜರು ಸಂಗೀತದಲ್ಲಿ ಅಪರಿಮಿತ ಮೇಧಾವಿ. ತಮ್ಮ ತಾಯಿ ಹಾಡುತ್ತಿದ್ದ ಪುರಂದರ ದಾಸರ ರಚನೆಗಳಿಂದ ಇವರು ಬಹಳಷ್ಟು ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ.

 

ತ್ಯಾಗರಾಜರು ಸುಮಾರು ೮೦೦ ಕೃತಿಗಳನ್ನು ರಚಿಸಿ, ಹೊಸ ಹೊಸದಾದ ನೂರಾರು ರಾಗಗಳಿಗೆ ಲಕ್ಷ್ಯವನ್ನು ಸೃಷ್ಟಿಸಿದರು ೮೦ ವರ್ಷದ ತುಂಬು ಬಾಳ್ವೆ ನಡೆಸಿ, ೧೮೪೭ ರ ಪುಷ್ಯ ಬಹುಳ ಪಂಚಮಿಯಂದು ದೇಹತ್ಯಾಗ ಮಾಡಿದರು. ಅವರು ಸಮಾಹಿ ಹೊಂದಿದ ಸ್ಥಳದಲ್ಲಿ ೨೦ನೇ ಶತಮಾನದ ಪ್ರಾರಂಭದಲ್ಲಿ ಬೆಂಗಳೂರು ನಾಗರತ್ನಮ್ಮ ಎಂಬ ಕಲಾವಿದೆ ಬೃಂದಾವನವೊಂದನ್ನೂ, ಸಮಾಧಿ ಮಂಟಪವನ್ನೂ ಕಟ್ಟಿಸಿದರು. ಪ್ರತೀ ಜನವರಿಯಲ್ಲಿ ಇಲ್ಲೇ ತ್ಯಾಗರಾಜರ ನೆನಪಿನಲ್ಲಿ ಆರಾಧನೆ ನಡೆಸಲಾಗುತ್ತೆ. ಎಲ್ಲೆಡೆಗಳಿಂದಲೂ ಸಂಗೀತಗಾರರು, ಸಂಗೀತಪ್ರಿಯರು ತ್ಯಾಗರಾಜ ಆರಾಧನೆಗೆ ಬಂದು ಪಾಲ್ಗೊಳ್ಳುತ್ತಾರೆ.

ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿ ಮತ್ತು ಮಂಟಪ

ತ್ಯಾಗರಾಜರ ಬೃಂದಾವನವಿರುವ ಸಮಾಧಿ ಮಂಟಪ, ತಿರುವೈಯ್ಯಾರು (ಚಿತ್ರ ಕೃಪೆ: ಹಿಂದೂ ದಿನಪತ್ರಿಕೆ)

 

