ತುಂಟ ಪೋರ

ತುಂಟ ಪೋರ

ಕವನ

ಗೊಣ್ಣೆ ಸುರಿಸುತ ತಾಯ ಹಿಂದೆಯೆ

ಚಿಣ್ಣನೊಬ್ಬನು ಹೋಗುತಿರುವನು

ಕಣ್ಣ ಕಂಬನಿ ಕೆನ್ನೆಗಿಳಿಯುತ ಮುದ್ದು ಮಾಡುತಿದೆ

ಅಣ್ಣನೊಂದಿಗೆ ಜಗಳ ಮಾಡುವ

ಸಣ್ಣ ಹುಡುಗನು ಪುಟ್ಟ ತಮ್ಮನು

ಬಣ್ಣಬಣ್ಣದ ಕನಸು ಕಾಣುವ ತುಂಟ ಬಾಲಕನು

 

ಮಧುರ ದನಿಯಲಿ ಕರೆದು ಮಾತೆಯ

ಗದರುತಿರುವನು ಕೋಲು ಹಿಡಿಯುತ

ತೊದಲು ನುಡಿಯನು ಕೇಳಿ ಜನನಿಯು ನಗುತ ನೋಡುವಳು

ಮುದದಿ ಕಂದನ ತಬ್ಬಿಕೊಳ್ಳುವ

ಚದುರೆಯವಳನು ಕಂಡ ಕಬ್ಬಿಗ

ಮೊದಲು ಕವಿತೆಯ ಬರೆಯತೊಡಗಿದ ಭಾವ ಹರಿಸುತ್ತ

 

ಅಮ್ಮನೊಲವನು ಸವಿದ ಕಂದನು

ಹೆಮ್ಮೆಯಿಂದಲಿ ಮುಂದೆ ನಡೆದನು

ಸುಮ್ಮನೇತಕೆ ಕದನವೆನ್ನುತ ಸೆರಗ ಹಿಂದಿನಲಿ

ನಮ್ಮ ಬೆನ್ನಿಗೆ ಕಾವಲಾಗಿಹ

ಳಮ್ಮನೆನ್ನುತ ಮನದಿ ಯೋಚಿಸಿ

ಹಮ್ಮ ತೋರದೆ ಮೆಲ್ಲ ನಕ್ಕನು ಮುಗ್ಧ ಕಂದಮ್ಮ

 

✍️ಲತಾ ಬನಾರಿ

(ಭಾಮಿನಿ ಷಟ್ಪದಿ)

ಚಿತ್ರ್