ತೆ ಅಲೋಕ (4) - ಸೇವಾ ತತ್ಪರ

ತೆ ಅಲೋಕ (4) - ಸೇವಾ ತತ್ಪರ

ಕತೆ ಅಲೋಕ (4) -  ಸೇವಾ ತತ್ಪರ 

ಕತೆ : ಅಲೋಕ 

ಮೊದಲ ಪಲ್ಲಂಗದ ಸಮೀಪ ಹೋದೆ.ಆತ ಯಾರು ಎಂದು ತಿಳಿಯದು. ಕಣ್ಣು ಮುಚ್ಚಿ ಮಲಗಿದ್ದರು. ಅವರನ್ನು ಎಬ್ಬಿಸಿ ಒಪ್ಪಿಗೆ ಕೇಳಿದರೆ ಸರಿಯಾಗದು ಅನ್ನಿಸಿತು. ನಿಧಾನಕ್ಕೆ ಅವರ ಪಕ್ಕದಲ್ಲಿ ಕುಳಿತೆ. ನನ್ನ ಜೀವನದಲ್ಲಿ ಮೊದಲ   ಅನುಭವ ಒಬ್ಬರ ಕಾಲು ಒತ್ತುವುದು. 

ನಾನು ನನ್ನ ಕೈಯನ್ನು ಅವರ ಕಾಲಮೇಲೆ ಇಟ್ಟೊಡನೆ ಆತ ಕಣ್ಣು ಬಿಟ್ಟರು. ನನ್ನತ್ತ ಒಮ್ಮೆ ದೀರ್ಘವಾಗಿ ದಿಟ್ಟಿಸಿದರು. ಅವರ ಮುಖದ ಮೇಲೆ ತಣ್ಣನೆಯ ಬೆಳದಿಂಗಳಿನಂತಹ ಬೆಳಕು ಬೀಳುತ್ತಿತ್ತು. ನನ್ನನ್ನು ಕಂಡು ನಸುನಕ್ಕರು.

ಛೇ! ವಯಸ್ಸಾದ ಮುದುಕರೊಬ್ಬರ ನಗು ಅಷ್ಟು ಸುಂದರ ಇರಬಹುದೆಂದು  ಎಂದೂ ಭಾವಿಸಿರಲೇ ಇಲ್ಲ. ಭೂಲೋಕದ ಕವಿಗಳೆಲ್ಲ ಹೆಣ್ಣಿನ ನಗುವನ್ನು, ಚಿಕ್ಕ ಮಗುವಿನ ನಗುವನ್ನು ವರ್ಣಿಸಿರಬಹುದು. ವಯಸ್ಸಾದ ವೃದ್ದರ ನಗುವಿನ ಬಗ್ಗೆ ವರ್ಣಿಸಿರಲಾರರು .  ವಯಸ್ಸು ಇಷ್ಟೇ ಎಂದು ನಿರ್ಧರಿಸಲಾಗದ ಈ ವೃದ್ದರ ನಗು ದೈವಿಕ ಕಳೆಯಿಂದ ಕೂಡಿತ್ತು

ನಾನು ತೃಪ್ತಿಯಿಂದ ಅವರ ಕಾಲು ಒತ್ತುತ್ತ ಕುಳಿತೆ. ಆತ ಕಣ್ಣುಮುಚ್ಚಿ ಮಲಗಿದ್ದರು. ಎಷ್ಟು ಹೊತ್ತಾಯಿತೊ ಯಾರು ಹೇಳಬಲ್ಲರು. ಕಡೆಗೊಮ್ಮೆ ಆತ ಸಾಕು ಎನ್ನುವಂತೆ ಕೈಸನ್ನೆ ಮಾಡಿದರು. ಕಾಲು ಒತ್ತುವುದು ನಿಲ್ಲಿಸಿ ಏನಾದರು ಹೇಳುವರೇನೊ ಎಂದು ಕಾದು ನಿಂತಿದ್ದೆ. ಆತ ಕಣ್ಣು ಬಿಡಲೇ ಇಲ್ಲ. ಅವರಿಗೆ ವಂದಿಸಿ ಮುಂದಿನ ಮಂಚದತ್ತ ನಡೆದೆ

