ತುಂತುರು ಇದು ನೀರ ಹಾಡು

ತುಂತುರು ಇದು ನೀರ ಹಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಕೃಷ್ಣಾ ಕೌಲಗಿ
ಪ್ರಕಾಶಕರು
ಎನ್ ಕೆ ಯಸ್ ಪ್ರಕಾಶನ, ಕೃಷ್ಣಮೂರ್ತಿಪುರಂ, ಮೈಸೂರು - ೫೭೦೦೦೪
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೨

ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ...

“ಇವುಗಳಲ್ಲಿ ವಿನೋದವಿದೆ, ವಿಷಾದವಿದೆ, ಖುಶಿಯಿದೆ, ಖಯಾಲಿಗಳಿವೆ, ಕಥೆಗಳಿವೆ, ಕನಸು, ನೀತಿ, ಬದುಕಿನ ಪಾಠಗಳೂ ಇಲ್ಲಿವೆ" ಎನ್ನುತ್ತಾರೆ 'ತುಂತುರು ಇದು ನೀರ ಹಾಡು' ಪುಸ್ತಕದ ಸೃಷ್ಟಿಕರ್ತೆ ಶ್ರೀಮತಿ ಕೃಷ್ಣಾ ಕೌಲಗಿ. ಹೀಗೆ ತಮ್ಮಿಡೀ ಪುಸ್ತಕದ ಒಳಾವರಣದ ಪದರಗಳನ್ನೇ ಒಂದು ಮುಷ್ಠಿಯಲ್ಲಿಟ್ಟು ನಮ್ಮೆದುರು ಅದನ್ನು ಬಿಡಿಸಿದ್ದಾರೆ ಎಂದು ನನಗನಿಸುತ್ತದೆ. 

'ಅಮ್ಮನಂಥ ತಮ್ಮನೊಬ್ಬನಿದ್ದ' ಎಂದು ಇದೀಗ ಅಗಲಿರುವ ಆ ಅಂತ:ಕರಣದ ಸೆಲೆಯನ್ನು ಎದೆಯಾಳದ ನೋವನ್ನು ಒತ್ತಿ ಹಿಡಿಯುತ್ತಲೇ ನೆನೆದುಕೊಳ್ಳುವ ಕೃಷ್ಣಾ ಸಾಲುಸಾಲಿನಲ್ಲೂ ಅವರ ತಮ್ಮ ಬಾಂಧವ್ಯದ ಕುರಿತು ಕಂಬನಿದುಂಬುತ್ತಾರೆ.

ಧಾರವಾಡದ ನೆಲಜಲ, ಸಂಸ್ಕೃತಿಯ ಛಾಪು ಇಲ್ಲಿನ ಅನೇಕ ಲೇಖನಗಳಲ್ಲಿ ಹೆಜ್ಜೆ ಹೆಜ್ಜೆಗೂ ಮೂಡಿದಂತಾಗಿದೆ. ಕೃಷ್ಣಾರ ಜೀವಕ್ಕೆ ಸನಿಹರಾದ ಬಂಧುಬಾಂಧವರು,ಗುರುಹಿರಿಯರು, ಸರಸವಿರಸದಲ್ಲೂ ಸಮೀಕೃತ ಸಂಬಂಧಗಳು, ಅಟ್ಟಅಡುಗೆ, ಮೆಟ್ಟಿದ ನೆಲ, ಆಡಿದ ಅಂಗಳದ ನೆನಪಿನ ಸಂದೂಕ ಇಲ್ಲಿ ಪರಿಪರಿಯಾಗಿ ಬಿಚ್ಚಿಕೊಂಡಿದೆ. ಹಾಗೆಯೇ ಅವರ ಬದುಕಿನ ಇನ್ನೊಂದು ಭಾಗವೇ ಆದ ಶಾಲೆ, ಅಲ್ಲಿನ ಮಕ್ಕಳು ಮತ್ತು ಆ ಶೈಕ್ಷಣಿಕ ಜಗತ್ತು 'ತುಂತುರು ಹಾಡಿನ' ಪಲ್ಲವಿಗಳಾಗಿ ಹೆಣೆದುಕೊಂಡಿವೆ. ಅಸಾಧ್ಯ ಸಾಧಕರ ಪರಿಚಯದೊಂದಿಗೇ ಇಲ್ಲಿ 'ಸಾಮಾನ್ಯವಾಗಿ' ಸಾಮಾನ್ಯರೆಂದು ಪರಿಗಣಿತರಾಗುವ ಹತ್ತೆಂಟು ಸುಹೃದಯಿಗಳ ಬಿಂಬಗಳಿವೆ. 'ತೃಣಕೆ ಹಸಿರೆಲ್ಲಿಯದು!? ಬೇರಿನದೇ? ಮಣ್ಣಿನದೇ?' ಹೇಳುವ ಕಥನ ಕೇಳಿದರೆ ತಲೆಮಾರಿನ ಸ್ಥಿತ್ಯಂತರಗಳು ರೂಢಿಸಿದ ನಿಯಮಗಳಲ್ಲಿ ಇದ್ದದ್ದು ಮನೆಮಕ್ಕಳ ಹಿತಾಸಕ್ತಿಯೇ...ಸುಳ್ಳಲ್ಲ.

