ದಸರಾದಲ್ಲಿ ಗೌಡಪ್ಪನ ಟ್ಯಾಬಲೋ
ಲೇ ಸುಬ್ಬ, ಈ ಬಾರಿ ದಸರಾಗೆ ಏನ್ ಟ್ಯಾಬಲೋ ಮಾಡುವಾ ಹೇಳಲಾ ಅಂದ ಗೌಡಪ್ಪ. ಗೋಮಟೇಶ್ವರ ಮಾಡುವಾ ಅಂದ ಸುಬ್ಬ. ಏ ಥೂ ಹೆಣ್ಣು ಐಕ್ಳು ಅಂಗೇ ಹೊಂಟೈತ್ತಾವೆ. ಆಮ್ಯಾಕೆ ಯಾರು ನೋಡಕ್ಕಿಲ್ಲ ಕಲಾ. ಲೇ ನೀನು ಜ್ನಾಪನ ಮಾಡಿದ್ದು ಒಳ್ಳೇದು ಆಯ್ತು ಕಲಾ. ನನ್ನ ಹೆಂಡರು ತಂಗೀಗೆ ಗಂಡು ಮಗ ಆದ್ರೆ ಗೋಮಟೇಸ್ವರನಿಗೆ ಚೆಡ್ಡಿ ಹೊಲಿಸ್ತೀನಿ ಅಂತಾ ಹೇಳಕ್ಕಂಡಿದ್ದೆ. ಎಷ್ಟು ಮೀಟರ್ ಬಟ್ಟೆ ಬೇಕಾಗ್ಬೋದು ಹೇಳಲಾ ಅಂದ ಗೌಡಪ್ಪ. ನೋಡ್ರೀ ಸಿದ್ದೇಸನ ಗುಡ್ಯಾಗೆ ಷಾಮಿಯಾನ ಐತಲ್ಲಾ ಆ ಸೈಜಿಗೆ ಹೊಲಿಸಿದರೆ 1/4 ಆಗ್ಬೋದು ಅಂದ ಕಿಸ್ನ. ಆಟೊಂದು ದೊಡ್ಡ ಚೆಡ್ಡಿ ಹೊಲಿದ್ರೆ ಅದಕ್ಕೆ ಲಾಡಿನೇ ಒಂದು 200ಮೀ ಬೇಕಾಯ್ತದೆ ಅಂದ ಗೌಡಪ್ಪ. ಹೌದು ಅವರಿಗೆ ಗಂಡು ಮಗಾ ಆದ್ರೆ, ನೀವ್ಯಾಕೆ ಚೆಡ್ಡಿ ಹೊಲಿಸ್ಬೇಕು ಅಂದ ಸುಬ್ಬ, ಲೇ ನನ್ನ ಹೆಂಡರು ತಂಗಿ ಮಗ ಅಂದ್ರೆ ನನಗೂ ಮಗಾ ಅಲ್ವೇನ್ಲಾ ಅಂದ ಗೌಡಪ್ಪ. ಅದೇನೋ ಪಾ ಅಂದ ಕಿಸ್ನ. ಅಟ್ಟೊತ್ತಿಗೆ ಸುಬ್ಬ ಈ ಇಸ್ಯ ಬಿಡ್ರಿ. ಕಾಡಿನ ಟ್ಯಾಬಲೋ ಮಾಡುವಾ ಅಂದ. ಸರಿ ಕಲಾ ಅಂದೋನೆ ಮುನ್ಸಿಪಾಲಿಟಿ ಲಾರಿ ಬುಕ್ ಮಾಡ್ದ ಗೌಡಪ್ಪ. ಯಾಕ್ರೀ, ಲೇ ಟ್ಯಾಬಲೋಗೆ ಕಲಾ. ಏ ಥೂ