ನನಗೂ ಸುಮಾರು ಹದಿನೈದು ವರ್ಷಗಳ ಹಿಂದೆ ತಿರುವೈಯ್ಯಾರಿಗೆ ಹೋಗುವ ಅವಕಾಶ ಸಿಕ್ಕಿತ್ತು. ಆಗ ಆರಾಧನೆಯ ಸಮಯವಲ್ಲ. ಆದರೆ, ಅಲ್ಲೇ ತಿರುಮಂಜನ ಬೀದಿಯಲ್ಲಿ ತ್ಯಾಗರಾಜರು ವಾಸಮಾಡಿದ ಮನೆಯಿದೆ ಎಂದು ಕೇಳಿದ್ದೆ. ಹೋದರೆ ಎದುರಾದ್ದು ಹಳೆಯ ಕಾಲದ ಸಣ್ಣ ನಾಡುಹಂಚಿನ ಮನೆ. ಒಳಗೆ ಕಡಿಮೆ ಬೆಳಕಿನ, ಪ್ರಶಾಂತ ವಾತಾವರಣ. ಸ್ವಲ್ಪ ಮಸಿಗಟ್ಟಿದ ಗೋಡಿಗಳು. ಅಲ್ಲೇ ತ್ಯಾಗರಾಜರ ಒಂದು ಮೂರ್ತಿ, ಮತ್ತೊಂದು ಕಡೆ, ಅವರು ಪೂಜೆ ಮಾಡುತ್ತಿದ್ದ ಅವರ ಇಷ್ಟದೈವ ರಾಮನ ಮೂರ್ತಿ. ಅರ್ಧ ಗಂಟೆ ಅಲ್ಲೇ ಕಣ್ಣು ಮುಚ್ಚಿ ಕುಳಿತೆ. ಒಂದು ಕ್ಷಣ ಮನಸ್ಸು ಹದಿನೆಂಟನೇ ಶತಮಾನಕ್ಕೇ ಹೋಯಿತು. ಇಲ್ಲೇ ಅಲ್ಲವೆ ಅವರು ಇದೇ ಮೂರ್ತಿಯ ಮುಂದೆ, ತವದಾಸೋಹಂ ದಾಶರಥೇ ಎಂದು ಹಾಡಿದ್ದು? ಇಲ್ಲೇ ಅಲ್ಲವೆ ಅವರು ಎಂದರೋ ಮಹಾನುಭಾವುಲು ಎಂಬ ಪಂಚರತ್ನ ಕೃತಿಯ ಮೂಲಕ ಜಗದ ಮೂಲೆಮೂಲೆಯಲ್ಲಿರುವ ಮಹಾತ್ಮರಿಗೂ ನಮನ ಸಲ್ಲಿಸಿದ್ದು? ಈ ಮನೆಯಲ್ಲಲ್ಲವೇ ಅವರು ತಂಜಾವೂರಿನ ರಾಜ ಅರಮನೆಯ ವಿದ್ವಾಂಸರಾಗಿ ಬರಲು ಹೇಳಿಕಳುಹಿದರೆ, ನಿಧಿ ಚಾಲಾ ಸುಖಮಾ? ರಾಮುನಿ ಸನ್ನಿಧಿ ಸೇವ ಸುಖಮಾ? (ನಿಧಿಯಿಂದ ಸುಖ ಕಾಣಲೋ? ಅಥವ ರಾಮನ ಸನ್ನಿಧಿಯಲ್ಲಿ ಸುಖ ಕಾಣಲೋ?) ಎಂದು ಹಣದ ಆಸೆಯನ್ನು, ರಾಜನ ಅಪ್ಪಣೆಯನ್ನೂ ಧಿಕ್ಕರಿಸಿದ್ದು? ಇದೇ ಮನೆಯ ಜಗಲಿಯ ಮೇಲೇ ಅಲ್ಲವೇ ತ್ಯಾಗರಾಜರ ಶಿಷ್ಯರು ಕುಳಿತು ಅಭ್ಯಾಸ ಮಾಡುತತಿದ್ದಿದ್ದು? ಇಂತಹ ಸ್ಥಳಕ್ಕೆ ಬಂದು ಕೂರಲೂ ನಾನು ಎಷ್ಟೋ ಪುಣ್ಯ ಮಾಡಿದ್ದೆ ಎನ್ನಿಸಿತ್ತು. ಇಂದಿಗೂ ನನ್ನ ಮನದಲ್ಲಿ ಆ ನೆನಪು ಹಚ್ಚಹಸಿರಾಗಿದೆ.

ತ್ಯಾಗರಾಜರ ಮೂರ್ತಿ - ಅವರು ವಾಸ ಮಾಡುತ್ತಿದ್ದ ಮನೆಯಲ್ಲಿ, ತಿರುವೈಯ್ಯಾರು

ತ್ಯಾಗರಾಜರು ವಾಸಮಾಡುತ್ತಿದ್ದ ಮನೆಯಲ್ಲಿರುವ ತ್ಯಾಗರಾಜರ ಕಂಚಿನ ಮೂರ್ತಿ.

 

 

ತ್ಯಾಗರಾಜರು ತಮ್ಮ ಕೃತಿಗಳಲ್ಲಿ ಹಲವನ್ನು ತಿರುವೈಯ್ಯಾರಿನ ಪಂಚನದೀಶ ಮತ್ತು ಧರ್ಮಸಂವರ್ಧನಿ ದೇವಿಯರ ಮೇಲೂ ರಚಿಸಿದ್ದಾರೆ. ತಮ್ಮ ಊರಿನ ದೇವತೆಗಳು ಸಂಗೀತ ಬಲ್ಲವರ ಬಾಯಲ್ಲಿ ಎಂದೆಂದೂ ನಿಲ್ಲುವ ಹಾಗೆ ಮಾಡಿದ್ದಾರೆ.

