ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ

ಬರಹ

ವೃತ್ತಿ ರಂಗಭೂಮಿ ಹಾಗು ತೊಗಲುಗೊಂಬೆಯಾಟದ ಮಹಾನ್ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ, ರಾಷ್ಟ್ರೀಯ ಸ್ಥರದ ಪ್ರತಿಭಾಶಾಲಿ.

ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳ ಕಥಾ ಪ್ರಸಂಗಗಳನ್ನು ನಿರೂಪಿಸಲು ಮೊಟ್ಟ ಮೊದಲಿಗೆ ಭಾರತದಲ್ಲಿ ಬಳಸಿದ ಏಕೈಕ ಕಲಾವಿದರೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸುಮರು ೧೯೩೬ರಲ್ಲಿ ಸಿಳ್ಳೆಕ್ಯಾತ ಜನಾಂಗದಲ್ಲಿ ಹುಟ್ಟಿದ ಈ ಕಲಾವಿದರ ಪೂರ್ವಜರು ಸಹ ಮಹಾನ್ ಕಲಾವಿದರೇ. ತಂದೆ ದೊಡ್ಡ ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು. ಅಲ್ಲದೆ ಬಯಲಾಟದ ಸ್ತ್ರೀ ಪಾತ್ರ ವೇಶಧಾರಿಯಾಗಿದ್ದು, ಇವರ ಅಜ್ಜ ಗಂಜಿ ಹನುಮಂತಪ್ಪ ಜ್ಯೋತಿಷ್ಯ ಮತ್ತು ರಮಲ ವಿದ್ಯಾ ಪಂಡಿತರಾಗಿದ್ದರು.

ಬಾಲಕ ವೀರಣ್ಣ ತಂದೆಯ ಬಯಲಾಟದ ವಿದ್ಯೆಯನ್ನು ಮಗೂಡಿಸಿಕೊಂದ್ರು. ಅವರ ಧ್ವನಿ ಮತ್ತು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಜೋಳದರಾಶಿ ದೊಡ್ಡನಗೌಡರು ಸಿಡಿಗಿನ ಮೊಳೆ ಶ್ರೀ ವೈ.ಎಂ. ಚಂದ್ರಯ್ಯಸ್ವಾಮಿ ತಮ್ಮ ಕಂಪನಿ ನಾಟಕಗಳಿಗೆ ಹುಟ್ಟು ಕಲಾವಿದರಾದ ವೀರಣ್ಣನವರನ್ನು ಸೇರಿಸಿಕೊಂಡು ಆರಂಭದ ದಿನಗಳಲ್ಲಿ ಪ್ರೋತ್ಸಾಹಿಸಿದರು.

ವೀರಣ್ಣನವರು ಯಾವುದೇ ಶಾಲೆಗೆ ಹೋಗಿ ಅಕ್ಷರ ಕಲಿತವರಲ್ಲ. ಅವರು ಕಲಿತದ್ದೆಲ್ಲಾ ರಂಗಭೂಮಿಯಿಂದ ಮತ್ತು ಬದುಕಿನಿಂದ. ಇವರ ಗುರುಗಳಾದ ವೈ.ಎಂ. ಚಂದ್ರಯ್ಯಸ್ವಾಮಿ ಹೇಳಿ ಕಲಿಸಿದ್ದೇ ವೀರಣ್ಣನವರ ಶಿಕ್ಷಣ. ಆ ಜ್ಞಾನವೇ ಅವರನ್ನು ಪುರಾಣವೇಕೆ, ಆಧುನಿಕ ಸಾಹಿತ್ಯವನ್ನೂ ಅರಿಯುವ ಮಟ್ಟಕ್ಕೇರಿಸಿದೆ.

