ದಂಡಂ ಸಹಸ್ರ ಗುಣಂ ಭವೇತ್!

ದಂಡಂ ಸಹಸ್ರ ಗುಣಂ ಭವೇತ್!

ಬರಹ

ಸರಕಾರಿ ಆಸ್ಪತ್ರೆಯ ಮುದಿ ನರ್ಸು ನಮ್ಮೆರಡೂ ಕಾಲುಗಳ ಪಾದಗಳನ್ನು ತನ್ನ ಕೈಗಳಲ್ಲಿ ಒತ್ತಿ ಹಿಡಿದು ನಮ್ಮ ತಾಯಿಯ ಗರ್ಭದಿಂದ ಹೊರಗೆಳೆದ ಕ್ಷಣದಲ್ಲೇ ನಮಗೆ ಒಂದು ಸಂಗತಿ ಅರಿವಾಗಿ ಹೋಗಿತ್ತು: ನಾವು ಸಾಮಾನ್ಯವಲ್ಲ. ನಾವು ಸಮ್ರಾಟರು. ಇಷ್ಟು ದೊಡ್ಡ ಹೊಟ್ಟೆಯ ನರ್ಸು ನಮ್ಮ ಪಾದಗಳನ್ನು ಹಿಡಿದಿರುವಾಗ ನಾವು ಮಹಾಮಹಿಮರೇ ಇರಬೇಕು.