===== ೨ =======

 

ನಾನು ಈಗ ವಾಸವಾಗಿರುವುದು ಕ್ಯಾಲಿಫೋರ್ನಿಯದ ಸಿಲಿಕಾನ್ ಕಣಿವೆಯಲ್ಲಿ. ಇಲ್ಲಿನ ಮುಖ್ಯ ನಗರ ಸ್ಯಾನ್ ಹೋಸೆ. ತಿರುವೈಯ್ಯಾರಿನಲ್ಲಿ ತ್ಯಾಗರಾಜರು ತಮ್ಮ ಸಂಗೀತದಿಂದ ಹೊಸ ಕ್ರಾಂತಿ ಮಾಡುವ ಕಾಲದಲ್ಲಿ, ಇಲ್ಲಿಯೂ ಒಂದು ಹೊಸ ಕ್ರಾಂತಿ ನಡೆಯುತ್ತಿತ್ತು. ಸ್ಪ್ಯಾನಿಶ್ ಮಿಶನರಿಗಳು ಮೆಕ್ಸಿಕೋದಿಂದ ಧರ್ಮ ಪ್ರಚಾರಕ್ಕೆಂದು ತಮ್ಮ ಉತ್ತರಕ್ಕೆ ನಡೆದು ಬಂದರು. ಬರುತ್ತಾ ದಾರಿಯಲ್ಲಿ ಸಿಕ್ಕ ಮೂಲನಿವಾಸಿಗಳ ಊರುಗಳಲ್ಲಿ ಅಲ್ಲಲ್ಲಿ ಮಠ (ಮಿಶನ್) ಗಳನ್ನು ಕಟ್ಟುತ್ತಾ ಬಂದರು. ಹೀಗೆ ಪಶ್ಚಿಮ ಕ್ಯಾಲಿಫೋರ್ನಿಯದಲ್ಲಿ ೨೧ ಮಿಶನ್ ಗಳಿವೆ. ಸಿಲಿಕಾನ್ ಕಣಿವೆಯಲ್ಲೇ ಎರಡು ಮಿಶನ್ ಗಳಿವೆ. ಅವುಗಳಲ್ಲೊಂದು ಫ್ರಿಮಾಂಟ್ ನಲ್ಲಿರುವ ಮಿಶನ್ ಸ್ಯಾನ್ ಹೋಸೆ. ಇದನ್ನು ೧೭೯೭ರಲ್ಲಿ ಕಟ್ಟಲಾಯಿತಂತೆ. ನಂತರದ ಕಾಲದಲ್ಲಿ ಇದು ಹಲವು ಏಳು ಬೀಳುಗಳನ್ನು ಕಂಡರೂ, ಈಗ ಸುಸ್ಥಿತಿಯಲ್ಲಿದೆ. ಕಟ್ಟಡದ ದುರಸ್ತಿಯ ಅಗತ್ಯ ಬಿದ್ದರೂ, ಕಟ್ಟಡದ ಮೂಲ ರೂಪಕ್ಕೆ ಧಕ್ಕೆಯಾಗದಂತೆ ರಿಪೇರಿ ಮಾಡಲಾಗಿದ್ದು, ೨೦೦೭ ರಲ್ಲೂ ಇದು ಕಟ್ಟಿದಾದ ಹೇಗಿತ್ತೋ ಹಾಗೇ ಕಾಣುವ ಹಾಗೆ ಇಡಲಾಗಿದೆ. ಇದರ ಬಗ್ಗೆ, ಮತ್ತು ಇತರ ಸ್ಪ್ಯಾನಿಷ್ ಮಿಶನ್ ಗಳ ಬಗ್ಗೆ ವಿಕಿಪಿಡಿಯದಲ್ಲಿ ಬೇಕಾದಷ್ಟು ಮಾಹಿತಿ ನೀವು ಓದಬಹುದು.

ಮಿಶನ್ ಸ್ಯಾನ್ ಹೋಸೆ: ೨೦೦೪ರಲ್ಲಿ ( ಚಿತ್ರ ಕೃಪೆ: ವಿಕಿಪಿಡಿಯ)

 