ಬದುಕಿನ ಏನೆಲ್ಲ ಭಿತ್ತಿಚಿತ್ರಗಳು ಇಲ್ಲಿ‌ ಆಕಾಶದ ಭಗವಂತನಿಂದ ಹಿಡಿದು ಮನೆಯ ಕೆಲಸಗಳನ್ನು ಮಾಡಿಕೊಟ್ಟು‌ ಹೋಗುವ ಸ್ವಾಭಿಮಾನೀ ಹೆಣ್ಣುಮಕ್ಕಳವರೆಗೂ ತೆರೆದುಕೊಂಡಿವೆ. ಅಂತೆಯೇ ಸ್ತ್ರೀ ಸಹಜ ಆಸೆ ಅಭಿಲಾಷೆಗಳ ಝಳಕುಗಳು ಅವಲಕ್ಕಿ ಸರ, ಸೀರೆಗಳು, ಒಂದಷ್ಟು ತಿರುಗಾಟ, ಮಕ್ಕಳು, ಮೊಮ್ಮಕ್ಕಳ ಸಾಧನೆಗಳಿಗೆ ಸಹಜತೆಯಲ್ಲಿ ಹಿಗ್ಗುವ ಮಗುಮನಸು, ಅಕಾಲಿಕವಾಗಿ ಅಗಲಿದ ತಂಗಿಯ ಸಾವಿನ ಬಗೆಗಿನ ತೀವ್ರ ವೇದನೆ...ಎಲ್ಲವೂ ಅವರ ಮನಸ್ಸು ಬಿಚ್ಚಿಟ್ಟ ಒಳಮನಸ್ಸೇ ಆಗಿವೆ. 'ತುಂತುರು ಹಾಡು' ತನ್ನ ನಿರರ್ಗಳ ಚರ್ಚೆಗಳಲ್ಲಿ ಅವರ ವಿಭಿನ್ನ ಅನುಭವಗಳ ಬಗ್ಗೆ ಹೇಳುತ್ತದೆ. "ಜಿಸೆ ಮೌತನೇ ನ ಪೂಛಾ ಉಸೆ ಜಿಂದಗೀನೇ ಮಾರಾ' ಎಂಬ ಹಾಡಿನ ಸಾಲುಗಳನ್ನೆತ್ತಿಕೊಂಡು ಬದುಕೇ ಭಾರವಾಗಿ ಉಸಿರಾಡುತ್ತಿರುವವರ ಪ್ರಸಕ್ತಿಯ ಹೇಳುತ್ತ ಅಂಥವರು ಇಲ್ಲೇ ಉಳಿದು ನಾನಾ ವಿಧವಾಗಿ, ಅಕಾಲಮೃತ್ಯುವಿನಿಂದ ಯಮನ ಮನೆಗೆ ನಡೆಯುವ ಎಳೆವಯಸ್ಸಿನವರ ವಿಧಿಯ ಬಗೆಗಿನ ಹಳಹಳಿಕೆ 'ಬ್ರಹ್ಮಾಂಡವೇ ಬೊಂಬೆಯಾಟವಯ್ಯಾ' ಎಂದಂದು ಮನುಷ್ಯನ ‌ಅಸಹಾಯಕತೆಯ ನಿದರ್ಶನದತ್ತ ಬೆರಳಿಟ್ಟು ತೋರಿದ ಪರಿ ಮನಸ್ಸನ್ನು ಹಿಂಡಿಬಿಡುತ್ತದೆ.‌

ಹಗಲಿರುಳೂ ಜಾಗೃತವಾಗಿರುವ ಒಂದು ಮನಸ್ಸು ಏನೆಲ್ಲ ಪರಿವೀಕ್ಷಣೆ ಮಾಡುತ್ತ ನಿನ್ನೆ-ಇಂದು- ನಾಳೆಗಳ ಬಗೆಗಿನ ಅನುಭವ, ಆಲೋಚನೆಗಳನ್ನು ಹಿಡಿಹಿಡಿಯಾಗಿ ಕಟ್ಟಿಕೊಟ್ಟಾಗ ಅದು ಕೃಷ್ಣಾ ಕೌಲಗಿಯವರ ಲೇಖನವಾಗದೆ ತುಂತುರು ನೀರ ಹಾಡಾಗಿಬಿಡುವ ಒಂದು ವಿಸ್ಮಯ ಈ ಪುಸ್ತಕದಲ್ಲಿದೆ.”