ತೆಂಗು ಬೆಳೆಯಿಂದ ಗರಿಷ್ಟ ಲಾಭಮಾಡಿಕೊಳ್ಳಿ

ತೆಂಗು ಬೆಳೆಯಿಂದ ಗರಿಷ್ಟ ಲಾಭಮಾಡಿಕೊಳ್ಳಿ

ತೆಂಗು ಬೆಳೆ ಎಲ್ಲದಕ್ಕಿಂತ ಉತ್ತಮ. ಕನಿಷ್ಟ ನಿರ್ವಹಣೆಯಲ್ಲಿ ತಕ್ಕಮಟ್ಟಿಗೆ ಲಾಭ ತಂದುಕೊಡಬಲ್ಲ ಬೆಳೆ. ತೆಂಗಿನಿಂದ ಲಾಭ ಮಾಡಿಕೊಳ್ಳುವುದು ನಮ್ಮ  ಬೇಸಾಯ ಕ್ರಮದಲ್ಲಿದೆ. ಇತ್ತೀಚೆಗೆ ತೆಂಗಿನ ದರವೂ ಕೆ ಜಿ ಗೆ ೪೦ ರಿಂದ ೫೦ ರ ತನಕ ಇದೆ. ಎಳನೀರು ದರ ತೆಂಗಿನ ಕಾಯಿಯನ್ನೂ ಮೀರಿ ೫೦ - ೬೦ ತನಕ ಇದೆ. ಹಬ್ಬಗಳೂ ಹತ್ತಿರ ಬರುತ್ತಿವೆ. ತೆಂಗಿನ ಕಾಯಿಯ ಕೊರತೆ ಎಲ್ಲೆಡೆ ಕಾಣಿಸುತ್ತಿದೆ. ಹೀಗಾಗಿ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ.  

ತೆಂಗಿನ ಬೆಳೆಯಲ್ಲಿ ವಾರ್ಷಿಕ ೨೦೦ ಕಾಯಿ ಉತ್ಪಾದನೆ ಮಾಡಿದಿರೆಂದರೆ ಈಗಿನ ಧಾರಣೆಯಲ್ಲಿ ಮರವೊಂದರ ಸುಮಾರು ೨,೫೦೦ - ೩,೦೦೦ ರೂ. ಆದಾಯ ಪಡೆಯಬಹುದು. ಎಕ್ರೆಗೆ  ೮೦ ತೆಂಗಿನ ಮರ ಸಾಕಿದರೆ ೨,೫೦,೦೦೦ ಆದಾಯಕ್ಕೆ ಚ್ಯುತಿ ಬಾರದು. ಈ ಇಳುವರಿಯನ್ನು  ಬಹಳಷ್ಟು ಬೆಳೆಗಾರರು ಪಡೆಯುತ್ತಿಲ್ಲ. ಇದಕ್ಕೆ ಕಾರಣ ಬೇಸಾಯ ಕ್ರಮ ಮತ್ತು ತಳಿ ಗುಣ.  ಉತ್ತಮ ತಳಿಯ ಸಸಿಯನ್ನು ನೆಟ್ಟು ಉತ್ತಮ ಬೇಸಾಯ ಕ್ರಮ ಅನುಸರಿಸಿದರೆ  ತೆಂಗಿನಲ್ಲಿ ಉತ್ತಮ ಇಳುವರಿ ಪಡೆಯಲು ಕಷ್ಟವಾಗದು.