ಇಂತಹ ಅಸಾಮಾನ್ಯ ಜನ್ಮವನ್ನು ಪಡೆದ ನಾವು ಸಾಮಾನ್ಯ ಬಾಲಕರ ಹಾಗೆ ಶಾಲೆಗೆ ಹೋಗುವ ಅಪಮಾನವನ್ನು ಅನೇಕ ವರ್ಷಗಳ ಕಾಲ ಸಹಿಸಿಕೊಂಡಿದ್ದೆವು. ಹೀಗೆ ಸಹಿಸಿಕೊಳ್ಳುವುದಕ್ಕೆ ನಮ್ಮ ವಿಶಾಲ ಹೃದಯವಾಗಲಿ, ಅನುಪಮವಾದ ಸಂಯಮವಾಗಲಿ ಕಾರಣವಾಗಿರಲಿಲ್ಲ. ತಾಯ್ತಂದೆಯರ ಕುರಿತ ಭಯ, ಭಕ್ತಿ, ಗುರು ಹಿರಿಯರ ಮೇಲಿನ ಮಮಕಾರಾದಿಯಾಗಿ ಯಾವ ಭಾವನೆಯೂ ಕಾರಣವಲ್ಲ. ಲೋಕದ ದೃಷ್ಟಿಯಲ್ಲಿ ಈ ಕಾರಣಗಳನ್ನು ನಾವು ಒಪ್ಪಿಕೊಂಡಂತೆ ಕಂಡಿರಬಹುದು. ಆದರೆ ನಿಜವಾದ ಕಾರಣ ಬೇರೆಯೇ ಇತ್ತು. ಮುಂದೊಂದು ದಿನ ಗ್ರಹಣ ಬಿಟ್ಟ ಸೂರ್ಯನ ಹಾಗೆ ಪ್ರಜ್ವಲಿಸುತ್ತಾ ಸಾಮ್ರಾಟರಾಗಿ ಬೆಳಗಬೇಕಾದ ನಾವು ಅಂದಿನಿಂದಲೇ ಅದಕ್ಕೆ ಸಿದ್ದತೆ ಪ್ರಾರಂಭಿಸಿದ್ದೆವು. ಸಾಮ್ರಾಟರಾದ ನಮ್ಮ ಆಸ್ಥಾನವನ್ನು ಶೋಭಾಯಮಾನಗೊಳಿಸುವುದಕ್ಕೆ ನಯನ ತಣಿಸುವ ಸುಂದರಿಯರು ಅವಶ್ಯಕವಲ್ಲವೇ? ಬೆಳೆಯುವ ಸಿರಿಯನ್ನು ಸರಿಯಾಗಿ ಅರಿಯುವುದಕ್ಕೆ ಮೊಳಕೆಯಲ್ಲೇ ಕಾಳಜಿ ಮಾಡಬೇಕೆಂದು ಹಿರಿಯರು ಹೇಳುತ್ತಾರೆ. ಹೀಗಾಗಿ ನಾವು ಆ ಸುಂದರಿಯರ ಅನ್ವೇಷಣೆ, ಪಾಲನೆ, ಪೋಷಣೆಗೆ ನಮ್ಮ ಸಮಯ ಮೀಸಲಿರಿಸಿದ್ದೆವು.
ನಾವಿದ್ದ ತರಗತಿಯಲ್ಲಿ ಸಕಲೆಂಟು ವಿದ್ಯೆಗಳನ್ನು ಕಲಿಸುವುದಕ್ಕೆ ಇದ್ದದ್ದು ಒಬ್ಬನೇ ಶಿಕ್ಷಕ. ಆತ ಕನ್ನಡ, ಇಂಗ್ಲೀಷ್, ಹಿಂದಿ ಎಂಬ ಮೂರು ಭಾಷೆಗಳನ್ನೂ, ವಿಜ್ಞಾನ, ಗಣಿತ, ಸಮಾಜ ಎಂಬ ಮೂರು ಮನುಕುಲದ ಕಂಟಕಪ್ರಾಯ ವಿಷಯಗಳನ್ನೂ ಏಕಪ್ರಕಾರವಾಗಿ ಕಲಿಸುತ್ತಿದ್ದ. ಆತನಿಗೆ ತರಬೇತಿ ನೀಡಿದ ಬೃಹಸ್ಪತಿ ಯಾರೋ, ಈ ಆರು ವಿಷಯಗಳಷ್ಟೇ ಅಲ್ಲ, ಜಗತ್ತಿನ ಸಮಸ್ಯ ಜ್ಞಾನ ರಾಶಿಯನ್ನು ಕಲಿಸಲು ತೊಡಗಿದರೂ ಆತನ ಬೋಧನಾ ಪದ್ಧತಿಯಲ್ಲಿ ಇನಿತೂ ವ್ಯತ್ಯಾಸವಾಗುತ್ತಿರಲಿಲ್ಲ. ಆತನ ಕಲಿಕೆಯ ಪದ್ಧತಿ ತೀರಾ ಸರಳವಾಗಿತ್ತು. ತಾನು ನಮಗೆ ಕಲಿಸಬೇಕು ಎನ್ನುವ ವಿಷಯವನ್ನು ಚೊಕ್ಕಟವಾದ ನೋಟ್ ಬುಕ್ಕಿನಲ್ಲಿ ಬರೆದುಕೊಂಡು ಬರುತ್ತಿದ್ದ. ಅದನ್ನು ಅಷ್ಟೇ ಮುತುವರ್ಜಿಯಿಂದ, ಒಂದಕ್ಷರ ಅತ್ತ ಇತ್ತ ಆಗದ ಹಾಗೆ ಕಪ್ಪು ಹಲಗೆಯ ಬೋರ್ಡಿನ ಮೇಲೆ ಇಳಿಸುತ್ತಿದ್ದ. ತನ್ನ ಅಪಾರ ಪ್ರತಿಭೆಯನ್ನು ಬಳಸಿ ಬೋರ್ಡ್ ಮೇಲೆ ಬರೆದಿರುವುದನ್ನು ತಪ್ಪಿಲ್ಲದೆ ಓದುತ್ತಿದ್ದ. ಈ ಸಮಸ್ತ ಪ್ರಕ್ರಿಯೆ ಜರುಗುವಷ್ಟರಲ್ಲಿ ವಿದ್ಯಾರ್ಥಿಗಳು ಆತ ಬೋಧಿಸಿದ ವಿಷಯವನ್ನು ಅರಗಿಸಿಕೊಂಡು ಬಿಡಬೇಕಿತ್ತು.

