ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ

ಬರಹ

ಬೆಳಗಲ್ಲು ವೀರಣ್ಣನವರ ತಂಡ ಸಮಕಾಲೀನ ಸಮಸ್ಯೆಗಳಿಗೆ ಅಪಾರವಾಗಿ ಸ್ಪಂಧಿಸಿದೆ. ಅದರಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮ, ಬಾಪು, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲುಗೊಂಬೆಯಾಟದಲ್ಲಿ ಪ್ರದರ್ಶನಗೊಂಡಿದ್ದು, ಮಹತ್ವದ ಸಾಧನೆಗಳಾಗಿವೆ. ಹಳೆಯ ಸಂಪ್ರದಾಯಬದ್ದ ಕಲಾಪ್ರಕಾರವನ್ನು ಹೇಗೆ ಹೊಸತನಕ್ಕೆ ಹೊಂದಿಸಿಕೊಳ್ಳಬಹುದೆಂಬುದಕ್ಕೆ ಈ ಪ್ರಯೋಗಗಳು ಸಾಕ್ಷಿಯಾಗಿವೆ. ವೀರಣ್ಣನವರು ಸದಾ ಹೊಸ ಪ್ರಯೋಗಗಳತ್ತ ಮುಖ ಮಾಡಿದವರು. ಸಧ್ಯ ಅವರು ಗೌತಮ ಬುದ್ದ ಮತ್ತು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಆಟಕ್ಕೆ ಸಿದ್ದತೆ ನಡೆಸುತ್ತಿದ್ದಾರೆ.

ವೀರಣ್ಣನವರ ಗೊಂಬೆಯಾಟಕ್ಕೆ ಕರೆಗಳು ಬಂದು, ಅವರು ಪ್ರಯೋಗಿಸಿದ ಸ್ಥಳಗಳೇ ಅವರ ಕಲೆಯ ಪ್ರಭುತ್ವವನ್ನು ತೋರಿಸುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
ರಾಷ್ಟ್ರಪತಿ ಭವನ, ನವದೆಹಲಿ, ಗಾಂಧಿಸ್ಮೃತಿ ಮತ್ತು ಗಾಂಧಿ ದರ್ಶನ, ದೆಹಲಿ,
ಇಂದಿರಾಗಾಂದಿ ರಾಷ್ಟ್ರೀಯ ಕಲಾಕೇಂದ್ರ, ನವದೆಹಲಿ, ಚಂಡೀಗಡ ವಿಶ್ವವಿದ್ಯಾಲಯ, ಚಂಡೀಗಡ, ಪಂಜಾಬ್,
ಅಪ್ನಾ ಉತ್ಸವ್, ನವದೆಹಲಿ, ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ, ನಾಗಪುರ, ಮಹಾರಾಷ್ಟ್ರ,
ಭಾರತ ಉತ್ಸವ್, ಕಾಜಿಕೋಡ್, ಕೇರಳ, ಫೇತೆ ಡೇ, ಪಾಂಡಿಚೆರಿ,
ದಕ್ಷಿಣೋತ್ಸವಂ, ತಿರುವನಂತಪುರ, ಕೇರಳ, ಸಾಂಸ್ಕೃತಿಕ ತಿರುಗಾಟ, ಬಿಹಾರ ರಾಜ್ಯಾದ್ಯಂತ,
ಸಾಂಸ್ಕೃತಿಕ ತಿರುಗಾಟ, ಕೇರಳ ರಾಜ್ಯಾದ್ಯಂತ, ಪ್ರವಾದಿ ಬಸವೇಶ್ವರ, ಕರ್ನಾಟಕ ರಾಜ್ಯಾದ್ಯಂತ,
ಬಾಪು (ಹಿಂದಿ) ದೂರದರ್ಶನದಲ್ಲಿ ಬಿತ್ತರ, ದೆಹಲಿ, ಪಂಚವಟಿ, ದೂರದರ್ಶನದಲ್ಲಿ ಬಿತ್ತರ, ನವದೆಹಲಿ,
ಭಾರತ ಸ್ವಾತಂತ್ರ್ಯ ಸಂಗ್ರಾಮ, ದೂರದರ್ಶನ ಬಿತ್ತರ, ಬೆಂಗಳೂರು,
ಗಾಂಧೀಜಿ (ಕನ್ನಡ), ದೂರದರ್ಶನದಲ್ಲಿ ಬಿತ್ತರ, ಬೆಂಗಳೂರು

ತಮ್ಮ ಕಲಾಜೀವನದ ಸಾಧನೆಗಾಗಿ ವೀರಣ್ಣನವರಿಗೆ ರಾಜ್ಯ, ರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳು, ಲೇಖನ ಗೌರವ, ಅಭಿಮಾನದ ಮಾತುಗಳು, ಮೆಚ್ಚುಗೆ ದೊರಕಿವೆ. ಅವರ ಪ್ರಯೋಗಗಳು ನಡೆದಲ್ಲೆಲ್ಲಾ "ಎಂದೂ ಮರೆಯಲಾಗದ ಕಲಾವಿದರು" ಎನಿಸಿಕೊಂಡಿರುವುದು ಅವರ ವೈಶಿಷ್ಟ್ಯ.

