ದಮನಕಾರಿಗಳ ಕೈಗೆ ಪರಮಾಣು ಆಯುಧ!

ಈ ವಿಜ್ಞಾನವೇ ಹಾಗೆ ಅತೀ ಬುದ್ಧಿವಂತರ ಮೆದುಳಿನಿಂದ ಹೊರಹೊಮ್ಮುತ್ತದೆ. ಸಮಾಜದ ಒಳ್ಳೆಯ ಮನಸ್ಸುಗಳು ಇದನ್ನು ಸದ್ಭಳಕೆ ಮಾಡಿಕೊಂಡರೆ, ದಮನಕಾರಿ ಮನಸ್ಸುಗಳು ಇದನ್ನು ಮನುಕುಲದ ವಿನಾಶಕ್ಕೆ ಬಳಸುವುದನ್ನು ಈ ಹಿಂದಿನ ಅನೇಕ ಇತಿಹಾಸಗಳಿಂದ ಕಂಡಿದ್ದೇವೆ. ಈಗ ಅದೇ ಇತಿಹಾಸ ಪುನಃ ಎಲ್ಲಿ ಮರುಕಳಿಸುವುದೋ ಎಂಬ ಭಯ ನಮ್ಮನ್ನು ಕಾಡುತ್ತಿರುವುದು ಸುಳ್ಳೇನಲ್ಲ. ಇದಕ್ಕೆ ಇಂದಿನ ತಾಜಾ ಉದಾಹರಣೆ: ರಷ್ಯಾ-ಉಕ್ರೇನ್ ಯುದ್ಧ. ಈ ಯುದ್ಧ ಆರಂಭವಾದದ್ದೇ ರಾಜಕಾರಣಿಗಳ ಆಸಂಬದ್ಧ ಹಾಗೂ ವಿಕಾರ ಮನಸ್ಸಿನ ಚಿಂತನೆಗಳಿಂದ. ಈ ಯುದ್ಧವೇ ಹಾಗೆ ; ಇದಕ್ಕೆ ಯಾವುದೇ ಸಕಾರಾತ್ಮಕ ಚಿಂತನೆಗಳು ಇರುವುದಿಲ್ಲ ಎಲ್ಲಾ ವಿನಾಶ ಮನಸ್ಸಿನ ವಿಕಾರಗಳೇ. ಹೊಸ ಸುದ್ಧಿ: ರಷ್ಯಾ ಯುದ್ಧ ಆರಂಭಿಸಿ ಎರಡು ವರ್ಷಗಳ ಯುದ್ಧದಿಂದ ಗೆಲುವು ಪಡೆಯಲಾಗದೆ ರೋಸಿ ಪರಮಾಣು ಬಾಂಬ್ ಬಳಕೆ ಮಾಡಿ ಯುದ್ಧವನ್ನು ಕೊನೆಗೊಳಿಸುವ ಯೋಜನೆಗೆ ಸಿದ್ಧವಾಗಿದೆಯಾ....?
ಇತಿಹಾಸದಲ್ಲಿ ವಿಜ್ಞಾನದ ವಿನಾಶ: ಎರಡನೇ ಮಹಾಯುದ್ಧ ಅಂತ್ಯ ಕಂಡದ್ದೇ ಅಮೇರಿಕಾದ ಇಂತಹ ನೀತಿಯಿಂದ. ಅದು ಕೊನೆಯಲ್ಲಿ ಜಪಾನ್ ನ ಹಿರೋಷಿಮಾ ಹಾಗೂ ನಾಗಾಸಾಕಿಗಳ ಮೇಲೆ ಪರಮಾಣು ಬಾಂಬ್ ಧಾಳಿ ನಡೆಸಿ ಇಡೀ ಜಪಾನನ್ನೇ ಹೊಸಕಿ ಹಾಕಿದ್ದು ಸುಳ್ಳೇನಲ್ಲ. ಅಂದು ಇಡೀ ಮನುಕುಲ ಪರಮಾಣು ಬಾಂಬ್ ನ ರುದ್ರ ನರ್ತನವನ್ನು ಕಣ್ಣಾರೆ ಕಂಡು ಸ್ತಬ್ಧಗೊಂಡದ್ದು ಇತಿಹಾಸ ಕಂಡ ಸತ್ಯ!
ಏನಿದು ಪರಮಾಣು ಬಾಂಬ್: ಇಪ್ಪತ್ತನೇ ಶತಮಾನದ ಆರಂಭದಲ್ಲಿ ಪರಮಾಣುಗಳ ಬಗ್ಗೆ ವಿಶೇಷ ಅಧ್ಯಯನಗಳು ನಡೆದು ಅದನ್ನು ಒಡೆದು ಅಪಾರ ಶಕ್ತಿಯನ್ನು ಬಿಡುಗಡೆ ಮಾಡಬಹುದೆನ್ನುವ ಸತ್ಯ ಹೊರಬಂದದ್ದದ್ದೇ ತಡ ರಾಜಕಾರಣಿಗಳು ಈ ವಿಜ್ಞಾನಿಗಳನ್ನು ಓಲೈಸಿ, ಅದನ್ನು ದುರ್ಬಳಕೆ ಮಾಡಿಕೊಂಡು ಈ ವಿಜ್ಞಾನದ ಪರಮ ಸತ್ಯದಿಂದ ವಿನಾಶಕಾರಿ ಪರಮಾಣು ಬಾಂಬ್ ಗಳ ತಯಾರಿಕೆ ಆರಂಭವಾಯಿತು. ತಯಾರಾದ ಮೇಲೆ ಅದರ ಪ್ರಯೋಗದ ಪರೀಕ್ಷೆ ನಡೆಯಲೇ ಬೇಕಲ್ಲ ಅದು ಎರಡನೇ ಮಹಾ ಯುದ್ಧದ ಸಮಯ... ಜಪಾನ್ ನ ಮೇಲೆ ಪರಮಾಣು ಧಾಳಿ; ಮನುಕುಲ ಕಾಣದ ಪರಮ ದುರಂತ ನಡೆದೇ ಹೋಯಿತು!