ಮರುದಿನ ತರಗತಿಗೆ ಕಾಲಿಟ್ಟೊಡನೆ ಆತ ತನ್ನ ಟೇಬಲಿನಿಂದ ಬಾರು ಕೋಲನ್ನು ಹೊರ ತೆಗೆಯುತ್ತಿದ್ದ. ಕಡೇ ಬೆಂಚಿನಿಂದ ಶುರು ಮಾಡಿಕೊಂಡು ತಾನು ಹಿಂದಿನ ದಿನ ‘ಬೋಧಿಸಿದ’ ವಿಷಯವನ್ನು ಒಪ್ಪಿಸುವಂತೆ ಗದರುತ್ತಿದ್ದ. ಎದ್ದು ನಿಂತ ಹುಡುಗ ಏನಾದರೊಂದು ಒದರಿದ್ದರೂ ನಡೆದು ಹೋಗುತ್ತಿತ್ತು. ಏಕೆಂದರೆ ಆ ಶಿಕ್ಷಕನಿಗೆ ತಾನು ಬೋಧಿಸಿದ ವಿಷಯವೇನು ಎನ್ನುವುದೇ ನೆನಪಿರುತ್ತಿರಲಿಲ್ಲ. ಉತ್ತರ ಪರೀಕ್ಷಿಸುವುದಕ್ಕೆಂದು ಎಲ್ಲರೆದುರು ನೋಟ್ ಬುಕ್ ತೆರೆಯುವುದು ಅಪಮಾನ ಎಂದೆಣಿಸಿ, ಉತ್ತರ ಹೇಳುತ್ತಿರುವವನ ಧ್ವನಿಯ ಏರಿಳಿತ, ಹಣೆಯ ಮೇಲಿನ ಬೆವರ ಸಾಲು, ಒಂದೇ ಸಾಲನ್ನು ಪುನರುಚ್ಚಿಸುವಾಗಿನ ಮುಖಭಾವ, ನಿಂತುಕೊಂಡ ಭಂಗಿ ಹೀಗೆ ನಾನಾ ಮೂಲದ ಮಾಹಿತಿ ಸಂಗ್ರಹಿಸಿ ಟಿವಿಯ ಕ್ವಿಜ್ ಕಾರ್ಯಕ್ರಮದಲ್ಲಿ ವಿಚಿತ್ರ ಮುಖ ಮಾಡಿಕೊಂಡು ಉತ್ತರ ಊಹಿಸುವವರ ಹಾಗೆ ಆತ ಊಹೆ ಮಾಡುತ್ತಿದ್ದ. ವಿಭಕ್ತಿ ಪ್ರತ್ಯಯದಿಂದ ಉತ್ತರ ಶುರು ಮಾಡಿ ಪ್ಲಾಸಿ ಕದನದ ವಿವರಣೆಯೊಂದಿಗೆ ಮುಗಿಸಿದರೂ ಆತನಿಗೆ ವ್ಯತ್ಯಾಸವಾಗುತ್ತಿರಲಿಲ್ಲ. ಹೆದರದೆ, ತೊದಲದೆ, ನಿರಂತರವಾಗಿ ಟಿವಿ ನಿರೂಪಕಿಯ ಹಾಗೆ ಉಲಿಯುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ ಎಂಬುದು ಆತನ ಸಿದ್ಧಾಂತವಿದ್ದಂತಿತ್ತು. ಹೀಗಾಗಿ ಸುಂದರ ಮುಖದ, ಟಿವಿ ನಿರೂಪಕಿಯರೋ, ಗಗನ ಸಖಿಯರೋ ಆಗುವ ಉಜ್ವಲ ಭವಿಷ್ಯವಿದ್ದ ವಿದ್ಯಾರ್ಥಿನಿಯರಿಗೆ ಆತನ ಬಾರು ಕೋಲಿನ ಸ್ಪರ್ಶದ ಅನುಭವ ಸಿಕ್ಕುತ್ತಲೇ ಇರಲಿಲ್ಲ!