ಆತನೂ ಸಹ ವಯಸ್ಸು ಆಗಿರುವರೆ. ಪಕ್ಕ ಕುಳಿತು ಅವರ ಕಾಲು ಒತ್ತಲು ಆರಂಭಿಸಿದೆ . ಮನ ನೆನೆಯುತ್ತಿತ್ತು, ಭೂಮಿಯಲ್ಲಿನ ಅಪೂರ್ಣವಾದ ಅನುಭವ ಇಲ್ಲಿ ಪೂರ್ಣವಾಗಲಿ ಎಂದು ಆತ ತಿಳಿಸಿದ. ಭೂಮಿಯಲ್ಲಿ ಅಷ್ಟಕ್ಕೂ ಇಂತಹ ಸೇವೆಯನ್ನೆಲ್ಲ ಯಾರು ಮಾಡುತ್ತಾರೆ ? ನನಗೆ ಅನುಮಾನ ಕಾಡುತ್ತಿತ್ತು. ಸ್ವತಃ ತಂದೆ ತಾಯಿ ನನ್ನ ಜೊತೆಗಿದ್ದರೂ ಸಹ ನಾನು ಈ ರೀತಿ ಕಾಲು ಒತ್ತಿ ಸೇವೆ ಮಾಡುತ್ತಿದ್ದೆನೊ ಇಲ್ಲವೋ . 

ನನ್ನ ಯೋಚನೆ ಸಾಗಿರುವಂತೆ , ಅನಿರೀಕ್ಷಿತವಾಗಿ ಆ ಘಟನೆ ನಡೆದಿತ್ತು. ನಾನು ಕಾಲು ಒತ್ತುತ್ತ ಇದ್ದ ಆ ಮುದುಕ ಕಣ್ಣುಬಿಟ್ಟ. ಅವನ ಮುಖದಲ್ಲಿ ಅದೇನೊ ಉಗ್ರಸಿಟ್ಟು. ಆತ ಬಲಗಾಲಿನಿಂದ ಜಾಡಿಸಿ ನನ್ನ ಎದೆಗೆ ಒದ್ದುಬಿಟ್ಟ. ಆತ ಎಷ್ಟು ಜೋರಾಗಿ ಒದ್ದಿದ್ದ ಅಂದರೆ ನಾನು ಸುಮಾರು ಆರು ಅಡಿಗಳಷ್ಟು ದೂರ ಚಿಮ್ಮಿ ಬಿದ್ದಿದ್ದೆ. ಅಷ್ಟು ವಯಸ್ಸಾದ ಆತನ ಕಾಲುಗಳಲ್ಲಿ ಅಂತಹ ಶಕ್ತಿ ಇರಬಹುದೆಂದು ನಾನು ಎಣಿಸಿರಲೇ ಇಲ್ಲ.

ನನ್ನಲ್ಲಿನ ಕೋಪ ಕೆರಳಿತು. ಏನು ಮಾಡಲಿ!  ಹೋಗಿ ಆತನ ಕಾಲು ಮುರಿದುಬಿಡಲೇ ?. 

ಆದರೆ ನಾನು ಆತನ ಮೇಲೆ ಕೈಮಾಡುವಂತಿರಲಿಲ್ಲ. ಜೋರಾಗಿ ಕೂಗಾಡುವ ಅಂದುಕೊಂಡರೆ , ನಾಲಿಗೆ ಕಿತ್ತು ಹಾಕಲಾಗಿತ್ತು. ದ್ವನಿ ಹೊರಡಿಸುವಂತಿರಲಿಲ್ಲ. ಕೋಪದ ಜಾಗದಲ್ಲಿ ಅಸಹಾಯಕತೆ ತುಂಬಿಕೊಂಡಿತು. ಏನು ಮಾಡಲಾಗದ , ಮನದ ಭಾವ ವ್ಯಕ್ತಪಡಿಸಲಾಗದ ಅಸಹಾಯಕತೆ.  ದುಃಖ ಮನವನ್ನೆಲ್ಲ ತುಂಬಿ ಅಳು ಉಕ್ಕಿ ಬರುತ್ತಿತ್ತು.