ರಷ್ಯಾದ ಬಳಿ ಇರುವ ಪರಮಾಣು ಬಾಂಬ್ ಗಳು: ಅಂದು ಅಮೇರಿಕಾ ಹಾಕಿದ ಬಾಂಬ್ ಗಳು ಈಗಿನ ಬಾಂಬ್ ಗಳಿಗೆ ಹೋಲಿಸಿದರೆ ಏನೂ ಅಲ್ಲ ಅನ್ನಬಹುದು.ಅವಕ್ಕಿಂತ ಹತ್ತು ಪಟ್ಟು, ನೂರು ಪಟ್ಟು ವಿನಾಶಕಾರಿ ಪರಮಾಣು ಬಾಂಬ್ ಗಳು ಈಗ ರಷ್ಯಾದ ಬಳಿ ಇವೆ. ಈಗ ರಷ್ಯಾದ ಬಳಿ ಸುಮಾರು 5,889 ಭಯಂಕರ ಪರಮಾಣು ಬಾಂಬ್ ಗಳು ಇವೆ. ಆವುಗಳಲ್ಲಿ 1,674 ಪರಮಾಣು ಬಾಂಬ್ ಗಳು ಮಿಸೈಲ್ ಗಳ ಸಿಡಿ ತಲೆಗಳ ಮೇಲೆ ಕೂತು ಬಟನ್ ಒತ್ತಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.
ಪರಮಾಣು ಬಾಂಬ್ ಗಳ ನಡುವಿನ ವ್ಯತ್ಯಾಸ: ಅಂದು ಅಮೇರಿಕಾ ಎರಡನೇ ಮಹಾ ಯುದ್ಧದಲ್ಲಿ ಬಳಸಿದ ಎರಡು ಪರಮಾಣು ಬಾಂಬ್ ಗಳು ಪರಮಾಣು ವಿದಳನ ಬಾಂಬ್ ಗಳು. ಆದರೆ ಇಂದು ತುದಿಗಾಲಲ್ಲಿ ಶತ್ರು ದೇಶದ ಮೇಲೆ ಹಾರಲು ನಿಂತ ಬಾಂಬ್ ಗಳು ಫ್ಯೂಷನ್ ಅಥವಾ ಪರಮಾಣು ಸಮ್ಮಿಲನ ಬಾಂಬ್ ಗಳು. ಇವು ವಿದಳನ ಬಾಂಬ್ ಗಳಿಗಿಂತ ನೂರಕ್ಕೂ ಹೆಚ್ಚು ಶಕ್ತಿಶಾಲಿ. ಇವುಗಳನ್ನು ಹೈಡ್ರೋಜನ್ ಫ್ಯೂಷನ್ ಬಾಂಬ್ ಎಂತಲೂ ಕರೆಯುತ್ತಾರೆ.
ಪರಮಾಣು ಬಾಂಬ್ ಧಾಳಿಯಿಂದ ಸತ್ತವರ ಸಂಖ್ಯೆ: ಎರಡನೇ ಮಹಾಯುದ್ಧದ ಕೊನೆಯಲ್ಲಿ ಹಿರೋಷಿಮಾ ಮೇಲೆ ಬಿದ್ದ ಬಾಂಬ್ ನಿಂದ ಸತ್ತವರ ಸಂಖ್ಯೆ 66,000; ಸುಮಾರು 69,000 ಜನ ಸುಟ್ಟ ಗಾಯ ಹಾಗೂ ವಿಕಿರಣಗಳಿಂದ ನರಳಿದರು. ಇಡೀ ಹಿರೋಷೀಮಾ ನಗರ ಸಂಪೂರ್ಣ ನಿರ್ನಾಮವಾಯಿತು. ಇನ್ನು ನಾಗಾಸಾಕಿಯ ಬಾಂಬ್ ಧಾಳಿಯಿಂದ ಸತ್ತವರ ಸಂಖ್ಯೆ 39,000 ಹಾಗೂ ಗಾಯಗೊಂಡು ನರಳಿದವರ ಸಂಖ್ಯೆ 25,000. ಇಡೀ ನಾಗಾಸಾಕಿ ಅಕ್ಷರಶಃ ಬೂದಿಯಾಗಿ ಹೋಯಿತು.
ವಿನಾಶಕ್ಕೆ ವಿಜ್ಞಾನ: ವಿಜ್ಞಾನದ ಆವಿಷ್ಕಾರಗಳು ಮನುಕುಲದ ಉದ್ಧಾರಕ್ಕೆ ಬಳಕೆಯಾಗಬೇಕೇ ವಿನಃ ಮನುಕುಲದ ಸರ್ವನಾಶಕ್ಕಲ್ಲ. ಈ ಉನ್ಮತ್ತ ರಾಜಕಾರಣಿಗಳು ತಮ್ಮ ರಾಜಕೀಯ ದಾಳಕ್ಕೆ ವಿಜ್ಞಾನಿಗಳನ್ನು ಬಳಸಿಕೊಂಡು ವಿನಾಶದತ್ತ ಸಾಗುತ್ತಿರುವುದು ಮನುಕುಲದ ದೊಡ್ಡ ದುರಂತವೇ ಸರಿ.
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