ವೀರಣ್ಣನವರು ಹಲವು ಕಂಪನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿದಿದ್ದಾರೆ. ಅವರು ಎಲ್ಲಾ ಭಗೆಯ ಪಾತ್ರಗಳನ್ನೂ ಅಭಿನಯಿಸಿದ್ದಾರೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕನಾಗಿ, ಹಾಸ್ಯಗಾರನಾಗಿ ಅಭಿನಯಿಸಿದ್ದಾರೆ. ಕಂದಗಲ್ಲು ಹನುಮಂತರಾಯರ ರಕ್ತರಾತ್ರಿ ನಾಟಕದ ಶಕುನಿ ಪಾತ್ರ ಅವರಿಗೆ ಅಪಾರ ಯಶಸ್ಸು ತಂದಿತು. ಅವರು ಕೆಲಸ ಮಾಡಿದ ಪ್ರಸಿದ್ಧ ನಾಟಕ ಕಂಪನೆಗಳೆಂದರೆ ಹೊನ್ನಪ್ಪ ಭಾಗವತರ ಶ್ರೀ ಉಮಾಮಹೇಶ್ವರ ನಾಟ್ಯ ಸಂಘ, ಬಳ್ಳಾರಿ ಲಲಿತಮ್ಮನವರ ಶ್ರೀ ಲಲಿತ ಕಲಾ ನಾಟ್ಯ ಸಂಘ, ಚಂದ್ರಯ್ಯ ಸ್ವಾಮಿಯವರ ಶ್ರೀ ನಟರಾಜ ನಾಟಕ ಮಂಡಳಿ.

ಮುಂದೆ ವೀರಣ್ಣನವರು ತಮ್ಮದೇ ಆದ "ನಾಟಕ ಕಲಾ ಮಿತ್ರ ಮಂಡಳಿ" ಸ್ಥಾಪಿಸಿ ಎರಡು ದಶಕಕ್ಕೂ ಮಿಗಿಲು ಕಾಲ ನಡೆಸಿದರು. ಆಗ ವೀರಣ್ನನವರು ಕಲೆಗಾಗಿ ಬದುಕಿನಿಂದ ಕಲಿತ ಅಪಾರ ಅನುಭವ ಒಂದು ಮಜಲು. ಆ ಸಾಧನೆಯ ಬೆಳಕಿನಲ್ಲಿ ಬೆಳಗಲ್ಲು ವೀರಣ್ಣ ಮುಂದೆ ಆರಂಭಿಸಿದ್ದು, ನೆಳಲು-ಬೆಳಕಿನ ತೊಗಲುಗೊಂಬೆಯಾಟ. ತಾವೇ ಬಣ್ಣ ಹಚ್ಚಿ ಪಾತ್ರ ಮಾಡುವಾಗ ಜನ ಪ್ರೋತ್ಸಾಹಕ್ಕೆ ನೆರಳು ಮುಸುಕಿದಾಗ, ವೀರಣ್ಣ ತಾನು ಫರದೆಯ ಹಿಂದಕ್ಕೆ ಸರಿದು, ಅಭಿವ್ಯಕ್ತಗೊಂಡ ಮೂಕ ತೊಗಲುಗೊಂಬೆಗಳಿಗೆ ಜೀವ ನೀಡಿದ್ದು ಎರಡನೆ ಮಜಲು.

ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ ದಿ. ವಿಜಯ ಸಾಸನೂರರು ೧೯೮೦ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಲಯದ ನಿರ್ದೇಶಕರಾಗಿದ್ದಾಗ, ವೀರಣ್ಣನವರಿಗೆ ಕರ್ನಾಟಕದ ಅಪರೂಪದ ಕಲೆಯಾದ ತೊಗಲು ಗೊಂಬೆಯಾಟವನ್ನು ಪುನರುಜ್ಜೀವನಗೊಳಿಸುವ ಮಾತುಗಳಿಂದ ಹುರಿದುಂಬಿಸಿದಾಗ, ವೀರಣ್ಣನವರು ತಮ್ಮ ರಕ್ತ ಸಂಬಂಧಿ , ರಾಜ್ಯ ಪ್ರಶಸ್ತಿ ವಿಜೇತ ದಿ. ಹೊಲೆಪ್ಪನವರ ಸಹಕಾರದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇಟ್ರದಲ್ಲಿ ರಾಮಾಯಣದ ಕಥಾ ಪ್ರಸಂಗ "ಪಂಚವಟಿ" ತೊಗಲುಗೊಂಬೆಯಾಟ ಆಡಿಸಿ ಒಂದು ದಾಖಲೆಯನ್ನೇ ನಿರ್ಮಿಸಿದರು.

ನಂತರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರು ನೀಡಿದ ಆರ್ಥಿಕ ಸಹಾಯ ಮತ್ತು ಕಲಾ ಪ್ರಶಂಸೆಯ ಪ್ರೋತ್ಸಾಹದಿಂದ ವೀರಣ್ಣನವರು ತೊಗಲುಗೊಂಬೆಯಾಟದ ಕಾಯಕವನ್ನು ಮುಂದುವರೆಸಲು ಸಾಧ್ಯವಾಯಿತು.

ಮುಮ್ದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ. ಹೆಚ್.ಎಲ್. ನಾಗೇಗೌಡರು ಹಲವುರೀತಿಯ ಪ್ರೋತ್ಸಾಹ ನೀಡಿ ವೀರಣ್ನನವರ ತೊಗಲುಗೊಂಬೆಯಾಟ ಸಮರ್ಥ ರೀತಿಯಲ್ಲಿ ನೆಲೆ ನಿಲ್ಲಲು ಸಹಾಯ ಮಾಡಿದರು. ಅಲ್ಲಿಂದ ತಮ್ಮದೇ ಆದ ’ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ"ವನ್ನು ಆರಂಭಿಸಿದ ವೀರಣ್ನ ಈ ಕ್ಷೇತ್ರದಲ್ಲಿ ಸಾಧಿಸಿದ್ದು ಅಪಾರ. ಅವರಿಗೆ ಸಾಹಿತ್ಯದ ಸಾಥಿ ಶ್ರೀ ವೈ. ರಾಘವೇಂದ್ರ ರಾವ್ ಬಳ್ಳಾರಿ ಮತ್ತು ರೇಖಾ ಚಿತ್ರ ತಯಾರಿಕೆಯ ಸಾಥಿ ವಿ.ಟಿ. ಕಾಳೇಮಾಸ್ಟರ್ ಸಂಡೂರು. ವೀರಣ್ಣನವರ ಪೂರ್ಣ ಕುಟುಂಬ ಬೊಂಬೆ ಕಲಾವಿದರದ್ದೇ. ಅವರ ಪತ್ನಿ ಶ್ರೀಮತಿ ಮಹಾಲಿಂಗಮ್ಮ, ಸಾಹಿತ್ಯದಲ್ಲಿ ಎಂ.ಎ ಪದವಿ ಗಳಿಸಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಮಗ ಬಿ.ವಿ. ಪ್ರಕಾಶ್, ಇನ್ನಿತರ ಮಕ್ಕಳಾದ ಬಿ.ವಿ. ಮಲ್ಲಿಕಾರ್ಜುನ, ಬಿ.ವಿ. ಮಹೇಶ್, ಬಿ.ವಿ. ಹನುಮಂತ ಮತ್ತು ಮಗಳು ಲಕ್ಷ್ಮೀದೇವಿ ಬೊಂಬೆ ತಯಾರಿಕೆ, ಬೊಂಬೆಯಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ನಾಟಕಕಾರ, ನಿಸರ್ಗಪ್ರಿಯ, ಹಿರಿಯ ವಿದ್ವಾಂಸ ಪ್ರೊ. ಎಂ.ಎಂ. ಕಲ್ಬುರ್ಗಿ ಮತ್ತು ಡಾ. ಹೆಚ್.ಜೆ. ಲಕ್ಕಪ್ಪ ಗೌಡರಂತಹ ಹಿರಿಯ ಬರಹಗಾರರು ವೀರಣ್ಣನವರಿಗೆ ಸಾಹಿತ್ಯವನ್ನೊದಗಿಸಿ ಪ್ರಯೋಗಗಳ ಯಶಸ್ಸಿಗೆ ಕಾರಣರಾಗಿದ್ದಾರೆ.

