ತ್ಯಾಂಪನ ಇಲಿಯ ಪ್ರಹಸನ
ಏಯ್!!
ತಲೆಯೆತ್ತಿ ನೋಡಿದೆ
ತ್ಯಾಂಪ!!??!!ಏನಪ್ಪಾ ವಿಷೇಷ?
ಏನಿಲ್ಲ ಕಣೋ ಬೋರಾಯ್ತು, ಬಂದ್ಬಿಟ್ಟೆ.
ಒಳ್ಳೆಯದಾಯ್ತು ಬಿಡು
ಏನೂ ಬೋರಾದ್ದದ್ದಾ..? ನಾನು ಬಂದದ್ದಾ..?
ಎರಡೂ, ಏನ್ ತಗೋತೀಯಾ..?
ನೀನೇನು ಕೊಡ್ತೀಯೋ ಅದು..ಯಾವುದಾದರೂ ಆದೀತು..
ಬೆಲ್ ಮಾಡಿದೆ ಮಂಜು ಬಂದ
ಎರಡು ಜ್ಯೂಸ್ ತಗೊಂಬಾ ಅಂದೆ ಆತ ಹೋದ
ಅಂದ ಹಾಗೇ ನಿನಗೊಂದು ಗುಡ್ ನ್ಯೂಸ್ ಇದೆ ಕಣೋ ಅಂದ
ಏನು ಹೇಳು
ಸ್ವರ ಕಮ್ಮಿ ಮಾಡಿ ಅಂಗೈಯನ್ನು ಬಾಯಿಗೆ ಅಡ್ಡ ಹಿಡಿದು ನನ್ನ ಕಿವಿಯಲ್ಲಿ ಮಾತ್ರ ಹೇಳೊ ಹಾಗೆ ಅಂದ
"ಫೇಸ್ ಬುಕ್ ತಂದಿದ್ದೇನೆ"
"ಏನೂ....???" ನನಗೆ ಆಶ್ಚರ್ಯ ನಗು ಏಕ ಕಾಲಕ್ಕಾಯ್ತು . ನಾನು ಕೇಳಿದ್ದು ತಪ್ಪಾ ಅಥವಾ ಇವನು ಹೇಳಿದ್ದಾ ಅರ್ಥ ಆಗ್ಲಿಲ್ಲ
ಪುನಹ ಅದೇ ಶೈಲಿಯಲ್ಲಿ ನುಡಿದ
"ಫೇಸ್ ಬುಕ್ ತಂದಿದ್ದೇನೆ"
ಇವನು ಹಾಗೆ ಹೊತ್ತು ತರಲು ಅದೇನು ಶೀನನ ಜೋನಿ ಬೆಲ್ಲ ಕೆಟ್ಟೋಯ್ತಾ..??
"ಅಂದರೆ..??" ಕೇಳಿದೆ
"ಕೊಡ್ತೀನಿ ಇರು, ಅಂತಾ ಅವಸರ ಯಾಕೆ..?, ಅದೆಲ್ಲಿಗೂ ಓಡಿ ಹೋಗೊಲ್ಲಾ ಬಿಡು"
"ಅಲ್ಲಪಾ ಫೇಸು ಬುಕ್ಕೂ ಅಂದ್ರೇನೂ, ನೀನು ತರೋದು ಅಂದ್ರೇನೂ ಅರ್ಥ ಆಗ್ಲಿಲ್ಲ ಕಣೋ " ಎಂದೆ
"ಅಯ್ಯೋ ನಿನ್ನ.........!!!".ನಾನೊಂದು ಪೆಕರು ಅನ್ನುವಂತೆ ನೋಡಿದ "ನೀನೊಬ್ಬ ಬ.ಪೆ ( ಬರೀ ಪೆದ್ದು)"
"ಯಾಕೋ ಹಂಗಂತೀ..??"
"ಅಲ್ವೇ ಮತ್ತೆ"
"ಯಾಕೆ?"
"ಅಲ್ಲಾನಾ ನಿನ್ನ ಆಫೀಸಲ್ಲಿ ಫೇಸ್ ಬುಕ್ ಮನಾ ( ಬ್ಯಾನ್) ಮಾಡಿದ್ದಾರೆ ಅಂದೆಯಲ್ಲಾ"
"ಹೌದೂ....??!!"
