ತುಂಟ ಟೆಡ್ಡಿ ಕರಡಿಗಳು

ತುಂಟ ಟೆಡ್ಡಿ ಕರಡಿಗಳು

ಬಿರು ಬೇಸಗೆಯ ಒಂದು ದಿನ ರಾಮು ಮತ್ತು ಶಾಮುಗೆ ಅವರ ಹೆತ್ತವರು ಸಮುದ್ರ ತೀರಕ್ಕೆ ಹೋಗಲು ಬೇಗ ತಯಾರಾಗ ಬೇಕೆಂದು ಹೇಳಿದರು.

"ನಾವು ನಮ್ಮ ಟೆಡ್ಡಿ ಕರಡಿಗಳನ್ನು ಒಯ್ಯಬಹುದೇ?” ಕೇಳಿದ ರಾಮು. “ನೀವು ಅವುಗಳ ಮೇಲೆ ಕಣ್ಣಿಡುತ್ತೀರಿ ಎಂದಾದರೆ ಮಾತ್ರ ಒಯ್ಯಬಹುದು" ಎಂದರು ಅಪ್ಪ. “ಯಾಕೆಂದರೆ, ನೀವೇನಾದರೂ ಅವನ್ನು ಕಳೆದುಕೊಂಡರೆ, ಸಂಜೆಯ ವರೆಗೆ ಹುಡುಕುತ್ತಾ ಇರಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅವರು ವಿವರಿಸಿದರು.

ರಾಮು ಮತ್ತು ಶಾಮು ತಾವು ಹೋಗುವಲ್ಲಿಗೆಲ್ಲ ತಮ್ಮ ಟೆಡ್ಡಿ ಕರಡಿಗಳನ್ನು ಒಯ್ಯುತ್ತಿದ್ದರು. ಆದರೆ ಅವರು ಯಾವಾಗಲೂ ತಮ್ಮ ಟೆಡ್ಡಿ ಕರಡಿಗಳನ್ನು ಕಳೆದುಕೊಳ್ಳುತ್ತಿದ್ದರು ಮತ್ತು ಅವನ್ನು ಹುಡುಕುವುದೇ ದೊಡ್ಡ ಕೆಲಸವಾಗುತ್ತಿತ್ತು. ನಿಜ ಸಂಗತಿ ಏನೆಂದರೆ, ಯಾರೂ ನೋಡುತ್ತಿಲ್ಲ ಎಂದಾದಾಗ, ಅವರ ಟೆಡ್ಡಿ ಕರಡಿಗಳು ಸಾಹಸ ಮಾಡಬೇಕೆಂದು ಮೆಲ್ಲನೆ ಹೊರಟು ಹೋಗುತ್ತಿದ್ದವು.

ಇವತ್ತು ಹಾಗೆಯೇ ಆಯಿತು. ಅವರ ಕುಟುಂಬ ಸಮುದ್ರ ತೀರಕ್ಕೆ ಬಂದು ತಮ್ಮ ಸಾಮಾನು ಸರಂಜಾಮುಗಳನ್ನೆಲ್ಲ ಬಿಡಿಸಿಟ್ಟಿತು. ಅಪ್ಪ ಒಂದು ವಾರ್ತಾಪತ್ರಿಕೆ ಮತ್ತು ಅಮ್ಮ ಒಂದು ಪುಸ್ತಕ ಓದಲು ಶುರು ಮಾಡಿದರು. ರಾಮು ಮತ್ತು ಶಾಮು ಮರಳಿನ ಕೋಟೆ ಕಟ್ಟ ತೊಡಗಿದರು. ಹೀಗೆ ಯಾರೂ ತಮ್ಮನ್ನು ನೋಡುತ್ತಿಲ್ಲ ಎಂದಾದಾಗ ರಾಮು ಮತ್ತು ಶಾಮುವಿನ ಟೆಡ್ಡಿ ಕರಡಿಗಳು ಹೊರಕ್ಕೆ ಜಿಗಿದು, ಸಮುದ್ರ ತೀರದಲ್ಲಿ ದೂರಕ್ಕೆ ಓಡಿ ಹೋದವು.

“ಅಲ್ಲೊಂದು ಗವಿ ಕಾಣಿಸುತ್ತಿದೆ, ಅಲ್ಲಿಗೆ ಹೋಗೋಣ" ಎಂದಿತು ದೊಡ್ಡ ಟೆಡ್ಡಿ ಕರಡಿ. ಎರಡೂ ಟೆಡ್ಡಿ ಕರಡಿಗಳು ದೂರದಲ್ಲಿದ್ದ ಕಲ್ಲುಗಳ ನಡುವಿನ ಗವಿಯನ್ನು ಹೊಕ್ಕವು. “ಇಲ್ಲಿ ಕತ್ತಲಾಗಿದೆ, ನನಗೆ ಹೆದರಿಕೆಯಾಗುತ್ತದೆ” ಎಂದಿತು ಸಣ್ಣ ಟೆಡ್ಡಿ ಕರಡಿ.

“ಏನೇನೋ ಮಾತನಾಡಬೇಡ. ನೀನೊಂದು ಕರಡಿ. ಕರಡಿಗಳಿಗೆ ಕತ್ತಲಿನ ಗುಹೆಗಳೆಂದರೆ ಇಷ್ಟ" ಎಂದಿತು ದೊಡ್ಡ ಟೆಡ್ಡಿ ಕರಡಿ. ಅವೆರಡು ಗವಿಯ ಒಳಕ್ಕೆ ಹೋದವು. ಆ ಗವಿ ಬಹಳ ಉದ್ದವಾಗಿತ್ತು ಮತ್ತು ಒಳಕ್ಕೆ ಹೋದಂತೆ ಇನ್ನಷ್ಟು ಕತ್ತಲಾಗಿತ್ತು. ಅಷ್ಟರಲ್ಲಿ  ಸಣ್ಣ ಟೆಡ್ಡಿ ಕರಡಿಗೆ ನೆಲದಲ್ಲಿ ಏನೋ ಮಿಂಚುತ್ತಿದ್ದಂತೆ ಕಾಣಿಸಿತು. ಅದು ಬಾಗಿ ಅದನ್ನು ಎತ್ತಿ ದೊಡ್ಡ ಟೆಡ್ಡಿ ಕರಡಿಗೆ ಕೊಟ್ಟಿತು.

“ಓ, ಇದು ಚಿನ್ನ” ಎಂದಿತು ದೊಡ್ಡ ಟೆಡ್ಡಿ ಕರಡಿ. ಅನಂತರ ಅದು ಯೋಚಿಸುತ್ತಾ ಹೇಳಿತು, “ಇದು ಕಳ್ಳಸಾಗಣೆದಾರರ ಗವಿ ಆಗಿರಬೇಕು. ಅವರು ಈಗಲೂ ಇಲ್ಲಿ ಇರಬಹುದು. ನೋಡೋಣ."

"ಬೇಡ, ಬೇಡ. ಅವರಿಂದ ನಮಗೆ ಅಪಾಯವಾದೀತು. ನಾವು ವಾಪಾಸು ಹೋಗೋಣ" ಎನ್ನುತ್ತಾ ಸಣ್ಣ ಟೆಡ್ಡಿ ಕರಡಿ ಹಿಂದಕ್ಕೆ ತಿರುಗಿ ಗವಿಯ ಪ್ರವೇಶದ ಕಡೆಗೆ ಓಡಿತು. ಆದರೆ ಇವು ಗವಿಯೊಳಗೆ ದೂರಕ್ಕೆ ಹೋಗಿದ್ದಾಗ, ಸಮುದ್ರದಲ್ಲಿ ಭರತ ಬಂದು ಅಲೆಗಳು ಏರಿದ್ದವು. ಅದರಿಂದಾಗಿ ಗವಿಯ ಪ್ರವೇಶದ ವರೆಗೂ ಸಮುದ್ರದ ನೀರು ನುಗ್ಗಿತ್ತು.