ಪ್ರಸಿದ್ಧ ನಾಟಕಕಾರರಾದ ಗಿರೀಶ್ ಕಾರ್ನಾಡರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ "ಭಾರತ ಸ್ವಾತಂತ್ರ್ಯ ಸಂಗ್ರಾಮ" ತೊಗಲುಗೊಂಬೆಯಾಟಕ್ಕೆ ಅಪಾರ ಸಹಾಯ ಮಾಡಿದವರಾಗಿದ್ದಾರೆ. ವೀರಣ್ಣನವರ ಬೊಂಬೆಯಾಟ ಕೇವಲ ಪೌರಾಣಿಕ ಪ್ರಸಂಗಗಳಿಗೇ ಮೀಸಲಾಗದೆ ಐತಿಹಾಸಿಕ ಮತ್ತು ಸಾಮಾಜಿಕ ಕಥಾ ಪ್ರಸಂಗಗಳನ್ನೊಳಗೊಂಡು ವ್ಯಾಪಕವಾಗಿ ಬೆಳೆದದ್ದಲ್ಲದೆ ಸಮಕಾಲೀನತೆಯನ್ನು ಮೈಗೂಡಿಸಿಕೊಂಡುದುದಾಗಿದೆ. ಮುಖ್ಯವಾದ ಪ್ರಸಂಗಗಳೆಂದರೆ:
ಭಾರತ ಸ್ವಾಂತ್ರ್ಯ ಸಂಗ್ರಾಮ - ಸಹಕಾರ: ಕೇಂದ್ರ ಸಂಗೀತ ನಾಟಕ ಅಕಾಡೆಮಿ, ದೆಹಲಿ,
ಬಾಪು - ಸಹಕಾರ: ಇಂದಿರಾಗಾಂಧಿ ರಾಷ್ಟ್ರೀಯ ಸಾಂಸ್ಕೃತಿಕ ಕಲಾಕೇಂದ್ರ, ದೆಹಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಪ್ರವಾದಿ ಬಸವೇಶ್ವರ - ಸಹಕಾರ: ಪರಮ ಪೂಜ್ಯ ಡಾ. ತೋಂಟದಾರ್ಯ ಜಗದ್ಗುರುಗಳು, ತೋಂಟದಾರ್ಯ ಮಠ, ಗದಗ್
ಕಿತ್ತೂರು ಚೆನ್ನಮ್ಮ - ಸಹಕಾರ: ಕೇಂದ್ರ ಸಂಸ್ಕೃತಿ ಇಲಾಖೆ, ದೆಹಲಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು
ಸಾಕ್ಷರತಾ ಆಂದೋಳನ - ಸಹಕಾರ: ಮಂಗಳೂರು ಜಿಲ್ಲಾ ಆಡಳಿತ
ಕಬ್ಬಿನ ಬೆಳೆ - ಸಹಕಾರ: ಗೋದಾವರಿ ಸಹಕಾರ ಸಕ್ಕರೆ ಕಾರ್ಖಾನೆ, ಸಮೀರವಾಡಿ.
ಅಲ್ಲದೆ,
ಕುಟುಂಬ ನಿಯಂತ್ರಣ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯ (ಆರ್.ಸಿ.ಹೆಚ್), ಏಯ್ಡ್ಸ್, ಪಲ್ಸ್ ಪೋಲಿಯೋ, ಮಲೇರಿಯಾ, ಡೆಂಗ್ಯು ಜ್ವರ, ಅನಕ್ಷರತೆ, ಮದ್ಯವ್ಯಸನ
ಹೀಗೆ ಸಾಮಾಜಿಕ ಸಮಸ್ಯೆಗಳನ್ನು ಕುರಿತು ತಮ್ಮ ತೊಗಲುಗೊಂಬೆಯಾಟದ ಮೂಲಕ ಜನರಿಗೆ ಅರಿವು ಮೂಡಿಸುವಲ್ಲಿ ಸಫಲರಾಗಿದ್ದಾರೆ.
(ಮುಂದುವರೆಯುವುದು)