ಚಿಕ್ಕಂದಿನಲ್ಲಿಯೇ ನಮ್ಮ ಅವತಾರದ ಉದ್ದೇಶ ಅರಿತಿದ್ದ ನಾವು, ಮಾತು ಮಿತವಾದಷ್ಟೂ ವ್ಯಕ್ತಿತ್ವಕ್ಕೆ ಹಿತ ಎಂದು ನಂಬಿದ್ದೆವು. ಸಾಮ್ರಾಟರಾದ ನಮ್ಮನ್ನು ಪ್ರಶ್ನಿಸುವ ಹಕ್ಕು ಯಾವ ಹುಲು ಮಾನವನಿಗೂ ಇಲ್ಲ ಎನ್ನುವುದೇ ನಮ್ಮ ನಂಬುಗೆಯಾಗಿತ್ತು. ಹೀಗಾಗಿ ನಮಗೂ ಆ ಶಿಕ್ಷಕನ ಬಾರು ಕೋಲಿಗೂ ಗಳಸ್ಯ-ಕಂಠಸ್ಯ ನಂಟು ಬೆಳೆದಿತ್ತು. ಪ್ರತಿಬಾರಿ ನಮ್ಮ ರಾಜಠೀವಿಯ ಅಂಗೈಗಳ ಮೇಲೆ ಬಾರು ಕೋಲಿನ ಮುದ್ರೆ ಮೂಡಿಸುವಾಗಲೂ ಆ ಶಿಕ್ಷಕ ಒಂದು ಕತೆ ಹೇಳುತ್ತಿದ್ದ.

ಒಂದಾನೊಂದು ಊರಿನಲ್ಲಿ ಎರಡು ಕಲ್ಲು ಬಂಡೆಗಳಿದ್ದವು. ಶಿಲ್ಪಿಯು ಅವರೆಡನ್ನೂ ತಂದು ಉಳಿಯ ಏಟು ಕೊಡಲಾರಂಭಿಸಿದ. ಅಸಂಖ್ಯಾತ ಏಟುಗಳನ್ನು ತಾಳ್ಮೆಯಿಂದ ಸಹಿಸಿಕೊಂಡ ಕಲ್ಲು ದೇವಾಲಯದಲ್ಲಿ ದೇವರ ಮೂರ್ತಿಯಾಗಿ ಪೂಜೆ ಪಡೆಯಿತು, ಏಟು ತಿನ್ನಲು ನಿರಾಕರಿಸಿ ಒಡೆದ ಕಲ್ಲು ಚಪ್ಪಡಿಯು ಮೆಟ್ಟಿಲಿನ ಹಾಸಾಗಿ ಬಂದು ಹೋದುವವರಿಂದ ತುಳಿಸಿಕೊಂಡು ಒದೆಸಿಕೊಂಡು ಕಾಲ ಕಳೆಯುತ್ತಿತ್ತು ಎಂದು.

ಜೀವನದಲ್ಲಿ ಪ್ರತಿಬಾರಿ ಏಟು, ಒದೆತ ತಿನ್ನುವಾಗಲೂ ನಮಗೆ ಈ ಕತೆ ನೆನಪಾಗುತ್ತಿತ್ತು. ಈಗ ಬಿದ್ದ ಏಟು ಮುಂದೆ ನಾವು ಸಮಸ್ತ ಸಾಮ್ರಾಜ್ಯದ ಸಾಮ್ರಾಟರಾಗುವುದಕ್ಕೆ ನೆರವಾಗುವಂಥದ್ದು ಎಂದೇ ಭಾವಿಸುತ್ತಿದ್ದೆವು. ಅದಕ್ಕೇ ಒಂದು ಏಟು ಬೀಳುವ ಸಂದರ್ಭದಲ್ಲಿ ಕಿತಾಪತಿ ಮಾಡಿ ಎರಡು, ಮೂರು ಏಟು ತಿನ್ನುತ್ತಿದ್ದೆವು. ಬದುಕಿನಲ್ಲಿ ಅಷ್ಟು ಏಟು ತಿಂದಿರುವುದಕ್ಕೇ ನಾವಿಂದು ಹೀಗಿರುವುದು.