"ಬಾ. ಬೇಗ ಬಾ. ನಾವು ಇಲ್ಲಿ ಸಿಕ್ಕಿ ಬಿದ್ದಿದ್ದೇವೆ” ಎಂದು ಕೂಗಿತು ಸಣ್ಣ ಟೆಡ್ಡಿ ಕರಡಿ. ಅತ್ತ ರಾಮು ಮತ್ತು ಶಾಮು ಮರಳಿನ ಕೋಟೆ ಕಟ್ಟಿ ಮುಗಿಸಿದರು. ಅವರು ಅತ್ತಿತ್ತ ನೋಡಿದಾಗ ಟೆಡ್ಡಿ ಕರಡಿಗಳು ಕಾಣಿಸಲಿಲ್ಲ.

“ಅಯ್ಯೋ, ಪುನಃ ಟೆಡ್ಡಿ ಕರಡಿಗಳು ಕಾಣೆಯಾಗಿವೆ” ಎಂದು ಅವರಿಬ್ಬರೂ ಚೀರಿದರು. ಅವರು ಅಪ್ಪ-ಅಮ್ಮನ ಜೊತೆ ಸೇರಿ ಎಲ್ಲ ಕಡೆ ಟೆಡ್ಡಿ ಕರಡಿಗಳನ್ನು ಹುಡುಕಿದರು. ಆದರೆ ಎಲ್ಲಿಯೂ ಅವುಗಳ ಸುಳಿವೇ ಇಲ್ಲ. “ಅವು ತೆರೆಯಲ್ಲಿ ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿರಬೇಕು"ಎಂದ ಶಾಮು ನಿರಾಶೆಯಿಂದ.

ಅತ್ತ ಗವಿಯಲ್ಲಿ ಕುಳಿತಿದ್ದ ಟೆಡ್ಡಿ ಕರಡಿಗಳಿಗೆ ರಾಮು-ಶಾಮು, ಅವರ ಅಪ್ಪ-ಅಮ್ಮ ತಮ್ಮನ್ನು ಹುಡುಕುತ್ತಿದ್ದದ್ದು ಕಾಣಿಸಿತು. ಅವು ನೆಲದಿಂದ ಹಾರಿಹಾರಿ ಕೈಗಳನ್ನು ಬೀಸಿದವು. "ನಾವು ಸಣ್ಣವರು. ಅವರಿಗೆ ಕಾಣಿಸುವುದಿಲ್ಲ" ಎಂದಿತು ಸಣ್ಣ ಟೆಡ್ಡಿ ಕರಡಿ.

ಅಷ್ಟರಲ್ಲಿ ಗವಿಯ ಪ್ರವೇಶದಲ್ಲಿ ಇಬ್ಬರು ಗಂಡಸರು ಕಾಣಿಸಿದರು. ಟೆಡ್ಡಿ ಕರಡಿಗಳನ್ನು ಕಂಡೊಡನೆ ಅವರು ಕೈಚಾಚಿ ಅವನ್ನು ಎತ್ತಿಕೊಂಡರು. ಅವರ ದೋಣಿ ಅಲ್ಲೇ ಪಕ್ಕದಲ್ಲಿತ್ತು. ಈ ಎರಡು ಟೆಡ್ಡಿ ಕರಡಿಗಳನ್ನು ಅವರು ದೋಣಿಯಲ್ಲಿ ಹಾಕಿಕೊಂಡರು. ಹುಟ್ಟು ಹಾಕುತ್ತಾ ದೋಣಿಯನ್ನು ಸಮುದ್ರದಲ್ಲಿ ಮುನ್ನಡೆಸಿದರು. ಟೆಡ್ಡಿ ಕರಡಿಗಳು ಭಯದಿಂದ ತತ್ತರಿಸಿದವು. ಇವರೇ ಕಳ್ಳಸಾಗಣೆದಾರರು ಆಗಿರಬೇಕೆಂದು ಯೋಚಿಸುತ್ತಾ, ಅವು ಪರಸ್ಪರ ತಬ್ಬಿಕೊಂಡು ದೋಣಿಯ ತಳದಲ್ಲಿ ಮಲಗಿಕೊಂಡವು.