"ಅದಕ್ಕೇ ನಾನು ಅದನ್ನ ನಿನಗಾಗಿ ತಕೊಂಡು ಬಂದಿದ್ದೇನೆ, ನೀನು ಇನ್ನು ಆರಾಮ್ ಆಗಿ ಅದನ್ನ ನಿನ್ನ ಕಂಪ್ಯೂಟರಿನಲ್ಲಿ ಉಪಯೋಗಿಸಿಕೊಳ್ಳಬಹುದು..."
ನನಗೆ ನಗು ಬಂತು ಆದರೆ ಈಗ ತೋರಿಸಿಕೊಳ್ಳೋ ಹಾಗಿಲ್ಲ
"ನೀವೆಲ್ಲಾ ಓದಿದೋರೂ ಅಂತೀರಾ ನೋಡಿದ್ಯಾ ನಾನು ಕಮ್ಮಿ ಓದಿದವನಾದ್ರೂ ನಿನಗಿಂತ ಬುದ್ದಿವಂತ ಅನ್ನೋದನ್ನ ಒಪ್ತೀಯಾ ಹಾಗಾದರೆ..??"
"ನಿಜವಾಗಿಯೂ ಒಪ್ಪಿಕೊಳ್ತೇನೆ ಬಿಡು.. ಕೊಡು ಮತ್ತೆ..."
"ಏಯ್!! ನಿನ್ನ್ ಆಫೀಸಿನ ಜೋಕ್ ತರಾ ಮಾಡ ಬೇಡ ಎಲ್ಲಿದೆ ನಿನ್ನ ಆ ಜ್ಯೂಸ್..??"
"ಬರತ್ತೆ ಬಿಡು..."
ಏ"ನು ಬರುತ್ತೆ...?? ನೀನೇನ್ ನನ್ನನ್ನ ನಿನ್ನ ಹಾಗೇ ಅಂದ್ಕೊಂಡ್ಯಾ..??"
"ಯಾಕಪ್ಪಾ..??"
"ನೀನು ಹೇಳಿದ ಜೋಕು ನನಗೂ ನೆನಪಿದೆ ಇನ್ನೂ... ಮೊದಲು ಜ್ಯೂಸು ತರಿಸು" ಅಂದ..
ಮೂರು ಸಲ ಬೆಲ್ ಮಾಡಿದರೆ
ನನಗೊಬ್ಬ ಕಂಜ್ಯೂಸ್ ಸ್ನೇಹಿತನಿದ್ದ. ಎಲ್ಲರಿಂದಲೂ ತಾನು ಖರ್ಚು ಮಾಡಿಸ್ತಾನಾದರೂ ತಾನು ಒಂದು ಪೈಸೆನೂ ಬಿಚ್ಚೋ ಜನ ಅಲ್ಲ. ಒಮ್ಮೆ ಯಾವುದೋ ಕೆಲ್ಸದ ನಿಮಿತ್ತ ಬನಶಂಕರಿಗೆ ಹೋಗಿದ್ದೆ. ನೋಡದೇ ಸುಮಾರು ಕಾಲ ಆಯ್ತಲ್ಲ ಅಂತ ಅವನ ಹತ್ರಾನೂ ಹೋಗಿದ್ದೆ.
"ಹೋ....... ಗೋಪಿ ತುಂಬಾ ಅಪರೂಪದ ಭೇಟಿ" ಎಂದ
"ಚಾಯ್ ತರಿಸಲಾ..??" ಎಂದಂದು ಒಂದು ಬೆಲ್ ಮಾಡಿದ
"ಬೇಡಪ್ಪಾ ಚಾಯ್ ಬಿಟ್ಟು ತುಂಬಾನೇ ಸಮಯ ಆಯ್ತಲ್ಲಾ" ಎಂದೆ
"ಹೋ ಹಾಗಾದರೆ ಕಾಫೀ..??" ಈಗ ಎರಡು ಸಲ ಬೆಲ್ ಮಾಡಿದ
"ಈ ಉರಿ ಬಿಸಿಲಲ್ಲಿ..?" ಎಂದೆ
"ಹಾಗಾದರೆ ತಂಪು ಕಬ್ಬಿನ ಹಾಲು..?......... ಬೇಡ ಮೂಸುಂಬೀ ಜ್ಯೂಸ್ ಆದೀತು" ಎಂದವ ನನ್ನ ಉತ್ತರಕ್ಕೂ ಕಾಯದೇ ಮೂರುಸಲ ಬೆಲ್ ಮಾಡಿದ.