ತೆಂಗಿನ ಬೇಸಾಯ ಮಾಡುವಾಗ ಶುದ್ಧ ತಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ಇಳುವರಿ ಸ್ಥಿರತೆ ಮತ್ತು ಖಾತ್ರಿ ಇರುತ್ತದೆ. ಕೃತಕವಾಗಿ ಪರಾಗ ಸ್ಪರ್ಶ ಮಾಡಿ ಪಡೆದ ಶುದ್ಧ ಗುಣದ ಮರ ಅಧಿಕ ಇಳುವರಿ ಕೊಡಬಲ್ಲುದು. ತೆಂಗಿನ ಸಸಿ ಬೆಳೆಸುವಾಗ ಅದರ ಮೊದಲ ಮೂರು ವರ್ಷದ ಪಾಲನೆಯ ಮೇಲೆ ಅದರ ಭವಿಷ್ಯದ ಇಳುವರಿ ನಿಂತಿರುತ್ತದೆ. ಇದನ್ನು ಬಹುತೇಕ ಕೃಷಿಕರು ಪಾಲಿಸುತ್ತಿಲ್ಲ. ಇಳುವರಿ ಪ್ರಾರಂವಾವಗುವ ತನಕ ಹೆಚ್ಚು ನಿಗಾ ವಹಿಸದೆ ನಂತರ ಹೆಚ್ಚು ನೀರು, ಗೊಬ್ಬರ ಕೊಡುವುದರಿಂದ ಪ್ರಯೋಜನ ಇಲ್ಲ. ತೆಂಗಿನಲ್ಲಿ ತಳಿ ಗುಣ ಸಹಜವಾಗಿ ಮತ್ತು ಭ್ರೂಣ ತೊಂದರೆಯಿಂದ ಕೆಲವು ಸಸಿಗಳು ಇಳುವರಿ ಕೊಡದೆ ನಷ್ಟವನ್ನುಂಟುಮಾಡುತ್ತದೆ. ಮುಖ್ಯವಾಗಿ ಪೊಳ್ಳು (ಪೊಟ್ಟು) ಕಾಯಿಗಳನ್ನು ಕೊಡುವುದು, ವಕ್ರವಾಗಿ ಬೆಳೆಯುವುದು ಮುಂತಾದ ಲಕ್ಷಣಗಳು ಗೋಚರವಾದ ತಕ್ಷಣ ಅದನ್ನು ತೆಗೆದು ಬೇರೆ ಸಸಿಯನ್ನು ನಾಟಿ ಮಾಡಬೇಕು. ಹೀಗೆ ಉತ್ಪಾದಕ ಮರಗಳನ್ನು ಹೆಚ್ಚು ಮಾಡಿಕೊಳ್ಳಬಹುದು.

ತೆಂಗಿನ ಬೆಳೆಯಲ್ಲಿ ಬರೇ ಕಾಯಿ ಮರಾಟ ಮತ್ತು ಕೊಬ್ಬರಿ ಮಾರಾಟ ಎಂದು ಅಲ್ಲ. ಅದಕ್ಕಿಂತಲೂ ಲಾಭದಾಯಕ ಉತ್ಪನ್ನ ಎಂದರೆ ಎಳನೀರು. ಎಳನೀರು ಕೀಳಿಸುವುದರಿಂದ ತೆಂಗಿನ ಇಳುವರಿ ಹೆಚ್ಚಳವಾಗುತ್ತದೆ. ಬರೇ ೬ ತಿಂಗಳಿಗೇ ಒಂದು ಕಾಯಿಯ ವರಮಾನವನ್ನು ಅದು ತಂದು ಕೊಡುತ್ತದೆ. ವರ್ಷದಿಂದ ವರ್ಷಕ್ಕೆ ಎಳನೀರಿನ ಬೇಡಿಕೆ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೆಲೆಯೂ  ಹೆಚ್ಚಳವಾಗುತ್ತಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ತೆಂಗಿನ ಮರದಿಂದ ಅಮಲು ರಹಿತ ನೀರಾ (ಕಲ್ಪರಸ) ತೆಗೆಯುವ ವಿಧಾನ ಬಂದುದು ಮತ್ತೂ  ತೆಂಗು ಬೆಳೆಗಾರರಿಗೆ ಪ್ರಯೋಜನಕಾರಿಯಾಗಿದೆ. 

ತೆಂಗಿನ ಬೇರೆ ಬೇರೆ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸುವುದರ ಮೂಲಕ ಬರೇ ಕಾಯಿ- ಕೊಬ್ಬರಿ ಮಾರಾಟದಲ್ಲಿ ದೊರೆಯುವ ಲಾಭಕ್ಕಿಂತ ದುಪ್ಪಟ್ಟು ಲಾಭ ಪಡೆಯಬಹುದು ಎಂಬುದನ್ನು ಗೋವಾದ ಕೃಷ್ಣಾ ಫಾರಂ ಮೊದಲಾದವರು ಮಾಡಿ ನೋಡಿದ್ದಾರೆ. ಬಹುಷಃ ಎಲ್ಲರಿಗೂ ಇದನ್ನು ಮಾಡುವುದು, ಮಾರುಕಟ್ಟೆ ಮಾಡುವುದು ಅಸಾಧ್ಯವಾಗಬಹುದಾದರೂ ಸ್ವಲ್ಪ ಪ್ರಮಾಣ ಈ ಉದ್ದೇಶಕ್ಕೆ ಬಳಕೆಯಾದಾಗ ಉಳಿದ ತೆಂಗು ಬೆಳೆಗಾರರಿಗೂ ಲಾಭದಾಯಕ ಬೆಲೆ ದೊರೆಯಬಲ್ಲುದು. ಕಳೆದ ಕೆಲವು ವರ್ಷಗಳಿಂದ ತೆಂಗಿನ ಕಾಯಿಯ ಬೆಲೆ ಸಲ್ಪ ಮಟ್ಟಿಗೆ ಏರಲು ತೆಂಗಿನ ಡೆಸಿಕೇಟೆಡ್ ಕೋಕೋನಟ್, ತೆಂಗಿನ ಸಂಗ್ರಹಿತ ಹಾಲು ಮುಂತಾದ ಉತ್ಪನ್ನಗಳೇ ಕಾರಣ. ಮೌಲ್ಯ ವರ್ಧಿತ ಉತ್ಪನ್ನಗಳ ಮೂಲಕ ತೆಂಗು ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲಿಕ್ಕೆ ಸಾಧ್ಯವಾಗುತ್ತದೆ. 

