ತ ರಾ ಸು ಮತ್ತು ಮಾಸ್ತಿ ಒಂದೇ ಸ್ಥಳಮಹಿಮೆ ಬಗ್ಗೆ ಬರೆದಿದ್ದರೇ?

ತ ರಾ ಸು ಮತ್ತು ಮಾಸ್ತಿ ಒಂದೇ ಸ್ಥಳಮಹಿಮೆ ಬಗ್ಗೆ ಬರೆದಿದ್ದರೇ?

ಬರಹ

ತರಾಸು ಅವರ "ಹಂಸಗೀತೆ" ಕಾದಂಬರಿಯನ್ನು ಓದುತ್ತಿದ್ದೇನೆ. ಅದರಲ್ಲಿ ವೀರಣ್ಣಜ್ಜ ಎಂಬ ಅರ್ಚಕರ ಕತೆ ಬರುತ್ತದೆ. ಅರ್ಚಕರು ಓರ್ವ ಮಹಿಳೆಯನ್ನು ಇಟ್ಟುಕೊಂಡಿದ್ದು, ಪೂಜೆ ಮುಗಿಸಿ ಅವಳನ್ನು ಭೇಟಿಯಾಗುವ ಕ್ರಮ ಇಟ್ಟುಕೊಂಡಿದ್ದರಂತೆ.ಪಾಳೆಯಗಾರರು ಆಗಮಿಸಿದ ಬಳಿಕವಷ್ಟೆ ಮಹಾಪೂಜೆ ಮಾಡುವ ಅವರು ಒಂದು ದಿನ ಎಷ್ಟು ಕಾದರೂ ಅವರು ಬರದಿದ್ದಾಗ, ಪೂಜೆ ಮುಗಿಸಿ ಮನೆಗೆ ತೆರಳುತ್ತಾರೆ. ಅಲ್ಲಿ ಅವರ ಹೆಂಗಸು ಹೂ ಮುಡಿದುಕೊಂಡು,ಊಟ ಮುಗಿಸಿ,ಮಲಗಬೇಕೆನ್ನುವಷ್ಟರಲ್ಲಿ ಪಾಳೆಯಗಾರರ ಆಗಮನದ ಸೂಚನೆ ಸಿಗುತ್ತದೆ. ಪಾಳೆಯಗಾರರಿಗೆ ಅಸಮಾಧಾನವಾದೀತೆಂಬ ಹೆದರಿಕೆಯಿಂದ, ಸ್ತ್ರೀಗೆ ಮುಡಿಸಿದ ಹೂವನ್ನು ಮತ್ತೆ ತೆಗೆದುಕೊಂಡು,ದೇವಾಲಯಕ್ಕೆ ಬಂದು,ಪೂಜೆ ಮತ್ತೆ ಮಾಡಿ,ಪಾಳೆಯಗಾರರಿಗೆ ಪ್ರಸಾದರೂಪವಾಗಿ,ಹೂವನ್ನಿತ್ತಾಗ,ಅದರಲ್ಲಿ ಕೂದಲನ್ನು ನೋಡಿ ಪಾಳೆಯಗಾರರು ಕಿಡಿಕಿಡಿಯಾದರೆ, ಅರ್ಚಕರು ಅದು ದೇವರ ಮುಡಿಯ ಕೂದಲು ಎಂದು ಸಾಧಿಸುತ್ತಾರೆ.ಮಾತಿಗೆ ಮಾತು ಬೆಳೆದು,ಮರುದಿನ ಹಗಲು ಪಾಳೆಯಗಾರರು ದೇವಸ್ಥಾನಕ್ಕೆ ಆಗಮಿಸಿ,ದೇವರ ಮುಡಿಯನ್ನು ಪರೀಕ್ಷಿಸುವುದು ಎಂದಾಗುತ್ತದೆ.

ಆಶ್ಚರ್ಯವೆಂದರೆ,ಮಾಸ್ತಿಯವರ ಸಣ್ಣಕತೆಯೊಂದರಲ್ಲಿ,ಇಂತಹದ್ದೇ ಐತಿಹ್ಯದ ಬಗ್ಗೆ ಕತೆಯಿದೆ. ಆದರೆ ಅಂತ್ಯವನ್ನು ತರಾಸು ಅವರಿಗಿಂತ ಭಿನ್ನವಾಗಿ ಮಾಸ್ತಿಯವರು ನಿರೂಪಿಸಿದ್ದಾರೆ.ಮಾಸ್ತಿಯವರು ತಮ್ಮ ಕತೆಯಲ್ಲಿ ಅರ್ಚಕ ದಿಕ್ಕು ಕಾಣದೆ, ದೇವರ ಮುಂದೆ ಪ್ರಾರ್ಥಿಸುತ್ತಾ,ಅಲ್ಲೇ ನಿದ್ದೆ ಹೋದ ಸಂದರ್ಭದಲ್ಲಿ (ಬಹುಶ:) ಅರ್ಚಕರ ಮಗಳು ತನ್ನ ಮುಡಿಯನ್ನು ಕತ್ತರಿಸಿ,ಶಿವಲಿಂಗದ ಮೇಲಿಟ್ಟು,ಅವರನ್ನು ಸಂಕಟದಿಂದ ಪಾರು ಮಾಡಿದಂತೆ ನೈಜವಾಗಿ ಚಿತ್ರಿಸಿದ್ದಾರೆ. ತರಾಸು ಕಾದಂಬರಿಯಲ್ಲಿ ಅರ್ಚಕರು ಮತ್ತು ವೆಂಕಟಸುಬ್ಬಯ್ಯ ಎಂಬ ಸಂಗೀತ ಕಲಾವಿದರು ತನ್ಮಯದಿಂದ ಧ್ಯಾನಿಸಿ, ಪಾಳೆಯಗಾರರು ಬರುವಾಗ,ಶಿವಲಿಂಗದ ಮೇಲೆ ಮುಡಿ ಬಂದಿರುತ್ತದೆ.ಅದು ನೈಜವೇ ಎಂದು ನೋಡಲು ಪಾಳೆಯಗಾರರು ಅದನ್ನು ಕಿತ್ತಾಗ, ಅದರಿಂದ ರಕ್ತ ಬರುತ್ತದೆ ಎಂಬ ಐತಿಹ್ಯದ ಬಗ್ಗೆ ಬರೆದಿದ್ದಾರೆ.

ಈರ್ವರು ಮಹನೀಯರು ಬರೆದ ಐತಿಹ್ಯ ಒಂದೇ ಸ್ಥಳದ ಬಗ್ಗೆಯೇ?ಮಾಸ್ತಿಯವರ ಕತೆ ನಾನು ಹಿಂದೆ ಓದಿದ್ದೆ.ಪುಸ್ತಕದ ಪ್ರತಿ ನನ್ನಲ್ಲಿ ಲಭ್ಯವಿಲ್ಲ.