ನಿಧಾನಕ್ಕೆ ಎದ್ದು ನಿಂತೆ. ಏನು ತೋಚಲಿಲ್ಲ ತಪ್ಪಾಯಿತು ಎನ್ನುವಂತೆ ಆತನ ಎದಿರು ತಲೆಬಗ್ಗಿಸಿ ನಿಂತೆ . 

"ಹಾಗೆ ಒಂದೇ ಕಡೆ ಕಾಲು ಒತ್ತಿದರೆ , ನೋವಾಗುವದಿಲ್ಲವೇ ?. ನಿಧಾನವಾಗಿ ಹದವಾಗಿ  ಮೆಲುವಾಗಿ ಕಾಲು  ಒತ್ತಬೇಕು.   ಎಲ್ಲವನ್ನು ಬಿಟ್ಟು ಬಂದಾಯಿತಲ್ಲ, ಇನ್ನೂ ಏಕೆ ಅಲ್ಲಿಯ ಹಾಳು ಯೋಚನೆಗಳು"  ಮುದುಕ ಕೋಪದಲ್ಲಿ ನುಡಿದ.

ನನಗೀಗ ಅರ್ಥವಾಗಿತ್ತು. ನನ್ನ ಆಲೋಚನೆಗಳು ಸಹಿತ ಇವರಿಗೆ ತಿಳಿಯುತ್ತ ಇರುತ್ತೆ. ನನ್ನನ್ನೂ ಎಲ್ಲಾ ರೀತಿಯಿಂದಲೂ ಪರೀಕ್ಷಿಸುತ್ತ ಇರುತ್ತಾರೆ ಅನ್ನಿಸುತ್ತೆ . ಎಚ್ಚರದಲ್ಲಿರಬೇಕು. ಕೆಲಸದಲ್ಲಿ ಗಮನವಿಡಬೇಕು. ಪುನಃ ಅವರ ಮುಂದೆ ಕುಳಿತು ನನ್ನ ಆಲೋಚನೆಗಳನ್ನೆಲ್ಲ ಬದಿಗಿರಿಸಿ ಅವರ ಕಾಲೊತ್ತುವ ಕೆಲಸದಲ್ಲಿ ಮಗ್ನನಾದೆ .

ಎಷ್ಟು ಸಮಯವಾಯಿತೋ ತಿಳಿಯಲಿಲ್ಲ. ನನ್ನ ಕೈಗಳಿಗೆ ಆಯಾಸ ಅನ್ನಿಸುತ್ತಿದ್ದರು ಸಹ ಅತ್ತ ಗಮನಕೊಡಲಿಲ್ಲ. ಕಡೆಗೊಮ್ಮೆ ಆತ ಕಣ್ಣು ತೆರೆಯದೇನೆ ಸಾಕು ಅನ್ನುವಂತೆ ಕೈನಿಂದ ಸನ್ನೆ ಮಾಡಿದರು. ಆಗ ಗಮನಿಸಿದೆ. ಇಲ್ಲಿರುವ ಯಾರು ಹೆಚ್ಚು ಮಾತನಾಡಲು ಇಷ್ಟಪಡುವದಿಲ್ಲ. ನಾನು ಈ ಲೋಕಕ್ಕೆ ಬಂದ ಕ್ಷಣದಿಂದಲೂ ಗಮನಿಸಿದಂತೆ ಇಲ್ಲಿ ಗಾಡವಾದ ಮೌನ ಕವಿದಿದೆ. ಮೌನ ಇಲ್ಲಿರುವ ಎಲ್ಲರಿಗೂ ಇಷ್ಟ ಅಥವ ಶಬ್ಧ ಇಲ್ಲಿ ನಿಶಿದ್ಧ.  