ತೆಂಗಿನ ಹೊಲದಲ್ಲಿ ಬರೇ ತೆಂಗು ಮಾತ್ರ ಬೆಳೆಯಬಾರದು. ತೆಂಗು ಅಧಿಕ ಅಂತರದ ಬೆಳೆಯಾದ ಕಾರಣ ಅದರ ಮಧ್ಯಂತರದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಸುವ ಮೂಲಕ ಮರದಲ್ಲಿ ಪಡೆಯುವ ಉತ್ಪತ್ತಿಯಷ್ಟೇ ಉತ್ಪತ್ತಿಯನ್ನು ಕೆಳಗೂ ಪಡೆಯಲು ಸಾಧ್ಯವಿದೆ. ತೆಂಗಿನ ಮರದ ಬುಡದಲ್ಲಿ ತರಕಾರಿ ಬೆಳೆಗಳಾದ ಅಲಸಂಡೆ, ಸೌತೇ ಕಾಯಿ, ಸಿಹಿ ಗೆಣಸು, ಹರಿವೆ ಮುಂತಾದ ಬೇರೆ ಬೇರೆ ಬೆಳೆಗಳನ್ನು ಬೆಳೆಸಬಹುದು. ಮಧ್ಯಂತರದಲ್ಲಿ ಹುಲ್ಲು ಬೆಳೆಸಿ ಹೈನುಗಾರಿಕೆ, ಆಡು ಸಾಕಾಣಿಕೆ ಮಾಡಬಹುದು. ಕೊಕ್ಕೋ ಸಸಿಗಳನ್ನು ಬೆಳೆಸಿ ಮರವೊಂದರ ವಾರ್ಷಿಕ ೩೫೦ ರೂ ಸಂಪಾದನೆ  ಮಾಡಬಹುದು. ನಾಲ್ಕು ತೆಂಗಿನ ಮರಗಳ ಮಧ್ಯಂತರದಲ್ಲಿ ೪-೬ ಕೊಕ್ಕೋ ಸಸಿಗಳನ್ನು ನೆಟ್ಟು ಬೆಳೆಸಬಹುದು. ಗಡ್ಡೆ ಗೆಣಸು ಬೆಳೆಗಳಾದ ಸುವರ್ಣ ಗಡ್ಡೆ, ಡಯಸ್ಕೋರಿಯಾ ಜಾತಿಯ ಗಡ್ಡೆ ಗೆಣಸು, ಕೆಸು, ಕ್ಯಾಬೇಜ್, ಮೂಲಂಗಿ, ಹೂ ಕೋಸು, ಚೆಂಡು ಹೂವು, ಚೈನಾ ಆಸ್ಟರ್, ಅನನಾಸು ಬೆಳೆಸಬಹುದು. ತೆಂಗಿನ ಮರದ ಕಾಂಡಕ್ಕೆ ಕರಿಮೆಣಸನ್ನು ಬಿಟ್ಟು ಮರವೊಂದರಲ್ಲಿ ಪಡೆಯುವ ಕಾಯಿಯ ಇಳುವರಿಯಷ್ಟೇ ಉತ್ಪತ್ತಿಯನ್ನು  ಪಡೆಯಬಹುದು. ವೀಳ್ಯದೆಲೆ ಬೆಳೆಸಬಹುದು. ಲವಂಗ, ಜಾಯೀಕಾಯಿ ಬೆಳೆ ಬೆಳೆಸಬಹುದು. ತೆಂಗಿನ ಮರದ ಮಧ್ಯಂತರದಲ್ಲಿ ತೊಂಡೆ ಕಾಯಿ ಬೆಳೆಯುವವರಿದ್ದಾರೆ. ಹಾಗಲ ಕಾಯಿ ಬೆಳೆಯುವವರಿದ್ದಾರೆ. ಕಾಫೀ ಬೆಳೆಯುವವರಿದ್ದಾರೆ. ಇದೆಲ್ಲಾ ತೆಂಗಿನ ತೋಟದ ಉತ್ಪತ್ತಿಯನ್ನು ಹೆಚ್ಚಿಸಿಕೊಡಲು ನೆರವಾಗುವ ಬೆಳೆಗಳು. ಮಿಶ್ರ ಬೆಳೆಗಳ ಜೊತೆಗೆ ಹಸು ಸಾಕಾಣೆ ಇದ್ದರೆ ಅದೂ ಲಾಭದಾಯಕವಾಗುತ್ತದೆ. ತೆಂಗಿನ ತೋಟದ ಮಿಶ್ರ ಬೆಳೆಗಳ ಉಳಿಕೆಗಳು ಇದಕ್ಕೆ ಪೌಷ್ಟಿಕ ಆಹಾರವಾಗುತ್ತದೆ. 