ಸರಿ ಲಾರಿ ಬಂತು. ಬರೀ ಹಳಸಿದು ವಾಸನೆ. ಊಟ ಮಾಡಿದ್ದ ಬಾಳೆಎಲೆ ಹಂಗೇ ಇತ್ತು. ತೊಳಕಂಡು ಬಾರಲಾ. ಅಂದು 50ರುಪಾಯಿ ಕೊಟ್ಟ ಗೌಡಪ್ಪ. ಲಾರಿಗೆ ಒಂದು 5ಟ್ರಾಕ್ಟರ್ ಮಣ್ಣು ಹಾಕಿ. ಕೃತಕ ಗಿಡ ನೆಟ್ವಿ. ಅಂಗೇ ಹುತ್ತ ಎಲ್ಲಾ ಮಾಡಿದ್ವಿ. ಗೌಡಪ್ಪ ನೋಡ್ರಲಾ ಇನ್ನು ಒಂದು ವಾರ ಐತೆ. ನಿಮ್ಮ ತಲೆಗೆ ಏನೆಲ್ಲಾ ಬತ್ತದೆ ಅವೆಲ್ಲ ಮಾಡ್ರಲಾ ಅಂದ. ಸರಿ ಒಂದೆರೆಡು ದಿನ ಬಿಟ್ಟು ಲಾರಿ ನೋಡಿದ್ರೆ. ನಮ್ಮಷ್ಟು ಎತ್ತರಕ್ಕೆ ಹುಲ್ಲು ಬೆಳೆದಿತ್ತು. ಏನಲಾ ಇದು. ಕಳೆ ಬಂದೈತೆ ಅಂದ ಸೀನ. ಸರಿ ಅದನ್ನ ಸವರಿ ಹಸಕ್ಕೆ ಆಯ್ತದೆ ನಮ್ಮನೆಗೆ ಹಾಕಲಾ ಕಿಸ್ನ ಅಂದ ಗೌಡಪ್ಪ. ಕಿಸ್ನ ಜುಗ್ಗತನಕ್ಕೆ ಬೆಂಕಿ ಹಾಕ ಅಂದ. ಲಾರಿ ಸೈಡಿಗೆ ನೋಡಿದ್ರೆ ಹಳಸಿದ ಅನ್ನ, ತರಕಾರಿ ಪ್ಯಾಕೇಟ್ ಎಲ್ಲಾ ಬಿದ್ದಿತ್ತು. ಏನ್ರಲಾ ಇದು. ಮುನ್ಸಿಪಾಲ್ಟಿ ಲಾರಿ ಇಲ್ಲೇ ಬಂದೈತೆ ಅಂತಾ ಜನಾ ಕಸ ಹಾಕಿದಾರೆ ಅಂದ ಸುಬ್ಬ. ಏ ಥೂ. ಸರಿ ಹುತ್ತದಾಗೆ ಕೈ ಹಾಕಿದ್ರೆ ಮಗಂದು ನಿಜವಾದ ಹಾವೇ ಬಂತು. ಅದು ಕನ್ಫೂಸ್ ಆಗೈತೆ ಬಿಡ್ರಲಾ. ಎಲ್ಲಿಗೆ, ನೆಲಕ್ಕೆ ಅಂದ ಗೌಡಪ್ಪ. ಸರಿ ಪ್ರಾಣಿ ಎಲ್ಲಾ ಮಾಡಿದ್ದಾತು. ಸರಿ ಹೊರಡೋ ದಿನಾ ಬಂದೇ ಹೋತು.
