ತಿಳಿಹಾಸ್ಯದ ತಿಥಿ !
ವಿಶಾದದಲ್ಲೂ ವಿನೋದ. ತಿಥಿ ಕಾರ್ಯದಲ್ಲೂ ತಿಳಿಹಾಸ್ಯ. ಕನ್ನಡಕ್ಕೆ ಬಂದಿದೆ ಅಪೂರಪದ ಚಿತ್ರ. ಶೀರ್ಷಿಕೆಯಲ್ಲಿ ವಿಶಾದ ಇದೆ. ನೋಡುಗರಲ್ಲಿ ಅದು ಮಂದಾಸ ಮೂಡಿಸುತ್ತವೆ. ಹೆಸರು ತಿಥಿ. ನೋಡಿದರೆ ನಿಮದಾಗೋದಿಲ್ಲ ತಿಥಿ. ನಗು ಹೊರ ಚಿಮ್ಮುತ್ತದೆ. ಮಂದಾಸ ಹೊಳೆಯುತ್ತದೆ.
-----
ಕನ್ನಡ ಚಿತ್ರಗಳು ಅನೇಕ ಬರುತ್ತವೆ. ರಿಯಲಿಸ್ಟಿಕ್ ಹೆಸರಲ್ಲಿ ಭೂಗತ ಜಗತ್ತಿನ ಕತೆ ತೆರೆ ಮೇಲೆ ವಿಜೃಂಭಿಸುತ್ತವೆ. ಅಂತಹ ಸಿನಿಮಾಗಳೇ ರಿಯಲಿಸ್ಟಿಕ್ ಚಿತ್ರ ಅನ್ನೋ ನಂಬಿಕೆ ನಮ್ಮದಾಗಿತ್ತು. ಆದರೆ, ಈಗ ಅಪ್ಪಟ ಕನ್ನಡದ ಚಿತ್ರ ಆ ಸತ್ಯವನ್ನ ಸುಳ್ಳು ಮಾಡಿದೆ. ರಾಷ್ಟ್ರೀಯ ಪ್ರಶಸ್ತಿನೂ ಆ ಚಿತ್ರಕ್ಕೆ ದೊರೆತಿದೆ. ದೊಡ್ಡವರೆಲ್ಲ ಅದನ್ನ ಮೆಚ್ಚಿದ್ದಾರೆ. ಜನಕ್ಕೂ ಅದು ಈಗ ನೋಡಲು ಸಿಗುತ್ತಿದೆ. ಹೆಸರು ತಿಥಿ. ಬನ್ನಿ ತಿಥಿ ಕಾರ್ಯಕ್ಕೆ ನಾವೂ ಹೋಗೋಣ.
ತಿಥಿ ಒಂದು ಸತ್ಯ ಕಥೆ. ಹೀಗಂತ ಹೇಳಿದರೆ ತಪ್ಪಿಲ್ಲ. ಆದರೆ, ಇದು ಕಾಲ್ಪಿಕ ಕಥೆ. ಪಾತ್ರಗಳು ಸ್ವಾಭಾವಿಕವಾಗಿಯೇ ನಟಿಸುತ್ತವೆ. ಎಲ್ಲೂ ಬಣ್ಣವಿಲ್ಲ. ಇನ್ನೆಲ್ಲೂ ನಾಟಕೀಯ ಹಾವ ಭಾವಗಳಿಲ್ಲ. ಬದುಕಿನ ದೈನಂದಿನ ದಿನದಂತೆ ಚಿತ್ರ ಸಾಗುತ್ತದೆ. ನಿಮ್ಮನ್ನ ಅದು ತನ್ನೊಳಗೆ ಎಳೆದುಕೊಳ್ಳುತ್ತದೆ. ಜೀವನದ ಜೀವಂತಿಕೆಯನ್ನ ಹೇಳುತ್ತಲೇ ನವೀರಾಗಿ ನಗಿಸುತ್ತದೆ. ಚಿತ್ರ ತಿಥಿ ಸುತ್ತವೇ ಇದೆ. ಆದರೂ, ನೀವು ಆರಂಭದಿಂದ ಕೊನೆವರೆಗೂ ನಗುವಿನ ರೆಡಾರ್ರ್ನಲ್ಲಿ ಇರುತ್ತೀರಿ.