ಅದೂ ಇದೂ ಮಾತನಾಡುತ್ತಾ ಕಾಲ ಕಳೆದೆವು, ಸರ್ದಾರ್ಜೀ ಜೋಕುಗಳಿಂದ ಮೊನ್ನೆ ಮೊನ್ನೆ ಕ್ರಿಕೆಟ್ ನಲ್ಲಿ ಸೋತ ವಿಷಯ ಸಹಾ ಬಂತು. ಇವನ ಜ್ಯೂಸ್ ಮಾತ್ರ ಬರಲೇ ಇಲ್ಲ ಅರ್ಧ ಗಂಟೆ ಕಾದು ನಾನೇ ಕೇಳಿದೆ "ಎಲ್ಲೋ ಜ್ಯೂಸು..?"
"ನೋಡಿದ್ಯಾ ನಮ್ಮ ಕೆಲಸಗಾರರು ಮೈಗಳ್ಳರು ........ಹೇಗೆ ಇವರನ್ನು ಸರಿ ಮಾಡೋದು ಗೊತ್ತಾಗೋಲ್ಲ ಕಣೋ, ನೀನೇ ನೋಡಿದ್ಯಲ್ಲ ಹೇಳಿ ಅರ್ಧ ಗಂಟೆ ಆಯ್ತು " ಎಂದ.
ನಾನೇ ಆಫೀಸಿನ ಒಳಹೊಕ್ಕೆ ಮಂಜು ಡಿಸ್ಪಾಚ್ ಸೆಕ್ಷನ್ ನಲ್ಲಿ ತೂಕಡಿಸುತ್ತಿದ್ದ.
ಎಚ್ಚರಿಸಿ ಕೇಳಿದೆ "ಯಾಕೋ ಸಾಹೇಬರು ಅಷ್ಟಲ್ಲದೇ ಹೇಳಿದ್ರೂ ನೀನೇನೂ ಕೆಲ್ಸ ಮಾಡೊಲ್ಲವಲ್ಲಾ" ಎಂದೆ
"ಅವರು ಏನೂ ಹೇಳ್ಲಿಲ್ಲ ಸಾರ್" ಎಂದ
"ನಾನೇ ಸ್ವತಃ ನೋಡಿದ್ದೆ " ಅಂದೆ
"ಏನನ್ನು..?" ಕೇಳಿದ
" ಮೂಸುಂಬಿ ಜ್ಯೂಸಿಗೆ ಮೂರುಸಲ ಬೆಲ್ ಹೊಡೆದದ್ದನ್ನು" ಅಂದೆ
"ನೀವು ಹೊಸಬರು ಬಿಡಿ ಸಾರ್" ಎಂದ ಒಂದು ತರಾ ನಕ್ಕು
"ಆದರೆ ಬೆಲ್ಲ್ ಹೊಡೆದದ್ದಕ್ಕೂ ಅದಕ್ಕೂ ಏನೋ ಸಂಬಂಧ" ಕೇಳಿದೆ ಜೋರಲ್ಲಿ
"ಅದೇ ಸಾರ್, ಮೂರು ಸಲ ಬೆಲ್ ಹೊಡೆದರೆ ಏನೂ ತರಬೇಡ ಅಂತಾನೇ ಅರ್ಥ".ಎಂದ ಮುಗುಮ್ ಆಗಿ
ಇದೇ ಜೋಕನ್ನ ಸೀನನಿಗೂ ಇವನಿಗೂ ಹೇಳಿದ್ದೆ ಆಗ ಇಬ್ಬರೂ ನಕ್ಕಿದ್ದರು .ಈಗ ಅದನ್ನೇ ನನ್ನ ತಲೆಗೇ ಕಟ್ಟುತ್ತಿದ್ದಾನೆ
ಅಷ್ಟರಲ್ಲಿ ಮಂಜು ಜ್ಯೂಸ್ ತಂದ
ಕೊಳವೆ ಬಾಯಿಗಿಟ್ಟುಕೊಂಡು ಜೋರಾಗಿ ಸಪ್ಪಳ ಬರುವ ವರೆಗೆ ಹೀರಿ ಗ್ಲಾಸಿನಲ್ಲಿ ಅದರ ನೊರೆಯೂ ಬಿಡದಂತೆ ಖಾಲಿ ಮಾಡಿದ...
ಈಗ ಹೇಳು ಎಂದೆ..
(ಮುಂದುವರಿಯುವುದು)
Comments
ಉ: ತ್ಯಾಂಪನ ಇಲಿಯ ಪ್ರಹಸನ
In reply to ಉ: ತ್ಯಾಂಪನ ಇಲಿಯ ಪ್ರಹಸನ by venkatb83
ಉ: ತ್ಯಾಂಪನ ಇಲಿಯ ಪ್ರಹಸನ