ನಮ್ಮ ಟ್ಯಾಬಲೋ ಟೈಟಲ್ " ಕಾಡು ಕಡಿದು, ನಾಡು ಬೆಳಸಿ" ಅಂತ ಹಾಕ್ಕೊಂಡು ಹೊಂಟ್ವಿ. ಮಂಡ್ಯ ಎಂಟ್ರೆಸ್ನಾಗೆ ನಮ್ಮ ಟೈಟಲ್ ನೋಡಿ ಅರಣ್ಯ ಇಲಾಖೆಯೋರು ಹಿಡಿದು ಸಾವಿರ ರೂಪಾಯಿ ದಂಡ ಹಾಕಿದ್ರು.ಆಮ್ಯಾಕೆ "ಕಾಡು ಉಳಿಸಿ, ನಾಡನ್ನು ರಕ್ಸಿಸಿ" ಅಂತಾ ಮಾಡಿದ್ವಿ. ಲೇ ಒಳಗೆ ಏನ್ ಪ್ರಾಣಿ ಐತೆ ಅಂತ ನೋಡಕ್ಕೆ ಫಾರೆಸ್ಟರ್ ಹತ್ತಿದ್ದ. ಮಗಾ ಅಂಗೇ ಲಾರಿಯಿಂದ ಹಿಂದೆ ಕಿಸ್ಕಂಡಿದ್ದ. ಯಾಕಲಾ. ಏ ಗೊಂಬೆ ಹುಲಿ ನೋಡಿ ಹೆದರ್ಕಂಡವ್ನೆ ಅಂದ ಸುಬ್ಬ, ಪ್ರಾಣಿ ದಯಾ ಸಂಘದೋರು ಬೇರೆ ದಂಡ ಹಾಕಿದ್ರು, ಯಾಕ್ ಸ್ವಾಮಿ. ನೀವು ಬಡಕಲ ಹುಲಿ ಮಾಡಿದೀರಿ. ಇದರಿಂದ ಜನತೆಗೆ ಇದು ಹುಲಿನೋ ಇಲ್ಲಾ ಚಿರತೆನೋ ಅಂತಾ ಡೌಟ್ ಬತ್ತದೆ ಅಂತಾ. ಸರಿ ಮೈಸೂರು ತಲುಪಿದ್ವಿ. ಎಲ್ಲಾ ಕಡೆ ಚೆಕಿಂಗ್. ಬೆಳಗ್ಗೆ 3ಕ್ಕೆ ಬಿಟ್ಟೋರು ಮಧ್ಯಾಹ್ನ 12ಕ್ಕೆ ಮೈಸೂರು, ಬರೀ 50ಕೀಮೀಗೆ 7ಗಂಟೆ ಜರ್ನಿ, ಏ ಥೂ.
ಸರಿ ಟ್ಯಾಬಲೋದಾಗೆ ಕಟ್ಟಿಗೆ ಒಡೆಯೋ ಪೋಸ್ನಾಗೆ ಕಿಸ್ನ. ಮಗಂದು ಅಭ್ಯಾಸ ಎಲ್ಲಿ ಹೋಯ್ತದೆ. ಅಲ್ಲೇ ಮೂರು ಬಡ್ಡೆ ಸೀಳಿದ್ದ. ಸುಬ್ಬಿ ಕಾಡಿನ ರಾಣಿ. ಏ ಥೂ. ಆಮ್ಯಾಕೆ ತಂತಿ ಪಕಡು ಕೆರೆತಾವ ಹೋಗೋ ಅಂಗೆ. ದೊನ್ನೆ ಸೀನ ಕೋತಿ ಡ್ರೆಸ್ನಾಗೆ. ಮಗಾ ಸೆಕೆ ಆಯ್ತದೆ ಅನ್ನೋನು. ಗಾಳಿ ಹೊಡ್ಕಳೋಕೆ ರಟ್ಟು ಕೊಟ್ಟಿದ್ವಿ. ನಾವು ಟ್ಯಾಬಲೋ ಮುಂದೆ. ಗಣ್ಯ ವ್ಯಕ್ತಿಗಳ ತರಾ, ಗೌಡಪ್ಪ ಮುಂದೆ ಇದ್ದ. ಒಂದು ಗುಂಪಿನವರು ಗೌಡಪ್ಪನ ಕರ್ಕಂಡು ಹೋದ್ರು. ಯಾರ್ರಲಾ ಅವ್ರು. ಏ ಅಭಿಮಾನಿಗಳು ಇರಬೇಕು ಅಂದ ಸುಬ್ಬ. ಅರ್ಧಗಂಟೆ ಆದ್ ಮ್ಯಾಕೆ ಗೌಡಪ್ಪ ಬಂದ. ಎಲ್ಲಿಗೆ ಹೋಗಿದ್ರಿ. ಲೇ ಅವರು ಸಿರ್ಸಿಯಿಂದ ಬಂದಿದಾರಂತೆ. ಯಕ್ಸಗಾನ ವೇಸಧಾರಿಗಳು. ಅದ್ರಾಗೆ ರಾಕ್ಸಸ ಪಾತ್ರಧಾರಿ ನಾನೇ ಅಂತ ಕರೆದುಕೊಂಡು ಹೋಗಿದ್ರು. ನಾನು ಅಲ್ಲಾ ಅಂದ್ರು ಕೇಳ್ಲಿಲ್ಲಾ. ಆಮ್ಯಾಕೆ ನಿಜವಾದೋನು ಕೆರೆತಾವ ಹೋದೋನು ಬಂದ ನನ್ನನ್ನು ಬಿಟ್ರು ಕಲಾ. ಇಲ್ಲಾ ಅಂದ್ರೆ ಈ ಮೆರವಣಿಗೆ ಪೂರ್ತಿ ನಾನು ಡ್ಯಾನ್ಸ್ ಮಾಡ್ತಾ ಹೋಗ್ ಬೇಕಾಗಿತ್ತು ಅಂತಿದ್ದಾಗೆನೇ ಪೋಲಿಸ್ನೋರು ಬಂದು ಗೌಡಪ್ಪನ ಎತ್ತಾಕಂಡು ಹೋದ್ರು. ಒಂದು ಗಂಟೆ ಆದ್ ಮ್ಯಾಕೆ ಬಂದ. ಯಾಕ್ರೀ ಗೌಡ್ರೆ. ದಂಡು ಪಾಳ್ಯದ ಕೋತಿ ರಾಮ ಅಂತ ನನ್ನನ್ನು ಎತ್ತಾಕೊಂಡು ಹೋಗಿದ್ರು. ನಾನು ಅಲ್ಲಾ ಸ್ವಾಮಿ ಅಂದಿದ್ದಕ್ಕೆ ಎಲ್ಲೆಲ್ಲಿ ಮಲ್ಡರ್ ಮಾಡಿದ್ಯಾ ಹೇಳಲಾ ಅಂತಾ ಸಾನೇ ವರ್ಕ್ ಮಾಡಿದ್ರು. ಆಮ್ಯಾಕೆ ಪರಪ್ಪನ ಅಗ್ರಹಾರಕ್ಕೆ ಪೋನ್ ಮಾಡಿ ಕೋತಿರಾಮ ಇಲ್ಲೇ ಇದಾನೆ ಅಂತ ಕನ್ಫರ್ಮ್ ಆದ್ ಮ್ಯಾಕೆ ಬಿಟ್ರು ಕಲಾ ಅಂದೋನು. ತಲೆ ಮ್ಯಾಕೆ ಟವಲ್ ಹಾಕ್ಕೊಂಡ. ಮತ್ತಿನ್ಯಾರು ಎತ್ತಾಕಂಡು ಹೋಯ್ತಾರೋ ಅಂತಾ.
ಗಾಡಿಯಲ್ಲಿ ಬರೋ ಸೌತೆಕಾಯಿ, ಸೇಂಗಾ ಎಲ್ಲಾ ತಿನ್ನೋನು. ಮಧ್ಯೆ ಮಧ್ಯೆ ಬೀಡಿ ಸೇದೋನು. ಯಾರಾದ್ರೂ ರಾಜಕಾರಣಿಗಳು ಕಂಡರೆ ಹಲ್ಲು ಕಿರಿಯೋನು. ಒಂದು ಕಿತಾ ಬಲರಾಮ ಆನೆ ಪಕ್ಕ ಹೋಗಿ ಆಶ್ಚರ್ಯದಿಂದ ನೋಡ್ತಾ ಇದ್ದ. ಯಾಕ್ರೀ ಗೌಡ್ರೆ, ಅಲ್ಲಾ ಕಲಾ ಕುರಿ ಏನಾದ್ರೂ ಈ ಸೈಜ್ನಾಗೆ ಇದ್ರೆ ಒಂದು ವರ್ಸ ಮಟನ್ ಊಟ ಮಾಡಬೈದು ಅಂದ. ಏ ಥೂ ಸೈಡಿಗೆ ಬರ್ರೀ. ಅದಕ್ಕೆ ಒಂದು