ತೆಳು ಪ್ಲಾಸ್ಟಿಕ್ ಬಳಕೆ ತಡೆಗೆ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ

ತೆಳು ಪ್ಲಾಸ್ಟಿಕ್ ಬಳಕೆ ತಡೆಗೆ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ

ಮತ್ತೊಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಬಂದುಹೋಗಿದೆ. ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ತೀವ್ರತೆಯನ್ನು ಮನಗಂಡು ೨೦೦೮ರಿಂದ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಕೆಲವೆಡೆ ಸಮಾರಂಭಗಳು ನಡೆದಿವೆ. ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿವೆ. ಆದರೆ ಈವರೆಗೆ ನೋಡಿದಂತೆ ಇದು ಒಂದು ದಿನದ ಉತ್ಸಾಹವಷ್ಟೇ. ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಮೂರನೇ ಬಾರಿ ರಾಜ್ಯ ತೆಳುವಾದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಅದನ್ನು ಜಾರಿಗೆ ತಂದು, ಎಲ್ಲೂ ಈ ರೀತಿಯ ಪ್ಲಾಸ್ಟಿಕ್ ಮಾರಾಟವಾಗದಂತೆ ಹಾಗೂ ಬಳಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸ್ಥಳೀಯ ಸಂಸ್ಥೆಗಳ ಮೇಲಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದಕರ ಜೊತೆಗಿನ ಅಧಿಕಾರಿಗಳ ಹೊಂದಾಣಿಕೆಯ ಪರಿಣಾಮ ಇವತ್ತಿಗೂ ರಾಜ್ಯದಲ್ಲಿ ತೆಳುವಾದ ಪ್ಲಾಸ್ಟಿಕ್ ಬಳಕೆ ಎಲ್ಲಾ ಕಡೆ ಅವ್ಯಾಹತವಾಗಿ ನಡೆಯುತ್ತಿದೆ. ಹೋಟೇಲ್ ಗಳಲ್ಲಿ ಆಹಾರ ಪಾರ್ಸೆಲ್ ನಿಂದ ಹಿಡಿದು ತರಕಾರಿ ಅಂಗಡಿಗಳವರೆಗೆ ಮಾರಕವಾದ ಪ್ಲಾಸ್ಟಿಕ್ ನ ಬಳಕೆ ಈ ಹಿಂದಿನಂತೆಯೇ ಇದೆ. ಹಾಗಿದ್ದರೆ ನಿಷೇಧ ಯಾರಿಗಾಗಿ ಮತ್ತು ಯಾಕಾಗಿ?

ಏಕಬಳಕೆಯ ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ಅತ್ಯಾಚಾರದ ಬಗ್ಗೆ ಯಾರಿಗೂ ಬಿಡಿಸಿ ಹೇಳುವ ಅಗತ್ಯವಿಲ್ಲ. ಇಂದು ಸಮುದ್ರದಲ್ಲೂ ಟನ್ ಗಟ್ಟಲೆ ಪ್ಲಾಸ್ಟಿಕ್ ವಸ್ತುಗಳು ಪ್ರತಿ ದಿನ ಸಿಗುತ್ತಿವೆ. ಮೀನುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್, ಹಸುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್, ಕಾಡುಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್, ಭೂಮಿಯಾಳದಲ್ಲಿ ಪ್ಲಾಸ್ಟಿಕ್, ಅಂತರ್ಜಲದಲ್ಲಿ ಪ್ಲಾಸ್ಟಿಕ್ ಹೀಗೆ ಎಲ್ಲಿ ಹೋದರೂ ಪ್ಲಾಸ್ಟಿಕ್ ನ ಕಣಗಳು ಸಿಗುತ್ತಿವೆ. ಈಗ ಹುಟ್ಟುತ್ತಿರುವ ಮಕ್ಕಳ ರಕ್ತದಲ್ಲೂ ಪ್ಲಾಸ್ಟಿಕ್ ನ ಸೂಕ್ಷ್ಮ ಕಣಗಳು ಲಭ್ಯವಾಗುತ್ತಿವೆ ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನವೊಂದು ಹೇಳಿದೆ. ಇಷ್ಟೆಲ್ಲಾ ಹಾನಿ ಉಂಟಾದ ಮೇಲೂ ಜನರು, ಸ್ಥಳೀಯ ಸಂಸ್ಥೆಗಳು ಹಾಗೂ ವ್ಯಾಪಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ತಿಳಿದೂ ತಿಳಿದೂ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ. ಈಗಾಗಲೇ ಸರಿಪಡಿಸಲಾಗದ ಹಾನಿ ಆಗಿದೆ. ಅದನ್ನು ಇಲ್ಲಿಗೇ ನಿಲ್ಲಿಸುವುದಕ್ಕಾದರೂ ಪ್ರಯತ್ನಿಸಬೇಕು. ಮೊದಲಿಗೆ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ತೆಳು ಪ್ಲಾಸ್ಟಿಕ್ ತಯಾರಿಸುವ ಘಟಕಗಳು ಮತ್ತು ಸಗಟು ವ್ಯಾಪಾರ ಮಾಡುವವರನ್ನು ಪತ್ತೆ ಹಚ್ಚಿ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಲಿ. ನಂತರ ತನ್ನಿಂತಾನೇ ಈ ಮಾದರಿಯ ಪ್ಲಾಸ್ಟಿಕ್ ಬಳಕೆ ನಿಲ್ಲಲಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೪-೦೭-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