ಸ್ವಲ್ಪ ಸಮಯದ ನಂತರ ತೀರದಲ್ಲಿ ಹಲವಾರು ಜನರಿದ್ದಲ್ಲಿ ಗಂಡಸರು ದೋಣಿಯನ್ನು ನಿಲ್ಲಿಸಿದರು. ಈ ಎರಡು ಟೆಡ್ಡಿ ಕರಡಿಗಳನ್ನು ದೋಣಿಯಿಂದ ತೆಗೆದು, ಕೈಗಳಲ್ಲಿ ಎತ್ತಿ ಹಿಡಿದು ಆಡಿಸುತ್ತಾ, “ನೋಡಿ, ನೋಡಿ. ಯಾರಾದರೂ ನಿಮ್ಮ ಟೆಡ್ಡಿ ಕರಡಿಗಳನ್ನು ಕಳೆದುಕೊಂಡಿದ್ದೀರಾ?” ಎಂದು ಕೇಳಿದರು.

ಅಲ್ಲಿದ್ದ ಪ್ರವಾಸಿಗಳೆಲ್ಲರೂ ತಲೆಯೆತ್ತಿ ನೋಡಿದರು. ರಾಮು ಮತ್ತು ಶಾಮು ತಕ್ಷಣ ಓಡಿ ಹೋಗಿ ತಮ್ಮ ಟೆಡ್ಡಿ ಕರಡಿಗಳನ್ನು ಆ ಗಂಡಸರಿಂದ ತೆಗೆದುಕೊಂಡರು.

ಅವರ ತಂದೆಯೂ ಅಲ್ಲಿಗೆ ಬಂದರು. ಆ ಗಂಡಸರಿಗೆ, “ನಿಮಗೆ ಥ್ಯಾಂಕ್ಸ್. ನಾವು ಆವಾಗಿನಿಂದ ಈ ಟೆಡ್ಡಿ ಕರಡಿಗಳಿಗಾಗಿ ಎಲ್ಲ ಕಡೆ ಹುಡುಕಾಡುತ್ತಿದ್ದೆವು” ಎಂದರು.

“ನಮಗೆ ಇವು ಅದೋ ಅಲ್ಲಿ ಗವಿಯಲ್ಲಿ ಸಿಕ್ಕಿದವು. ನಿಮ್ಮ ಮಕ್ಕಳು ಇವನ್ನು ಅಲ್ಲಿ ಬಿಟ್ಟು ಬಂದಿರಬೇಕು” ಎಂದರು ಆ ಗಂಡಸರು. "ಆದರೆ, ನಮ್ಮ ಇಬ್ಬರು ಮಕ್ಕಳೂ ಮರಳಿನಲ್ಲಿ ಕೋಟೆ ಕಟ್ಟುತ್ತಾ ಇಲ್ಲೇ ಇದ್ದರು” ಎಂದರು ಅವರ ಅಪ್ಪ.

ತುಂಟ ಟೆಡ್ಡಿ ಕರಡಿಗಳು ಆ ಗವಿಗೆ ಹೇಗೆ ಹೋದವು ಮತ್ತು ದೊಡ್ಡ ಕರಡಿಯ ಜೇಬಿನಲ್ಲಿದ್ದ ನಾಣ್ಯ ಎಲ್ಲಿಂದ ಬಂತೆಂದು ಯಾರಿಗೂ ಗೊತ್ತಾಗಲಿಲ್ಲ.

ಅದಾದ ನಂತರ, ಅವು ಯಾವಾಗಲೂ ಮನೆಯಲ್ಲೇ ಇರಬೇಕೆಂದು ರಾಮು-ಶಾಮುವಿನ ತಂದೆ ತಾಕೀತು ಮಾಡಿದರು. ದೊಡ್ಡ ಮತ್ತು ಸಣ್ಣ ಟೆಡ್ಡಿ ಕರಡಿಗೆ ಇದರಿಂದ ಬೇಸರವೇನೂ ಆಗಲಿಲ್ಲ. ಅವು ಈಗಾಗಲೇ ಸಾಕಷ್ಟು ಸಾಹಸ ಮಾಡಿದ್ದವು. ಈಗ ಮನೆಯಲ್ಲೇ ಇರುತ್ತಾ ತಮ್ಮ ಮೆಚ್ಚಿನ ಆಟಗಳನ್ನು ಆಡತೊಡಗಿದವು.

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್” ಪುಸ್ತಕ