ಕಣ್ಣು ಬೇರೆ ಕಾಣಕ್ಕಿಲ್ಲಾ ಅಂತಿದ್ದ ಸುಬ್ಬ, ಇದ್ದಕ್ಕಿದ್ದಂತೆ ಸುಬ್ಬ ಕಪ್ಪಾಗಿದ್ದ,. ನೋಡಿದ್ರೆ ಸುಬ್ಬನ ತಲೆ ಮೇಲೆ ಆನೆ ಲದ್ದಿ ಹಾಕಿತ್ತು. ಲೇ ಈ ಆನೆ ಸತ್ತು ಹೋದರೆ ಯಾರಲಾ ಅಂಬಾರಿ ಹೊರೋದು. ಧರ್ಮಸಿಂಗ್ ಇಲ್ಲಾ ಅಂದ್ರೆ ಶ್ರೀಕಂಠದತ್ತ ಒಡೆಯರ್, ಲೇ ಅವ್ರು ಮನುಸ್ಯರು ಅಲ್ವೇನ್ಲಾ. ಹೂಂ ಅವರು ಒಂತರಾ ಸಣ್ಣ ಆನೆ ಇದ್ದಂಗೆ ಇಲ್ವರಾ ಅಂದ ಸುಬ್ಬ, ಸರಿ ಬನ್ನಿ ಮಂಟಪ ಬರ್ತಿದ್ದಾಗೆನೇ ಗೌಡಪ್ಪ ಮಾಯ ಆಗಿದ್ದ, ಮಗ ಅಲ್ಲೂ ಕೆರೆ ಹುಡಕಿಕೊಂಡು ಹೋಗಿದ್ದ, ಸರಿ ಬನ್ನಿ ತಗೊಂಡು ಬತ್ತೀನಿ ಇಲ್ಲೇ ಇರ್ರಿ ಅಂತ ಹೋದೋನು ಬರೋ ಬೇಕಾದ್ರೆ ಮುಖ ಅನ್ನೋದು ರಕ್ತಮಯ. ಯಾಕ್ರೀ ಗೌಡ್ರೆ,. ಲೇ ಬನ್ನೀ ತೆಗೆಯುವಾ ಅಂತಾ ಹೋದ್ರೆ. ಹಿಂದಿಂದ ಎಲ್ರೂ ತಳ್ಳಿದ್ರ. ಮುಳ್ಳಿನ ಮ್ಯಾಕೆ ಬಿದ್ದು ಹಿಂಗೆ ಆಗೈತೆ. ಹಚ್ರಲಾ ಅರಿಸಿನ,. ಬೇಡ ಕಲಾ ಆಮ್ಯಾಕೆ ಮೈಲಾರ ಗುಂಪಿನೋರು ಕರೆದುಕೊಂಡಿ ಹೋಯ್ತಾರೆ ಅಂದ. ಸರಿ ವಾಪಸ್ಸು ಊರಿಗೆ ಬಂದ್ವಿ. ಖಾಲಿ ಲಾರಿ. ಮತ್ತ್ಯಾರು ದಂಡ ಹಾಕ್ತಾರೋ ಅಂತಾ ಅನ್ ಲೋಡ್ ಮಾಡ್ಕಂಡ್ ಬಂದಿದ್ವಿ,.
ಗೌಡ್ರೆ ಮುಂದಿನ ಕಿತಾ ಯಾವ ಟ್ಯಾಬಲೋ ಮಾಡುವಾ,. ನನ್ನ ಹೆಣದ್ದು, ಅದನ್ನ ಇಲ್ಲೇ ಸಿದ್ದೇಸನ ಜಾತ್ರೆಗೆ ಮಾಡುವಾ ಅಂದ ಸುಬ್ಬ, ಯಾಕ್ರೀ ಹಿಂಗಂತೀರಿ. ಲೇ ನನ್ನ ಮುಖ ನೋಡಿ ಯಾವನೋ ಭಿಕ್ಸುಕ ಬಂದ್ಯಾನೆ ಅಂತಾ ನನ್ನ ಹೆಂಡರು ಒಳಗೆ ಬುಟ್ಟಿಲ್ಲ. ಅಂಗೇ ಮುನ್ಸಿಪಾಲಿಟಿ ಲಾರಿ ಒಯ್ದಿದ್ದಕ್ಕೆ 10ಸಾವಿರ ದಂಡ ಹಾಕಿದಾರೆ ಕಲಾ ಅಂದು ತಲೆ ಮ್ಯಾಕೆ ಟವಲ್ ಹಾಕ್ಕೊಂಡ.