ಇಂತಹ ಮಿಶನ್‍ಗಳಲ್ಲೆಲ್ಲ, ಆಗ ಪಾದ್ರಿಗಳು ಉಪಯೋಗಿಸುತ್ತಿದ್ದ ಪಾತ್ರೆ-ಪಡಗ, ಬಟ್ಟೆ, ಪ್ರಾರ್ಥನಾ ಸಲಕರಣೆಗಳು ಮೊದಲಾಗಿ ಎಲ್ಲವನ್ನೂ ಸಂರಕ್ಷಿಸಿ ಇಡಲಾಗಿದೆ. ಅದರಿಂದ ನಮಗೆ ಆಗಿನ ಜೀವನ ಶೈಲಿಯ ಪರಿಚಯವಾಗುತ್ತೆ. ಅಷ್ಟೇ ಅಲ್ಲದೆ, ಚಾರಿತ್ರಕ ಸ್ಮಾರಕವೊಂದು ತನ್ನ ಕಥೆಯನ್ನು ತಾನೇ ಸುಲಭವಾಗಿ ಹೇಳುವ ಕಾರ್ಯ ಇಲ್ಲಿ ಯಶಸ್ವಿಯಾಗಿ ಸಾಗುತ್ತದೆ.

==== ೩ ======

 

ತ್ಯಾಗರಾಜರ ಚರಿತ್ರೆಗೂ, ಮಿಶನ್ ಸ್ಯಾನ್ ಹೋಸೆಗೂ ಏನು ಸಂಬಂಧ - ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ ಎನ್ನೋ ಹಾಗೆ ಎಂದಿರಾ? ೨೦೦೬ ಜನವರಿಯಲ್ಲಿ ಪತ್ರಿಕೆಗಳಲ್ಲಿ ಬಂದ ಒಂದು ಸುದ್ದಿಯನ್ನು ಕೇಳಿ ನಾನು ಆಘಾತಗೊಂಡೆ.

ಆ ವರದಿಯನ್ನು ನೀವು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು.

 

http://www.hindu.com/2006/01/03/stories/2006010304170500.htm

 

ಸಾರಾಂಶವೆಂದರೆ, ತ್ಯಾಗರಾಜರ ಮನೆಯನ್ನು ಕೆಡವಿ, ಅಲ್ಲಿ ಸ್ಮಾರಕವೊಂದರ ನಿರ್ಮಾಣವಾಗುತ್ತೆ. ಅಲ್ಲಿ ಬಂದಿರುವ ಚಿತ್ರವನ್ನು ನೋಡಿದರೆ, ಮೂಲ ರೂಪಕ್ಕೆ ಕಿಂಚಿತ್ತೂ ಬೆಲೆಕೊಡದೆ ನಿರ್ಮಾಣಕಾರ್ಯ ನಡೆಯುತ್ತಿರುವಂತೆ ತೋರುತ್ತಿದೆ. ವರದಿಯ ಪ್ರಕಾರ, ಅಲ್ಲೊಂದು ಧ್ಯಾನ ಮಂಟಪ ಬರುವುದಂತೆ. ತ್ಯಾಗರಾಜರ ಕೃತಿಗಳನ್ನೊಳಗೊಂಡ ಕ್ಯಾಸೆಟ್‍ಗಳನ್ನೂ, ಸಿಡಿಗಳನ್ನೂ ಪುಸ್ತಕಗಳನ್ನೂ ಪ್ರದರ್ಶಿಸಲಾಗುತ್ತದಂತೆ. ಮುಂದೆ ಒಂದು ಕಮಾನು, ಗೋಪುರ ಎಲ್ಲಾ ಇರುವುದಂತೆ. ಏಕೆ ಸ್ವಾಮೀ ಈ ಅಪದ್ಧ ಬೇಕು ನಮಗೆ? ತಿರುವೈಯ್ಯಾರಿನಲ್ಲಿ ೭-೮ ಅಂತಸ್ತಿನ ಪಂಚನದೀಶ-ಧರ್ಮಸಂವರ್ಧಿನಿಯ ದೇವಾಲಯದ ಗೋಪುರವಿಲ್ಲವೇ? ತ್ಯಾಗರಾಜರ ಮನೆಯೊಂದು ಚಾರಿತ್ರಿಕ ಸ್ಮಾರಕ -ಅದನ್ನು ಇದ್ದ ಸ್ಥಿತಿಯಲ್ಲೇ ರಿಪೇರಿ ಮಾಡಿ, ಮೊದಲಿನ ರೀತಿಯಲ್ಲೇ ಉಳಿಸಿಕೊಳ್ಳಲು ಆಗುತ್ತಿರಲಿಲ್ಲವೇ? ಈಗಾಗಲೆ ತ್ಯಾಗರಾಜ ಸಮಾಧಿಯ ಬಳಿ ಹೊಸದೊಂದು ಸ್ಮಾರಕ ಬರುತ್ತಿದೆಯಂತೆ. ಖಾಲಿ ಜಾಗದಲ್ಲಿ ಮನಸೋ ಇಚ್ಚೆ ಕಟ್ಟಲಿ. ಆದರೆ, ನಮ್ಮ ಸಂಗೀತ ಪರಂಪರೆಯ ಒಂದು ಮುಖ್ಯ ಪಾತ್ರ ವಹಿಸಿದ ಈ ಮನೆಯನ್ನು ಕೆಡವಿ ಅಲ್ಲಿ ಹೊಸ ಮಾದರಿಯ ಕಟ್ಟಡವೊಂದನ್ನು ಕಟ್ಟ ಹೊರಟಿರುವ ತ್ಯಾಗಬ್ರಹ್ಮ ಸಮಾಜದವರ ನಿರ್ಧಾರಕ್ಕೆ ಏನು ಹೇಳುವುದು? ಗೂಗಲಿಸಿ ನೋಡಿದಾಗ ಈ ಕಾರ್ಯಕ್ಕೆ ನ್ಯಾಯಾಲಯ ತಡೆಆಜ್ಞೆ ಕೊಟ್ಟಿದ್ದಿದ್ದೂ, ಆಮೇಲೆ ಅದೆಲ್ಲ ತೆರವಾಗಿ, ಮನೆಯನ್ನು ಕೆಡವಿದ್ದಾರೆ ಎಂದು ಕೇಳಿಬಂತು. ಇದಕ್ಕಿಂತ ದೌರ್ಭಾಗ್ಯ ಬೇಕೇ?

