ದಾಸರೆಂದರೆ ಪುರಂದರ ದಾಸರಯ್ಯ
ಕರ್ನಾಟಕ ಶಾಸ್ತ್ರೀಯ ಸಂಗೀತದ ಆಡೊಂಬಲದಲ್ಲಿ ಅಪಾರ ಸಾಧನೆ ಮಾಡಿದ ಭಕ್ತಾಗ್ರೇಸರ, ದಾಸಶ್ರೇಷ್ಠರಾದ ಪುರಂದರ ದಾಸರು ಓರ್ವರು. ವ್ಯಾಸತೀರ್ಥರ ಶಿಷ್ಯರಾಗಿ, ದಾಸರಾಗಿ ಲೋಕೋದ್ಧಾರಕರಾದ ಪುರಂದರ ದಾಸರು ಕೋಟಿ ಸಂಪತ್ತಿನ ಒಡೆಯರಾಗಿದ್ದವರು.
ಶೀನಪ್ಪ ನಾಯಕ ಎಂಬ ಹೆಸರಿನಿಂದ ಪುರಂದರಗಡದಲ್ಲಿದ್ದ ಇವರು, ತನ್ನ ವಂಶ ಪಾರಂಪರ್ಯ ವೃತ್ತಿ ಲೇವಾದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಒಂದು ಕಿಲುಬುಕಾಸನ್ನು ಸಹ ಇತರರಿಗೆ ನೀಡದ ಸ್ವಭಾವ ಅವರದಾಗಿತ್ತು ಎಂದು ತಿಳಿದು ಬರುತ್ತದೆ. ಸಾಧ್ವಿ, ಕರುಣಾಮಯಿ, ಉದಾತ್ತ ಧ್ಯೇಯಗಳನ್ನು ಹೊಂದಿದ ಗುಣವಂತೆ ಸರಸ್ವತಿಬಾಯಿ ಇವರ ಧರ್ಮಪತ್ನಿ. ಅಪಾರ ದೈವಭಕ್ತೆಯಾಗಿದ್ದ ಪತ್ನಿಯ ಗುಣ ಅವರಿಗೆ ಹಿಡಿಸುತ್ತಿರಲಿಲ್ಲ.
ಭಕ್ತರನ್ನು ಪರೀಕ್ಷಿಸಲು ಭಗವಂತನಿರುತ್ತಾನೆ, ಇವರ ಪಾಲಿಗೆ ಸತ್ಯವಾಯಿತು. ಓರ್ವ ಬ್ರಾಹ್ಮಣನು ತನ್ನ ಮಗನ ಉಪನಯನಕ್ಕೆ ಧನ ಯಾಚನೆಗಾಗಿ ಅಂಗಡಿಗೆ ಬಂದನಂತೆ. ಇವರು ಕೊಡದಿದ್ದಾಗ ಅವರ ಮನೆಗೆ ಹೋಗಿ ಪತ್ನಿಯಲ್ಲಿ ಕೇಳಿದರಂತೆ. ಆ ಸಾಧ್ವೀಮಣಿ ತನ್ನ ನತ್ತನ್ನೇ ತೆಗೆದು ಕೊಟ್ಟಳಂತೆ. ಅದನ್ನು ಗಿರವಿ ಇಡಲು ಅಂಗಡಿಗೆ ತಂದಾಗ, ಇದು ಪತ್ನಿಯದೇ ಎಂಬ ಸಂಶಯ ಬಂದು, ಅವರನ್ನು ಅಲ್ಲಿ ಕೂರಿಸಿ, ಹೆಂಡತಿ ಹತ್ತಿರ ಮೂಗುತಿ ಎಲ್ಲಿ ಕೇಳಿದರಂತೆ. ಸಿಟ್ಟಿನಿಂದ ಗುಡುಗಿದ ಪತಿಯನ್ನು ಎದುರಿಸಲಾಗದೆ ವಿಷಕುಡಿಯಲು ಹೊರಟಾಗ ಅದರಲ್ಲಿ ಬ್ರಾಹ್ಮಣನಿಗಿತ್ತ ನತ್ತು ಗೋಚರಿಸಿತಂತೆ. ಅದನ್ನು ತಂದು ಪತಿಯ ಕೈಗಿತ್ತಳಂತೆ.
ಕಬ್ಬಿಣದ ತಿಜೋರಿಯಲ್ಲಿಟ್ಟ ಮೂಗುತಿ ಇಲ್ಲಿ ಹೇಗೆ ಬಂತು? ಎಂದು ಯೋಚಿಸಿ, ತಕ್ಷಣ ತನ್ನ ಅಂಗಡಿಗೆ ಬಂದರಂತೆ. ಈ ಪವಾಡ ದೇವರಿಂದ ಮಾತ್ರ ಸಾಧ್ಯವೆಂದು ನಂಬಿದ ಅವರು ತನ್ನ ಪತ್ನಿಯನ್ನು ಕೊಂಡಾಡಿ, ಭಗವಂತನ ಸಾಕ್ಷಾತ್ಕರ ಮಾಡಿಸಿದ ನಿನಗೆ ಕೋಟಿ ನಮನಗಳೆಂದು ಹೇಳಿದರಂತೆ. ತನ್ನ ಸಂಪತ್ತೆಲ್ಲವನ್ನೂ ದೀನರಿಗೆ, ಬಡವರಿಗೆ ಹಂಚಿದರಂತೆ.