ಅವರು ಗಳಿಸಿರುವ ಪ್ರಮುಖ ಪ್ರಶಸ್ತಿಗಳೆಂದರೆ:
೧. ರಾಜ್ಯೋತ್ಸವ ಪ್ರಶಸ್ತಿ - ೧೯೯೨ ಕರ್ನಾಟಕ ಸರ್ಕಾರ, ೨. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೧೯೯೧ರಲ್ಲಿ, ಕರ್ನಾಟಕ ಸರ್ಕಾರ, ೩. ವಿಶೇಷ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ನಾಟಕ ಸರ್ಕಾರ, ೪. ಪ್ರಶಸ್ತಿ ಪತ್ರಗಳು - ನೂರಾರು ಸರಕಾರಿ ಮತ್ತು ಖಾಸಗಿ ಸಾಂಸ್ಕೃತಿಕ ಸಂಸ್ಥೆಗಳಿಂದ.

ಎರಡು ಅವಧಿಗೆ ಕರ್ನಾಟಕ ಜಾನಪದ ಮತ್ತು ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಗೌರವವೂ ವೀರಣ್ಣನವರಿಗೆ ಸಲ್ಲುತ್ತದೆ.

ವೀರಣ್ಣನವರಿಗೆ ಪತ್ರಿಕಾ ರಂಗ ಅಪಾರವಾದ ಲೇಖನ ಗೌರವವನ್ನೂ ಸಲ್ಲಿಸಿದೆ. ೧೯೯೦ರಿಂದಲೂ ಅವರ ಬಗ್ಗೆ ಬರೆಯದ ಪತ್ರಿಕೆಗಳೇ ಇಲ್ಲ. ಅವರ ಸಂದರ್ಶನವನ್ನು ಪ್ರಕಟಿಸಿರುವ ಪ್ರಮುಖ ಪತ್ರಿಕೆಗಳೆಂದರೆ:
ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಈ ನಾಡು (ತೆಲುಗು), ದೈನಿಕ ಜಾಗರಣ್ (ಹಿಂದಿ), ಜನಸತ್ತಾ (ಹಿಂದಿ), ದಿ ಹಿಂದು (ಇಂಗ್ಲಿಷ್), ದಿ ಟೈಮ್ಸ್ ಆಫ್ ಇಂಡಿಯಾ (ಇಂಗ್ಲಿಷ್), ದಿ ಸ್ಟೇಟ್ಸ್ ಮನ್ (ಇಂಗ್ಲಿಷ್), ದಿ ಇಂಡಿಯನ್ ಎಕ್ಸ್ ಪ್ರೆಸ್ (ಇಂಗ್ಲಿಷ್), ಡೆಕ್ಕನ್ ಹೆರಾಲ್ಡ್ (ಇಂಗ್ಲಿಷ್), ದಿ ಟ್ರೈಬ್ಯೂನಲ್ (ಇಂಗ್ಲಿಷ್), ತರಂಗ ವಾರ ಪತ್ರಿಕೆ (ಕನ್ನಡ), ಸುಧಾ ವಾರ ಪತ್ರಿಕೆ (ಕನ್ನಡ), ಅಭಿಮತ - ದೆಹಲಿ ಕನ್ನಡ ಮಾಸ ಪತ್ರಿಕೆ.

ಅನಕ್ಶರಸ್ಥ ಕಲಾಕುತುಂಬದಿಂದ ಬಂದಿರುವ ಈ ಹುಟ್ಟು ಕಲಾವಿದರು ತಮ್ಮ ಸಾಧನೆಗಳ ದಾಖಲೆಗಳನ್ನು ಇಟ್ಟದ್ದು ಕಡಿಮೆ. ಕ್ರೀಯಾಶೀಲರಾಗಿ ಪ್ರಯೊಗಿಸಿದ್ದು ಹೇರಳ. ಪ್ರತಿ ಪ್ರಯೋಗದಲ್ಲಿ ಹೊಸತನ ಮೆರೆಯುವ ಈ ಕಲಾವಿದರಿಗೆ ಪರಿಚಯ ವಿವರದಲ್ಲಿ ಹಿಡಿಸಲಾರದಷ್ಟು ಪ್ರತಿಭಾ ಸಂಪತ್ತಿದೆ. ಜೀವನದುದ್ದಕ್ಕೂ ನಾಟಕ, ಬಯಲಾಟ ಮತ್ತು ತೊಗಲುಗೊಂಬೆಯಾಟ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಕಲಾ ನೈಪುಣ್ಯತೆ ಒಂದು ಸಂಸ್ಥೆಯ ಕ್ರಿಯಾಶೀಲತೆಯನ್ನು ಸರಿಗಟ್ಟಬಲ್ಲುದು. ತನ್ನ ಕುಟುಂಬದೊಂದಿಗೆ ಮೇಳ ಕಟ್ಟಿ ಮೆರೆಯುತ್ತಿರುವ ವೀರಣ್ಣನವರ ಸಾಧನೆ ಒಂದು ರಾಷ್ಟ್ರೀಯ ದಾಖಲೆ ಎಂದರೆ ಅತಿಶಯೋಕ್ತಿಯಲ್ಲ.

ಎ.ವಿ.ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೈಲ್.ಕಾಂ