ತಿಥಿ ನಾಲ್ಕು ತೆಲೆಮಾರಿನ ಕಥೆ ಹೇಳುತ್ತದೆ. 101 ವರ್ಷ ಸೆಂಚ್ಯೂರಿ ಗೌಡ. ಆತನ ಪುತ್ರ ಗಡ್ಡಪ್ಪ. ಗಡ್ಡಪ್ಪನ ಮಗ ತಮ್ಮಣ್ಣ, ತಮ್ಮಣ್ಣನ ಪುತ್ರ ಅಭಿ. ಎಲ್ಲರೂ ಕಥೆಯ ಪಾತ್ರಗಳೇ. ಇತರ ಪಾತ್ರಗಳು ಊರಿನ ಜನ ಆಗಿರುತ್ತಾರೆ. ಸೆಂಚೂರಿ ಗೌಡ ಸತ್ತ ದಿನದಿಂದ ಹಿಡಿದು, ತಿಥಿ ಮಾಡೋ 11 ದಿನದ ವರೆಗಿನ ಕಥೆನೇ ಇಡೀ ತಿಥಿ ಸಿನಿಮಾ. ಅದನ್ನ ಅಷ್ಟೇ ನೀಟಾಗಿ,ನೈಜವಾಗಿ ಚಿತ್ರಿಸಲಾಗಿದೆ. ನೋಡುಗರ ಹೃದಯಲ್ಲಿ ಪತ್ರಿ ಪಾತ್ರ ಅಚ್ಚಳಿಯದೆ ಉಳಿದು ಬಿಡುತ್ತವೆ.
ಚಿತ್ರದ ಪಾತ್ರ ನಮಗೆ ಹತ್ತಿರವಾಗಲು ಕಾರಣ ಇದೆ. ಪಾತ್ರಗಳ ಆಯ್ಕೆ ಮಾಡೋವಲ್ಲಿ ಹೆಚ್ಚು ತೊಡಗಿಸಿಕೊಂಡರೋರು ಸಿನಿಮಾದ ರೈಟರ್ ಈರೇಗೌಡರು. ತಮ್ಮ ಊರಿನ ಜನರನ್ನೇ ತೆರೆ ಮೇಲೆ ಬರೆದುಕೊಟ್ಟಿದ್ದಾರೆ. ಅದರಲ್ಲೂ ಗಡ್ಡಪ್ಪ ಪಾತ್ರ ನಿರ್ವಹಿಸಿದೋರು ಈರೇಗೌಡರ ಮಾವ ಆಗಬೇಕು. ಹಂಗೆ ನಟರಲ್ಲದ ವ್ಯಕ್ತಿಗಳನ್ನ ಚಿತ್ರಕ್ಕೆ ಕಲಾವಿದರಾಗಿ ಬಳಸಲಾಗಿದೆ. ಉತ್ತರ ಕರ್ನಾಟಕದಿಂದ ಬರೋ ಕುರಿಗಾಯಿಗಳ ಪಾತ್ರಗಳು ಗಮನ ಸೆಳೆಯುತ್ತವೆ.
ತಿಥಿ ಚಿತ್ರದ ಈರೇಗೌಡರು ಸಿನಿಮಾಕ್ಕೆ ಬರೋ ಮೊದಲು ಏನ್ ಆಗಿದ್ದರು ಅನ್ನೋದು ತುಂಬಾ ವಿಶೇಷವಾಗಿದೆ. ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ಗೆಳೆಯ ಈ ಈರೇಗೌಡ. ಇನ್ನೂ ಹೇಳಬೇಕು ಅಂದ್ರೆ, ರಾಮ್ ರೆಡ್ಡಿ ಅವರ ತಂದೆ ಕಂಪನಿಯಲ್ಲಿಯೇ ಈರೇಗೌಡರು ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ಕೆಲಸ ಬಿಟ್ಟು ಹೋಗಬೇಕೆಂದು ಕೊಂಡಾಗ, ಸ್ವತ: ರಾಮ್ ರೆಡ್ಡಿ, ತಮ್ಮ ತಾಯಿ ಅನಿತಾ ರೆಡ್ಡಿ ಕಂಪನಿಯಲ್ಲಿ ಆಫಿಸ್ ಬಾಯ್ ಕೆಲಸ ಕೊಡಿಸಿದರು. ಅಲ್ಲಿದ್ದುಕೊಂಡೇ ಈರೇಗೌಡ ಕಂಪ್ಯೂಟರ್ ಕಲೆತಿದ್ದಾರೆ. ಫೋಟೋಗ್ರಾಫಿಯನ್ನೂ ಕಲೆತುಕೊಂಡಿದ್ದಾರೆ.