ಹಂಪೆಯಲ್ಲಿದ್ದ ವ್ಯಾಸತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದ ಶೀನಪ್ಪನಾಯಕರು ‘ಪುರಂದರದಾಸರಾದರು’. ‘ಪುರಂದರ ವಿಠಲ’ ಎಂಬ ಹೆಸರಿನಿಂದ ಒಂದು ಅಂದಾಜಿನ ಪ್ರಕಾರ ೪.೭೫ಲಕ್ಷ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆಂದು ಪ್ರತೀತಿಯಿದೆ. ದೇಶಾಟನೆ, ತೀರ್ಥಕ್ಷೇತ್ರ ಸಂದರ್ಶನ ಮಾಡಿ ಅನುಭವ ಪಡೆದರು. ದಾಸರೆಂದರೆ ಪುರಂದರ ದಾಸರು ಗುರುಗಳಾದ ವ್ಯಾಸತೀರ್ಥರು ಹಾಡಿ ಹೊಗಳಿದರಂತೆ.
ಶ್ರೀ ಹರಿಯ ಅವತಾರಗಳ ವರ್ಣನೆ, ಎಲ್ಲಾ ದೇವ ದೇವಿಯರ ಸ್ತುತಿ, ಮಧ್ವಾಚಾರ್ಯರ ತತ್ವಗಳ ಪ್ರತಿಪಾದನೆ ಕೀರ್ತನೆಗಳಲ್ಲಿದೆ. ಮೂಢನಂಬಿಕೆ, ದಾಸ್ಯತನ, ಜನಜಾಗೃತಿ, ಹಿತೋಪದೇಶ, ವ್ಯವಹಾರ ವಿಷಯಗಳನ್ನೂ ಕಾಣಬಹುದು. ರಾಗ, ತಾಳ, ಲಯ, ಭಾವಬದ್ಧವಾದ ಸುಮಧುರ ರಚನೆಗಳನ್ನು ಕಾಣಬಹುದು. ಧಾರ್ಮಿಕ ಜೀವನ ತತ್ವ, ಅಂತರಂಗ ನಿವೇದನೆ, ಭಗವಂತನ ಸಾಕ್ಷಾತ್ಕಾರ ತಮ್ಮ ರಚನೆಯ ವಿಶೆಷತೆಗಳಾಗಿವೆ.
‘ಎಲುಬಿಲ್ಲದ ನಾಲಿಗೆ ಹೇಗೂ ಹೊರಳುತ್ತದೆ’ ಎಂಬ ಕಡುಸತ್ಯವನ್ನು ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ’ ನಾವೆಲ್ಲ ಹಾಡಿದವರು ಕೇಳಿದವರು. ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡ ಹುಚ್ಚಪ್ಪಗಳಿರಾ’ ಎಂಥ ಭಾವವಿದೆ, ಎಚ್ಚರಿಕೆಯ ಕರೆಗಂಟೆಯಿದೆ, ಸಂದೇಶವಿದೆ. ’ಪಿಳ್ಳಂಗೋವಿಯ ಚೆಲುವ ಕೃಷ್ಣನ’ ಎಷ್ಟು ನವಿರಾದ ಲಾಸ್ಯವಿದೆ. ಜಗದ ಮನುಜರ ಹಗರಣವ ನೋಡಿ ನಗೆಯು ಬರುತಿದೆ ಹಾಸ್ಯ, ವಿಡಂಬನೆಯಿದೆ. ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಕೊಂಡಾಡುವಿಕೆಯ ವರ್ಣನೆಯಿದೆ. ಕೈಯಲ್ಲಿ ತಂಬೂರಿ ಹಿಡಿದು ಹಾಡುತ್ತಾ ಊರೂರು ಸುತ್ತಿದ ಪುರಂದರದಾಸರು ಸಂಗೀತ ದಾಸಸಾಹಿತ್ಯಕ್ಕೆ, ಶಾಸ್ತ್ರಕ್ಕೆ ಒಂದು ನೂತನ ಆಯಾಮವನ್ನೇ ನೀಡಿದರು. ಕ್ರಿ.ಶ.೧೪೮೪--೧೫೬೪ ಜೀವಿತಕಾಲವೆಂದು ತಿಳಿದು ಬರುತ್ತದೆ. ನಮ್ಮ ಕನ್ನಡ ನಾಡಿನ ಹೆಮ್ಮೆಯ ದಾಸಪರಂಪರೆಯ ಶ್ರೇಷ್ಠರಿವರು. ಇಂದು ಪುರಂದರದಾಸರ ಜನ್ಮ. ಆ ನೆನಪಿಗಾಗಿ ಈ ಲೇಖನ.
-ರತ್ನಾ ಕೆ.ಭಟ್ ತಲಂಜೇರಿ
(ಸಂಗ್ರಹ: ಭಾರತದ ಧಾರ್ಮಿಕ ಪುರುಷರು)
ಚಿತ್ರ ಕೃಪೆ: ಇಂಟರ್ನೆಟ್ ತಾಣ