ಒಬ್ಬರ ನಂತರ ಮತ್ತೊಬ್ಬರ ಸೇವೆ , ಅಂದರೆ ಕಾಲು ಒತ್ತಲು ಕುಳಿತೆ. ಈಗ ಎಚ್ಚರವಾಗಿದ್ದು ಗಮನವನ್ನು ಕೆಲಸದ ಮೇಲೆ ಇಟ್ಟು ತೊಡಗಿಕೊಂಡೆ. ಸಮಯ ಅನ್ನುವುದು ಹೆಚ್ಚು ಕಡಿಮೆ ಇಲ್ಲಿ ನಿಂತುಹೋಗಿರುವಂತೆ ಅನ್ನಿಸುತ್ತಿತ್ತು. ಅಷ್ಟಕ್ಕೂ ಯಾವ ಧಾವಂತವೂ ಇಲ್ಲ. ಎಲ್ಲಿಗಾದರು ಹೋಗಬೇಕು, ಏನಾದರು ಮಾಡಬೇಕು ಅನ್ನುವ ಉದ್ದೇಶವೂ ಇಲ್ಲ. ನನ್ನವರು ಅನ್ನುವ ಭಾವವೂ ಇಲ್ಲ.

ಗಮನಿಸುತ್ತಿದ್ದೆ, ಒಬ್ಬರ ನಂತರ ಒಬ್ಬರ ಕಾಲು ಒತ್ತುತ್ತ ಹೋಗುತ್ತಿರುವಂತೆ , ಮುಗಿಸುತ್ತಿರುವಂತೆ ಮನ ಶಾಂತವಾಗುತ್ತಿದೆ. ಒಳಗಿನ ತುಮುಲವೆಲ್ಲ ಶಾಂತವಾಗುತ್ತಿದೆ. ಕಡೆಗೊಮ್ಮೆ ಕಡೆಯ ವ್ಯಕ್ತಿಯ ಸೇವೆ ಮಾಡಿ ಮುಗಿಸುತ್ತ ಎದ್ದು ನಿಂತಾಗ , ನನ್ನನ್ನು ಸೇವೆ ಮಾಡು ಎಂದು ಅಲ್ಲಿ ಬಿಟ್ಟು ಹೋದ ವ್ಯಕ್ತಿ ಕಾಣಿಸಿದ. ಅವನ ಮುಖದಲ್ಲಿ ಸಂತೋಷದ ನಗು ನೆಲೆಸಿತ್ತು.

 

ಮುಂದುವರೆಯುವುದು.......... 

Comments

Submitted by kavinagaraj Thu, 05/21/2015 - 08:23

ಪ್ರಚಲಿತ ತಿಳುವಳಿಕೆಯಂತೆ ಜೀವಾತ್ಮ ಸ್ವತಃ ರಸಾನುಭವಗಳನ್ನು ಅನುಭವಿಸಲಾರದೆನ್ನುತ್ತಾರೆ. ಅದಕ್ಕೆ ಪಂಚಭೂತಗಳಿಂದೊಡಗೂಡಿದ ಶರೀರದ ಮಾಧ್ಯಮವಿರಬೇಕೆನ್ನುತ್ತಾರೆ. ಆದರೆ ಇದನ್ನು ಕಂಡವರಾರು, ಅನುಭವಿಸಿದ್ದನ್ನು ನಮಗೆ ಹೇಳುವವರಾರು? ಎಲ್ಲವೂ ಊಹೆ, ಕಲ್ಪನೆ, ಸಿದ್ಧಾಂತಗಳು, ಇತ್ಯಾದಿಗಳೇ! ನಿಮ್ಮ ಅಲೋಕದ ನಡವಳಿಕೆಗಳು ಆಸಕ್ತಿಕರವಾಗಿದೆ, ಮುಂದುವರೆಸಿರಿ, ಪಾರ್ಥರೇ.