ಹೀಗೆ ಕಷ್ಟಪಟ್ಟು ಮುಂದೆ ಬಂದ ಈರೇಗೌಡರು, ಈಗ ರಾಷ್ಟ್ರೀಯ ಪ್ರಶಸ್ತಿ ಪಡೆದ ತಿಥಿ ಚಿತ್ರದ ಒಂದು ಪ್ರಮುಖ ಭಾಗವೇ ಆಗಿದ್ದಾರೆ. ತಮ್ಮ ಊರು ನೊದೆಕೊಪ್ಪಲುವಿನಲ್ಲಿಯೇ ಚಿತ್ರದ ಪಾತ್ರಗಳ ಆಯ್ಕೆ ಮಾಡಿದ್ದಾರೆ. ತಮ್ಮ ಮಾವ ಗಡ್ಡಪ್ಪ ಪಾತ್ರದಿಂದಲೇ ಸ್ಪೂರ್ತಿ ಪಡೆದು,ಇತರ ಪಾತ್ರಗಳ ಆಯ್ಕೆ ಮಾಡಿದ್ದಾರೆ. ಡೈಲಾಗ್ ಬರೆದುಕೊಟ್ಟಿದ್ದಾರೆ. ಆದರೆ, ಎಲ್ಲೂ ಆ ಮಾತುಗಳು ಡೈಲಾಗ್ ರೂಪದಲ್ಲಿ ಇಲ್ಲವೇ ಇಲ್ಲ. ನೈಜ ಮಾತಿನ ದಾಟಿಯಲ್ಲಿಯೇ ಇವೆ. ಪಾತ್ರಗಳೂ ಆ ಕಾರಣಕ್ಕೇನೆ ಇನ್ನೂ ಹತ್ತಿರವಾಗುತ್ತವೆ.
63 ನೇ ರಾಷ್ಟ್ರೀಯ ಪ್ರಶಸ್ತಿ ಪಡೆದ ತಿಥಿ ಮೇ-6.05.16 ರಂದ ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ತೆರೆ ಕಂಡಿದೆ. ಬೆಂಗಳೂರು ಮತ್ತು ಮಂಡ್ಯದ ಸಿಂಗಲ್ ಥಿಯೇಟರ್ಗೂ ರಿಲೀಸ್ ಆಗಿದೆ. ಚಿತ್ರ ವೀಕ್ಷಿಸಿದ ಜನ ಮೆಚ್ಚಿದ್ದಾರೆ. ಸೂಪರ್ ಡ್ಯೂಪ್ ಅಂತ ಹೇಳಿದೇ, ಚಿತ್ರ ನೋಡಿದ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಿಥಿ ನಿಮ್ಮನ್ನ ಕಾಡುತ್ತದೆ. ಬರೋ ಪ್ರತಿ ಪಾತ್ರ ನೋಡಿಸಿಕೊಂಡು ಹೋಗುತ್ತವೆ. ಕ್ಯಾಮೆರಾದ ಮುಂದಿ ಈ ಪಾತ್ರಗಳು ನಟಿಸಿಲ್ಲ. ಬದಲಾಗಿ, ಪಾತ್ರಗಳ ನೈಜ ಬಿಹೇವಿಯರ್ ಗಳನ್ನ ಕ್ಯಾಮೆರಾ ಸೆರೆ ಹಿಡಿದಿದೆ. ತಿಥಿ ಆ ಕಾರಣಕ್ಕೇನೆ ವಿಶೇಷ ಸಿನಿಮಾ ಆಗಿದೆ. ಒಮ್ಮೆ ನೋಡಿ. ಕಂಡಿತ ಇಷ್ಟ ಆಗುತ್ತದೆ.
-ರೇವನ್ ಪಿ.ಜೇವೂರ್
Comments
ಉ: ತಿಳಿಹಾಸ್ಯದ ತಿಥಿ !
ಚಿತ್ರ ನೋಡಬೇಕು ಎಂದು ಅನ್ನಿಸುವ ವಿಮರ್ಶೆಗೆ ಅಭಿನಂದನೆಗಳು.