ತೆಂಗಿನ ಬೆಳೆಯ ಮಧ್ಯಂತರದಲ್ಲಿ ಎಲೆ ಉದ್ದೇಶದ ಬಾಳೆ ಬೆಳೆಸಬಹುದು. ಗೊನೆ ಉದ್ದೇಶಕ್ಕೂ ಬಾಳೆ ಬೆಳೆಸಬಹುದು. ಬೀಜದ ಬಾಳೆ ಎಲೆ ಉದ್ದೇಶಕ್ಕೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಒಂದು ಬಾಳೆ ತನ್ನ  ಜೀವಿತಾವಧಿಯಲ್ಲಿ ೧೨-೧೫ ಎಲೆಯನ್ನು ಬಿಡುತ್ತದೆ. ಅದರಲ್ಲಿ ತುದಿ, ಸೀಳು ಎಂದು ೩೦ ಎಲೆ ಪಡೆಯಬಹುದು. ಕನಿಷ್ಟ ೨ ರೂ ದರ ಇದೆ. ಬೀಜದ ಬಾಳೆ ಅಥವಾ ಕದಳಿ ಬಾಳೆಯಲ್ಲಿ ಹೆಚ್ಚು ಕಂದುಗಳನ್ನು ಬಿಟ್ಟು ಎಲೆ ಉದ್ದೇಶಕ್ಕೆ ಬಾಳೆ ಬೆಳೆಸುವುದರಿಂದ ಲಾಭವಿದೆ. ಬೀಜದ ಬಾಳೆಗೆ ರೋಗ ಇಲ್ಲ. ಗರಿಷ್ಟ ಪ್ರಮಾಣದಲ್ಲಿ ಕಂದುಗಳನ್ನು  ಬಿಡುತ್ತದೆ. ಮರು ನಾಟಿ ಅಗತ್ಯವಿಲ್ಲ. ಇದೇ ಬಾಳೆಯ ಹಗ್ಗವನ್ನೂ ಮಾಡಬಹುದು. ಬಾಳೆ ನಾರಿನ ಹಗ್ಗಕ್ಕೂ ಬೇಡಿಕೆ ಇದೆ.

ಯಾವುದೇ ಬೆಳೆಯಿದ್ದರೂ ಅದು ನಷ್ಟದ ಬೆಳೆ ಎನಿಸಿಕೊಳ್ಳದಂತೆ ಬೆಳೆ ಯೋಜನೆ ಹಾಕಿಕೊಳ್ಳುವುದು ನಮ್ಮ ಜಾಣ್ಮೆ. ಮಿಶ್ರ ಬೆಳೆಗಳನ್ನು ಬೆಳೆಸಿದಾಗ ಸಹಜವಾಗಿ ತೆಂಗಿನ ಉತ್ಪತ್ತಿ ಹೆಚ್ಚಳವಾಗುತ್ತದೆ. ನೀರಿನ ಸದುಪಯೋಗವಾಗುತ್ತದೆ. ತೆಂಗಿನ ಮರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರಗಳನ್ನು  ಕೊಡುವುದರಿಂದ ಅದರಲ್ಲಿ  ಗರಿಷ್ಟ ಉತ್ಪತ್ತಿ ಪಡೆಯಬಹುದು. ಯಾವಾಗಲೂ ಬೆಳೆಗಳ ಜೊತೆಗೆ ಒಡನಾಟ ಇರುವ ಕಾರಣ ಎಲ್ಲದಲ್ಲೂ ಉತ್ಪತ್ತಿ ಹೆಚ್ಚು ಬರುತ್ತದೆ. 

ಚಿತ್ರ - ಮಾಹಿತಿ: ರಾಧಾಕೃಷ್ಣ ಹೊಳ್ಳ