ತ್ಯಾಗರಾಜರ ಮನೆ - ಕೆಡವಲಾಗಿದೆ

ಕೆಡವಲಾಗಿರುವ ತ್ಯಾಗರಾಜರ ಮನೆ: ೨೦೦೭ ಜನವರಿಯಲ್ಲಿ (ಚಿತ್ರ್: ಹಿಂದೂ)

 

ತ್ಯಾಗರಾಜರ ಮನೆಯಂತೂ ಹೋಯಿತು. ಚಿತ್ರದಲ್ಲಿ ಕಾಣುವಂತಹ ಮಾಳಿಗೆಯ ಕಟ್ಟಡ ಬಂದ ಮೇಲೆ, ಅದಕ್ಕೂ ತ್ಯಾಗರಾಜರಿಗೂ ಯಾವುದೇ ಭಾವನಾತ್ಮಕ ಸಂಬಂಧ ಉಳಿಯುವುದು ದೂರವೇ ಉಳಿಯಿತು. ಮುಂದೆ ಎಂದಾದರೊಂದು ದಿನ ನಮಗೂ ಪಾಶ್ಚಾತ್ಯರ ಹಾಗೆ ತಮ್ಮ ಹಿಂದಿನ ಚರಿತ್ರೆಯನ್ನು ತೋರಿಸುವ ಕಟ್ಟಡಗಳನ್ನು ಕಾಯ್ದು ಜತನದಿಂದ ನೋಡಿಕೊಳ್ಳುವ ಬುದ್ದಿ ಬರಬಹುದೇನೋ? ಅಂತಹ ಕಾಲ ಬರಲಿ ಎಂದು ಆಶಿಸುವೆ. ಅದಕ್ಕೆ ಜನರಲ್ಲಿ ಇಂತಹ ವಿಷಯಗಳ ಬಗ್ಗೆ ಕಾಳಜಿ ಬರಬೇಕು. ಹಾಗೆ ಬಂದಾಗ ಮಾತ್ರ ಇಂತಹ ತುಂಬಲಾರದ ನಷ್ಟಗಳಿಂದ ನಮಗೆ ಮುಕ್ತಿ ಸಿಕ್ಕುವುದು.

 

( ನಾನು ತಿರುವೈಯ್ಯಾರಿಗೆ ಹೋದಾಗ ನನ್ನ ಬಳಿ ಕ್ಯಾಮರಾ ಇರಲಿಲ್ಲ. ರಸಿಕ ಫೋರಮ್ ಗೆಳೆಯರಾದ ಮಹಾಕವಿ (ಸುಬ್ರಮಣ್ಯಂ) ಅವರು ತಾವು ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಲು ಅನುಮತಿ ಇತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು)